ಕವಿಯತ್ರಿ ಸುಜಾತಾ ರವೀಶ್ ಅವರ “ಮುಖವಾಡ” ಕವನ ಸಂಕಲನದ ಪ್ರತಿಯೊಂದು ಕವನಗಳ ಸಾಲುಗಳು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ. ಒಂದೊಂದು ಕವನವೂ ವಿಭಿನ್ನ ವಿಶಿಷ್ಟವಾಗಿದೆ. ಲೇಖಕಿ ಚಂಪಾ ಚಿನಿವಾರ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇವರು ಹೆಸರಾಂತ ಲೇಖಕಿ. ಆಡು ಮುಟ್ಟದ ಸೊಪ್ಪಿಲ್ಲ ಅನ್ನೋಹಾಗೆ ಇವರು ಸಾಹಿತ್ಯ ಲೋಕದಲ್ಲಿ ಬರೆಯದ ವಿಷಯವಿಲ್ಲ. ತಮ್ಮ
ಕೆಲಸಕಾರ್ಯಗಳ ಮಧ್ಯೆ ಬಿಡುವು ಮಾಡಿಕೊಂಡು ಅವರು ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಾರೆ.

ಈ ಲೇಖಕಿಯ ಪರಿಚಯ :
ಹೆಸರು : ಸುಜಾತಾ ಎನ್
ಕಾವ್ಯನಾಮ : ಸುಜಾತಾ ರವೀಶ್
ತಂದೆ: ದಿ. ಎನ್ ನರಹರಿರಾವ್ ನಿವೃತ್ತ ರೈಲ್ವೆ ಉದ್ಯೋಗಿ ಹಾಗೂ ತಾಯಿ ದಿ. ಶಕುಂತಲಾ ಎನ್ ರಾವ್ ಗೃಹಿಣಿ. ಇಬ್ಬರು ಸೋದರಿಯರು ಛಾಯಾ ಮತ್ತು ವೈಶಾಲಿ. ಪತಿ ಪಿ ರವೀಶ್. ಸ್ವಂತ ಉದ್ಯೋಗ
ಸ್ಥಳ : ಮೈಸೂರು
ಹುಟ್ಟಿದ ದಿನಾಂಕ : ೧೮.೦೪.೧೯೬೬
ವಿದ್ಯಾಭ್ಯಾಸ : ಎಂ ಕಾಂ
ವೃತ್ತಿ : ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ ಮೈಸೂರು ಶಾಖೆ ೫
ಪ್ರವೃತ್ತಿ : ಕನ್ನಡ ಸಾಹಿತ್ಯ ಓದುವಿಕೆ ಇತ್ತೀಚೆಗೆ ಬರವಣಿಗೆ
****
ಬರವಣಿಗೆಯಲ್ಲಿನ ಕೆಲ ಮೈಲಿಗಲ್ಲುಗಳು:
ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ಸಿ ಕನ್ನಡ ಪಠ್ಯ ಪುಸ್ತಕಕ್ಕೆ ಇವರ”ಮುಖವಾಡಗಳು” ಕವನ ಆಯ್ಕೆಯಾಗಿ ಪ್ರಕಟಗೊಂಡಿದೆ.
ಸ್ವತಂತ್ರ ಕವನ ಸಂಕಲನ ಅಂತರಂಗದ ಆಲಾಪ ಮತ್ತು ಮನವೀಣೆಯ ಮೀಟು ಮತ್ತು ಪುಸ್ತಕ ವಿಮರ್ಶೆಗಳ ಸಂಕಲನ ಭಾವಬಿಂಬ ಪ್ರಕಟವಾಗಿವೆ.
ನಾಡಿನ ಹಲವಾರು ಖ್ಯಾತ ನಿಯತಕಾಲಿಕೆಗಳಾದ ಉದಯವಾಣಿ ಸಂಯುಕ್ತ ಕರ್ನಾಟಕ, ಜನಮಿಡಿತ, ಪ್ರತಿನಿಧಿ, ಪ್ರಜಾಪರ್ವ, ಸಿಂಹ ಧ್ವನಿ, ಕ್ರಾಂತಿಧ್ವನಿ, ಪ್ರಥಮ ಹೆಜ್ಜೆ, ಯಾದಗಿರಿ ಟೈಮ್ಸ್ ಕುಂದಾನಗರಿ ಸಂದರ್ಶನ ಈ ಸಂಜೆ ಪತ್ರಿಕೆಗಳಲ್ಲಿ ಕವನ, ಗಝಲ್, ಲೇಖನ, ಪ್ರಬಂಧಗಳು ಬೆಳಕು ಕಂಡಿವೆ.
ಮುಖಹೊತ್ತಿಗೆಯ ಖ್ಯಾತ ಸಾಹಿತ್ಯಿಕ ಗುಂಪುಗಳಾದ ಸಾಹಿತ್ಯೋತ್ಸವ, ಕನ್ನಡಮ್ಮನ ತೇರು, ಮಂದಾರ ಬಳಗಗಳ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡಮ್ಮನ ತೇರು ಮಂದಾರ ಮುಖಪುಸ್ತಕ ಬಳಗದ ನಿರ್ವಾಹಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಮತ್ತೆ ಕೆಲವು ಮುಖಹೊತ್ತಿಗೆ ಹಾಗೂ ವಾಟ್ಸಾಪ್ ಬಳಗಗಳಲ್ಲಿ ಸ್ಪರ್ಧೆಗಳನ್ನು ನಿರ್ವಹಿಸಿ ನಿರ್ಣಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕವಿಗೋಷ್ಠಿ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿ ಜವಾಬ್ದಾರಿ ನಿರ್ವಹಣೆ. ಹಲವಾರು ಕವಿಗೋಷ್ಠಿಗಳು ಹಾಗೂ ಆನ್ಲೈನ್ ಕವಿ/ಗಝಲ್ ಗೋಷ್ಠಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಕವನ ಸ್ಪರ್ಧೆಯ ತೀರ್ಪುಗಾರರಾಗಿ ಪ್ರತಿಷ್ಟಿತ ಟಿ ವಿ ಎಸ್ ಸಂಸ್ಥೆಯಿಂದ ಆಹ್ವಾನ
ಕ್ಲಬ್ ಹೌಸ್ ನ ಚರ್ರ್ಚಾಗೋಷ್ಠಿಗಳಲ್ಲಿ ಭಾಗವಹಿಸುವಿಕೆ. ಆಕಾಶವಾಣಿ ಮೈಸೂರು ನಡೆಸುವ ಚರ್ಚೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಲೇಖಿಕಾ ಸಾಹಿತ್ಯ ಬಳಗ ಮುಖಹೊತ್ತಿಗೆ ಗುಂಪಿನಲ್ಲಿ ಸುಧಾಮೂರ್ತಿ, ದಮಯಂತಿ ನಾರೇಗಲ್ ಕಮಲಾ ಹಂಪನಾ ಹೆಚ್ ಎಸ್ ಪಾರ್ವತಿ ಸಾಯಿಸುತೆ ಶಾಂತಿ ನಾಯಕ್ ವಸುಮತಿ ಉಡುಪ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಮುಂತಾದವರ ಕೃತಿಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಬಸವ ಟಿವಿಯ ಸಾಹಿತ್ಯ ಜಾಗೃತಿ ಹಾಗೂ ೮ ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.ರಂಗವಲ್ಲಿ ಅಡಿಗೆ ಕಸೂತಿ ಆಭರಣ ತಯಾರಿಕೆ ಹೊಲಿಗೆ ತೋಟಗಾರಿಕೆ ಇವರ ಇತರ ಹವ್ಯಾಸಗಳು.
ವೃತ್ತಿ ಪ್ರವೃತ್ತಿಗಳ ನಡುವೆ ಆರೋಗ್ಯಕರ ಸಮತೋಲನ ಕಾಪಾಡಿಕೊಂಡು ತಾಯಿ ಕನ್ನಡಾಂಬೆಗೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂಬ ಆಸೆ ಲೇಖಕಿಯವರದು. ಶ್ರೀಮತಿ ಸುಜಾತಾ ರವೀಶ್ ರವರು ಭಾರತೀಯ ಜೀವವಿಮಾ ನಿಗಮ , ಮೈಸೂರು ಶಾಖೆ 5 ರಲ್ಲಿ ಉನ್ನತ ದರ್ಜೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕಳೆದ ಐದು ವರ್ಷಗಳಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.
ತಂದೆ ಕೀರ್ತಿಶೇಷ ಎನ್. ನರಹರಿರಾವ್ ಮತ್ತು ತಾಯಿ ಶಕುಂತಲಾ ಎನ್. ರಾವ್, ಪತಿ ಪಿ. ರವೀಶ್. ಇವರ ಅಂತರಂಗದ ಆಲಾಪ ಹಾಗೂ ಮನವೀಣೆಯ ಮೀಟು ಪ್ರಕಟಿತ ಕವನ ಸಂಕಲನಗಳು.
ಮತ್ತಷ್ಟು ಕವನಗಳ, ಲಲಿತ ಪ್ರಬಂಧಗಳ ಮತ್ತು ಪುಸ್ತಕ ವಿಮರ್ಶೆಗಳ ಸಂಕಲನಗಳು ಪ್ರಕಟಣೆಯ ಹಂತದಲ್ಲಿವೆ. ಇವರು ಅತ್ಯುತ್ತಮ ಅಂಕಣಕಾರ್ತಿಯೆಂದು ಖ್ಯಾತಿ ಪಡೆದಿರುವುದಲ್ಲದೇ ಕಥೆ, ಕವನ, ಹನಿಗವನ, ಗಜಲ್, ಮುಕ್ತಕ, ಚುಟುಕು, ಮಕ್ಕಳ ಕಥೆ , ಟಂಕಾ, ತನಗ, ಷಟ್ಪದಿಗಳು, ಲೇಖನಗಳು ಹಾಗೂ ಪ್ರಬಂಧಗಳ ರಚನೆಯಲ್ಲಿ ಗಂಭೀರವಾಗಿ ಕೃಷಿ ಮಾಡುತ್ತಿದ್ದಾರೆ. ರಂಗೋಲಿ, ಆಭರಣ ತಯಾರಿಕೆ, ಕಸೂತಿ, ತೋಟಗಾರಿಕೆ ಇತರ ಹವ್ಯಾಸಗಳು.

ಇವರ “ಮುಖವಾಡ” ಕವನ ಸಂಕಲನದ ಪ್ರತಿಯೊಂದು ಕವನಗಳ ಸಾಲುಗಳು ಇವರ ಪ್ರೌಢಿಮೆಯನ್ನು ತೋರಿಸುತ್ತದೆ. ಪದ ಪುಂಜವೇ ಇವರ ಬರವಣಿಯಲ್ಲಿ ಇರುತ್ತದೆ. ಒಂದೊಂದು ಕವನವೂ ವಿಭಿನ್ನ ವಿಶಿಷ್ಟ. ಮುಖವಾಡ ಅಪ್ಪ ಅಂದರೆ ಆಕಾಶ ಎಂಬ ಕವನಗಳು ಮನಮುಟ್ಟುವಂತೆ ಇದೆ.ಅರಿವಾಗಿದ್ದು ಆಗದ್ದು ಎಂಬ ಕವನದಲ್ಲಿ ಎಂದಿಗೂ ಸೇರದ ರೈಲು ಹಳಿಗಳಂತೆ ಸಮಾನಾಂತರದ ಜೀವನಯಾನ. ಈ ಸಾಲುಗಳು ಮನಮುಟ್ಟುವಂತೆ ಇದೆ. ಪ್ರೀತಿ ಭಾವಗಳ ಸಮ್ಮಿಶ್ರ ಮನೋಭಾವ, ಬೇವು ಬೆಲ್ಲದಂತಿರುವ ಬದುಕು.
ಇರುವವರೆಗೂ ಕೋಟೆ ಕಟ್ಟಿ ಮೆರೆದಾಟ ಕಾಲನ ಕರೆ ಬರುತಿರಲು ನಿಲ್ಲದ ಓಟ. ಜೀವನದ ಸಾರ್ಥಕತೆಯ ಕವನದಲ್ಲಿ ಭರವಸೆಯ ಆಸರೆಯ ಆಲದ ನೆರಳಲ್ಲಿ ಬಿದ್ದಾಗ ಮೇಲೆತ್ತಿದ ಸೋದರಿಯರು ಶಾರದೆಯ ಸೇವೆ ಜೀವನ ದೇವ ಕೊಟ್ಟ ಕಾಣಿಕೆ.
ವರ್ಷದ ಹರ್ಷ ಅಮ್ಮನ ರಕ್ಷೆ ವಸಂತ ಮಾಸ ಬಂದಾಗ ಕವನ ಒಂದನ್ನು ಬರೆಯುವೆ ಹೀಗೆ ಅನೇಕ ಬಗೆಯ ಜೀವನದ ಮೌಲ್ಯಗಳು ಸಂಬಂಧಗಳ ಬೆಲೆ ಕಟ್ಟಿ ಬರೆದ ಕವನಗಳು ಬೆಲೆ ಕಟ್ಟಲಾರದು.
ನಾನೇಕೆ ಬರೆಯುತ್ತೇನೆ , ಬಾಳಿನ ಗಣಿತ ಮಾಯಾಜಿಂಕೆ ಜ್ಯೋತಿ ಸಂಭ್ರಮ ಅವರ ಹುಟ್ಟುವರಾದ ಚಂದದ ಚಂದನದ ಮೈಸೂರಿನ ಬಗ್ಗೆ ಬರೆದ ಸಾಲುಗಳು ಭಕ್ತಿಗೀತೆ ಶೃಂಗಾರ ಕಾವ್ಯ ಭಾವಗೀತೆ ಜಾನಪದ ಹಬ್ಬ ಗಣಪತಿ ವಂದನೆ ಇವೆಲ್ಲವೂ ಬರೆದು ನೀವೇನಂತಿರಿ ಎಂಬುದು ಅವರ ಪ್ರಶ್ನೆಯ ಕವನ.
ಇವರ ಮತ್ತಷ್ಟು ಕವನಗಳು ಸಾಮಾಜಿಕ ಕಳಕಳಿಯಿಂದ ಕೂಡಿದೆ. ಪ್ರತೀ ಕವನಗಳು ಒಳ ಹೊಕ್ಕಿ ವಿಮರ್ಶಿಸಿದಾಗ ಕಾಣುವುದು ಪ್ರತಿಯೊಬ್ಬರ ಜೀವನಾನುಭವಗಳು ಹಾಗೂ ವಾಸ್ತವ ಸ್ಥಿತಿಯನ್ನು ತೋರಿಸುತ್ತದೆ.
ಮುಖವಾಡ ಕವನ ವಿಮರ್ಶೆ ಮಾಡುವುದಾದರೆ…ಕವನದ ಸಾಲುಗಳ ಎಳೆಗಳು ಬಿತ್ತರಿಸಿಕೊಂಡು ಹೋಗುತ್ತದೆ. ಬದುಕು ಎಷ್ಟು ಸಲೀಸೋ ಅಷ್ಟೇ ಕ್ಲಿಷ್ಟಕರ. ಮುಖವಾಡ ಹೊತ್ತೇ ಬದುಕಬೇಕು. ನೈಜತೆ ಕಾಣದೆ, ಧಗೆಯ ಕುಲುಮೆಯಲ್ಲಿ ಉರಿಯುವಾಗ ಶುದ್ಧ ಗಾಳಿಯ ಉಸಿರಾಟ ಬಯಸಿದೆ. ಮನಸಲ್ಲಿ ಎಷ್ಟೇ ದುಗುಡ ದುಮ್ಮಾನಗಳಿದ್ದರೂ, ಲಾವರಸ ಉಕ್ಕುವಂತೆ ಮನಸಿನಿಂದ ಹೊರಹೊಮ್ಮುವಂತಿದ್ದರೂ ಪ್ರಶಾಂತವಾಗಿ ಇರುವ ಮುಖವಾಡ ಧರಿಸಬೇಕಿದೆ.
ಎದುರಿಗೆ ಬಣ್ಣದ ವೇಷ ಹಾಕಿ ಬಂದವರಿಗೆಲ್ಲಾ ನಿಷ್ಠುರವಾಗಿ ಬಯ್ಯಬೇಕೆಂದರೂ, ಸಭ್ಯತೆಯ ಮುಖವಾಡ ಧರಿಸಿಕೊಂಡಿರಬೇಕಾಗಿದೆ. ಎಷ್ಟೇ ಮುಂದುವರಿದ ಸಮಾಜವಾದರೂ ಕೆಲವೊಮ್ಮೆ ಸಂಪ್ರದಾಯದ ಬಂಧನದಿಂದ ಹೊರಬರಲು ಸಾಧ್ಯವಾಗದೆ, ಸ್ವಚ್ಛ ನೀಲಾಕಾಶಾದಿ ಹಾರುವ ಹಕ್ಕಿಗಳಿಗಿರುವ ಸ್ವಚಂದದ ಬದುಕು ದೊರಕದೆ ಮುಖವಾಡ ಧರಿಸಿ ಸಮಾಜದ ಎದುರು ನಿಲ್ಲಬೇಕು ಎಂಬ ಅಳಲು.
ಮನಸಿನಲ್ಲಿ ಎಷ್ಟೇ ಆಸೆ ಆಕಾಂಕ್ಷೆಗಳಿದ್ದರೂ ಅದನ್ನು ತೊರ್ಪಡಿಸದೆ ಸಂಬಂಧಗಳ ಎದುರು ಮುಖವಾಡ ಧರಿಸಿ ಮರೆಯಲ್ಲೇ ನಗುವೆಂಬ ಮುಖವಾಡ ಧರಿಸಬೇಕಿದೆ. ಬದುಕು ಹುಟ್ಟಿದಾಗಿನಿಂದ ಮುಖವಾಡ ಧರಿಸಲು ತಿಳಿಸಿಕೊಟ್ಟಿದೆ. ಅದು ಹೊಸದೂ ಅಲ್ಲ ಕಷ್ಟವೂ ಅಲ್ಲ.
ನನ್ನದಲ್ಲದ, ನನ್ನತನವಲ್ಲದ, ನನಗೇ ನಾ ಅಪರಿಚಿತ ಅನಿಸುವುದು ಕನ್ನಡಿ ಮುಂದೆ ನಿಂತಾಗಲೆಲ್ಲ ಕಾಡುವುದು ಮನ… ನನ್ನತನವಾಗಿ ಉಳಿಯಲು ಸಾಧ್ಯವೇ ಇಲ್ಲದೆ ಮುಖವಾಡ ಧರಿಸಿಯೇ ಹೊರಹೋಗಬೇಕಾಗಿದೆ ಎಂಬ ಸುಂದರ ಸಾಲುಗಳು ಎಂತಹ ಮನಸು ಕರಗುವಂತೆ ರಚಿಸಿರುವ ಮುಖವಾಡ ಕವನ ಎಲ್ಲರ ಮುಖವಾಡ ಕಳಚಿ ನೈಜತೆಯಲ್ಲಿ ಬದುಕುವಂತೆ ತಿಳಿಸುತ್ತದೆ.
ಇವರ ಮಡಿಲಿಗೆ ಸಂದ ಪ್ರಶಸ್ತಿಗಳು, ಸಾಹಿತ್ಯ ಸಿಂಧು ಪ್ರಶಸ್ತಿ , ಅಭಿರುಚಿ ಸಾಹಿತ್ಯ ರತ್ನ ಪ್ರಶಸ್ತಿ , ಮುಕ್ತಕ ಸೇವಾ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಸುಜ್ಙಾನ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ,ಸಾಹಿತ್ಯ ಶ್ರೀ ಪ್ರಶಸ್ತಿ, ಸಾಹಿತ್ಯ ಸೌರಭ ಪ್ರಶಸ್ತಿ, ಸಾಹಿತ್ಯ ಗಂಗಾ, ಸಿರಿಗನ್ನಡ ಪತ್ರಿಕೆ ಮತ್ತು ಹೊಯ್ಸಳ ಕರ್ನಾಟಕ ಸಂಘದ ಸಾಹಿತ್ಯ ಪ್ರಶಸ್ತಿ, ಕಾವ್ಯ ಚೇತನ ಪ್ರಶಸ್ತಿ ಭಾಜನರಾಗಿರುವ ಸುಜಾತಾ ರವೀಶ್ ಲೇಖಿಕಾ ತ್ರೈಮಾಸಿಕ ಪತ್ರಿಕೆಯವರು ನಡೆಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುವುದು ಬಹಳ ಹೆಮ್ಮೆಯ ವಿಷಯ.
ಮುಖವಾಡ ಕವನ ಸಂಕಲನದಿಂದ ಓದುಗರ ಮನ ಮುಟ್ಟುವ ಕವನಗಳು ಎಂದರೆ ವಸಂತ ಮಾಸ ಬಂದಾಗ, ಕವನವೊಂದನು ಬರೆಯುವೆ, ಬದುಕು ಬವಣೆ, ಕನ್ನಡದ ದೀಪ, ನೆನಪಿನ ದೋಣಿಯಲಿ, ಇತ್ತೀಚೆಗೆ ಹಗಲು ದರೋಡೆಯಂತೆ ಕೃತಿಚೌರ್ಯ ಕವನಗಳು. ಇದರಲ್ಲಿ ಇನ್ನೂ ಹಲವಾರು ಭಕ್ತಿ ಭಾವದ, ಪ್ರೇಮ ಸಿಂಚನದ, ಬದುಕಿನ ವಾಸ್ತವಕ್ಕೆ ಇರುವ ಕವನಗಳು ಅದ್ಭುತವಾಗಿದೆ. ಯಾವುದು ಹೆಚ್ಚು, ಯಾವುದು ಕಡಿಮೆ ಎಂಬ ವ್ಯತ್ಯಾಸ ಕಾಣುವುದು ಬಹಳ ಕಠಿಣ.
ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಸಹಭಾಗಿತ್ವದಲ್ಲಿ ಇವರ “ಮುಖವಾಡ” ಕವನ ಸಂಕಲನ ಬಿಡುಗಡೆಗೊಂಡಿದ.
ಇವರ ಸಾಹಿತ್ಯ ಕೃಷಿ ಮತ್ತಷ್ಟು ಫಲ ಕೊಟ್ಟು ಇವರ ಕೀರ್ತಿ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. ಮತ್ತಷ್ಟು ಪ್ರಶಸ್ತಿಗಳು ಇವರ ಮುಡಿಗೇರಲಿ. ನನ್ನ ಕೆಲವೇ ಗೆಳತಿಯರಲ್ಲಿ ಬಹಳ ಆತ್ಮೀಯವಾಗಿರುವ ನನ್ನ ಪ್ರೀತಿಯ ಗೆಳತಿ ಸುಜಾತ ಗೆ ಮನಃ ಪೂರ್ವಕ ಅಭಿನಂದನೆಗಳು ಹಾಗು ಶುಭಾಶಯಗಳು. ನನಗೆ ಈ ಪುಸ್ತಕದ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟ ಸುಜಾತ ರವೀಶ್ ಗೆ ಹೃತ್ಪೂರ್ವಕ ಧನ್ಯವಾದಗಳು.
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
