ಮಗಳಾಗಿ, ಸೊಸೆಯಾಗಿ,ಅತ್ತೆಯಾಗಿ ಮನೆ ಬೆಳಗುವ ಹೆಣ್ಣು, ಸಂಸಾರದ ಕಣ್ಣಾಗಿದ್ದಾಳೆ. ಹೆಣ್ಣಿನ ಕುರಿತು ದೇವರಾಜ ಚಾರ್ ಅವರ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…
ಹೆಣ್ಣು ಮಕ್ಕಳು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆಯ ನಂತರದಲ್ಲಿ ಬೇರೆ ಮನೆಯನ್ನು ಸೇರಬೇಕಾಗುತ್ತದೆ. ತನ್ನ ತವರು ಮನೆಯನ್ನು ತನ್ನ ಸರ್ವಸ್ವ ಎಂದುಕೊಂಡಿರುತ್ತಾಳೆ. ತನ್ನ ಇಚ್ಛೆಯಂತೆ ತನ್ನ ಆಸೆ ಕನಸುಗಳನ್ನು ಈಡೇರಿಸಿಕೊಳ್ಳುತ್ತಾಳೆ. ತಂದೆ ತಾಯಿಗಳು ಸಹ ಅಷ್ಟೇ ಸಂತೋಷದಿಂದ ತಮ್ಮ ಮಗಳು ಕಷ್ಟ ಪಡಬಾರದು. ಅವಳ ಮನಸ್ಸಿನ ಮಾತುಗಳನ್ನು ಅರಿತುಕೊಂಡು ಎಲ್ಲಾ ಆಸೆಗಳನ್ನು ಪೂರೈಸುತ್ತಾರೆ. ಅವಳ ವಿದ್ಯಾಭ್ಯಾಸ ಮುಗಿದು ಉದ್ಯೋಗವನ್ನು ಪಡೆದುಕೊಳ್ಳುತ್ತಾಳೆ. ತನ್ನ ಮನೆ, ಮನೆಯ ಪರಿಸರ, ಅಕ್ಕಪಕ್ಕದ ಮನೆಯವರಲ್ಲಿ, ಕಚೇರಿಗಳಲ್ಲಿ ಹೊಂದಿಕೊಂಡು ಸಂತೋಷದಿಂದ ಕಾಲ ಕಳೆಯುತ್ತಿರುತ್ತಾಳೆ.
ಹೆಣ್ಣು ಮಕ್ಕಳು ಜೀವಿತಾವಧಿಯ ಮೂರನೇ ಒಂದು ಭಾಗ ಕಳೆಯುವಷ್ಟರಲ್ಲಿ ಅಂದರೆ ಸುಮಾರು 25 ವರ್ಷ ಆಗುವಷ್ಟರಲ್ಲಿ ತಂದೆ ತಾಯಿಗಳಿಗೆ ಮದುವೆ ಮಾಡಬೇಕು ಎನ್ನುವ ಆಲೋಚನೆ ಹುಟ್ಟಿಕೊಳ್ಳುತ್ತದೆ. ತಂದೆ ತಾಯಿಗಳು ಸುಮ್ಮನಿದ್ದರೂ, ಅಕ್ಕಪಕ್ಕದವರು ಸ್ನೇಹಿತರು, ಬಂಧುಗಳು, ಸುಮ್ಮನೆ ಇರುವುದಿಲ್ಲ. ಇದೇ ಸರಿಯಾದ ವೇಳೆ ಮದುವೆ ಮಾಡಿ ಮುಗಿಸಿ ಬಿಡಿ ಎಂದು ಸಲಹೆ ಕೊಡುತ್ತಾರೆ.
ನಂತರದಲ್ಲಿ ವರನಿಗೆ ಹುಡುಕಾಟ ಪ್ರಾರಂಭವಾಗುತ್ತದೆ. ವರ ಸಿಗುವುದು ಅಷ್ಟು ಸುಲಭವಲ್ಲ. ಇದೊಂದು ಬಿಟ್ಟು ಮಗಳ ಇಚ್ಛೆಯಂತೆ ಎಲ್ಲವನ್ನು ಕೊಡಿಸಿರಬಹುದು.ಆದರೆ ವರನ ವಿಷಯದಲ್ಲಿ ಆಗಾಗುವುದಿಲ್ಲ. ವರನ ಬಗ್ಗೆ ಏನೂ ಗೊತ್ತಿರುವುದಿಲ್ಲ. ಒಡನಾಟದಲ್ಲಿರುವವರನ್ನೇ ಅರ್ಥಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಎಲ್ಲೋ ಇರುವ ಹುಡುಗನ ಬಗ್ಗೆ ಹೇಗೆ ತಿಳಿಯುವುದು? ಮದುವೆ ಮಾಡಲೇಬೇಕು ಎನ್ನುವ
ಇರಾದೆಯಂತೆ ಬ್ರೋಕರ್, ಸಂಬಂಧಿಕರ ಮಾತನ್ನು ನಂಬಿ, ಶಾಸ್ತ್ರ ಸಂಬಂಧ ಸರಿ ಇದೆ ಅಂತ ಮದುವೆ ಮಾಡಲು ಸಿದ್ದರಾಗುತ್ತಾರೆ.
ಹುಡುಗಿಯು ಸಹ ತನ್ನ ತಂದೆ ತಾಯಿಗಳನ್ನು ನಂಬಿ, ಒಂದೆರಡು ಮಾತುಗಳಿಂದ ವರನನ್ನು ನಂಬಿ ಮುಂದಡಿ ಇಡುತ್ತಾಳೆ. ಸಾಕಷ್ಟು ಸಂಭ್ರಮದಿಂದ ವರನ ಮತ್ತು ವರನ ಮನೆಯವರ ಅಪೇಕ್ಷೆಯಂತೆ ಹಣವನ್ನು ವ್ಯಯ ಮಾಡಿ, ಅದ್ದೂರಿಯಿಂದ ಮದುವೆ ಮಾಡಿಕೊಡುತ್ತಾರೆ.
ಮದುವೆ ನಂತರ ಸೊಸೆಯಾಗಿ ಅತ್ತೆ ಮನೆಗೆ ಹೊರಡುತ್ತಾಳೆ. ಅತ್ತೆಯ ಮನೆ ಮತ್ತು ಪರಿಸರ ಎಲ್ಲಾ ಹೊಸದು.ತನ್ನ ತವರಿನ ಮನೆಯಲ್ಲಿ ಸ್ವತಂತ್ರಳಾಗಿ ತನ್ನದೇ ಆದ ಕೊಟ್ಟಡಿ ಯಲ್ಲಿ ತನ್ನ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಂಡು, ಲವಲವಿಕೆಯಿಂದ ಓಡಾಡಿಕೊಂಡಿರುತ್ತಾಳೆ. ಮಗಳು ಅಂತ ಎಲ್ಲ ಸ್ವತಂತ್ರವನ್ನು ಮನೆಯವರು ಕೊಟ್ಟಿರುತ್ತಾರೆ.ಆದರೆ ಅತ್ತೆ ಮನೆ ಆಗಲ್ಲವಲ್ಲ. ಎಲ್ಲಿ ಕುಂತುಕೊಳ್ಳಬೇಕು, ಯಾವ ತರಹದ ಬಟ್ಟೆ ಹಾಕಿಕೊಳ್ಳಬೇಕು, ಯಾವಾಗ ಸ್ನಾನ ಮಾಡಬೇಕು, ಟಿವಿಯಲ್ಲಿ ತನ್ನ ಇಷ್ಟದ ಚಾನೆಲ್ ನೋಡಲು ಹೇಗೆ ಯಾರನ್ನು ಕೇಳುವುದು?ಅವರು ಮಾಡುವ ಊಟ ತಿಂಡಿಯ ರುಚಿಗೆ ಹೊಂದಿಕೊಳ್ಳಬೇಕು.
ಹೊರಗಡೆ ಹೋಗಬೇಕಾದರೆ ಯಾರಿಗೆ ಹೇಳಿ ಹೋಗಬೇಕು? ಯಾರ ಅನುಮತಿ ತೆಗೆದುಕೊಳ್ಳಬೇಕು? ಅನ್ನುವ ಚಿಂತೆ ಕಾಡುತ್ತದೆ. ಅತ್ತೆ ಅಥವಾ ಗಂಡನ ಅಣತಿ ಯಂತೆ ಹೊರಗೆ ಹೋಗಬೇಕು.
ಹೆಂಡತಿಯಾದವಳಿಗೆ ಪತಿಯ ಸಹಕಾರ ಬೇಕು. ಮೊಬೈಲ್ ನಲ್ಲಿ ಅಮ್ಮನ ಜೊತೆ ಮಾತಾಡುವಾಗ ಬಿಂದಾಸ್ ಆಗಿ ಇರುವುದಿಲ್ಲ.
ಸಣ್ಣಧ್ವನಿಯಲ್ಲಿ ಮಾತನಾಡುತ್ತಾಳೆ. ಯಾರು ಇಲ್ಲದ ಕಡೆ ಹೋಗಿ ಮಾತನಾಡಬೇಕು. ತನ್ನ ಇಷ್ಟದಂತೆ ನಡೆದುಕೊಂಡರೆ ಇದು ನಿಮ್ಮ ಮನೆಯಲ್ಲ ತಗ್ಗಿ ಬಗ್ಗಿ ನಡೆಯಬೇಕು ಎಂದು ಅತ್ತೆಯ ಉವಾಚ. ನಾದಿನಿ ಮೈದುನರಿಂದ ಕೊಂಕು ಮಾತು. ಸಹಿಸಿಕೊಳ್ಳಬೇಕು.
ಇನ್ನು ಗಂಡನಾದವನು ಹೇಗೆ ಇರುತಾನೆ ನೋಡೋಣ. ಗಂಡು ಮದುವೆ ಆಗುವವರಿಗೆ ಅಮ್ಮನೇ ಎಲ್ಲ.ಅಮ್ಮನ ಅಣತಿಯಂತೆ ನಡೆದುಕೊಂಡಿರುತ್ತಾನೆ. ಕೆಲ ಅಮ್ಮಂದಿರು ಮಗನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುತ್ತಾರೆ.
ಅವನಿಗೆ ಸ್ವಾತಂತ್ರ್ಯ ಕೊಡದೆ ಕೋಲೆ ಬಸವನ ರೀತಿ ತಲೆ ಅಲ್ಲಾಡಿಸುವಂತೆ ಮಾಡಿರುತ್ತಾರೆ.ತನ್ನ ತಾಯಿನೇ ಸರ್ವಸ್ವ.ಅವರು ಹೇಳಿದ ಮಾತೆ ವೇದ ವಾಕ್ಯ ಅಂತ ತಿಳಿದುಕೊಂಡಿರುತ್ತಾರೆ. ಮಗನು ನನ್ನ ಅಪ್ಪ -ಅಮ್ಮ,ತಮ್ಮ- ತಂಗಿ, ಅಕ್ಕ- ಅಣ್ಣ ಅಂತ ಹಚ್ಚಿಕೊಳ್ಳುವಂತೆ ಮಾಡಿರುತ್ತಾರೆ.ಅವರೆಲ್ಲರೂ ಒಂದೇ ಗುಂಪಿನಲ್ಲಿ ಇರಬೇಕು. ಆ ಗುಂಪನ್ನು ಬಿಟ್ಟು ಬರುವುದಿಲ್ಲ. ಆದರೆ ತನ್ನನ್ನೇ ನಂಬಿ ಬಂದ ಹೆಂಡತಿಯನ್ನು ಆ ಒಂದು ಸರ್ಕಲ್ ನ ಒಳಗೆ ಬಿಟ್ಟು ಕೊಳ್ಳುವುದಿಲ್ಲ. ಎಲ್ಲದಕ್ಕೂ ಅಮ್ಮನ ಆಸರೆ.ಅಮ್ಮ ಹೇಳುತ್ತಾರೆ: ನೋಡು ನಿನ್ನ ಅಕ್ಕನ ಮಗನನ್ನು ಓದಿಸುವ ಜವಾಬ್ದಾರಿ ನಿನ್ನದು,ನಿಮ್ಮ ಅಣ್ಣ ಅತ್ತಿಗೆ ಮಾತನ್ನು ಕೇಳಬೇಕು. ಅವರೆಲ್ಲರ ಕಷ್ಟದಲ್ಲಿ ನೀನು ಕೈಜೋಡಿಸಬೇಕು. ಎಂದು ಅವನ ತಲೆಯಲ್ಲಿ ಸಾಕಷ್ಟು ಇಂತಹ ಸ್ವಾರ್ಥ ಬುದ್ಧಿಯನ್ನು ತುಂಬಿರುತ್ತಾರೆ.
ಮದುವೆಯಾಗಿ 10 ವರ್ಷಗಳು ಆದರೂ ಹೆಂಡತಿಯಲ್ಲಿ ತನ್ನ ಸ್ವಂತಿಕೆಯನ್ನು ಬಿಟ್ಟು ಕೊಡುವುದಿಲ್ಲ. ಮಗು ಆದ ಮೇಲೆ ಸರಿ ಯಾಗುತ್ತೆ ಅಂತ ಅಂದುಕೊಂಡರೆ, ಅದು ಆಗುವುದಿಲ್ಲ. ಮೊದಲ ಒಂದೆರಡು ವರ್ಷ ಸರಿಯಾಗಿರುತ್ತಾರೆ.ನಂತರ ತನ್ನ ಅಮ್ಮ-ಅಪ್ಪನೇ ಎಲ್ಲಾ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ತಿಳಿದುಕೊಳ್ಳುತ್ತಾರೆ. ನೋಡಿಕೊಳ್ಳಲಿ ಬೇಡ ಅನ್ನುವವರು ಯಾರು?ಅಪ್ಪ-ಅಮ್ಮ ನನ್ನ ನೋಡಿಕೊಳ್ಳಬಾರದು ಹೆಂಡತಿ ಮಗುವನ್ನು ಮಾತ್ರ ನೋಡಿಕೊಳ್ಳಬೇಕು ಅಂತಲ್ಲ. ಅವರ ಆರೋಗ್ಯದ ಕಡೆಗೆ ಗಮನ ಕೊಡಬೇಕು. ನಂತರ ಹೆಂಡತಿ ಮಕ್ಕಳು. ಹೆಂಡತಿ ಮಕ್ಕಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಕುಗ್ಗಿ ಹೋಗುತ್ತಾರೆ. ಒಬ್ಬ ಮನುಷ್ಯ ಅಂದಮೇಲೆ ಅದರಲ್ಲೂ ಮದುವೆಯಾದ ಮೇಲೆ ತನ್ನ ಹೆಂಡತಿಗೆ,ಮಗುವಿಗೆ ಟೈಮ್ ಕೊಡಬೇಕು. ಅವರ ಜೊತೆಯಲ್ಲಿ ಬೆರೆಯಬೇಕು. ಗುಟ್ಟು ಮಾಡದೆ ಎಲ್ಲಾ ವ್ಯವಹಾರಗಳನ್ನು ಹೆಂಡತಿ ಮಕ್ಕಳಿಗೆ ಹೇಳಬೇಕು.ಆವಾಗ ಸಂಸಾರಕ್ಕೆ ಬೆಲೆ ಬರುತ್ತದೆ.
ಬೇರೆ ಮನೆಯಿಂದ ಬಂದ ಹೆಣ್ಣಿಗೆ ಒಂದಿಷ್ಟು ಸಹಕಾರ ಕೊಡದಿದ್ದರೆ ಅವರ ಮನಸ್ಸಿಗೂ ಸಹ ಕಿರಿಕಿರಿಯಾಗುತ್ತೆ. ಈ ರೀತಿಯ ಸಹಕಾರ ಕೊಟ್ಟರೆ ಅಮ್ಮ ಹೇಳುತ್ತಾರೆ ‘ನೀನೇನು ಅಮ್ಮವರ ಗಂಡನ? ಗಂಡ್ಸು ಗಂಡ್ಸ ಹಾಗೆ ಇರಬೇಕು ಕಣೋ’ ಅಂತ ಹೇಳಿಕೊಡುತ್ತಾರೆ.
ಈ ರೀತಿಯ ಅಸಹಕಾರದಿಂದ ಸಂಸಾರಗಳಲ್ಲಿ ಬಿರುಕು ಉಂಟಾಗುತ್ತದೆ. ಗಂಡನಾಗುವವನು ಇದನ್ನೆಲ್ಲ ವಿಚಾರ ಮಾಡಿ ಮದುವೆಯಾಗಬೇಕು. ಕಾಟಾಚಾರಕ್ಕೆ ಮದುವೆಯಾಗಬಾರದು. ತಂದೆ ತಾಯಿಗಳೆ ಸರ್ವಸ್ವ ಎನ್ನುವುದಾದರೆ ಮದುವೆಯಾಗದೇ ಸನ್ಯಾಸಿ ಆಗಿ ಉಳಿಯಬಹುದು.
- ದೇವರಾಜ ಚಾರ್ – ಮೈಸೂರು.
