ಮನೆ ಮನೆಗೆ ಸಮೀಕ್ಷೆ ಸ್ಟಿಕರ್

ವಿದ್ಯುತ್ ಮೀಟರ್ ರೀಡರ್ ಅಂಟಿಸುತ್ತಿದ್ದಾರೆ ಯಾಕೆ?. ಇದು ರಾಜ್ಯ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗಾಗಿ ಜಿಯೋ ಟ್ಯಾಗ್ ಸ್ಟಿಕರ್. ರಾಜ್ಯದ ಪ್ರತಿಯೊಂದು ವಿದ್ಯುತ್ ಸಂಪರ್ಕ ಹೊಂದಿದ ಮನೆ ಮ್ಯಾಪಿಂಗ್ ಮಾಡಲಾಗಿದೆ. ಪ್ರತಿ ಮನೆಯ ಸ್ಥಳ ಸೆರೆ ಹಿಡಿಯ ಆಗಿದೆ. ಇನ್ನಷ್ಟು ಮಾಹಿತಿಯನ್ನು ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ರಾಜ್ಯದ ಎಲ್ಲಾ ಮನೆ ಮನೆಗಳ ವಿದ್ಯುತ್ ಮೀಟರ್ ರೀಡರ್ ಗಳು ಒಂದು ಸ್ಟಿಕ್ಕರ್ ಮನೆ ಬಾಗಿಲಿಗೆ ಅಂಟಿಸುತ್ತಿದ್ದಾರೆ. ಯಾಕೆ ಗೊತ್ತಾ?.  ಇದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆಗಾಗಿ ಬರುವವರಿಗೆ ಲೊಕೇಶನ್ ಮಾಹಿತಿ ನೀಡುವ ಜಿಯೋ ಟ್ಯಾಗ್ ಸ್ಟಿಕರ್ ಆಗಿದೆ.

ಈ ಹಿಂದೆ ಇಂತಹ ಅನೇಕ ಸಮೀಕ್ಷೆಗಳನ್ನು ಮಾಡುವವರು ಮನೆಗಳಿಗೆ ಹೋಗದೆ ಎಲ್ಲೋ ಕುಳಿತು ವೋಟರ್ ಲಿಸ್ಟ್ ಬಳಸಿ ಸಮೀಕ್ಷೆ ಬರೆಯುತ್ತಿದ್ದರು, ಇದರಿಂದ ಸಮೀಕ್ಷೆ ವಾಸ್ತವವಾಗಿ ಇರುವ ಸಾಧ್ಯತೆ ಕಡಿಮೆ ಇತ್ತು. ಈ ಬಾರಿ ಹೊಸ ತಂತ್ರಜ್ಞಾನ ಬಳಸಿ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ನಡೆಯಲಿದೆ.

ಪ್ರತಿ ವಿದ್ಯುತ್ ಬಿಲ್ಲಿನಲ್ಲಿ ಈಗ ಮನೆಗಳ ಮಾಹಿತಿಯ ಕ್ಯೂಆರ್ ಕೋಡ್ ಇದೆ ಅದೇ ರೀತಿ ಈ ಸಮೀಕ್ಷೆಯ ಜಿಯೋ ಟ್ಯಾಗ್ ಸ್ಟಿಕರ್ ನಲ್ಲೂ ಕೂಡ ಅಚ್ಚು ಮಾಡಲಾಗಿದೆ. ಈ ಬಗ್ಗೆ ರಾಜ್ಯ ಹಿಂದುಳಿದ ಆಯೋಗದ ಚೇರ್ಮನ್ ಅವರ ವಿನಂತಿ ಈ ಕೆಳಗಿನಂತಿದೆ ಒಮ್ಮೆ ಓದಿ….

ಬೆಂಗಳೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆಗಸ್ಟ್ 23ರಿಂದ ಪ್ರಾರಂಭಿಸುತ್ತಿದೆ. ವಿದ್ಯುತ್ ಮೀಟರ್ ರೀಡರ್​​ಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದಾರೆ. ಯಾವುದೇ ಮನೆಗಳು ತಪ್ಪಿಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯ್ಕ ತಿಳಿಸಿದ್ದಾರೆ.

ಆರ್.ಆರ್. ಮೀಟರ್ ಆಧಾರದ ಮೇಲೆ ಮನೆ ಗುರುತಿಸಿ ಸಮೀಕ್ಷೆ : ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಬದ್ಧತೆಯೊಂದಿಗೆ ಹಮ್ಮಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿರುತ್ತದೆ. ಅದು ರಾಜ್ಯಾದ್ಯಂತ ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸುತ್ತದೆ.

ರಾಜ್ಯದಲ್ಲಿರುವ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂದಿದ್ದಾರೆ.

ಸೆಪ್ಟೆಂಬರ್ 22ರಿಂದ ಎರಡನೇ ಹಂತ : ಇದರಿಂದ ಎರಡನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಎರಡನೇಯ ಹಂತದ ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ 22ನೇ ಸೆಪ್ಟೆಂಬರ್​​ನಿಂದ 7ನೇ ಅಕ್ಟೋಬರ್ 2025ರವರೆಗೆ ನಡೆಸಲು ಗುರಿ ಹೊಂದಲಾಗಿದೆ.

ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

ಆ್ಯಪ್ ಅಭಿವೃದ್ಧಿ :
ಇ  ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ (ಆ‌ರ್.ಆ‌ರ್. ನಂಬರ್) ಆಧಾರದ ಮೇಲೆ ವಿನ್ಯಾಸಗೊಳಿಸಿದ ಈ ನವೀನ, ಕ್ರಿಯಾತ್ಮಕ ಮತ್ತು ವಿಶಿಷ್ಟ ವ್ಯವಸ್ಥೆಯು ಉತ್ತಮವಾಗಿದೆ. ಅದಕ್ಕನುಗುಣವಾಗಿ ಒಂದು ಅಗತ್ಯವಾದ ‘ಆ್ಯಪ್’ ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸೇರಿದಂತೆ, ಆಯೋಗದ ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಉತ್ಸಾಹಿ ಹಾಗೂ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಸಮೀಕ್ಷೆಯ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಮನೆಗಳ ಜಿಯೋ ಟ್ಯಾಗ್’ :

ಇದು ರಾಜ್ಯಾದ್ಯಂತ ಇರುವ ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ( ESCOM) ಅಪಾರ ಸಂಖ್ಯೆಯ ‘ಮೀಟರ್ ರೀಡರ್’ ಗಳನ್ನು (Meter Readers) ಒಳಗೊಂಡಿದೆ.

ಕರ್ನಾಟಕ ರಾಜ್ಯವು ಎಲ್ಲ ಮನೆಗಳನ್ನು ವಿದ್ಯುದ್ದೀಕರಣಗೊಳಿಸುವುದರಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.

ಇದರಿಂದ ಎಸ್ಕಾಂಗಳ ಮೀಟರ್ ರೀಡರ್​ಗಳು, ಗ್ರಾಹಕರ ಮನೆ ಬಳಕೆ ವಿದ್ಯುತ್ ಸಂಪರ್ಕದ ಮೀಟರ್ ಅನ್ನು ಓದುವುದು ಮತ್ತು ಬಿಲ್ಲಿಂಗ್ ಮಾಡುವುದರ ಜೊತೆಗೆ, ಮನೆಗಳನ್ನು ‘ಜಿಯೋ ಟ್ಯಾಗ್’ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವ್ಯಾಪ್ತಿಗೆ ಒಳಪಡಿಸುತ್ತಾರೆ ಎಂದು ಮಧುಸೂಧನ್ ಆರ್.ನಾಯ್ಕ ವಿವರಿಸಿದ್ದಾರೆ.

ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸಲಾಗುತ್ತದೆ :

ಮೀಟರ್ ರೀಡರ್​ಗಳು ಸೆರೆಹಿಡಿದ ಮನೆ ಪಟ್ಟಿ ಡೇಟಾವನ್ನು EDCS (ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ) ಸರ್ವರಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ ‘ಮನೆ ಪಟ್ಟಿ’ ಸಮೀಕ್ಷೆಯ ಉದ್ದೇಶಕ್ಕಾಗಿ ‘ಮ್ಯಾಪಿಂಗ್’ ಮಾಡಲಾಗುತ್ತದೆ.

ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್​ನಲ್ಲಿ ಮನೆಯ ‘ಸ್ಥಳ’ (Location) ವನ್ನು ಸೆರೆಹಿಡಿಯಲಾಗುತ್ತದೆ ಮತ್ತು ಪ್ರತಿ ಮನೆಗಳಿಗೆ ‘ವಿಶಿಷ್ಟ್ಯ ಸಂಖ್ಯೆ’ (Unique Number) ಯನ್ನು ನೀಡಲಾಗುತ್ತದೆ (ಅಪಾರ್ಟ್​​ಮೆಂಟ್​​ಗಳು/ವಾಸಸ್ಥಳಗಳ ಕ್ಲಸ್ಟರ್ ಸೇರಿದಂತೆ). ತಮ್ಮ ‘ಬಿಲ್ಲಿಂಗ್ ಸೈಕಲ್’ನಲ್ಲಿ ಮೀಟ‌ರ್ ರೀಡರ್​​ಗಳು ಆಗಸ್ಟ್ 23, 2025ರಿಂದ ಈ ಕೆಲಸವನ್ನು ಪ್ರಾರಂಭಿಸಲಿದ್ದು, ಅಭಿವೃದ್ಧಿಪಡಿಸಲಾದ ಆ್ಯಪ್​ನಲ್ಲಿ ದಾಖಲಿಸಲಿದ್ದಾರೆ.

ಇದಾದ ನಂತರ, ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸಿ, ಸಮೀಕ್ಷಾದಾರರಿಗೆ ಮನೆಯ ಗುರುತಿಸುವಿಕೆ ಸುಲಭವಾಗುವಂತೆ ಮಾಡಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರಸ್ತಾವಿತ ಸಮೀಕ್ಷೆಯು ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ ‘ದತ್ತಾಂಶಗಳನ್ನು ಸೆರೆಹಿಡಿಯುವುದು’ ಮಾತ್ರವಲ್ಲದೇ, ಅಂದಾಜು 7 ಕೋಟಿ ಜನರಿಗೆ ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶವಾಗಲಿದೆ ಎಂದಿದ್ದಾರೆ.

ಜನರು ಸಹಕರಿಸಲು ಮನವಿ :

ಮನೆ ಪಟ್ಟಿ ಕಾರ್ಯಾಚರಣೆಗಳ ಈ ಮೊದಲ ಹಂತವು ತುಂಬಾ ಸವಾಲಿನದ್ದಾಗಿದ್ದರೂ, ರಾಜ್ಯದ ಎಲ್ಲಾ ಮನೆಗಳನ್ನು ಒಳಗೊಂಡಂತೆ ವ್ಯವಸ್ಥಿತವಾಗಿ ಸಮೀಕ್ಷೆಯನ್ನು ನಡೆಸುವ ಉದ್ದೇಶಕ್ಕಾಗಿ ಇದು ಬಹಳ ಪ್ರಮುಖ ಕಾರ್ಯವಾಗಿದೆ. ಆದ್ದರಿಂದ  ಸಾರ್ವಜನಿಕರು ಮತ್ತು ಪ್ರತಿಯೊಂದು ಕುಟುಂಬದ ಸದಸ್ಯರು [ವಿಶೇಷವಾಗಿ ಅಪಾರ್ಟೆಂಟ್ ಮತ್ತು ಕ್ಲಸ್ಟರ್ ವಾಸಸ್ಥಳಗಳಲ್ಲಿ ವಾಸಿಸುವವರು] ಮೀಟರ್ ರೀಡರ್​​ಗಳಿಗೆ ವಹಿಸಲಾಗಿರುವ ಮನೆ ಪಟ್ಟಿ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸುವ ದಿಸೆಯಲ್ಲಿ ಸಹಕರಿಸಲು ಮತ್ತು ಅನುಕೂಲ ಮಾಡಿಕೊಡಲು ಆಯೋಗ ಮನವಿ ಮಾಡಿದೆ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW