ಸಾವು ಮತ್ತು ಬದುಕುಗಳ ಹಿಂದಿನ ಸತ್ಯವೇನು? ಆತ್ಮ ಮತ್ತು ಚೇತನ ಇರುವುದು ವೈಜ್ಞಾನಿಕವಾಗಿ ನಿಜವೇ? ಶೂನ್ಯ ಮತ್ತು ಪೂರ್ಣದ ಕುತೂಹಲವನ್ನು ಕೆ.ಟಿ.ಗಟ್ಟಿ ಅವರ ‘ಅನಂತರ’ ಕೃತಿಯಲ್ಲಿ ಓದಬಹುದು. ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಅನಂತರ
ಲೇಖಕರು: ಕೆ.ಟಿ.ಗಟ್ಟಿ
ಸೌಮ್ಯ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ:೧೯೮೯ ಮತ್ತು ೨೦೦೭.
ಪುಟಗಳು: ೨೦೪.
ಬೆಲೆ: ರೂ. ೯೫.
ದೇಶ ವಿದೇಶಗಳಲ್ಲಿ ತಮ್ಮ ಬೋಧನಾ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದ ಲೇಖಕರಾದ ಕೆ.ಟಿ.ಗಟ್ಟಿಯವರು ತೊಂಬತ್ತಕ್ಕಿಂತ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಸರಿಯಾಗಿ ಕಣ್ತೆರೆದು ಆತ್ಮವಾಗಿ ನೋಡಿದರೆ ಮನುಷ್ಯನ ಒಳಗಿರುವುದೆಲ್ಲ ಕಾಣಿಸುತ್ತದೆ.’ ಈ ಕಾದಂಬರಿಯ ಹಿಂದಿರುವ ವಿಷಯವೂ ಅದೇ ಎನ್ನುತ್ತಾರೆ ಲೇಖಕರು.
ಭೌತಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಗಿರಿಧರ ಸದಾ ಸಂಶೋಧನಾ ನಿರತನಾಗಿರುವ ಅಪ್ರತಿಮ ಮೇಧಾವಿ .ಸಂಶೋಧನೆಯ ಹೊಸ ಹೊಸ ದಿಕ್ಕುಗಳನ್ನು ದಾಟಿ ಮುನ್ನಡೆಯುವ ಅವನು ಅದಮ್ಯ ಜ್ಞಾನದ ಪಿಪಾಸು. ಬ್ಯಾಂಕಿನಲ್ಲಿ ಉದ್ಯೋಗ ಮಾಡುವ ಆತನ ಪತ್ನಿ ಸ್ವಾತಿ ಬುದ್ಧಿವಂತೆ ಹಾಗೂ ರೂಪವತಿ. ಸಿನೇಮಾ ವಿಹಾರಗಳಲ್ಲಿ ಆಸಕ್ತಿ ಇದ್ದ ಅವಳು ಹಾಗೂ ಪುಸ್ತಕ ವಿಜ್ಞಾನದ ಪ್ರಯೋಗಾಲಯವೇ ಉಸಿರಾಗಿರುವ ಗಿರಿ ಇಬ್ಬರೂ ಪರಸ್ಪರ ಅವರವರ ಭಿನ್ನತೆಯನ್ನು ಒಪ್ಪಿಕೊಂಡೇ ಸುಸೂತ್ರವಾಗಿ ಬಾಳುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು.

ಅಸ್ತಿತ್ವದ ಮೂಲಕ್ಕೆ ‘ಜಿನಮ್’ ಎಂದು ನಾಮಕರಣ ಮಾಡಿ ಸಿದ್ಧಾಂತವೊಂದನ್ನು ಪ್ರತಿಪಾದಿಸುವ ಸಿದ್ಧತೆಯಲ್ಲಿ ತೊಡಗಿದ್ದ ಗಿರಿಧರ್. ಹೇಮಂತ್ ಗಿರಿಯ ಸಹೋದ್ಯೋಗಿ. ಮಹತ್ವಾಕಾಂಕ್ಷಿ. ತನ್ನ ಗುರಿ ಸಾಧಿಸಲು ಮಿತ್ರ ದ್ರೋಹ ಮಾಡುವ ಕ್ರೂರಿ. ಅವನ ಹೆಂಡತಿ ವಿದ್ಯಾ ಗಿರಿಯ ಹೆಂಡತಿ ಸ್ವಾತಿಯಂತೆ ಚೆಲುವೆಯಲ್ಲ. ಪಕ್ಕದ ಮನೆಯಲ್ಲೇ ವಾಸಿಸುವ ಅವರ ಕುಟುಂಬ ಮೊದಲು ಸ್ನೇಹ ಸಂಬಂಧದಿಂದ ಚೆನ್ನಾಗಿಯೇ ಇತ್ತು. ಕೆಲಸದ ಚರ್ಚೆಯ ನೆಪದಲ್ಲಿ ಹೇಮಂತ್ ಆಗಾಗ ಅವರಲ್ಲಿ ಬರುವುದೂ ಇತ್ತು.
ಈ ಮೊದಲು ಅವನ ಬಳಿಗೆ ಸಂಶೋಧನೆಗೆ ಸಹಕರಿಸುವ ರಾಜಣ್ಣ ಮತ್ತು ಅವನ ಪ್ರೇಯಸಿ ಜುಬೇದ ಅವರದು ಭಿನ್ನ ಕೋಮಿನ ಪ್ರಣಯ ದುರಂತದ ಕಥೆಯು ಕೂಡ ಸೊಗಸಾಗಿದೆ. ಆದರೆ ಅಂತ್ಯ ಮನ ಮಿಡಿಯುವಂತಿದೆ.
ಈ ನಡುವೆ ಬೈಕ್ ಅಪಘಾತದಲ್ಲಿ ಗಿರಿಧರ ಸಾವನ್ನಪ್ಪಿದ ಧಾರುಣ ಪ್ರಸಂಗದಿಂದ ಸ್ವಾತಿ ಒಂಟಿಯಾಗುತ್ತಾಳೆ. ಅವಳ ಅಸಹಾಯಕತೆಯ ದುರ್ಲಾಭ ಪಡೆದ ಹೇಮಂತ್ ಸಾಂತ್ವನದ ಸೋಗಿನಲ್ಲಿ ಸ್ವಾತಿಯ ಪ್ರಿಯಕರನಾಗುತ್ತಾ, ಅವಳೊಂದಿಗೆ ಗಿರಿಧರನ ಸಂಶೋಧನೆಯ ರಹಸ್ಯವೆಲ್ಲವನ್ನೂ ವಶಪಡಿಸಿಕೊಳ್ಳುತ್ತಾನೆ. ಗಿರಿಧರನ ದೇಹ ಅಪಘಾತದಲ್ಲಿ ಅಂತ್ಯವಾದರೂ ಅವನ ಚೇತನ (Genum) ಹೇಮಂತನ ಸ್ವಾರ್ಥ- ವಂಚನೆಯನ್ನು ಪತ್ತೆ ಹಚ್ಚಿ ನೋವನ್ನನುಭವಿಸುತ್ತದೆ.
ಹೇಮಂತನಿಗೆ’ ನೊಬೆಲ್ ಪ್ರಶಸ್ತಿ’ ನೀಡುತ್ತಾರೆ ಎಂದು ತಿಳಿದಾಗ ರಾಜಣ್ಣ ಸ್ವಾತಿಗೆ ಅವನ ಸಂಚನ್ನು ಬಹಿರಂಗಗೊಳಿಸುತ್ತಾನೆ. ಆದರೆ ತಡವಾಗಿ ಸ್ವಾತಿಯ ಕಣ್ತೆರೆಯುತ್ತದೆ. ಅದೇ ಸಮಯದಲ್ಲಿ ಮಗಳು ಶೋಭನಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸ್ವಾತಿ ಹೇಮಂತನನ್ನು ಹೇಗೆ ದೂರ ಮಾಡುತ್ತಾಳೆ? ಅಮೇರಿಕಾದ ಯುನಿವರ್ಸಿಟಿಗೆ ತೆರಳುವ ಹೇಮಂತ್ ತನ್ನ ಪತ್ನಿಯನ್ನು ಮತ್ತೆ ಮನೆಗೆ ಸೇರಿಸುತ್ತಾನಾ?
ಸಾವು ಮತ್ತು ಬದುಕುಗಳ ಹಿಂದಿನ ಸತ್ಯವೇನು? ಆತ್ಮ ಮತ್ತು ಚೇತನ ಇರುವುದು ವೈಜ್ಞಾನಿಕವಾಗಿ ನಿಜವೇ?
ಒಂದು ಸಾವಿನ ನಂತರದ ಅಸ್ತಿತ್ವದ ಬಗ್ಗೆ ಇನ್ನೊಂದು ವಿಶ್ವದ ಸ್ವರೂಪದ ಬಗ್ಗೆ ಅಂದರೆ ಶೂನ್ಯ ಮತ್ತು ಪೂರ್ಣದ ಕುತೂಹಲ ಇಲ್ಲಿದೆ. ಸತ್ತವರೊಂದಿಗೆ ಸಂಭಾಷಣೆ ವಿಚಾರದ ಒಂದು ಪ್ರತ್ಯಕ್ಷ ವರದಿಯ ಸ್ವಾನುಭವದ ಬಗ್ಗೆ ಲೇಖಕರು ಹಂಚಿ ಕೊಂಡಿದ್ದಾರೆ. ಜೀವಿಯ ಮೂಲ ಘಟಕವಾದ ಅಣು -ಪರಮಾಣುಗಳ ಬಗ್ಗೆ ಮಾಹಿತಿ ಇರುವ ಈ ಕಥೆ ಗೊತ್ತಿಲ್ಲದವರಿಗೆ ಸ್ವಲ್ಪ ಗಟ್ಟಿಯೇ.

ಕೊನೆಯಲ್ಲಿ ಸ್ವಾತಿಯ ಸಾವಿನಲ್ಲಿ ಅವಳ ಜಿನಮ್ ನೊಂದಿಗೆ ಸೇರುವ ಗಿರಿಯ ಆಸೆ ಕುತೂಹಲ ಮೂಡಿಸುತ್ತದೆ. ವೈಜ್ಞಾನಿಕವಾಗಿ ಏನೇ ಸಂಶೋಧನೆಗಳು ನಡೆದರೂ ಬದುಕು ಮಾತ್ರ ಮುಂದುವರೆಯುತ್ತಲೇ ಇರುತ್ತದೆ.
ಸ್ವಾತಿಯೊಡನೆ ತನ್ನ ಗಂಡನ ಸಂಬಂಧವನ್ನು ಕಣ್ಣಾರೆ ಕಂಡ ವಿದ್ಯಾಳ ತೀರ್ಮಾನವೇನು? ಪಶ್ಚಾತ್ತಾಪಗೊಂಡ ಸ್ವಾತಿ ಏನು ಮಾಡುತ್ತಾಳೆ? ಅವಳ ಹೆಣ್ಣು ಮಕ್ಕಳು ದಾರಿತಪ್ಪಿ ಹೋಗಿದ್ದನ್ನು ಗಿರಿಯ ಆತ್ಮ ಕಾಣುವುದು ನಿಜವೇ? ಬಹಳ ಕುತೂಹಲಕಾರಿ ಎನಿಸಿದರೂ ಅಂತ್ಯ ಅವಸರದಲ್ಲಿ ಮುಗಿದಂತೆ ಭಾಸವಾಯಿತು.
ಬದುಕು ವ್ಯಾಪಾರವಾದ ಇಂದು ಭಾವ ಬರಡಾಗಿ, ಮನುಷ್ಯನಿಗೆ ಮನುಷ್ಯನೇ ಕಾಣುತ್ತಿಲ್ಲ. ಇಲ್ಲಿ ಇಂತಹ ಒಂದು ಸಾಮಾಜಿಕ ಚಿಂತನೆಯೂ ಇದೆ. ಅಪರೂಪದ ಕಾದಂಬರಿ.
- ಮಾಲತಿ ರಾಮಕೃಷ್ಣ ಭಟ್
