ಮನೆಯೇ ಸಿನಿಮಾಲಯ – ಸುಜಾತಾ ರವೀಶ್

ಸಿನಿಮಾ ಎಂದರೆ ನಮ್ಮ ಕಾಲದಲ್ಲಂತೂ ಒಂದು ದಿನದ ಕಾರ್ಯಕ್ರಮವೇ ಏಕೆಂದರೆ ನೋಡಲು ಬೆಳಗಿನಿಂದಲೇ ಸಡಗರ. ಈಗ ಒಂದೊಂದೇ ಥಿಯೇಟರ್ ಗಳು ಮಾಯವಾಗುತ್ತಾ ಇದೆ ಮಲ್ಟಿ ಫ್ಲೆಕ್ಸ್ ಗಳು ತಲೆ ಎತ್ತುತ್ತಿವೆ. ಮನೆಯೇ ಸಿನಿಮಾಲಯವಾಗಿದೆ. ಸುಜಾತಾ ರವೀಶ್ ಅವರ ನೆನಪಿನಂಗಳದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಮೊನ್ನೆ ಏನೋ ಕೆಲಸಕ್ಕೆ ಎಂದು ನೂರಡಿ ರಸ್ತೆಗೆ ಹೋದಾಗ ಲಕ್ಷ್ಮಿ ಥಿಯೇಟರ್ ಇದ್ದ ಜಾಗ ಈಗ ಥಿಯೇಟರ್ ನೆಲ ಸಮವಾಗಿ ಖಾಲಿಸೈಟ್ ಕಂಡಿತು. ಎಷ್ಟೆಲ್ಲಾ ಸಿನಿಮಾಗಳನ್ನು ಆ ಥಿಯೇಟರ್ ನಲ್ಲಿ ನೋಡಿದ್ದೆ ಅಪ್ಪ ಅಮ್ಮನ ಜೊತೆ, ತಂಗಿಯರ ಜೊತೆ, ಗೆಳತಿಯರ ಜೊತೆ ನಂತರ ಪತಿಯ ಜೊತೆ.. ಲೆಕ್ಕವಿರದಷ್ಟು. ಈಗ ಒಂದೊಂದೇ ಥಿಯೇಟರ್ ಗಳು ಮಾಯವಾಗುತ್ತಾ ಇದೆ ಮಲ್ಟಿ ಫ್ಲೆಕ್ಸ್ ಗಳು ತಲೆ ಎತ್ತುತ್ತಿವೆ. ಈಗಿನ ತಾಂತ್ರಿಕ ಬೆಳವಣಿಗೆಯನ್ನು ನೋಡಿದರೆ ಹೋಮ್ ಥಿಯೇಟರ್ ಜನಪ್ರಿಯತೆ ಕಂಡರೆ ಮಲ್ಟಿ ಫ್ಲೆಕ್ಸ್ ಗಳೂ ಮಾಯವಾಗುವ ದಿನ ದೂರವಿಲ್ಲವೇನೋ ಅಂತನಿಸುವುದು ನಿಜ.

ಸಿನಿಮಾ ಎಂದರೆ ನಮ್ಮ ಕಾಲದಲ್ಲಂತೂ ಒಂದು ದಿನದ ಕಾರ್ಯಕ್ರಮವೇ. ಏಕೆಂದರೆ ನೋಡಲು ಬೆಳಗಿನಿಂದಲೇ ಸಡಗರ . ಆಗೆಲ್ಲ ಸಿಟಿ ಬಸ್ ನಲ್ಲಿ ಹೋಗಬೇಕಾದರೆ 11.30 12ಕ್ಕೆಲ್ಲ ಮನೆ ಬಿಟ್ಟರೆ ಉದ್ದಕ್ಕೆ ಕ್ಯೂನಲ್ಲಿ ಟಿಕೆಟ್ ಕೊಂಡು ಒಳಗೆ ಹೋಗಿ ಕುಳಿತಲ್ಲಿಗೆ ಒಂದು ಯುದ್ಧ ಗೆದ್ದ ಸಂಭ್ರಮ. ನಂತರ ಸಿನಿಮಾ ಮುಗಿದ ಮೇಲೆ ಹೋಟೆಲ್ ದರ್ಶನ ಕಡ್ಡಾಯ.‌ ಹೋಗಿ ಮಸಾಲೆ ದೋಸೆ ಕಾಫಿ ಕುಡಿದು ಮತ್ತೆ ಸಿಟಿ ಬಸ್ ಹಿಡಿದು ಮನೆಗೆ ಬರುವವರೆಗೆ ಒಂದು ದಿನ ಚೆನ್ನಾಗಿ ಸುಸಂಪನ್ನ ಆಗಿಬಿಡುತ್ತಿತ್ತು. ಎಕ್ಸಾಮ್ ನಡೆಯುತ್ತಿದ್ದಾಗಲೇ ಮುಗಿದ ತಕ್ಷಣ ಒಂದು ಫಿಲಂಗೆ ಕರೆದುಕೊಂಡು ಹೋಗಲು ಹೈಸ್ಕೂಲ್ ನಲ್ಲಿ ಇರುವ ತನಕ ಅಮ್ಮನಿಗೆ ದುಂಬಾಲು. ನಂತರ ಗೆಳತಿಯರ ಜೊತೆ ಹೋಗಲು ಪರ್ಮಿಷನ್. ಮದುವೆಯ ನಂತರವಂತು ಹುಟ್ಟು ಹಬ್ಬ ವಿವಾಹ ವಾರ್ಷಿಕೋತ್ಸವ ಯಾವುದಾದರೂ ಆಗಲಿ ಏನಾದರೂ ಆಗಲಿ ಸಂಭ್ರಮ ಪಡಲು ಸಿನಿಮಾ ಆಗ ಒಂದು ಮುಖ್ಯ ಕಾರಣವಾಗಿಬಿಟ್ಟಿತ್ತು. ನಾವು ನೆಂಟರ ಮನೆಗೆ ರಜೆ ಕಳೆಯಲು ಹೋದಾಗಲೂ ನಮ್ಮ ಮನೆಗೆ ನೆಂಟರು ಬಂದಾಗಲೂ ಒಂದು ಸಿನಿಮಾ ಭೇಟಿ ಖಂಡಿತ ಇರುತ್ತಿತ್ತು .ಅದಕ್ಕೂ ಮುಂಚೆ ಅಮ್ಮ ಹೇಳುತ್ತಿದ್ದಂತೆ ಥಿಯೇಟರ್ ಗಳ ಸಂಖ್ಯೆಯು ಕಡಿಮೆಯಿದ್ದು ಚಿಕ್ಕ ಊರುಗಳಲ್ಲಿ ಹೊಸ ಸಿನಿಮಾ ಬರದೇ ಇದ್ದಿದ್ದರಿಂದ ಅವುಗಳನ್ನು ನೋಡಬೇಕೆಂದರೆ ಗಾಡಿ ಕಟ್ಟಿಕೊಂಡು ಹಳ್ಳಿಯಿಂದ ಹೋಗುತ್ತಿದ್ದರಂತೆ. ಮನೆ ಕೆಲಸ ಎಲ್ಲಾ ಮುಗಿಸಿ ಸಂಜೆ ಬೇಗ ಊಟ ಮಾಡಿ ಫಸ್ಟ್ ಶೋಗೆ ಹೋಗುತ್ತಿದ್ದುದು ವಾಡಿಕೆಯಂತೆ.

ಸಿನಿಮಾ ನೋಡಲು ಹೋಗಿ ಬರುವುದಷ್ಟೇ ಅಲ್ಲ ಬಂದ ನಂತರ ಫ್ರೆಮ್ ಟು ಫ್ರೇಮ್ ಕಥೆ ಹೇಳುತ್ತಿದ್ದದ್ದು ನನ್ನ ಅಭ್ಯಾಸವಾದರಿಂದ ಅಕ್ಕಪಕ್ಕದ ಗೆಳತಿಯರು ಹಾಗೂ ಶಾಲೆಯಲ್ಲಿ ಆ ಸಿನಿಮಾ ನೋಡದ ಗೆಳತಿಯರಿಗೆ ಮತ್ತೊಮ್ಮೆ ಕಥಾ ಶ್ರವಣ ನಡೆಯುತ್ತಿತ್ತು ಹಾಗೆಯೇ ಕನ್ನಡ ಬಿಟ್ಟು ಬೇರೆ ಸಿನಿಮಾ ನೋಡದ ನಮಗೆ ಆ ದಿನ ಜನಪ್ರಿಯ ಹಿಂದಿ, ತಮಿಳು, ತೆಲುಗು, ಸಿನಿಮಾ ನೋಡಿ ಬಂದ ಗೆಳತಿಯರು ಕಥೆ ಹೇಳುತ್ತಿದ್ದುದು ಉಂಟು.

ಆಗ ಥಿಯೇಟರ್ಗಳಲ್ಲಿ ನಾಲ್ಕಾಣೆಗೆ ಒಂದು ಸಿಗುತ್ತಿದ್ದ ಆಯಾ ಸಿನಿಮಾಗಳ ಕುತೂಹಲಕರ ಘಟ್ಟದಲ್ಲಿ ಕಥೆ ನಿಲ್ಲಿಸಿದ ಹಾಗೂ ಸಿನಿಮಾ ಹಾಡುಗಳಿದ್ದ ನಾಲ್ಕೈದು ಪುಟಗಳ ಪುಸ್ತಕ ನಮಗೆ ಸದಾ ಆಸಕ್ತಿಯ ಬಿಂದು. ಅದನ್ನು ಕೊಳ್ಳುವುದು ಸಹ ನಮ್ಮ ಕಾರ್ಯಕ್ರಮದಲ್ಲಿ ಸೇರಿರುತ್ತಿತ್ತು.

ಮೈಸೂರಿನಲ್ಲಿ ಸದಾ ಹೊತ್ತಿಗೆ ಮುಂಚೆ ಹೋಗಿ ನಿಲ್ಲುತ್ತಿದ್ದರಿಂದಲೋ ಅಥವಾ ಬಹಳ ರಷ್ ಇಲ್ಲದಿದ್ದರಿಂದಲೋ ಟಿಕೆಟ್ ಸಿಕ್ಕಲಿಲ್ಲ ಎಂಬ ಅನುಭವ ಎಂದಿಗೂ ಆಗಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ನನ್ನ ದೊಡ್ಡಮ್ಮನ ಮಕ್ಕಳ ಜೊತೆ ಒಮ್ಮೆ ಹೋದಾಗ ನಮ್ಮ ಸರದಿ ಇನ್ನೇನು ಎನ್ನುವಾಗ ಟಿಕೆಟ್ ಗಳು ಮುಗಿದು ಬ್ಲಾಕ್ ನಲ್ಲಿ ಕೊಳ್ಳುವಷ್ಟು ಹಣ ಇಲ್ಲದ್ದರಿಂದ ನಿರಾಶರಾಗಿ ಮನೆಗೆ ವಾಪಸ್ ಆದದ್ದು ಮತ್ತು ಫಸ್ಟ್ ಶೋಗೆ ಬೇಗ ಹೋಗಿ ಟಿಕೆಟ್ ಕೊಂಡು ನೋಡಿ ಬಂದದ್ದು ಒಂದು ಸುಂದರ ಅನುಭವ. ಹಾಗೆ ನನ್ನ ತಂದೆಯ ಊರಾದ ಶ್ರೀನಿವಾಸಪುರದಲ್ಲಿ ಟೆಂಟ್ನಲ್ಲಿ ಟಿಕೆಟ್ ಕೊಂಡ ಮೇಲೆ ಕರೆಂಟ್ ಹೋಗಿದ್ದರಿಂದ ಆ ಟೆಂಟ್ ನಲ್ಲಿ ಸಿನಿಮಾ ಪ್ರದರ್ಶನ ನಡೆಯದೆ ನಾವು ಊರಿಗೆ ವಾಪಸ್ ಆಗಬೇಕಿದ್ದರಿಂದ ಆ ಟಿಕೆಟ್ ಅನ್ನು ಬೇರೆಯವರಿಗೆ ಕೊಟ್ಟು ಬಂದದ್ದು ಸಹ ನೆನಪು.

ಮಸಣದ ಹೂ ಚಿತ್ರ ಬಿಡುಗಡೆಯಾದಾಗ ಫಸ್ಟ್ ಡೇ ಮಾರ್ನಿಂಗ್ ಶೋ ಗೆ ನಮ್ಮ ಡಿಗ್ರಿ ತರಗತಿಯ 10 ಜನ ಹೆಣ್ಣು ಮಕ್ಕಳು ಹೋಗಿ ನೋಡಿದ್ದು ಸ್ಮೃತಿಪಟದಲ್ಲಿ ಸದಾ ಹಸಿರಾದ ಸಂಗತಿ. ಆಗೆಲ್ಲ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದಾಗ ಸುತ್ತಮುತ್ತಲಿನವರ ಕಾಮೆಂಟ್ಗಳು ಹೊಡೆದಾಟ ದೃಶ್ಯ ಬಂದಾಗ ಹೊಡಿ ಮಗ ಬಿಡಬೇಡ ಎನ್ನುವ ಉತ್ಸಾಹಿ ಕೂಗುಗಳು ಕಷ್ಟ ಕೊಡುತ್ತಿರುವಾಗ ಹಿಡಿ ಶಾಪ ಹಾಕುವ ಹೆಂಗಳೆಯರು ನಾಯಕಿಯೊಂದಿಗೆ ತಾವು ನಕ್ಕು ಅವಳು ಅತ್ತಾಗ ಅತ್ತು ಕರ್ಚೀಫ್ ಒದ್ದೆಯಾಗಿಸುತ್ತಿದ್ದು ಇದೆಲ್ಲವೂ ಚಿತ್ರದ ಪಾತ್ರಗಳೊಡನಿನ ಸಂಬಂಧವನ್ನು ಮತ್ತು ಚಿತ್ರದೊಳಗಡೇ ತಲ್ಲಿನರಾಗುತ್ತಿದ್ದ ಪರಿ ತಿಳಿಸುತ್ತದೆ. ಈಗಿನಂತೆ ಹೊರಗಿನ ತಿಂಡಿ ತೆಗೆದುಕೊಂಡು ಬರಬಾರದು ಎಂಬ ನಿಯಮ ಇಲ್ಲದ್ದರಿಂದ ಮನೆಯಲ್ಲಿನ ಚಕ್ಕಲಿ ಕೋಡುಬಳೆ ಚೌಚೌ ಹಣ್ಣುಗಳು ಎಲ್ಲವನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಂಚಿ ತಿನ್ನುತ್ತಿದ್ದುದು.

ಮಲ್ಟಿ ಫ್ಲಕ್ಸ್ ಗಳ ಯುಗ ಬಂದಮೇಲೆ ಒಂದೇ ಥಿಯೇಟರ್ ಗೆ ಹೋಗಿ ಬೇಕಾದ ಸಿನಿಮಾ ಆಯ್ಕೆ ಮಾಡುವ ದೊಡ್ಡ ಸ್ಕ್ರೀನ್ ನಲ್ಲಿ ನೋಡುವ ಅನುಭವ ಒಂದು ರೀತಿಯ ಥ್ರಿಲ್ ಇದ್ದರೂ ಏನಾದರೂ ತಿನ್ನಬೇಕೆನಿಸಿದರೆ ದುಪ್ಪಟ್ಟು ಮೂರು ಪಟ್ಟು ಬೆಲೆ ತೆರುವ ಪರಿಸ್ಥಿತಿ! ಟಿಕೆಟ್ ದರಗಳೂ ಅಷ್ಟೇ ಮುಗಿಲೆತ್ತರವೇ…..

ಈಗಂತೂ ಬ್ರಾಡ್ ಬ್ಯಾಂಡ್ ಗಳಲ್ಲಿ ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಅದೂ ಹೊಚ್ಚಹೊಸ ರಿಲೀಸ್ ಆಗುವ ಸಿನಿಮಾಗಳನ್ನೇ ನೋಡುವ ಅವಕಾಶ. ದೊಡ್ಡ ಮನೆಗಳಲ್ಲಿ ಮನೆಯಲ್ಲಿಯೇ ಮಿನಿ ಥಿಯೇಟರ್ ಮಾಡಿ ಬಿಟ್ಟಿರುತ್ತಾರೆ . ಆದರೆ ಎಲ್ಲರ ಜೊತೆಗೂಡಿ ಸುತ್ತಲವರ ಕಾಮೆಂಟ್ ಗಳನ್ನು ಗಮನಿಸಿ ನೋಡುವ ಅನುಭವವೇ ಚೆನ್ನಾಗಿತ್ತೇನೋ ಎನಿಸುತ್ತದೆ. ಬರು ಬರುತ್ತಾ ನಾವು ದ್ವೀಪಗಳಾಗುತ್ತಿರುವ ಸಂಕೇತ ಇದು ಎಂದೆನಿಸುತ್ತದೆ. ಮುಂಚಿನ ಹಾಗೆಯೇ ಮ್ಯಾಟ್ ನಿಗೆ ಹೋಗಿ ಇಡೀ ದಿನ ತಲೆಗೆ ಬಟ್ಟೆ ಕಟ್ಟಿಕೊಳ್ಳುವಷ್ಟು ತಲೆನೋವು ಬರುತ್ತಿದ್ದರೂ ಅದೇ ಚಂದ ಎನ್ನಿಸುತ್ತಿರುತ್ತದೆ ಈಗಲೂ. ಈಗಂತೂ ಸಿನಿಮಾ ನೋಡುವ ಪರಿಪಾಠವೇ ಬಿಟ್ಟು ಹೋಗಿದೆ . ಮನೆಯಲ್ಲೇ ಆಗಲಿ ಹೊರಗೆ ಆಗಲಿ ಒಂದೇ ಸಮ ಮೂರು ಗಂಟೆ ಅದಕ್ಕೆ ಮೀಸಲಿಡದಷ್ಟು ಸಮಯ ದಾರಿದ್ರ್ಯ.

ಆದರೆ ಎಷ್ಟೇ ಸ್ವರೂಪ ಬದಲಾಗಲಿ ಥಿಯೇಟರ್ ಗಳ ಜನಪ್ರಿಯತೆ ಕಡಿಮೆಯಾಗುವುದಿಲ್ಲ. ಏಕೆಂದರೆ ಮನೆ ಮನೆಯಲ್ಲೂ ದೇವರ ಮನೆ ಇದ್ದರೂ ದೇವಸ್ಥಾನದ ಪ್ರಾಮುಖ್ಯತೆ ಕಡಿಮೆಯಾಗಿಲ್ಲ ಮನೆಮನೆಗಳಲ್ಲಿ ಅಡುಗೆ ಮನೆ ಇದ್ದರೂ ಹೋಟೆಲ್ಗಳಲ್ಲಿನ ಜನಸಂದಣಿ ಕಡಿಮೆಯಾಗಿಲ್ಲ. ಹಾಗೆಯೇ ಪ್ರತಿ ಮನೆಯಲ್ಲಿ ಹೋಂ ಥಿಯೇಟರ್ ಇದ್ದರು ಥಿಯೇಟರ್ ಗೆ ಧಾವಿಸುವ ಜನ ಇದ್ದೆ ಇರುತ್ತಾರೆ ಎನಿಸುತ್ತದೆ . ನೀವೇನಂತೀರಿ?


  • ಸುಜಾತಾ ರವೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW