ಮುಂಬೈ ಲೋಕಲ್ ಟ್ರೈನ್- ಸವಿತಾ ಅರುಣ್ ಶೆಟ್ಟಿ



ಮುಂಬೈ ಲೋಕಲ್ ಟ್ರೈನ್ ನ ಸುತ್ತಮುತ್ತ ಒಂದು ಸುತ್ತು ಹಾಕಿ ಒಂದು ಒಳ್ಳೆಯ ಲೇಖನವನ್ನು ಲೇಖಕಿ ಸವಿತಾ ಅರುಣ್ ಶೆಟ್ಟಿ ಅವರು ಕಟ್ಟಿಕೊಟ್ಟಿದ್ದಾರೆ. ಸಾಧ್ಯವಾದರೆ ನೀವುಗಳು ಕೂಡಾ ಮುಂಬೈ ಲೋಕಲ್ ಟ್ರೈನ್ ಹತ್ತಿ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ…

” ಓ ….೭:೩೮ ರ ಟ್ರೈನ್ ಹೊರಟುಹೋಯ್ತು….ಇನ್ನು ೭:೪೨ ರ ಟ್ರೈನ್ ಹಿಡೀಬೇಕು ….” ಅಂತ ೨ , ೪ ನುಮಿಷದ ವ್ಯತ್ಯಾಸವಾದರೂ ಪೇಚಾಡುವ ಅದೆಷ್ಟೋ ಮಂದಿ ಪ್ಲಾಟ್ಫಾರ್ಮ್ ಗಳಲ್ಲಿ ಕಾಣಸಿಗುತ್ತಾರೆ . ಹೌದು , ಕೆಲಸಕ್ಕೆ ಹೋಗುವವರಿಗೆ , ಕಾಲೇಜಿಗೆ ಹೋಗುವವರಿಗೆ ಒಂದೊಂದು ನಿಮಿಷವೂ ಅತ್ಯಮೂಲ್ಯವಾಗಿರುತ್ತದೆ .ಕೆಲವರಿಗೆ ಇನ್ನೊಂದು ಜಂಕ್ಷನ್ ನಲ್ಲೋ ಇಳಿದು ಮತ್ತೊಂದು ಟ್ರೈನ್ ಹತ್ತಬೇಕಿರುತ್ತದೆ. ಈ ವಿಷಯ ನಾನು ಹೇಳುತ್ತಿರುವುದು ಲೋಕಲ್ ರೈಲುಗಳೇ ಜೀವನಾಡಿಯಾಗಿರುವ ಮುಂಬೈಯ ನಿತ್ಯ ರೈಲುಪ್ರಯಾಣಿಕರಿಗೆ .(ಈಗ ಎಲ್ಲಾ ನಗರಗಳಲ್ಲಿ ಬಸ್ಸುಗಳಲ್ಲಿ ಪ್ರಯಾಣಿಸುವವರ ಅವಸ್ಥೆಯೂ ಇದೇ ಎನ್ನಿ!) ಕೆಲಸಕ್ಕೆ , ಶಾಲೆ ಕಾಲೇಜುಗಳಿಗೆ ಹೋಗಿಬರುವ ಹೊತ್ತು ಪೀಕ್ ಅವರ್ಸ್ , ದಿನಾ ಪ್ರಯಾಣಿಸುವ ರೈಲಿನಲ್ಲಿ ತುಂಬಿತುಳುಕುತಿದ್ದರೂ ಅದೆಷ್ಟೋ ಪ್ರಯಾಸದಿಂದಿಂದ ಹೇಗೋ ಹತ್ತಲೇಬೇಕು .

ಫೋಟೋ ಕೃಪೆ : nytimes

ಮುಂಬೈಯನ್ನು ಪ್ರೀತಿಸುವವರು, ಕರ್ಮಭೂಮಿಯೆಂದು ಗೌರವಿಸುವವರು ಒಂದು ಕಡೆಗಾದರೆ, ಇಷ್ಟಪಡದವರೂ ತುಂಬಾ ಜನ ಇದ್ದಾರೆ , ಇಲ್ಲಿಗೆ ವಲಸೆ ಬಂದವರು . ಇಲ್ಲಿನ ಮಾಲಿನ್ಯ, ಜನಸಂದಣಿ, ಕೊಳಗೇರಿಗಳು, ಮಳೆಗಾಲದಲ್ಲಿ ತುಂಬಿ ಹರಿಯುವ ರಸ್ತೆಗಳು, ವಾಹನ ಸ್ಥಗಿತದ ಸಮಸ್ಯೆಗಳು, ನಿತ್ಯಪ್ರಯಾಣಿಕರು ರೈಲು ಪ್ರಯಾಣದಲ್ಲಿ ಅನುಭವಿಸುವ ಪಡಿಪಾಟಲು ಹಲಕೆಲವರಿಗೆ ಉಸಿರುಗಟ್ಟಿಸುತ್ತವೆ. ಮುಂಬೈ ಬದುಕು ಬೇಡವೆಂದು ಬೆನ್ನು ಹಾಕುವವರು ಅದೆಷ್ಟೋ ಮಂದಿ.

ಇಲ್ಲಿನ ಲೋಕಲ್ ರೈಲುಗಳು ಮುಂಬೈ ಜನಜೀವನದ ಜೀವನಾಡಿಯಷ್ಟೇ !? ಆದರೆ ದಿನನಿತ್ಯ ಪ್ರಯಾಣಿಸುವವರ ಪಾಡು ಶತ್ರುವಿಗೂ ಬೇಡ! ಕೆಲವು ಕಡೆ ಎರಡು ನಿಮಿಷಕ್ಕೊಂದು ರೈಲು ಇದ್ದರೂ, ರಶ್ ಕಮ್ಮಿಯಾಗುವುದೇ ಇಲ್ಲ! ಅದು ಫರ್ಸ್ಟ್ ಕ್ಲಾಸ್ ಬೋಗಿಯಿರಲಿ, ಸೆಕೆಂಡ್ ಕ್ಲಾಸ್ ಇರಲಿ ಅಥವಾ ಅಂಗವಿಕಲರಿಗಾಗಿಯೇ ಇರುವ ಬೋಗಿಯಿರಲಿ , ಆ ಸಮಯದಲ್ಲಿ ಸಿಕ್ಕ ಬೋಗಿಯೊಳಗೆ ಹತ್ತುವುದೇ!

ಫೋಟೋ ಕೃಪೆ : The indian express

ನಾನು ನಿತ್ಯ ಪ್ರಯಾಣಿಕಳಲ್ಲದಿದ್ದರೂ ಕೆಲವೊಮ್ಮೆ ಅನಿವಾರ್ಯವಾಗಿ ಪೀಕ್ ಅವರ್ಸ್ ನಲ್ಲಿಯೇ ರೈಲು ಪ್ರಯಾಣದ ಸೌಭಾಗ್ಯ (!) ಬರುವುದುಂಟು .ಕೆಲವು ಹೊಟ್ಟೆ ಭರ್ತಿ ಮಾಡಿಕೊಂಡು ಬರುವ ರೈಲುಗಳನ್ನು ನೋಡಿಯೇ ಹೆದರಿ, ಕೆಲವೊಮ್ಮೆ ಹತ್ತಲು ಹೋಗಿ, ಹಿಂದೆ ಇದ್ದವರಿಂದ ದೂಡಿಸಿಕೊಂಡು ಹತ್ತಿ , ಇಳಿಯುವಾಗಲೂ, ಶ್ರಮ ಇಲ್ಲದೇ ಇತರರಿಂದಲೇ ದೂಡಲ್ಪಟ್ಟು ಇಳಿಯುವುದಿದೆ. ಕೆಲವೊಮ್ಮೆ ನಾವು ಇಳಿಯಬೇಕಿರದ ಇನ್ಯಾವುದೋ ಸ್ಟೇಷನ್ ನಲ್ಲಿ ! ರಸ್ತೆಯಲ್ಲಿ ಸುತ್ತಿ ಬಳಸಿ ಹೋಗುವ, ಟ್ರಾಫಿಕ್ ತಪ್ಪಿಸುವ ಸಲುವಾಗಿ, ಕಷ್ಟದಲ್ಲಿ, ಇಷ್ಟವಿರದೇ ಹೋಗುವ ಪ್ರಯತ್ನ ನಮ್ಮದು. ಲೇಡೀಸ್ ಡಬ್ಬ (ಕೋಚ್)ಗಳ ಒಳಗೆ ಹೇಗೋ ನೂರಿದರೆ, ಅಲ್ಲಿ ಇರುವ ನಿತ್ಯ ಪ್ರಯಾಣಿಕರು ಕೆಂಗಣ್ಣು ಬೀರುವಾಗ, ‘ ಯಾಕಾದರೋ ಬರುತ್ತೇವೆಯೋ ‘ ಅಂತ ಎಣಿಸುತ್ತದೆ. ನಿತ್ಯ ಬರುವವರೇ ಲೇಡೀಸ್ ಡಬ್ಬಗಳ ರಾಣಿಯರು. ನಮ್ಮನ್ನು ನೋಡಿದಾಗಲೇ ಅವರಿಗೆ ತಿಳಿಯುತ್ತದೆ..ಇದು ನಿತ್ಯದ ಪ್ರಾಣಿಯಲ್ಲ ಅಂತ. ಕೆಲವರು ಕನಿಕರದಿಂದ ಒಂದು ಕಾಲಲ್ಲಿ ನಿಲ್ಲಲು ಜಾಗ ಬಿಟ್ಟರೆ, ಮತ್ತೆ ಕೆಲವರು, ‘ ನೀ ಯಾಕೆ ಬಂದಿ?’ ಅಂತ ಕಣ್ಣಲ್ಲೇ ಇರಿಯುತ್ತಾರೆ . ಅಬ್ಬಾ! ನಿಲ್ಲುವುದರಲ್ಲೂ ಅವರ ಶಿಸ್ತೇನು!!? ಎದುರಲ್ಲಿ ತಮ್ಮ ಬ್ಯಾಗ್ ಹಾಕಿಕೊಂಡು ಶಾಲಾಮಕ್ಕಳಂತೆ ಒಂದೇ ಸಾಲಲ್ಲಿ ನಿಲ್ಲುವ ಪರಿ.ನಾವೇನಾದರೂ ಸೈಡ್ ಬ್ಯಾಗ್ ಹಾಕಿಕೊಂಡಿದ್ದರೆ ಕಣ್ಣಲ್ಲೇ ಇಶಾರ. ಹತ್ತುವವರಿಗೆ ಓಣಿಯಷ್ಟು ಜಾಗ, ನಾವೂ ಓರೆಯಾಗಿ ನಿಲ್ಲವಂತಿಲ್ಲ. ಶಿಸ್ತಿನ ಸಿಪಾಯಿಯಂತೆ ನಿಲ್ಲಬೇಕು. ಪ್ರತೀ ಒಬ್ಬರು, ಎದುರು ನಿಂತವರಿಗೆ “ಕುಠೇ ಉತಾರ್ನಾರ್..’ಅಂತ ಕೇಳಿ ಅಡ್ಜಸ್ಟ್ ಮಾಡಿಕೊಂಡು ನಿಲ್ಲಬೇಕು.

ಫೋಟೋ ಕೃಪೆ : The truben

ಇನ್ನು ಸೀಟುಗಳಲ್ಲಿ ಕುಳಿತುಕೊಂಡಿದ್ದರೆ, ‘ ಕುಠೆ ಉತರ್ಣಾರ್ ‘ಅಂತ ಕೇಳಿ , ಮುಂದಕ್ಕೆ ಹೋಗುವವರಾದರೆ , ಅವರ ಸೀಟ್ ರಿಸರ್ವ್ ಆಗಿಬಿಡುತ್ತದೆ..ಪ್ರೀತಿಯಿಂದ ಹೇಳ್ತಾರೆ.. ‘ನಿನ್ನ ನಂತರ ನನ್ನ ಜಾಗ ಆಯ್ತಾ…’ ಅಂತ. ಕೆಲವರು ನಿಂತವರಿಗೆ ತಮ್ಮ ಅರ್ಧ ಭಾಗ ಊರಲು ಜಾಗ ಕೊಡುವುದುಂಟು..ಹಾಗಾಗಿ ಒಂದು ಸೀಟ್ ನಲ್ಲಿ ಮೂರೂವರೆ ಜನ. ಎಷ್ಟೋ ಸಲ ಅನಿಸುತ್ತದೆ, ಲೇಡೀಸ್ ಡಬ್ಬಗಳಲ್ಲಿ ಬರುವದಕ್ಕಿಂತ ಜನರಲ್ ಡಬ್ಬಗಳಲ್ಲಿ ಬಂದರೆ ನಿರಾಳ . ಉಸಿರಾಡ್ತಾ ನಿಲ್ಲಲಿಕ್ಕದಾದರೂ ಜಾಗ ಕೊಡ್ತಾರೆ…ಲೇಡೀಸ್ ಎಂಬ ಸ್ಪೆಷಲ್ ಕಾಳಜಿ. ಎಷ್ಟೆಂದರೂ ಪುರುಷರೇ ಪಾಪ ಅಲ್ವಾ…

ಇದರ ಒಳಗೆ ನಡೆಯುವ ಜಗಳಗಳು…ಅವು ಜಗಳಗಳಲ್ಲ! ಕದನ!! ಪುಟ್ಟ ವಿಷಯಕ್ಕೆ ಶುರುವಾಗುವ ಮಾತಿನ ಚಕಮಕಿ, ಜುಟ್ಟು ಹಿಡಿದು ಎಳೆದಾಡುವವರೆಗೂ….! ಕೈ ಕೈ ಮಿಲಾಯಿಸಿ ಹೊಡೆದಾಡುವುದಕ್ಕೂ ಹಿಂಜರಿಯುವುದಿಲ್ಲ ಕೆಲವರು. ಪುಟ್ಟ ಮಕ್ಕಳಿದ್ದರಂತೂ ಹೆದರಿ ಅಳುವುದು ಗ್ಯಾರಂಟಿ.

ಲೇಡೀಸ್ ಡಬ್ಬಗಳ ಒಳಗೆ ಗಂಡಸರಿಗೆ ಪ್ರವೇಶವಿಲ್ಲದಿದ್ದರೂ ಫೇರಿವಾಲ ಪುರುಷರು ಬರಬಹುದು . ಪಿನ್, ಸೂಜಿ , ವಿವಿಧ ತಿಂಡಿ ತಿನಿಸುಗಳು , ಹಣ್ಣು ತರಕಾರಿಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳ ತನಕ ಮಾರುತ್ತಾ ಬರುತ್ತಾರೆ. ಪುಟ್ಟ ಪುಟ್ಟ ಮಕ್ಕಳು, ಯುವಕ ಯುವತಿಯರು ಪ್ರಾಯ ಸಂದವರೂ ಎಲ್ಲೋ ಹತ್ತಿ, ಚಾಕಚಕ್ಯತೆಯಿಂದ ಡಬ್ಬಿಯ ಆ ಕಡೆಯಿಂದ ಈ ಕಡೆಯವರೆಗೂ ತಿರುಗಿ ತಮ್ಮ ಸಾಮಾನು ವಿಕ್ರಯಿಸಿ, ಮತ್ತೆಲ್ಲಿಯೋ ಇಳಿದು ಹೋಗಿಬಿಡುತ್ತಾರೆ.

ಕೆಲಪ್ರಯಾಣಿಕರು ತಮ್ಮತಮ್ಮಲ್ಲೇ ಗುಂಪು ಮಾಡಿಕೊಂಡು ಭಜನೆ, ಕೀರ್ತನೆಗಳನ್ನು ಹಾಡುತ್ತಾ , ದಿನದ ಆಯಾಸ ಮರೆಯುತ್ತಾ , ಪ್ರಯಾಣ ಮಾಡುವುದುಂಟು. ಹೆಂಗಳೆಯರು ತರಕಾರಿ ಬಿಡಿಸುತ್ತಾ, ತಮ್ಮ ತಿಂಡಿ ತಿನಿಸುಗಳನ್ನು ಹಂಚಿಕೊಳ್ಳುತ್ತಾ, ಕಷ್ಟ ಸುಖ ಹೇಳಿಕೊಂಡು ದಾರಿ ಸವೆಸುವುದುಂಟು.

ಫೋಟೋ ಕೃಪೆ :  satyameva jayate

ಮುಂಬೈ ರೈಲು ಪ್ರಯಾಣ ಎಂದಾಗ ಇಲ್ಲಿ ತಾಲಿ ( ಚಪ್ಪಾಳೆ) ಹೊಡೆಯುತ್ತಾ ಬರುವ ಮಂಗಳಮುಖಿಯರನ್ನು ಮರೆಯಲುಂಟೇ !? ಮೈ ಕೈ ಕುಲುಕಿಸುತ್ತಾ, ವಿಭಿನ್ನ ಹಾವಭಾವದಿಂದ ಜನರನ್ನು ಸೆಳೆವ ಅವರ ಪರಿ, ಅವರ ಮೇಕಪ್ ನೋಡಿ, ಹಿಂದೆಲ್ಲಾ ನನಗೆ ಅವರನ್ನು ನೇರವಾಗಿ ದಿಟ್ಟಿಸಲೂ ಭಯವಾಗುತಿತ್ತು. ಅವರು ಕೇಳಿದಷ್ಟು ದುಡ್ಡು ಕೊಡದಿದ್ದರೆ ಶಾಪ ಕೊಡುತ್ತಾರೆ ಎಂಬ ಮಾತು ಯಾರೋ ನನ್ನ ತಲೆಯಲ್ಲಿ ತುಂಬಿಸಿಟ್ಟಿದ್ದರು. ಆದರೆ ಮಂಗಳಮುಖಿಯೊಬ್ಬರ ಆತ್ಮಚರಿತ್ರೆ, “ನಾನು ಅವನಲ್ಲ, ಅವಳು ” ಎಂಬ ಪುಸ್ತಕ ಓದಿದ ಮೇಲೆ, ಅವರ ಬವಣೆಯ ಬದುಕು ಸ್ವಲ್ಪ ಮಟ್ಟಿಗೆ ಅರ್ಥವಾಗಿ ಅವರ ಬಗೆಗಿನ ಭಯ ತಗ್ಗಿದೆ.



ಇನ್ನು ರೈಲು ಅಪಘಾತದಿಂದಲೇ ಅದೆಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸುದ್ದಿ ನಿತ್ಯ ವರದಿಯಾಗುತ್ತದೆ. ಕೆಲ ಯುವಕರು ಚಿತ್ರ ವಿಚಿತ್ರ ಸ್ಟಂಟ್ ಮಾಡಲು ಹೋಗಿ ಜೀವ ಪಣಕ್ಕಿಡುತ್ತಾರೆ. ಅಜಾಗರೂಕತೆಯೂ ಕೆಲವು ಸಾವಿಗೆ ಕಾರಣವಾಗುತ್ತದೆ .

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ CST ಯಿಂದ ಮಧ್ಯ ರೈಲ್ವೆ, ಪಶ್ಚಿಮ ರೈಲು, ಹಾರ್ಬರ್ ಅಂತ ಮೂರು ವಿಭಾಗದಲ್ಲಿ ರೈಲು ಸೇವೆ ಲಭ್ಯ. ನವಿಮುಂಬಯಿಯಿಂದ ಟ್ರಾನ್ಸ್ ಹಾರ್ಬರ್ ರೈಲು ಸೇವೆಯೂ ಲಭ್ಯ. ಮೆಟ್ರೋ ರೈಲುಗಳು ಮುಂಬೈ ಜನರ ಪ್ರಯಾಣದ ಪ್ರಯಾಸ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ ಎಂದೆನಿಸುತ್ತದೆ .

ಕೊರೋನ ಭೀತಿಯ ಕಾರಣ ಲಾಕ್ಡೌನ್ ನಿಂದಾಗಿ ಕೆಲವು ತಿಂಗಳುಗಳ ಕಾಲ ರೈಲು ಸೇವೆ ಸ್ಥಗಿತಗೊಂಡಿತ್ತು. ತದನಂತರ ಸರ್ಕಾರಿ ನೌಕರರಿಗೆ ಹಾಗೂ ಮಹಿಳೆಯರಿಗಾಗಿಯೇ ಇರುವ ಲೇಡೀಸ್ ಸ್ಪೆಷಲ್ ಟ್ರೈನ್ ಗಳು ಕೆಲವು ತಿಂಗಳುಗಳಿಂದ ಓಡಾಡುತ್ತಿತ್ತು. ಇದೀಗ ಸಮಯಮಿತಿಯಲ್ಲಿ ಲೋಕಲ್ ಟ್ರೇನುಗಳು ಫೆಬ್ರವರಿ ಒಂದರಿಂದ ಓಡುತ್ತಿವೆ. ದೂರದೂರ ಪ್ರಯಾಣಿಸುವ ಜನರಿಗೆ ಈಗ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ, ರೈಲು ಸೇವೆ ಮುಂಬೈಯ ಅದೆಷ್ಟೋ ಜನರ ಪ್ರಯಾಣ ಸುಗಮವಾಗಿಸಿದೆ.


  • ಸವಿತಾ ಅರುಣ್ ಶೆಟ್ಟಿ
5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW