ಛಾ ಪುರಾಣ – ಪ್ರಿಯಾ ದೀಕ್ಷಿತ್



ಉತ್ತರ ಕರ್ನಾಟಕದ ಮಂದಿಗೆ ಛಾ, ಕೇಟಿ… ಎಂದರೆ ಬಾಳ ಹುಚ್ಚ ರೀ. ಅದರಾಗೂ ಛಾ… ಮಾಡೋದ್ರಾಗ ಕೆಟ್ಟತಂದ್ರ ಮುಗಿತು, ನಾನಾ ನಮನಿ ಡೈಲಾಗ್ ಗಳು ಕುಡದವರ ಬಾಯಾಗ ಕೇಳಬೇಕು. ಛಾ ಮಹಿಮೆಯ ಬಗ್ಗೆ ಪ್ರಿಯಾ ಮೇಡಂ ಬಾಳ ಚಂದ ವಿವರಸ್ಯಾರ್…ಬಿಡುವು ಮಾಡಕೊಂಡು, ಛಾ ಕುಡಿತ ಈ ಲೇಖನ್ ಓದ್ರಿ ಮತ್ತ…

ಚಹಾ…ಈ ಶಬ್ದ ನಮ್ಮ ಉತ್ತರ ಕರ್ನಾಟಕ ಮಂದಿಗೆ ಒಂಥರಾ ಆಮ್ಲಜನಕ ಇದ್ದಂಗ .
ಊಟ ಒಂದ ವ್ಯಾಳ್ಯಾ ತಪ್ಪಿದರ ನಡೀತದ,ಆದ್ರ ಛಾಕ್ಕ ನಡಿಯಂಗಿಲ್ಲ.

ಮುಂಜಾನೆದ್ದ ಕೂಡ್ಲೇ ದಿನಾ ಇದರಿಂದನ ಶುರು.ಗಂಡಸರು “ಏನsss….!!”ಅಂತ ಅಂದ್ರ ಸಾಕು,ಹೆಂಡ್ತೀ “ಬಡಕೋಬ್ಯಾಡ ತಡ್ರೀ,ಸೋಸಲಿಕ್ಕತ್ತೇನಿ..ಹಾಲ್ನ್ಯವ ತಡಾ ಬಂದಾ,ನಿನ್ನೆ ರಾತ್ರೀ ಹೆಪ್ಪ ಹಾಕಿ ಉಳದದ್ದ ಹಾಲು ವಲೀಮ್ಯಾಲೆ ಮುಚ್ಚಿಟ್ಟಿದ್ದೆ ಬಾಜುಮನಿ ತುಡಗ ಬೆಕ್ಕು ಯಾವದೋ ಮಾಯದ್ಲೇ ಬಂದ ಕುಡದ ಹೋಗೇದ ಸುಡ್ಲಿ ” ಅಂತ ಉತ್ತರ ಬರತದ.

ಭಾಳಮಂದಿಗೆ ಛಾ ಕುಡಿಲಾರ್ದ ಕೈಕಾಲಿಗೆ ಬರಂಗೇಲ್ಲ.ಎದ್ದಕೂಡ್ಲೇ ,ತಿನಸಾದ ಕೂಡ್ಲೇ,ಸಂಜೀಮುಂದ ಇಷ್ಟಸಲಾ ಅಂತೂ ಬೇಕ ಬೇಕ ಛಾ.ಅದರ ಮುಂದ…

ಖುಷಿ ಆದರ ಛಾ,ತ್ರಾಸ್ ಆದರ ಛಾ,ತಲೀ ನೊಯ್ಸಿದ್ರ ಛಾ,ಹಸಿವ್ಯಾದ್ರ ಛಾ,ಮಂದಿ ಬಂದರ ಛಾ,ಅರಾಮಿಲ್ಲಂದ್ರ ಛಾ,ಊಟ ತಡಾ ಆದ್ರ ಛಾ,
ಹಿಂಗ ಇನ್ನೂ ಭಾಳ ನೆವಾ ಅವ ಛಾಕ್ಕ.ವಟ್ಟ ಎಲ್ಲಾದಕ್ಕೂ ಛಾ ನ ಒಂಥರಾ first aid ಇದ್ದಂಗ.

ಇನ್ನ ಛಾ… ದಾಗ ಭಾಳ ಥರಾ ಅವ. ಹೆಂಗರ ಇರ್ಲಿ ವಟ್ಟ ಛಾ… ಆದ್ರ ಆತು ಅನ್ನೋರು ಒಂದ ಗುಂಪು.
ಅವ್ರಿಗೆ ವಟ್ಟ ಮೂಗಿಗೆ ಛಾದ ವಾಸನೀ ಜೋಡಿ ಗಂಟಲಿಗೆ ಬಿಸಿ ಆದ್ರ ಆತು….

ಹಿಂಗ ಆಗಬೇಕು ಛಾ ಅನ್ನೋರು ಇನ್ನೊಂದ ಗುಂಪು.ಈ ಎರಡನೇ ಗುಂಪಿನ ಮಂದಿಯೊಳಗ “ಸ್ಟ್ರಾಂಗ ಛಾ”‘ “ಲೈಟ್ ಛಾ”‘, “ಹಾಲಾಗಿನ ಛಾ”, “K T,ಶೀಮುಂದ ಛಾ”, “ಮಿಡಿಯಮ್ ಛಾ”, “ಸಪ್ಪನ ಛಾ”, “ನೀರಾಗಿನ ಛಾ”.
ಮುಂಜಾನೆ ಸ್ಟ್ರಾಂಗ ಒಂದ ತಾಸ ಬಿಟ್ಟ ಲೈಟ್ ಛಾ (ಮುಂಜಾನೆ ಉಳದದ್ದ ಪುಡ್ಯಾಗ ಮತ್ತ ಕುದಿಸಿ ಕುಡಿಯೋದು)

ಫೋಟೋ ಕೃಪೆ : culturallyours

ಥಂಡ್ಯಾದ್ರ ಅಲ್ಲದ ಛಾ, ಕಾವ ಆದ್ರ ಯಾಲಕ್ಕಿ ಛಾ, ಶ್ರೀಮಂತರ ಬಂದ್ರ ಮಸಾಲಿ ಛಾ…ಹಂಗ ವಟ್ಟ ತಮಗ ಹೆಂಗ ಬೇಕೊ ಹಂಗ.
ಭಾಳ ಹಾಲ್ನ್ಯಾಗಿನ ಶೀ ಛಾ ಬೇಕಾಗವ್ರಿಗೆ ನೀರಾಗ ಮಾಡಿದ್ದ ಕರೇ ಛಾ ಕೊಟ್ರ ,ಬರೋ instant feedback ಅಂದ್ರ “ಕತ್ತೀ ಉಚ್ಚಿ ಆಗೇದ ಛಾ” ,ಅಲ್ಲಾ ಇವ್ರ್ಯಾವಾಗ ಕುಡದ ನೋಡ್ಯಾರಂತ ನಾ ಅಂತೇನಿ
ಸ್ವಲ್ಪ ಅದರಾಗ ಸುದಾರಿಸಿದ feedback ಅಂದ್ರ,”ನನ್ನ ಮನ್ಯಾಗಿನ ಛಾ ಪಾತೇಲಿ ತೊಳದದ್ದ ನೀರು,ಅವ್ರ ಮನೀ ಛಾ ” ಅಂತ.

ಇನ್ನ ನೀರಾಗಿನ ತಿಳಿ ಛಾ ಸೇರವ್ರಿಗೆ ಚೂರ ಸಕ್ರಿ ಹಾಲು ಹೆಚ್ಚಗೀ ಆದ್ರ ಅವರ feedback ಕೇಳ್ರಿ,
ಸ್ವಲ್ಪ ಮಹಾರಾಷ್ಟ್ರ ಗಡೀಯವರ ಆದ್ರ “ಚಹಾ ಮಸ್ತ ಬಾಸುಂದಿ ಆಗೇದಲಾ” ಅಂತಾರ.
ನಮ್ಮ ಜವಾರಿ ಮಂದಿಯಂತೂ “ಒಂದೆರಡು ಶ್ಯಾವಿಗಿ ಕರದ ಹಾಕ್ಬೇಕಿಲ್ಲ, ಪಾಯಸ ಛೊಲೊ ಆಗತಿತ್ತು” ಅಂತಾರ.
ಯಾರಿಗರ ವಟ್ಟ ಬೈಯೋದಿದ್ರೂ ,”ಇನ್ನೂ ತನಕಾ ನಾ ಅಕಿ ಕೈಯಾಗಿಂದ ಒಂದ ಕಪ್ ಛಾ ಕುಡದಿಲ್ಲಾ” ಅಲ್ಲಿಂದನ ಶುರು.



ಆಸಿಡಿಟಿ ಒಂದ ಕಾಮನ್ ಎಲ್ಲಾರಿಗೂ ಈಗ.ಭಾಳ ತ್ರಾಸಾದಾಗ ಒಂದೆರಡ ದಿನಾ ಜುಲಮೀಲೆ ಬಿಟ್ಟು, alternate ಹುಡಕೀರ್ತಾರ,
ಮತ್ತ ಸ್ವಲ್ಪ ಅರಾಮ್ ಆದ ಕೂಡ್ಲೇ “ಏ ಛಾದಂಗ ಯಾವದು ಆಗಂಗಿಲ್ಲ” ಅಂತ ಮತ್ತ ಶುರು ಛಾ.

ಏನ ಛಾ ಛಾ ಅಂತೀರಲೇ ಅನ್ನೋ ಛಾ ಕುಡಿಲಾರದ ಗುಂಪು ಒಂದು.ಉದಾಹರಣೆ ನಮ್ಮ ಮನೀಯವರು.ಮತ್ತ ನನ್ನ ಮಕ್ಕಳು.ಬಹುಶಃ ಕುಚಿತ ಈ ಥರದ್ದ ಮಂದಿ ಅನ್ಕೋತೇನಿ.
“ಚಹಾ ಪಾನ ಮಾಡದವರ ಜನ್ಮ ವ್ಯರ್ಥ” ಅಂತಿರ್ತೇನಿ ನಾನು.
ನಿಮ್ಮಂಥಾ ಛಾ ಚಟಾ ಮಂದಿನ ಸಮರ್ಥನಕ್ಕ ಮಾಡಿದ್ದಿದು ಅಂತ ನಮ್ಮನಿಯವ್ರು ಅಂತಾರ.
ವಟ್ಟ ಮಕ್ಕಳಿಂದ ಮುದಕರತನಾ ಎಲ್ಲಾರಿಗೂ ಛಾ ಅನ್ನೋದು ಒಂದ universal family drink ಅನ್ನೋದಂತೂ ತಗದ ಹಾಕೋಹಂಗಿಲ್ಲ.

ಹಾಗೆ ಸುಮ್ಮನೆ…


  • ಪ್ರಿಯಾ ದೀಕ್ಷಿತ್ (ಹವ್ಯಾಸಿ ಹಾಸ್ಯ ಬರಹಗಾರರು-ಕವಯತ್ರಿ- ಸಾಹಿತಿ, ಹುಬ್ಬಳ್ಳಿ)

2 thoughts on “ಛಾ ಪುರಾಣ – ಪ್ರಿಯಾ ದೀಕ್ಷಿತ್

  1. ಭಾಳ ಚಂದ ಐತಿ ನಿಮ್ಮ ಲೇಖನ ಮೇಡಂ ಚಾ ಮಹಿಮೆ ಅಪಾರ

  2. ಮನವೆಲ್ಲ ಚಹಾ ಸುವಾಸನೆ ತುಂಬಿತು!

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading