‘ಮುತ್ತಿನಂತೆ ಮುತ್ತಿ ಇಬ್ಬನಿ…ಮತ್ತೆ ಮತ್ತೆ ಒತ್ತಿ ಹೇಳಿದೆ…ಮುಪ್ಪು ಜಗದ ಪ್ರಭೆಯೆಂದು’…ಕವಿಯತ್ರಿ ಆಶಾ.ಎನ್.ಎಂ ಅವರ ಕವನದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ತಂಬೆಲರ ತಳಿರು ತೂಗಿ
ಹಚ್ಚ ಹಸಿರ ಸಿರಿ ಸಾಗಿ
ಹಸಿರೆಲೆ ಹಳದಿಯಾಗಿ
ಹೊಂಬೆಳಕನು ಸೂಸಿದೆ
ಮುತ್ತಿನಂತೆ ಮುತ್ತಿ ಇಬ್ಬನಿ
ಮತ್ತೆ ಮತ್ತೆ ಒತ್ತಿ ಹೇಳಿದೆ
ಮುಪ್ಪು ಜಗದ ಪ್ರಭೆಯೆಂದು
ಜಗದಲದನು ಸಾರಿದೆ
ಮಾಗಿದಷ್ಟೂ ಮಧುರವಾಗುವ
ಮಾವಿನ ಸವಿ ಸ್ವಾದವಿದು
ಒಗರನು ಸಿಹಿಯಾಗಿಸೋ
ಅನುಭವದ ಹಿರಿಮೆಯಿದು
ಕಷ್ಟಕಾಗಿ ಮಿಡಿತವೆಷ್ಟೋ
ಕುಗ್ಗಿದ ಕ್ಷಣಗಳೆಷ್ಟೋ
ಮತ್ತೆ ಮತ್ತೆ ಎದ್ದು ನಿಂತು
ಕ್ರಮಿಸಿದ ಹಾದಿಯೆಷ್ಟೋ
ನೋವಲ್ಲೂ ನಗುವ ಮೊಗೆದ
ಸಂತೃಪ್ತಿಯ ಕಾವ್ಯ ಬರೆದ
ಇಳಿ ಸಂಜೆಯ ಬಾಳ ದಾರಿ
ಕಿರಿಯರ ಜೀವನ ಮಾದರಿ
ವೃದ್ಧಾಪ್ಯವೆಂದೂ ವಂದ್ಯವೇ
ಭವ ಸಂಸಾರದ ಸಾರವೇ
ಅನುಭವಾಮೃತದಾಗರವೇ
ನೀ ಪೀಳಿಗೆಗೂ ಮಾನ್ಯವೇ
- ಆಶಾ.ಎನ್.ಎಂ
