ಜನ ನಾಟಿ ವೈದ್ಯರನ್ನು ಏಕೆ ಇಷ್ಟ ಪಡುತ್ತಾರೆ? – ಡಾ.ಎನ್.ಬಿ.ಶ್ರೀಧರ




ನಾಟಿ ವೈದ್ಯ.. ಇದು ಪಾರಂಪರಿಕ ಪಶು”ವೈದ್ಯ” ಪದ್ಧತಿ. ಅನೇಕ ಬಾರಿ ಈ ನಾಟಿ ವೈದ್ಯರಿಗೆ ಜಾನುವಾರುಗಳ ಅಂಗರಚನೆಯ ಬಗ್ಗೆ ಅಥವಾ ಅದರ ರೋಗಗಳ ಬಗ್ಗೆ ಒಂದಿನಿತೂ ಜ್ಞಾನವಿರುವುದಿಲ್ಲ. ನಾಟಿ ವೈದ್ಯದಲ್ಲಿ ಚೀಟಿ, ಮಂತ್ರ, ತುಂಡೆ, ಗಿಡ ಮೂಲಿಕೆ ಚಿಕಿತ್ಸೆಗಳೆಲ್ಲಾ ಒಕೆ. ಆದರೆ ಅವರೇ ವೈದ್ಯಕೀಯ ಚಿಕಿತ್ಸೆ ಮಾಡಿ ಅದು ರಣವೈದ್ಯವಾಗಿ ದನ ಸತ್ತ ಅನೇಕ ಘಟನೆಗಳಿವೆ. ಇದು ಸರಿಯೇ?. ಜನ ಈ ನಾಟಿ ವೈದ್ಯರನ್ನು ಏಕೆ ಇಷ್ಟ ಪಡುತ್ತಾರೆ ಎಂಬುದು ಗೊತ್ತಿದೆಯೇ? ಇಲ್ಲದಿದ್ದರೆ ಈ ಲೇಖನ ಓದಿ.

——-
ನನ್ನ ಅತ್ಯಂತ ಸನಿಹದ ಸಂಬಂಧಿಯೊಬ್ಬರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದರು. “ನಮ್ಮ ಮನೆಯ ದನ ನೆಲ ಹಿಡಿದಿದೆ. ಇಲ್ಲಿಯ ನಾಟಿವೈದ್ಯರು ಬಂದು ಪರೀಕ್ಷಿಸಿ “ಇದು ಕಾಗೆ ರೋಗ” ಇದಕ್ಕೆ #ಚಿಕಿತ್ಸೆ ಮಾಡಲು ಐದು ಸಾವಿರ ಖರ್ಚಾಗುತ್ತದೆ ಎಂದಿದ್ದಾರೆ. ಪಶುವೈದ್ಯರು ಬಂದು ಪರೀಕ್ಷಿಸಿ ಗಾಯ ಕೀವು ಆಗಿರುವುದರಿಂದ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಏನಿದು ಹೊಸರೋಗ?” ಎಂದರು. ನನಗೆ ಪರಮಾಶ್ಚರ್ಯ. ಕಳೆದ ೩೩ ವರ್ಷಗಳಿಂದಲೂ ಜಾನುವಾರುಗಳ ಚಿಕಿತ್ಸೆ, ಸಂಶೋಧನೆ, ಬೋಧನೆಗಳಲ್ಲಿ ತೊಡಗಿದ ನನಗೆ ಈ ರೋಗದ ಹೆಸರೇ ಗೊತ್ತಿರಲಿಲ್ಲ. ನಾನು “ ಸರಿ ಅವರ ದೂರವಾಣಿ ಸಂಖ್ಯೆ ನೀಡಿ.. ನಾನು ಮಾತಾನಾಡುತ್ತೇನೆ” ಎಂದೆ. ದೂರವಾಣಿ ಕರೆಮಾಡಿ ನನ್ನ ಪರಿಚಯ ಪ್ರವರ ತಿಳಿಸಿ “ ಏನಿದು ಕಾಗೆ ರೋಗ? ನನಗೆ ಹೊಸದು.

ಫೋಟೋ ಕೃಪೆ : Smart Inidan Culture

ಯಾವುದಾದರೂ ಆಯುರ್ವೇದದ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖವಿದೆಯೇ? ಆಧುನಿಕ ಅಲೋಪತಿ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖಗಳಿಲ್ಲ. ಚಿಕಿತ್ಸೆಯೇನು ತಿಳಿಯಬಹುದೇ? ಅದಕ್ಕೆ ತಗಲುವ ವೆಚ್ಚ ಎಷ್ಟು? ಗುಣವಾಗುವುದು ಖಚಿತವೇ? ಎಷ್ಟು ಈ ರೀತಿಯ ಜಾನುವಾರುಗಳ ಮೇಲೆ ಪ್ರಯೋಗಿಸಿದ್ದೀರಿ? ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಗೈದೆ. ಅವರು “ಹೆ… ಹೆ… ಹಾಗೆ ಹೊಸರೋಗವೇನಿಲ್ಲ. ಸುಮ್ಮನೆ ಅಂದೆ.. ಚಿಕಿತ್ಸೆ ನನ್ನ ಅನುಭವದಲ್ಲಿ ಕಂಡು ಹಿಡಿದದ್ದು. ಸುಮಾರಷ್ಟು ಗುಣವಾಗಿವೆ. ನಾನು ಔಷಧಿಗಷ್ಟೇ ದುಡ್ಡು ತೆಗೆದುಕೊಳ್ಳುವೆ. ಇದು ನನ್ನ ಜಾನುವಾರು ಸೇವೆ” ಎಂದರು. ನಾನು “ನೀವು ಜಾನುವಾರು ಸೇವೆ ಮಾಡಿ. ಆದರೆ ಜನರಿಗೆ ವೈಜ್ಞಾನಿಕ ಮಾಹಿತಿ ಹೋಗಬೇಕಲ್ಲವೇ? ನೂರಾರು ವರ್ಷಗಳ ಕಾಲ ಸಹಸ್ರಾರು ದನಗಳ ಮೇಲೆ ಮಾಡಿದ ಚಿಕಿತ್ಸೆ ಮಾಡಿದ ಅನುಭವಗಳ ಮೇಲೆ ವಿವಿಧ ವೈಜ್ಞಾನಿಕ ಮಾಸಿಕಗಳಲ್ಲಿ ಪ್ರಕಟವಾದ ಲೇಖನಗಳನ್ನು ಆಧರಿಸಿ ಬರೆದ ಪುಸ್ತಕಗಳನ್ನು ಓದಿ ನಾವೆಲ್ಲಾ ಚಿಕಿತ್ಸೆ ಮಾಡುವುದು ಮತ್ತು ವಿದ್ಯಾರ್ಥಿಗಳಿಗೂ ಪಾಠ ಹೇಳುವುದು. ಜನರಿಗೆ ಸತ್ಯವಾದ ಮಾಹಿತಿ ನೀಡೋಣ. ನೀವು ಹಳ್ಳಿಗಳಲ್ಲಿ ಪಶುವೈದ್ಯರು ಸಿಗದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಮಾಡಿ. ನಂತರ ಮಾಲಕರಿಗೆ ಪಶುವೈದ್ಯರನ್ನು ಸಂಪರ್ಕಿಸಲು ತಿಳಿಸಿ. ಅದು ಬಿಟ್ಟು ನೀವೇ ಸರ್ವಜ್ಞರೆಂದು ತಿಳಿದು ಈ ರೀತಿಯ ಸುಳ್ಳು ಮಾಹಿತಿ ನೀಡಿದರೆ ಭಾರತದ ಅಪರಾಧ ಸಂಹಿತೆಯ ನಿಯಮ ೪೨೦ ಪ್ರಕಾರ ವಂಚನೆಯ ಪ್ರಕರಣ ಮತ್ತು ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ನಿಯಮ ೧೯೮೪ ರ ಪ್ರಕಾರ ನಿಮಗೆ ಶಿಕ್ಷೆ ಕಾದಿದೆ” ಎಂದೆ. ಅವರು “ಸರಿ. ಇನ್ನು ಮುಂದೆ ಇದೇ ರೀತಿ ಮಾಡುವೆ” ಎಂದರು.



ಸ್ಥಳೀಯ ಪಶುವೈದ್ಯರನ್ನು ವಿಚಾರಿಸಿದಾಗ ಅವರು ಯಾವುದೇ ಕೇಸುಗಳನ್ನು ಈವರೆಗೂ ಪಶುವೈದ್ಯರ ಗಮನಕ್ಕೆ ತಂದಿಲ್ಲವೆಂದೂ, ಬದಲಾಗಿ ಪಶುವೈದ್ಯರ ಬಗ್ಗೆ ಅಪಪ್ರಚಾರ ಮಾಡುವವರೆಂದೂ, ಪಶುವೈದ್ಯರು ಯಾವಾಗಲೂ ಕಂಪ್ಯೂಟರಿನ ಮುಂದೆ ಕೂರುವುದರಿಂದ ಅವರಿಗೆ ಪುರಸೊತ್ತಿಲ್ಲವೆಂದು ಹೇಳುವರೆಂದೂ, ತಾನು ವಿವಿಧ ಹೊಸರೀತಿಯ ಪುಸ್ತಕಗಳನ್ನು ಓದಿ ಹೊಸ ಕಾಯಿಲೆಗಳಿವೆ ಎಂದು ಕಾಗೆ ಕಾಯಿಲೆ, ಗುಬ್ಬಿಕಾಯಿಲೆ ಎಂದು ಬಾಯಿಗೆ ಬಂದ ಹಾಗೆ ರೈತರಿಗೆ ಮೋಸ ಮಾಡುವನೆಂದೂ, ಕೆಲವೊಮ್ಮೆ “ಉಚಿತ” ಚಿಕಿತ್ಸೆ ಮಾಡಿ ಜನ ಮನ ಗೆಲ್ಲುವನೆಂದೂ” ತಿಳಿಸಿದರು.
ಇನ್ನೊಂದು ಪ್ರಕರಣ. ಒಬ್ಬರ ಮನೆಯಲ್ಲಿ ದನ ಕರು ಹಾಕಿ ೮ ದಿನ ಆಯಿತು . ಏನೂ ಹೊಟ್ಟೆಗೆ ತೆಗೆದುಕೊಳ್ಳಲ್ಲ ಎಂದು ಕರೆ ಮಾಡಿದರು. ಇವೆಲ್ಲ ಕಿಟೋಸಿಸ್ ಎಂಬ ಕಾಯಿಲೆಯ ಲಕ್ಷಣಗಳು. ಚಿಕಿತ್ಸೆ ಮಾಡಿದರಾಯಿತು ಎಂದುಕೊಂಡು ಹೋದೆ. ದನ ಮೂಳೆ ಚಕ್ಕಳವಾಗಿ ಹೋಗಿತ್ತು. ಅದಕ್ಕೆ ಹಸಿ ಹುಲ್ಲೇ ಹಾಕುತ್ತಿಲ್ಲವಂತೆ. ಅದರ ಹೊಟ್ಟೆ “ಹಸಿ” ಇರುವುದರಿಂದ ಹಸಿ ಹುಲ್ಲು ಹಾಕಿದರೆ ನಂಜು ಏರುತ್ತದೆ ಎಂದು ನಾಟಿ ವೈದ್ಯ ಸಲಹೆ ನೀಡಿ ಕಾಳುಮೆಣಸು, ಅತ್ಯಂತ ಖಾರವಿರುವ ಸೂಜಿಮೆಣಸು, ಹಸಿ ಮೆಣಸು, ಶುಂಟಿ, ಕಾಳು ಜೀರಿಗೆ ಎಲ್ಲಾ ಹಾಕಿ ಖಾರದ ಕಷಾಯ ನೀಡಿದ್ದಾನಂತೆ. ಪಾಪ ! ದನದ ಗತಿ ಏನಾಗಬೇಕು? ಹೊಟ್ಟೆಯೆಲ್ಲಾ “ಖಾರ” ಮಯವಾಗಿ ಸಹಜವಾಗಿಯೇ ಮೇವು ಬಿಟ್ಟಿದೆ. ಯಾವ ಕೀಟೋಸಿಸ್ಸೂ ಇಲ್ಲ. ಈ ನಾಟಿ ವೈದ್ಯರಿಗೆ ಹೊಟ್ಟೆ ಮತ್ತು ಗರ್ಭಕೋಶದ ನಡುವೆ ವ್ಯತ್ಯಾಸವೇ ಗೊತ್ತಿಲ್ಲ. ಕರು ಹಾಕಿದ ನಂತರ ಜಾನುವಾರುಗಳ ಮಡಿಲಿನಿಂದ ಸುಮಾರು ಹದಿನೈದು ದಿನಗಳವರೆಗೆ ಬಿಳಿಕೆಂಪು ಮಿಶ್ರಿತ ಲೋಳೆ/ಕೊಳೆ ಹೋಗುವುದು ಸಹಜ. ಇಷ್ಟು ದಿನಗಳ ನಂತರವೂ ಲೋಳೆ ಹೋದರೆ ಅಥವಾ ಲೋಳೆಯು ದುರ್ವಾಸನೆಯಿಂದ ಕೂಡಿದ್ದರೆ ಚಿಕಿತ್ಸೆ ಅಗತ್ಯ. ಬದಲಿಗೆ ಇಂತಹ ಕೊಳೆ ಹೋಗಬಾರದೆಂದರೆ ಅವುಗಳ ಹೊಟ್ಟೆ ಒಣಗಿಸಬೇಕೆಂದು ಕೆಲವರು ವಿವಿಧ ಬಗೆಯ ಕಷಾಯವನ್ನೋ ಇಲ್ಲವೇ ಪಥ್ಯವನ್ನೋ ಮಾಡಿಸುತ್ತಾರೆ. ಲೋಳೆ ಬರುವುದು ಗರ್ಭಕೋಶದಿಂದಲೇ ಹೊರತು ಹೊಟ್ಟೆಯಿಂದಲ್ಲ. ಹಾಗಾಗಿ ಹೊಟ್ಟೆಯನ್ನು ಒಣಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಫೋಟೋ ಕೃಪೆ : Viklap Sangam ಸಾಂದರ್ಭಿಕ ಚಿತ್ರ

ಒಮ್ಮೆ ದೂರದೂರಿನಿಂದ ದೂರವಾಣಿ ಕರೆ ಬಂತು. ಆ ಕಡೆಯಿಂದ “ ಡಾಕ್ಟ್ರೇ. ನಮ್ಮನೇಲಿ ದನ ಜಾರಿ ಬಿದ್ದು ಏಳಕ್ಕೆ ಆಗ್ತಿಲ್ಲ. ಚಿಕಿತ್ಸೆ ಮಾಡಬೇಕು, ಬನ್ನಿ” ಎಂದು ಬೇಡಿಕೆ. ಸರಿ. ಹೋಗಿ ನೋಡಿದೆ. ಎಲ್ಲಾ ತಪಾಸಣೆ ಮಾಡಿದಾಗ ಎಲುಬಿನ ಕೊಂಡಿಯ ಬಿರುಕಿರಬೇಕು, ಯಾವುದೇ ರೀತಿಯ ಎಲುಬು ಮುರಿದಿಲ್ಲ ಅನ್ನಿಸಿತು. ಬಲಗಡೆ ಕಾಲಿಗೆ ತುಂಬಾ ನೋವಿತ್ತು. ನಾನು ಪರೀಕ್ಷೆ ಮಾಡುವುದನ್ನು ದನದ ಮಾಲಕರು ಗಮನಿಸುತ್ತಿದ್ದರು. ಅವರ ಕೈಯನ್ನೂ ಸಹ ಎಲುಬಿನ ಮೇಲೆ ಊರಿಸಿ ಯಾವುದೇ ಮೂಳೆ ಮುರಿತ ಇಲ್ಲ ಎಂಬುದನ್ನು ತೋರಿಸಿದರೂ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇತ್ತು. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಪಶುವೈದ್ಯರ ದುರಾದೃಷ್ಠಕ್ಕೆ ಕ್ಷ ಕಿರಣದ ಮಿಶನ್ ತಂದು ಎಕ್ಸ್ ರೇ ತೆಗೆದು ಮೂಳೆ ಮುರಿತ ಅಥವಾ ಎಲುಬು ಕಳಚಿದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೇವಲ ನಮ್ಮ ಅಂಗರಚನಾ ಶಾಸ್ತ್ರದ ಜ್ಞಾನದ ಮೇಲೇಯೇ ಹೇಳಬೇಕು. ಹಿಂಗಾಲಿನ ಮೇಲ್ಬಾಗದ ಮೂಳೆ ಮುರಿತದ ಬಗ್ಗೆ ಕೆಲವೊಮ್ಮೆ ಖಚಿತವಾಗಿ ಹೇಳುವುದು ಕಷ್ಠವಾಗುತ್ತದೆ. ನೋವಿಗೆ ಚುಚ್ಚುಮದ್ದು ಕೊಟ್ಟು ಅದರ ಸ್ಥಿಯ ಬಗ್ಗೆ ತಿಳಿಸಿ ಎಂದು ಹೇಳಿ ಬಂದೆ.

ನಂತರ ಕೆಲಸದ ಒತ್ತಡದಲ್ಲಿ ನನಗೆ ಈ ವಿಷಯ ಮರೆತೇ ಹೋಯಿತು. ಅದೇ ದಾರಿಯಲ್ಲಿ ಹೋಗುವಾಗ “ಹೌದಲ್ಲ. ಇಲ್ಲೊಂದು ದನಕ್ಕೆ ಕಾಲು ಮುರಿದಿತ್ತು. ಏನಾಯ್ತೋ ಏನೋ? ನೋಡೋಣ” ಎಂದು ಅವರ ಮನೆಗೆ ಹೋದೆ. ಅಲ್ಲಿನ ದೃಶ್ಯ ನೋಡಿ ಗರಬಡಿದು ಹೋದೆ. ಆ ದನವನ್ನು ನಾಲ್ಕು ಕಾಲು ಕಟ್ಟಿ ಹಾಕಿದ್ದರು. ಒಬ್ಬ ದಡೂತಿ ಆಸಾಮಿ ದನದ ಹತ್ತಿರ ನಿಂತು ನಿರ್ದೇಶನ ನೀಡುತ್ತಿದ್ದ. ಅವನ ಪ್ರಕಾರ ದನದ ಮೂಳೆ “ಜಾರಿ” ಹೋಗಿದೆಯಂತೆ. ಅದನ್ನು ಆತ ಸ್ವಸ್ಥಾನದಲ್ಲಿ ಕೂಡ್ರಿಸುತ್ತಾನಂತೆ. ನಾನು ಮೂಕ ಪ್ರೇಕ್ಷಕನಾಗಿ ನಿಂತು ಕೊಂಡೆ. ಆತ ನೊಗದಷ್ಟು ದೊಡ್ಡ ಕಟ್ಟಿಗೆಯ ತುಂಡನ್ನು ಬಲಗಾಲ ಮೇಲೆ ಇಟ್ಟ. ದನದ ಕೆಚ್ಚಲಿನ ಸಂದಿನಲ್ಲಿ ಹಿಂಗಾಲ ಮಧ್ಯೆ ಒಂದು ತೆಂಗಿನ ಕಾಯಿಯನ್ನಿಟ್ಟು ಮರದ ಕಂಬದ ಮೇಲೆ ಕಾಲನ್ನಿಟ್ಟು ಬಲವಾಗಿ ಒತ್ತಿದ. ದನ ಅತ್ಯಂತ ನೋವಿನಿಂದ “ಅಂಬಾ” ಎಂದು ನರಳಿತು. ತೊಡೆಯ ಮಾಂಸಖಂಡದ ಮಧ್ಯದಿಂದ “ಕಟಕ್” ಎಂಬ ಶಬ್ಧವು ಬಂತು. ಆತ “ ಸರಿಯಾಯ್ತು..ಸರಿಯಾಯ್ತು” ಎಂದು ಕಿರುಚಾಡಿದ. ನನಗೋ ಹೃದಯವೇ ಬಾಯಿಗೆ ಬಂದ ಹಾಗಾಯ್ತು. ನಂತರ ಆತ ಕೊಡದಂತ ಪಾತ್ರೆಯನ್ನು ಅದರ ಮೇಲೆ ಇಟ್ಟು ಪರೀಕ್ಷೆ ಮಾಡಿ “ಎಲ್ಲವೂ ಸರಿಯಾಗಿದೆ” ಎಂದು ಸರ್ಟಿಫಿಕೇಟ್ ನೀಡಿ ಅವನ ಸಂಭಾವನೆ ಪಡೆದು ಹೊರಟ. ನಾನು ಕುತೂಹಲಕ್ಕೆ ದನದ ಕಾಲನ್ನು ಪರೀಕ್ಷಿಸಿದೆ. ಏನಾಶ್ಚರ್ಯ.. ಬಲಗಡೆಯ ಕಾಲಿನ “ಫ಼್ಯೂಮರ್” ಎಲುಬು ಮುರಿದು ಹೋಗಿತ್ತು. ಮಾಲಕರನ್ನು ಕರೆದು ಆದ ಅನಾಹುತವನ್ನು ತೋರಿಸಿದೆ. ಅವರು ನಂಬಲೂ ಸಿದ್ಧರಿರಲೇ ಇಲ್ಲ. ಬದಲಾಗಿ ನನ್ನದೇ ತಪ್ಪು ಗ್ರಹಿಕೆ ಎಂದರು. ಅಂತೂ “ರಣವೈದ್ಯ”ದಿಂದ ಆಕಳಿನ ಕಾಲು ಮುರಿದಿತ್ತು !!.



ನನ್ನ ಅಮ್ಮನಿಗೆ ವಯೋಸಹಜವಾದ ಬೆನ್ನು ನೋವು ಬಂದಿತು. ವೈದ್ಯರ ಹತ್ತಿರ ತೋರಿಸಿದಾಗ ಬೆನ್ನು ಮೂಳೆ ಸವೆದಿದೆಯೆಂದೂ “ಡಿಸ್ಕುಗಳು ಜಾಮ್” ಆಗಿದೆಯೆಂದೂ ಜಾಸ್ತಿ ಕೆಲಸ ಮಾಡಬಾರದೆಂದೂ ತಿಳಿಸಿದ್ದರು. ಆದರೂ ನಮ್ಮ ಅಮ್ಮನಿಗೆ ಯಾರೋ ಯಂಟಗಾನಹಳ್ಳಿ ಎಂಬಲ್ಲಿ ಅತ್ಯುತ್ತಮ ನಾಟಿ ಔಷಧಿ ಮಾಡುವವರು ಇದ್ದಾರೆಂದೂ ಹಾಗೂ ಅವರು ಮರದಿಂದ ಬಿದ್ದು ಮೂಳೆ ಪುಡಿ ಪುಡಿ ಆದವರನ್ನು “ಒಳ”ರೋಗಿಯಾಗಿ ಸೇರಿಸಿಕೊಂಡು ಸರಿಪಡಿಸಿರುವುರೆಂದೂ, ಅವರ ಚಿಕಿತ್ಸೆ ಅತ್ಯದ್ಭುತವೆಂದೂ ತಿಳಿದ ಮೇಲೆ ಅಲ್ಲಿಗೇ ಹೋಗಲೇ ಬೇಕೆಂದು ನಿರ್ಧಾರವಾಯ್ತು. ಮಂಗಳವಾರ ಔಷಧಿ ಪಡೆಯಲು ಶುಭ ದಿನ ಎಂದು ತಿಳಿದು ಬೆಂಗಳೂರಿನಿಂದ ಬೆಳಿಗ್ಗೆಯೇ ಕಾರಿನಲ್ಲಿ ಅಮ್ಮನನ್ನು ಕರೆದುಕೊಂಡು ಹೊರಟೆ. ಇನ್ನೇನು ಯಂಟಗಾನಹಳ್ಳಿ ಹತ್ತಿರ ಬಂತು ಅನ್ನುವಷ್ಟರಲ್ಲಿ ಅನೇಕ ನಾಟಿ ವೈದ್ಯ ಚಿಕಿತ್ಸಾಲಯಗಳು ದಾರಿಯುದ್ದಕ್ಕೆಲ್ಲಾ ಕಂಡು ಬಂದವು. ಕೆಲವರಂತೂ ನಮ್ಮನ್ನು ಅಟಕಾಯಿಸಿಕೊಂಡು ಕಾರಲ್ಲಿ ಇಣುಕಿ “ರೋಗಿ” ಗಾಗಿ ಹುಡುಕಲಾರಂಭಿಸಿದರು. ಹಾಗಿದ್ದರೆ “ಒರಿಜಿನಲ್” ವೈದ್ಯರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವುದೇ ದೊಡ್ಡ ಸಾಹಸವಾಯಿತು. ಅಂತೂ ಇಂತೂ ಅವರಿವರನ್ನು ಕೇಳಿಕೊಂಡು ಮುಂದೆ ಸಾಗುವಷ್ಟರಲ್ಲಿ ಒಂದು ಮನೆಯ ಮುಂದೆ ಜನಸಮೂಹವೇ ನೆರೆದಿತ್ತು. ಸರಿಯಾದ ಅಡ್ರೆಸ್ಸಿಗೆ ಬಂದೆವೆಂದು ತಿಳಿದು ಹೆಸರು ಬರೆಸಿ ಕಾಯುತ್ತಾ ಕುಳಿತೆವು. ಅಲ್ಲಿ “ಒಳರೋಗಿ”ಗಳಾಗಿ ಅನೇಕರು ಅಡ್ಮಿಟ್ ಆಗಿದ್ದರು. ಇನ್ನು ಕೆಲವರು ವಾಕಿಂಗ್ ಸ್ಟಿಕ್ ತರದ್ದನ್ನು ಹಿಡಿದು ನಡೆಯಲು ಪ್ರಯತ್ನಿಸುತ್ತಿದ್ದರು. ಸುತ್ತಲೂ ಘಂ ಎಂದು (ಸು)ವಾಸನೆ ಬರುವ ತೈಲದ ಗಮಲು. ಅಲ್ಲಿರುವವರೆಲ್ಲಾ ಬಹುತೇಕ ಕೆಳಮಧ್ಯಮ ವರ್ಗದವರೆಂದು ಗೊತ್ತಾಗುತ್ತಿತ್ತು. ಬೆಳಿಗ್ಗೆ ೯ ಘಂಟೆಗೆ ಹೆಸರು ಬರೆಸಿದ ನಮ್ಮ ಪಾಳಿ ಮಧ್ಯಾಹ್ನ ೧ ಘಂಟೆಗೆ ಬಂತು. ವೈದ್ಯ ಮಹಾಶಯ ನಮ್ಮಮ್ಮನ್ನು ಪರೀಕ್ಷಿಸಿದ. ನಾನು ತೆಗೆದುಕೊಂಡು ಹೋಗಿದ್ದ ಎಕ್ಸ್ ರೇ ನೋಡಿದ. ಅದನ್ನು ಯಾವ ದಿಕ್ಕಿನಲ್ಲಿ ಹಿಡಿದನೋ ಗೊತ್ತಾಗಲಿಲ್ಲ. ನರ ಉಳುಕಿದೆಯೆಂದೂ ಅದಕ್ಕೆ ವಿಶೇಷ ಚಿಕಿತ್ಸೆ ಬೇಕೆಂದೂ ಅದಕ್ಕೆ ೧ ರೂ ನಾಣ್ಯ ಬೇಕೆಂದೂ ಹೇಳಿದ. ನನ್ನ ಹತ್ತಿರ ಇರುವ ನಾಣ್ಯ ನೀಡಿದೆ. ಆತ ನಮ್ಮ ಅಮ್ಮನನ್ನು ಬೋರಲು ಮಲಗುವಂತೆ ಹೇಳಿ, ನಾಣ್ಯವನ್ನು ಬೆನ್ನಮೂಳೆಯ ಮೇಲೆ ಇರಿಸಿದ. ನಂತರ ಇದ್ದಕ್ಕಿದ್ದಂತೆ ಬೆನ್ನಮೂಳೆಯ ಮೇಲೆ ಹತ್ತಿ ನಿಂತು ಬಿಟ್ಟ. ನಾನು “ಹೋಯಿತು, ಕಥೆ ಮುಗಿಯಿತು” ಎನ್ನುವಷ್ಟರಲ್ಲಿ ಎಲ್ಲ “ಸರಿಯಾಯಿತು. ಕರೆದುಕೊಂಡು ಹೋಗಿ ಎನ್ನುತ್ತಾ ಒಂದು ಬಾಟ್ಲಿ ತುಂಬಾ ತೈಲ ನೀಡಿ ಇದನ್ನು ಚೆನ್ನಾಗಿ ಹಾಕಿ ಉಜ್ಜಿ ಎಂದ. ಬದುಕಿದೆ ಎಂದುಕೊಂಡು ಹೊರಬಂದೆ. ಅಮ್ಮನಿಗೆ ಕಡಿಮೆಯಾಯಿತೇ ಎಂದರೆ ಮತ್ತೊಂದು ಉಪಕಥೆ ಹುಟ್ಟಿಕೊಳ್ಳುತ್ತೆ. “ಚೆನ್ನಾಗಿ ತಿಕ್ಕಿ” ಎಂಬ ಶಬ್ಧ ಕೇಳಿಸಿಕೊಂಡ ನಮ್ಮಮ್ಮ ಚೆನ್ನಾಗಿ ತಿಕ್ಕಿದ್ದೂ ತಿಕ್ಕಿದ್ದೆ. ಇನ್ನೂ ನೋವು ಜಾಸ್ತಿಯಾಗಿ ಎದ್ದೇಳಲು ಆಗದ ಹಾಗಾಯ್ತು. ನಂತರ ಮೂಳೆ ತಜ್ಞರು ಈ ರೀತಿ ಉಜ್ಜುವುದು ವರ್ಜ್ಯವೆಂದೂ ಅದರಿಂದ ಸವೆದ ಮೂಳೆಗಳು ಮುರಿಯುವ ಸಾಧ್ಯತೆ ಇದೆಯೆಂದೂ ಹೇಳಿದ್ದರಿಂದ ತೈಲವನ್ನು ಮೂಲೆಗೆಸೆದಿದ್ದು.

ಫೋಟೋ ಕೃಪೆ : home Thieme Connect

ಈ ಮೂಳೆ ಮುರಿದಾಗ ಅದರ ಕೂಡುವಿಕೆ ಒಂದು ಸಹಜ ಕ್ರಿಯೆ. ಏನೇ ಮಾಡಿದರೂ ಅದಕ್ಕೆ ಕೂಡಿಕೊಳ್ಳಲು ಮೂರು ವಾರಗಳು ಬೇಕೇ ಬೇಕು. ಈ ಅವಧಿಯಲ್ಲಿ ಅದನ್ನು ನಿಶ್ಚಲತೆ (ಇಮ್ಮೊಬಿಲೈಜೇಶನ್) ಗೊಳಿಸಬೇಕು. ಇದಕ್ಕೆ ಯಾವುದೇ ಔಷಧಿ ಬೇಡ. ಮೂರು ವಾರಗಳ ನಂತರ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುತ್ತದೆ.ಸರಿಯಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿದಲ್ಲಿ ಸರಿಯಾಗಿ ಕೂಡಿಕೊಳ್ಳುತ್ತದೆ. ಯುವಕರಲ್ಲಿ ಬೇಗ ಕೂಡಿಕೊಳ್ಳುತ್ತದೆ. ವಯಸ್ಕರಲ್ಲಿ ಸ್ವಲ್ಪ ನಿಧಾನ. ಅದಕ್ಕೆ ಯಂಟಗಾನಹಳ್ಳಿಯ ಔಷಧಿ ಬೇಕೇಂದೇನೂ ಇಲ್ಲ. ಜನ ಮಳ್ಳೋ.. ಜಾತ್ರೆ ಮಳ್ಳೋ..?
ನಾನೊಮ್ಮೆ ಸಾಗರದ ನಮ್ಮ ಸ್ನೇಹಿತರ ಮನೆಗೆ ಹೋಗಿದ್ದೆ. ಬೆಳಿಗ್ಗೆ ೬ ಘಂಟೆಗೆ ದೇವರ ಪೂಜೆಗೆ ನನ್ನ ಸ್ನೇಹಿತನ ತಾಯಿ ಹೋಗಿದ್ದಾರೆ. ಏನೋ ಕಡಿದ ಹಾಆಗೆ ಆಗಿದೆ. ಆಗ ಹೂಗಿಡದ ಮೇಲೆ ಹಾವೊಂದು ಕಾಣಿಸಿದೆ. ಹಾವು ಕಚ್ಚಿತೆಂದು ಮನೆಯಲ್ಲಾ ರಂಪ. ಡಾಕ್ಟರುಗಳ ಹತ್ತಿರ ಒಯ್ಯೋಣ ಎಂದು ಜೀಪು ಸಿದ್ಧ ಮಾಡಿದೆ. ಆದರೆ ಆವರು ಸಮೀಪದ ಹಳ್ಳಿಯಲ್ಲಿ ನಾಟಿ ವೈದ್ಯರೊಬ್ಬರಿದ್ದಾರೆ. ಅವರೆಂಥ ಪ್ರಚಂಡೆರೆಂದರೆ ಅವರ ಹತ್ತಿರ ಹಾವು ಕಚ್ಚಿಸಿಕೊಂಡವರನ್ನು ಕರೆದುಕೊಂಡು ಹೋಗುವುದೇ ಬೇಡವಂತೆ. ಫೋನಿನಲ್ಲಿಯೇ ಮಂತ್ರ ಹೇಳಿದರೆ ಸಾಕಂತೆ. ಮೈಗೇರಿದ ನಂಜೆಲ್ಲಾ ಇಳಿದು ಬಿಡುವುದಂತೆ. ಜಾಸ್ತಿ ಸಿರಿಯಸ್ ಅನಿಸಿದರೆ ಕರೆದುಕೊಂಡು ಬರಲು ತಿಳಿಸುತ್ತಾರಂತೆ. ನಮ್ಮ ಕೇಸಿನಲ್ಲಿ ಕರೆದುಕೊಂಡು ಬರಬೇಕೆಂದರು. ಹೋಗುವುದೊರೊಳಗೆ “ಮಂತ್ರಿಸಿದ ನೀರ”ನ್ನು ಸಿದ್ಧ ಪಡಿಸಿ ಇಟ್ಟುಕೊಂಡಿದ್ದರು. ಅದನ್ನು ಕುಡಿಸಿ ನಿಮ್ಮ ವಿಷವೆಲ್ಲಾ ಹೋಯ್ತು ಎಂದ ಕೂಡಲೇ ನಮ್ಮ ಪೇಶಂಟು ಗುಣವಾದರು. ಹಾವಿನ ವಿಷದ ಬಗ್ಗೆ ಗೊತ್ತಿರುವ ನನಗೆ ಏನೂ ವಿಶೇಷ ಅನಿಸಲಿಲ್ಲ. ಏಕೆಂದರೆ ಶೇ ೮೦ ರಷ್ಟು ಹಾವುಗಳು ವಿಷ ಹೊಂದಿಲ್ಲ. ಹಾವು ಕಚ್ಚಿದ ಬಹುತೇಕ ಜನ ಹಾವಿನ ಭಯದಿಂದ (ಸ್ನೇಕ್ ಫೋಬಿಯಾ) ದಿಂದ ಹ್ರದಯ ಸ್ಥಂಭನವಾಗಿ ಮರಣಹೊಂದುತ್ತಾರೆ. ಹಾವು ಕಡಿಸಿಕೊಂಡವರಿಗೆ ಗಾಬರಿಯಾಗದಂತೆ ಧೈರ್ಯ ಹೇಳಿ ಪ್ರಥಮ ಚಿಕಿತ್ಸೆ ಮಾಡಿದರೆ ಸಾಕು. ವಿಷದ ಹಾವಲ್ಲದಿದ್ದರೆ ಏನೂ ಆಗಲ್ಲ. ಆದರೆ ನಾಗರ ಹಾವು ಕಡಿಸಿಕೊಂಡವರ ಜೀವ ಕೆಲವು ನಿಮಿಷಗಳಲ್ಲಿಯೇ ಹೋಗುವುದಲ್ಲ. ಇದಕ್ಕೇನು ಮಾಡುತ್ತಾರೋ?. ಮಂತ್ರಕ್ಕೆ ಮಾವಿನ ಕಾಯಿ ಉದುರುವುದೇ? ಖಂಡಿತಾ ಇಲ್ಲ. ಆದರೂ ಉದುರಿಸುವವರು ಇದ್ದಾರೆ.

ಫೋಟೋ ಕೃಪೆ : Foodnavigator

ಇನ್ನೊಂದು ಘಟನೆ. ಒಂದೂರಿನ ಒಂದು ಮನೆಯ ಎಲ್ಲಾ ಎಮ್ಮೆಗಳಲ್ಲಿ ಬಾಲವೆಲ್ಲಾ ಮೋಟಾಗಿ ಉದುರಿ ಹೋಗುತ್ತಾ ಇತ್ತು, ಕೆಲ ಎಮ್ಮೆಗಳಲ್ಲಿ ಕಿವಿಯೂ ಒಣಗಿ ಅಡಿಕೆ ಹಾಳೆಯಂತಾಗಿತ್ತು.ನಾನು ಈ ರೀತಿಯ ಕಾಯಿಲೆಗಳ ಬಗ್ಗೆ ಆಗಲೇ ಅಧ್ಯಯನ ನಡೆಸಿದ್ದರಿಂದ ಇದರ ಕಾರಣ ಗೊತ್ತಾಗಿತ್ತು. ಅವರ ಮನೆಯಲ್ಲಿರುವ ಭತ್ತದ ಒಣ ಹುಲ್ಲು ನೀರಿನಲ್ಲಿ ನೆನೆದು ಮುಗ್ಗಲು ಬಂದು ಬೂಸ್ಟು ಹಿಡಿದಿರುವುದರಿಂದ ಮತ್ತು ಅನೇಕ ದಿನಗಳಿಂದ ಇದನ್ನೇ ಎಲ್ಲಾ ಎಮ್ಮೆಗಳಿಗೆ ತಿನ್ನಿಸಿದ್ದರಿಂದ ಶಿಲೀಂದ್ರವಿಷದಿಂದ ಈ ರೀತಿ ಆಗಿದೆಯೆಂದು ಅದಕ್ಕೆ ತಕ್ಕ ಔಷಧಿ ಹೇಳಿ ಇದನ್ನು ೧೫ ದಿನ ನೀಡಬೇಕೆಂದು ಹೇಳಿ ಬಂದೆ. ಆದರೆ ಆ ದಿನ ಕ್ಯಾಮರಾ ತರದೇ ಇದ್ದುದರಿಂದ ಇನ್ನೊಂದು ದಿನ ಅವರ ಮನೆಗೆ ಹೋದಾಗ ಎಲ್ಲಾ ಎಮ್ಮೆಗಳ ಬಾಲ ಇನ್ನೂ ಮೋಟಾಗಿ ರಕ್ತ ಬಸಿಯುತ್ತಿತ್ತು. ಕೆಲವಕ್ಕೆ ಹುಳಗಳಾಗಿ ಪುತು ಪುತು ಉದುರುತ್ತಿದ್ದವು. ಏನಾಯಿತು ಎಂದಾಗ ಬಿಚ್ಚಿಟ್ಟರು ಕಥೆ. ಪಕ್ಕದ ಊರಿನ ನಾಟಿ ವೈದ್ಯ ಬಂದು ನೋಡಿ ಇದೆಲ್ಲಾ “ಹುಳ” ಹಿಡಿಯುವ ಕಾಯಿಲೆಯೆಂದು “ಡಯಾಗ್ನೋಸ್” ಮಾಡಿ ಎಲ್ಲಾ ಎಮ್ಮೆಗಳ ಬಾಲವನ್ನು ಒಂದು ಮರದ ಬೊಡ್ಡೆಯ ಮೇಲಿರಿಸಿ ಕಚಕ್ ಕಚಕ್ ಎಂದು ಕಡಿದು ಕುದಿಯುವ ಎಣ್ಣೆಯಲ್ಲಿ ಆ ಬಾಲದ ತುದಿಯನ್ನು ಅದ್ದಿದನಂತೆ. ಸುಲಭವಾಗಿ ಕಡಿಮೆಯಾಗಬಲ್ಲ ಕಾಯಿಲೆಗೆ ಔಷಧಿಯನ್ನು ನೀಡಲು ಮಾಲೀಕನ ಸೋಮಾರಿತನದಿಂದ “ರಣವೈದ್ಯ”ಕ್ಕೆ ಸುಖಾಸುಮ್ಮನೆ ಎಮ್ಮೆಗಳು ನೋವು ಅನುಭವಿಸದವು.



ಅವರು ವಿದ್ಯಾವಂತರು. ಒಳ್ಳೆಯ ಮೂರು ಮಿಶ್ರ ತಳಿ ಜಾನುವಾರುಗಳನ್ನು ಸಾಕಿದ್ದರು. ಒಂದು ಜಾನುವಾರು ಮೇವು ಬಿಟ್ಟಿತು. ನಾನು ಹೋಗಿ ಪರೀಕ್ಷೆ ಮಾಡಿದೆ. ತುಂಬಾ ಜ್ವರ ಇತ್ತು. ಮೈಮೇಲೆಲ್ಲಾ ಉಣ್ಣೆಗಳಿದ್ದವು. ಉಣ್ಣೆಯಿಂದ ಪೀಡೆಯಾದ ಥೈಲೇರಿಯಾ ಕಾಯಿಲೆಯಾಗಿದ್ದರಿಂದ ಅದಕ್ಕೆ ಒಳ್ಳೆಯ ಔಷಧಿ ದುಬಾರಿಯಾಗಿದ್ದು ಅದನ್ನು ಔಷಧದ ಅಂಗಡಿಯಿಂದ ತರಬೇಕೆಂದು ಹೇಳಿ ಪರ್ಯಾಯ ಚಿಕಿತ್ಸೆ ಮಾಡಿ ಚೀಟಿ ಕೊಟ್ಟು ಬಂದೆ. ಮರು ದಿನ ದೂರವಾಣಿ ಕರೆ ಮಾಡಿದಾಗ ಜಾನುವಾರು ಸುಧಾರಿಸಿದೆಯೆಂದೂ, ಹಣಕಾಸಿನ ಸಮಸ್ಯೆಯಿರುವುದರಿಂದ ಇನ್ನೆರಡು ದಿನಕ್ಕೆ ಔಷಧಿ ತರುವುನೆಂದೂ ಹೇಳಿದರು. ಇದಾದ ಎರಡು ದಿನಕ್ಕೆ ಔಷಧಿ ತಂದಿರುವುದಾಗಿಯೂ ಮತ್ತು ಚಿಕಿತ್ಸೆಗೆ ಬರಬೇಕೆಂದು ಕರೆಬಂತು. ಹೋದರೆ ದನ ನೆಲ ಹಿಡಿದು ಬಿಟ್ಟಿದೆ!. ಬಾಯಿಯಿಂದ ಜೊಲ್ಲಿನ ಧಾರೆಯೇ ಸುರಿಯುತ್ತಿದೆ. ಮುಖವೂ ಬಾತಂತಿದೆ. ನಾನು ದನದ ಬಾಯಿ ತೆಗೆಸಿ ನೋಡಿದರೆ ದಂಗಾಗಿ ಬಿಟ್ಟೆ. ದನದ ಬಾಯಿಯ ತುಂಬಾ ಸುಟ್ಟ ಗಾಯದಂತಿರುವ ಅಲ್ಸರುಗಳು ಇದ್ದವು. ನಾಲಿಗೆಯಂತು ಕೈಯಲ್ಲೇ ಕಿತ್ತು ಬರುವ ಹಾಗಿತ್ತು. ದನ ನೋವಿನಿಂದ ಒರಲುತ್ತಿತ್ತು. “ಏನಾಯಿತು ದನಕ್ಕೆ. ಏನಾದ್ರೂ ನಾಟಿ ಚಿಕಿತ್ಸೆ ಮಾಡಿಸಿದ್ರಾ? ಎಂದು ಕೇಳಿದೆ. ಅಯ್ಯೋ ಡಾಕ್ಟ್ರೇ.. ಏನು ಹೇಳ್ಲಿ. ತಪ್ಪು ಕೆಲಸ ಮಾಡಿ ಬಿಟ್ಟೆ” ಎಂದು ಹೇಳಿ ಆದ ಪ್ರವರ ಹೇಳಿದರು.

ಫೋಟೋ ಕೃಪೆ : vijaya karnataka

ಅವರ ಸ್ನೇಹಿತರು ಒಳ್ಳೆ ನಾಟಿ ವೈದ್ಯನೊಬ್ಬನಿದ್ದಾನೆಂದೂ ಅವನು ಚಿಕಿತ್ಸೆ ಮಾಡಿದರೆ ಎರಡೇ ದಿನಗಳಲ್ಲಿ ದನ ಮೇವು ತಿನ್ನುವುದೆಂದೂ ತಿಳಿಸಿದರಂತೆ. ಆತ ಬಂದು ದನಕ್ಕೆ “ಕಪ್ಪೆ” ಕಾಯಿಲೆಯಾಗಿದೆಯೆಂದೂ, ನಾಲಿಗೆ ದಪ್ಪವಾಗಿ ನುಂಗಲು ಸಾಧ್ಯವಾಗುತ್ತಿಲ್ಲವೆಂದೂ ಅದನ್ನು ಸುಟ್ಟು ತೆಗೆದರೆ ಬೇಗ ಹುಶಾರಾಗುತ್ತದೆಂದೂ ತಿಳಿಸಿದನಂತೆ. ಆತ ಬಿಸಿಯಾದ ಕಬ್ಬೀಣದ ರಾಡುಗಳನ್ನು ಬಳಸಿ ನಾಲಿಗೆಯ ಮೇಲಿರುವ ಬುಗುಟೆಯಂತ ವಸ್ತುಗಳನ್ನು ಸುಟ್ಟು ಬಿಟ್ಟನಂತೆ. ಹೀಗೆ ಸುಡುವಾಗ ಸ್ವಾಭಾವಿಕವಾಗಿ ದನ ಕೊಸರಾಡಿದೆಯಂತೆ. ಆಗ ಬಾಯಲ್ಲಿರುವ ವಿವಿಧ ಭಾಗಗಳೆಲ್ಲಾ ಸುಟ್ಟು ಹೋಗಿದ್ದು ದನ ಅತ್ಯಂತ ನೋವಿನಿಂದ ಬಳಲಿದೆ. ಒಂದೆರಡು ಗಿಡಮೂಲಿಕೆಗಳನ್ನು ನೀಡಿ ಆತ ಜಾಗ ಖಾಲಿ ಮಾಡಿದ್ದಾನೆ. ಇದು ಅನೇಕ ರೈತರು ಜಾನುವಾರುಗಳಿಗೆ ಮಾಡುವ ಅನ್ಯಾಯ.

ಸಾಮಾನ್ಯವಾಗಿ ಜಾನುವಾರಿಗೆ ಯಾವುದೇ ಕಾಯಿಲೆ ಬಂದರೂ ಮೊದಲಿಗೆ ಅದು ಮೇವು ಬಿಡುತ್ತದೆ. ಮೇವು ಬಿಟ್ಟಾಗ ಅದಕ್ಕೆ ಕಾರಣವಾದ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ನೆನಪಿಡಿ, ಜೀವಮಾನದಲ್ಲಿಯೇ ದನದ ಬಾಯಿ ತೆಗೆಸಿ ನೋಡದ ಈ ಸಂದರ್ಭದಲ್ಲಿ ಬಾಯಿ ತೆಗೆಸಿ ನೊಡುತ್ತಾರೆ. ಮೊದಲ ಬಾರಿ ದನದ ನಾಲಿಗೆ ನೋಡಿದಾಗ ನಾಲಿಗೆಯ ಹಿಂಬಾಗದಲ್ಲಿ ಉಬ್ಬಿದ ಆಕ್ರತಿ ಕಾಣ ಸಿಗುತ್ತದೆ. ಇದು ಅಹಾರವನ್ನು ಅನ್ನನಾಳದೊಳಗೆ ದಬ್ಬಲು ಇರುವ ಸಾಧನ. ಜನ ಯಾರದೋ ಮಾತು ಕೇಳಿ ಅದಕ್ಕೆ “ಕಪ್ಪೆ” ಎಂದು ಕೊಂಡು ಇದು ಅಹಾರ ನುಂಗಲು ತೊಂದರೆ ಮಾಡುತ್ತಿದೆ ಎಂದು ಅದನ್ನು ಸುಟ್ಟು ತೆಗೆದು ಬಿಟ್ಟರೆ ದನ ಹುಶಾರಾಗಿಬಿಡುತ್ತದೆ ಎಂದುಕೊಂಡು ಬಿಡುತ್ತಾರೆ. ನಾಟಿವೈದ್ಯರು ನೆಗ್ಗಿಲಮುಳ್ಳಿನಲ್ಲಿ ಇದನ್ನು ಕೊರೆದು ಹಾಕುವುದು, ಬರೆ ಹಾಕುವುದು ಇತ್ಯಾದಿ ರಣವೈದ್ಯ ಮಾಡಿ ದನದ ಪರಿಸ್ಥಿತಿಯನ್ನು ಚಿಂತಾಜನಕ ಮಾಡಿಬಿಡುತ್ತಾರೆ. ಇದು ಪ್ರಾಣಿಹಿಂಸೆಯೂ ಹೌದು , ಗೋಹಿಂಸೆಯೂ ಹೌದು. ಇದು ನಮಗೆ ಬೇಕೇ?

ಒಂದು ದನಕ್ಕೆ ಮುಳ ಬಿಟ್ಟಿದೆ ಬನ್ನಿ ಚಿಕಿತ್ಸೆ ಮಾಡಿ ಎಂದು ಕರೆದರು. ಈ ಮುಳಬಿಡುವುದೆಂದರೇನು ಎಂಬುದನ್ನು ಹೇಳಿಬಿಡುವೆ. ಹಾಗಿದ್ದಲ್ಲಿ ಮಾತ್ರ ನಾನು ಮುಂದೆ ಹೇಳುವುದು ಅರ್ಥವಾದೀತು. ಸಾಮಾನ್ಯವಾಗಿ ಕೆಲವೊಮ್ಮೆ ಎತ್ತುಗಳು, ಎಮ್ಮೆಗಳು, ಕೆಲವೊಮ್ಮೆ ಆಕಳುಗಳು ಮುಂದಿನ ಕಾಲನ್ನು ಕುಂಟುತ್ತವೆ. ಕಾಲಿನ ಮೇಲೆ ಭಾರ ಬಿಡದೇ ಇರುವುದರಿಂದ ಪಕ್ಕೆಲುಬಿನ ಮೇಲೆ ಒಂದು ಗುಣಿ ಬಿದ್ದ ಹಾಗೇ ಕಾಣುತ್ತದೆ. ಇದಕ್ಕೆ ಸ್ಕ್ಯಾಪ್ಯುಲಾ ಎಂಬ ಎಲುಬಿನ ಮೇಲಿನ ಮಾಂಸಖಂಡದ ಗಾತ್ರ ಚಿಕ್ಕದಾಗುವುದು ಅಥವಾ ಅದರ ಮೇಲೆ ಹಾದು ಹೋಗುವ ಒಂದು ನರದ ತೊಂದರೆಯಾಗಿರುತ್ತದೆ. ಇದಕ್ಕೆ ನಿಖರ ಕಾರಣ ಗೊತ್ತಿಲ್ಲದಿದ್ದರೂ ಅನೇಕ ಪ್ರಕರಣಗಳು ಶಿಲೀಂದ್ರ ಪೀಡಿತ ಹುಲ್ಲನ್ನು ತಿಂದಾಗ ಆಗುತ್ತವೆ. ಇದಕ್ಕೆ ಚಿಕಿತ್ಸೆ ಇದ್ದರೂ ಸಹ ಸಮಯ ಬೇಕು. ನೋಡುತ್ತೇನೆ.. ಎಲುಬಿನ ಮೇಲ್ಬಾಗದಲ್ಲಿ ಅಂಗೈಗಲದ ಚರ್ಮ ಸುಟ್ಟು ಹೋಗಿ ಮಾಂಸಖಂಡಗಳು ಕೆಂಪಗೇ ಕಂಡು ಬರುತ್ತಿದ್ದವು. ನಾಟಿವೈದ್ಯನೊಬ್ಬ ಈ ಮಾಂಸಖಂಡಗಳೆಲ್ಲಾ ಕೊಳೆತಿವೆ. ಸುಟ್ಟು ಹೊಸ ಮಾಂಸ ಬಂದರೆ ಸರಿಯಾಗುತ್ತದೆ ಎಂದು ಹೇಳಿ ಕೆಂಪಗೇ ಕಾಸಿದ ಕಬ್ಬಿಣದ ಪಟ್ಟಿಯನ್ನು ಆ ಜಾಗದ ಮೇಲೆ ಇಟ್ಟಿದ್ದಾನಂತೆ. ಆಗ ಮಾಂಸ ಸಮೇತ ಚರ್ಮವು ಸುಟ್ಟು ಕರಕಲಾಗಿ ಪಟ್ಟಿಗೇ ಅಂಟಿಕೊಂಡು ಬಂದಿದೆ. ನಾಟಿ ವೈದ್ಯ ಕಾಲು ಕಿತ್ತಿದ್ದಾನೆ.

ಹೌದು !!. ಇಂತಹ ಸಹಸ್ರಾರು ನಾಟಿವೈದ್ಯರ ಪ್ರಕರಣ ನನ್ನ ಮುಂದಿದೆ. ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ಇದು ನನಗೆ ಅನುಭವವಾಗಿರುವುದು. ಇದಲ್ಲದೇ ನಮ್ಮ ಗಮನಕ್ಕೆ ಬರದೇ ಜಾನುವಾರುಗಳು ಮೂಕ ವೇದನೆ ಎಷ್ಟು ಅನುಭವಿಸುತ್ತವೆಯೋ? ನನ್ನಂತೆ ಸಹಸ್ರಾರು ಪಶುವೈದ್ಯರಿಗೂ ಇದೇ ರೀತಿಯ ಅನುಭವವಾಗಿರುತ್ತದೆ. ಇತ್ತೀಚೆಗಂತೂ ಇದರ ಹಾವಳಿ ಮಿತಿ ಮೀರಿದೆ ಎನ್ನುತ್ತಾರೆ ಪಶುವೈದ್ಯರು. ನಾಟಿವೈದ್ಯರೆಂದು ಹೇಳುವವರು ಆಕ್ಸಿಟೆಟ್ರಾಸೈಕ್ಲಿನ್, ಸಿಪಿಎಂ, ಬೆಲಾಮಿಲ್ ಗಳೆಂಬ ತ್ರಿವಳಿ ರತ್ನಗಳನ್ನು ಜೋಬಿನಲ್ಲಿರಿಸಿಕೊಂಡು ಎಲ್ಲಾ ಕಾಯಿಲೆಗಳಿಗೆ ಇವುಗಳನ್ನೇ ರಾಮಬಾಣವಾಗಿ ಪ್ರಯೋಗಿಸಿ ಕಾಕತಾಳೀಯವಾಗಿ ಗುಣವಾದರೆ ತಾನು ಮಾಡಿದ್ದೆಂದು ಕ್ರೆಡಿಟ್ಟು ತೆಗೆದುಕೊಂಡು ಸತ್ತು ಹೋದರೆ “ನಿಮ್ಮ ನಸೀಬು ಸರಿಯಿಲ್ಲ ಬಿಡಿ” ಎಂದು ಯಾಮಾರಿಸುತ್ತಾರೆ. ಎಲ್ಲಾ ಮುಗಿದ ಮೇಲೆ “ ನಾನು ಮಾಡುವುದೆಲ್ಲಾ ಮಾಡಿದೆ.ಬೇಕಾದರೆ ಡಾಕ್ಟರಿಗೆ ತೋರಿಸಿ. ಅವರು ಬಂದರೂ ಆಗಲಿಕ್ಕಿಲ್ಲ” ಎಂದು ಕೈ ಚೆಲ್ಲುತ್ತಾರೆ. ಆ ಸಮಯದಲ್ಲಿ ಪ್ರಾಣಿಯ ಖಾಯಿಲೆ ಅಂತಿಮ ಹಂತದಲ್ಲಿರುವುದರಿಂದ ತಜ್ಞ ಪಶುವೈದ್ಯರು ಬಂದರೂ ಗುಣವಾಗುವುದು ಅಷ್ಟರಲ್ಲೇ ಇರುತ್ತದೆ.

ಈ ನಾಟಿ ಮೂಲಿಕಾ ಪಶುವೈದ್ಯ ಪದ್ಧತಿಯ ಬಗ್ಗೆ ನಾನು ಯೋಜನೆಯೊಂದರಡಿ ೩ ವರ್ಷ ಸಂಶೋಧನೆ ನಡೆಸಿದೆ. ಸುಮಾರು ೪೯೮೪ “ನಾಟಿ ಪಶು ವೈದ್ಯ” ಸಂದರ್ಶನ ನಡೆಸಿದೆ. ಶೇ ೯೭ ರಷ್ಟು ಜನರಿಗೆ ಅಂತಹ ಅನುಭವ ಇರಲ್ಲ.ವಾಪಸ್ ಅವರ ಹತಿರ ಬರದ ಕೇಸುಗಳೆಲ್ಲಾ ಗುಣವಾದವು ಎಂದು ಕೊಳ್ಳುತ್ತಾರೆ. ಯಾವುದೇ ಟ್ರಾಕ್ ರಿಕಾರ್ಡ್ ಇರಲ್ಲ. ಉತ್ತರದಾಯಿತ್ವ ಮೊದಲೇ ಇಲ್ಲ. ಇವರು ಜಾಸ್ತಿ ಫೀಸು ಪಡೆಯಲ್ಲ. ಒಂದು ತೆಂಗಿನ ಕಾಯಿ. ಕೊಟ್ಟರೆ ದೇವರಿಗೆ ಒಂದಷ್ಟು ದುಡ್ಡು. ಜನರಿಗೆ ಬದಲಾವಣೆ ಬೇಕು. ಅದರಲ್ಲೂ ಕಡಿಮೆ ಖರ್ಚಿನಲ್ಲಾದರೆ ಒಳ್ಳೆಯದು. ಅಲೋಪತಿ ಔಷಧಿಯ ಬಗ್ಗೆ ಯಾಕೋ ಅವ್ಯಕ್ತ ದ್ವೇಷ. ಬೆರಳೆಣಿಕೆಯಷ್ಟು ನಾಟಿ ಔಷಧಿ ಪದ್ಧತಿಗಳು ಪರಿಣಾಮಕಾರಿಯಾಗಿದ್ದರೂ ಅವರು ಆ ಗಿಡಮೂಲಿಕೆಯ ಹೆಸರು ಬಿಟ್ಟು ಕೊಡಲ್ಲ. ಪರಂಪರೆ.ಮನೆತನ ಇತ್ಯಾದಿ ಹೇಳುತ್ತಾರೆ. ಅವರನ್ನು ಬೆನ್ನುಹತ್ತಿದರೆ ಸಮಯ ವ್ಯರ್ಥ ಎಂದು ಸುಮ್ಮನಾದೆ. ಕೆಲವೊಮ್ಮೆ ಅವು ಸರಳವಾದ ನೋವು ನಿವಾರಕ ಗುಣಹೊಂದಿದ ಗಿಡಗಳೂ ಇರಬಹುದು. ಅಂತಹ “ಸತ್ವ” ಇರಲ್ಲ.
ನಾಟಿ ವೈದ್ಯ ಪದ್ಧತಿ “ಜನ” ಪ್ರಿಯವಾಗಲು ಅನೇಕ ಕಾರಣಗಳಿವೆ. ಅದಕ್ಕೆ ಜನರ ನಿರೀಕ್ಷೆ. ಬಹಳ ಜನ ಆಧುನಿಕ ಅಲೋಪತಿ ಪದ್ಧತಿ ಕಲಿತ ಪಶುವೈದ್ಯರು ಬಂದು ಜಾನುವಾರು ಮುಟ್ಟಿ ನೋಡಿದ ಕೂಡಲೇ ಅದರ ಕಾಯಿಲೆಯು ಪತ್ತೆಯಾಗಿರಬೇಕೆಂದು ನಿರೀಕ್ಷಿಸುತ್ತಾರೆ. ಚಿಕಿತ್ಸೆಯು ಅಂತರಾಷ್ಟ್ರೀಯ ಮಟ್ಟದ್ದಾಗಿರಬೇಕು ಮತ್ತು ಅದು ಅತೀ ಕಡಿಮೆ ಖರ್ಚಿನಲ್ಲಾಗಬೇಕು ಎಂಬುದು ಬಹುತೇಕರ ನಿರೀಕ್ಷೆ. ಅದು ಯಾವುದೇ ಕಾಯಿಲೆಯಾದರೂ, ಯಾವ ಹಂತದಲ್ಲಿದ್ದರೂ ಸಹ ಒಂದೇ ದಿನದ ಚಿಕಿತ್ಸೆಯಲ್ಲಿ ಏನೂ ತೊಂದರೆಯಿಲ್ಲದೇ ಬಗೆಹರಿಹಬೇಕು ಎನ್ನುವುದೂ ಒಂದು ನಿರೀಕ್ಷೆ. ಚಮತ್ಕಾರಿಕೆ ಚಿಕಿತ್ಸೆ, ಕೂಡಲೇ ಎಲ್ಲಾ ಸರಿಯಾಗಬೇಕು ಎಂಬ ಸಿನೀಮಿಯ ನಿರೀಕ್ಷೆ ಕೆಲವರನ್ನು ಸಿನಿಕರನ್ನಾಗಿ ಮಾಡಿದೆ ಎಂದರೆ ತಪ್ಪಗಲಿಕ್ಕಿಲ್ಲ. ಘಂಟೆಗಟ್ಟಲೇ ಕಾಯುವುದು ಮತ್ತು ನೀಡುವ ಫೀಸು ದುಬಾರಿಯಿರುವುದು ಸಹ ನಾಟಿವೈದ್ಯದತ್ತ ತೆರಳಲು ಕಾರಣವಾಗಿರಬೇಕು.

ಫೋಟೋ ಕೃಪೆ : South China  Morning post

ಜಾನುವಾರುಗಳಲ್ಲಿ ನಾಟಿವೈದ್ಯದ ಹೆಸರಿನಲ್ಲಿ ಜಾನುವರುಗಳ ಶೋಷಣೆ ನಡೆಯುತ್ತಿದೆ. ದನಕ್ಕೆ ಬಾಯಿ ಇರಲ್ಲ. ಮಾಲಕನಿಗೆ ಖರ್ಚು ಮಾಡಲು ಕಷ್ಟಪಡಲು ಮನಸ್ಸು ಇರಲ್ಲ. ಇಂತಹವರೆಲ್ಲಾ ಈ ನಾಟಿ ವೈದ್ಯ ಪದ್ದತಿಗೆ ಮೊರೆ ಹೋಗುವುದು. ಈ ತರಹದ ಚಿಕಿತ್ಸೆಗಳನ್ನೆಲ್ಲಾ ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಬೇಕಾದ ಅಗತ್ಯವಿದೆ. ಈ ತರದ ನಾಟಿವೈದ್ಯದಿಂದ ಯಾವುದೋ ಕಾಕತಾಳೀಯವಾಗಿ ಗುಣವಾದ ಪ್ರಕರಣವನ್ನು ತಾವೇ ಮಾಡಿದ್ದೆಂದು ಬಿಂಬಿಸಿ ಊರೆಲ್ಲಾ ಪ್ರಚಾರ ಪಡೆಯುತ್ತಾರೆ ಈ ತರಹದ ಜನ. ಆ ಚಿಕಿತ್ಸೆ ಸರಿಯಾಗಿದ್ದರೆ ಅದರ ಪುನರಾವರ್ತನೆಯ ಪ್ರಮಾಣವೂ ಇರಬೇಕು. ಜಾನುವಾರುಗಳಲ್ಲಿ ಅಥವಾ ಮನುಷ್ಯನಲ್ಲಿ ಆಧುನಿಕ ಪದ್ಧತಿಗಳ ಚಿಕಿತ್ಸೆಗಿಂತ ಈ ತರದ ನಾಟಿ ಚಿಕಿತ್ಸೆಗಳು ಬೇಗ ಜನಪ್ರಿಯವಾಗುತ್ತಿರುವುದು ದುರಂತ. ಜನಕ್ಕೆ ಬದಲಾವಣೆ ಬೇಕಾಗಿದೆ. ಸತ್ಯವಲ್ಲ..
ಹೀಗಿದ್ದರೂ ಒಂದಿಷ್ಟು ನಾಟಿ ವೈದ್ಯ ಪದ್ಧತಿಗಳು ಸತ್ವವನ್ನು ಹೊಂದಿವೆ ಎಂದರೆ ಸುಳ್ಳಲ್ಲ. ಕೆಲವರು ನಾಟಿ ವೈದ್ಯ ಪದ್ದತಿಯಲ್ಲಿ ಗಿಡಮೂಲಿಕೆ ಔಷಧಿಯನ್ನು ನೀಡಿ ಕಾಮಾಲೆ ಇತ್ಯಾದಿ ಗೂಣಪಡಿಸುವವರಿದ್ದಾರೆ. ಆದರೆ ಕ್ಯಾನ್ಸರಿನಂತ ಮಹಾಮಾರಿಗೆ ಔಷಧಿಯಿಂದ ಕಡಿಮೆಯಾಗಿದೆ ಎಂದರೆ ನಂಬಲಾಗದು. ಅನೇಕ ಜನ ಕ್ಯಾನ್ಸರಿನಿಂದ ಬಳಲುತ್ತಿರುವ ರೋಗಿಯ ಮನೋಸ್ಥೈರ್ಯ ಹೆಚ್ಚಿಸಲು ಈ ಔಷಧಿಗಳನ್ನು ನೀಡುವುದು ಮತ್ತು ಇದೊಂದು “ಪ್ಲಾಸೆಬೋ” ಚಿಕಿತ್ಸೆ ಎಂಬುದು ನನ್ನ ಅಭಿಪ್ರಾಯ. ಹಾಗೇ ಪ್ರತಿಯೊಬ್ಬರ ಅನುಭವೂ ಬೇರೆಯಾಗಿರುತ್ತದೆ.

  • ಡಾ. ಎನ್.ಬಿ.ಶ್ರೀಧರ
    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
    ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
    ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

 

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW