ಶಿರಸಿಯ ಜೀವನಾಡಿ ಪಶ್ಚಿಮಘಟ್ಟದ ಕುಡಿ – ಅಘನಾಶಿನಿ ನದಿ

ಅಘನಾಶಿನಿ ನದಿಯು ಕರ್ನಾಟಕದ ಪವಿತ್ರ ನದಿಗಳಲ್ಲಿ ಒಂದಾಗಿದೆ.ಮಲೆನಾಡಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಅಘನಾಶಿನಿ ನದಿಯ ಕುರಿತಾಗಿದ್ದು, ತಪ್ಪದೆ ಮುಂದೆ ಓದಿ…

ಸರಸರ ಹಾವಿನಂತೆ ಹರಿಯುತ ಜುಳು ಜುಳು ನಾದದಿ ಸಪ್ತಸ್ವರಗಳ ದರ್ಶನ ಮಾಡಿಸುತ ಹಸಿರಿ ಸಿರಿಯಲಿ ವೈಯಾರದಿ ಬಳಕುತ ಹಾಲಿನಂತೆ ಶುಭ್ರವಾಗಿ ಶೋಭಿಸುತ ನಿಸರ್ಗಕೆ ಚೆಲುವನು ಉಣಿಸುತ ಜೀವಸಂಕುಲಗಳಿಗೆ ವರವಾಗುತ ಹರಿಯುತ ತಾ ಹರಿಯುವ ಸುತ್ತಲಿನ ಸಸ್ಯಸಂಕುಲ,ಪ್ರಾಣಿ ಸಂಕುಲಗಳ ಸದಾ ರಕ್ಷಿಸುತ ಅಮಿತಾನಂದವನ್ನು ಉಂಟು ಮಾಡುವ ನಯನ ಮನೋಹರವಾದ ಗಂಗೆಯ ಒಡಲೇ ಅಘನಾಶಿನಿ ನದಿ.

ಪಶ್ಚಿಮ ಘಟ್ಟಗಳಲ್ಲಿ ಸದಾ ಪ್ರಶಾಂತದಿ ಹರಿಯುತ,ನಿತ್ಯ ಹರಿದ್ವರ್ಣ ವನದ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಯಾವುದೇ ರೀತಿಯ ಮನುಜನ ಸ್ವಾರ್ಥತೆಗೆ ಬಲಿಯಾಗದೆ ಪವಿತ್ರವಾಗಿ ಹರಿಯುವ ಭಾರತದ ನದಿಗಳಲ್ಲಿ ಒಂದಾಗಿದೆ.ಅಲ್ಲದೆ ಇದು ಪಶ್ಚಿಮ ಘಟ್ಟದ ಸಾಲಿನಲ್ಲಿ ಹರಿಯುವುದರಿಂದ ಪ್ರಕೃತಿಯ ಚೈತನ್ಯವನ್ನು ಹೆಚ್ಚಿಸುತ ವನಕೆ ಚೆಲುವ ಧಾರೆಯೆರೆಯುತ ಮುನ್ನಡೆಯುತ್ತದೆ.ಶಿರಸಿಯ ಒಂದು ಕುಗ್ರಾಮದಲ್ಲಿ ಜನಿಸುವ ಈ ನದಿ ತನ್ನದೆಯಾದ ವಿಶಿಷ್ಟತೆಯಿಂದ ಹೆಸರುವಾಸಿಯಾಗಿದೆ.

ಫೋಟೋ ಕೃಪೆ : google

ಅಘನಾಶಿನಿ ನದಿಯು ಕರ್ನಾಟಕದ ಪವಿತ್ರ ನದಿಗಳಲ್ಲಿ ಒಂದಾಗಿದೆ.ಮಲೆನಾಡಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಈ ನದಿ ರಮ್ಯ ಮನೋಹರತೆಗೆ ಸಾಕ್ಷಿಯಾಗಿದೆ.ಸಾರ್ವಕಾಲಿಕ ಹರಿಯುತ ನೂರಾರು ರೀತಿಯಲ್ಲಿ ಮಲೆನಾಡಿಗರ ಬದುಕಿಗೆ ಆಸರೆಯಾಗಿದೆ.ಈ ನದಿಯು ಅಂಜೆದಿವಾ ದ್ವೀಪದ ಆಗ್ನೇಯಕ್ಕೆ ಸುಮಾರು 18 ಮೈಲಿಗಳಷ್ಟು ಭಾರತದಲ್ಲಿ ನೆಲೆಗೊಂಡಿರುವ ಒಂದು ಪ್ರಮುಖ ನದಿಯಾಗಿದೆ.ಈ ನದಿಯು ಉತ್ತರ ಕರ್ನಾಟಕದ ಶಿರಸಿಯ ಬಳಿಯಿರುವ ಶಂಕರಹೊಂಡದಲ್ಲಿ ಹುಟ್ಟುತ್ತದೆ.ಈ ನದಿಯ ನೀರು ಪಶ್ಚಿಮ ಘಟ್ಟಗಳ ಶ್ರೇಣಿಯ ಮೂಲಕ ಅಡೆತಡೆಯಿಲ್ಲದೆ ಪ್ರಶಾಂತವಾಗಿ ಕಿಕ್ಕಿರಿದಡವಿಗಳಂಚಿನ ನಡುವೆ ಸದಾ ಹರಿಯುತ್ತದೆ.

ಈ ನದಿಯು ಪಶ್ಚಿಮ ಘಟ್ಟವನ್ನು ಭೇದಿಸುತ್ತಾ ಮಲೆನಾಡಿನ ಪ್ರದೇಶವೆಲ್ಲ ಹಸಿರುಮಯಗೊಳಿಸುತ್ತಾ ಸುಗಮವಾಗಿ ಸ್ವಚಂದದಿ ಹರಿಯುತ ಸಾಗುತ್ತದೆ.ತನ್ಮೂಲಕವಾಗಿ ಹಲವಾರು ಜಲಪಾತಗಳನು ಸೃಷ್ಟಿಸಿದೆ. ಅಂತಹದರಲ್ಲಿ ಉತ್ತರಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತವು ಒಂದು.ಪ್ರತಿ ವರ್ಷವು ನೂರಾರು ಪ್ರವಾಸಿಗರು ಇಲ್ಲಿ ಭೇಟಿ ನೀಡಿ ಪ್ರಕೃತಿ ಸೊಬಗನ್ನು ಸವಿದು ಪ್ರಕೃತಿಯ ಚೆಲುವಲಿ ಮಿಂದೇಳುತ್ತಾರೆ.ಅಲ್ಲದೆ ಇದು ಬಹುಪಯೋಗಿ ಉದ್ದೇಶಗಳನ್ನು ಹೊಂದಿದ್ದು ಪರಿಸರಕ್ಕೆ ಪೂರಕವಾಗಿದೆ. ಈ ನದಿಯು ತನ್ನದೆಯಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಕರುನಾಡಲ್ಲದೆ ಭಾರತದಾದ್ಯಂತ ಹೆಸರುವಾಸಿಯಾಗಿದೆ.

ಫೋಟೋ ಕೃಪೆ : google

ಉಂಚಳ್ಳಿ ಜಲಪಾತವು ಅಘನಾಶಿನಿ ನದಿಯಿಂದ ಹುಟ್ಟಿದ್ದು .ಉತ್ತರಕನ್ನಡ ಜಿಲ್ಲೆಯ ಅದ್ಭುತ ಜಲಪಾತಗಳಲ್ಲಿ ಒಂದು.ಇದನ್ನು ಲ್ಯೂಶಿಂಗ್ಟನ್ ಜಲಪಾತ ಎಂತಲೂ ಕರೆಯುವರು.ಶಿರಸಿಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಈ ಜಲಪಾತವು ಸಿದ್ದಾಪುರ ತಾಲೂಕಿನ ಸುಪ್ರಸಿದ್ಧ ಜಲಪಾತವಾಗಿದೆ.ಈ ಜಲಪಾತ 1845ರಲ್ಲಿ ಮೊದಲು ಗುರುತಿಸಿದ್ದು ಬ್ರಿಟಿಷ್ ಅಧಿಕಾರಿ ಜೆ. ಡಿ. ಲ್ಯೂಶಿಂಗ್ಟನ್ ಹಾಗಾಗಿ ಈ ಜಲಪಾತಕ್ಕೆ ಲೂಶಿಂಗ್ಟನ್ ಜಲಪಾತ ಎಂದು ಹೆಸರು ಬಂದಿದೆ.116 ಮೀ ಎತ್ತರದಿಂದ ನೀರು ಧುಮುಕುತ್ತದೆ.ಈ ಜಲಪಾತ ಪ್ರವಾಸಿಗರಿಗೆ,ಚಾರಣಪ್ರಿಯರಿಗೆ,ಪ್ರಕೃತಿ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ.ಇಲ್ಲಿನ ಪ್ರಾಕೃತಿಕ ನಯನ ಮನೋಹರತೆ ಕಣ್ಮನ ಸೆಳೆಯುತ್ತದೆ.ಹಾಗಾಗಿ ಸಾಕಷ್ಟು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ.

ಈ ನದಿಯು ನೀರಾವರಿಗೆ ಅಷ್ಟು ಸೌಕರ್ಯ ಒದಗಿಸದಿದ್ದರೂ,ಅಲ್ಲಲ್ಲಿ ಹಾಯ್ದು ಹೋಗುವ ಈ ನದಿ ಕೆಲ ಭೂಮಿಗಳಿಗೆ ನೀರುಣಿಸುತ್ತದೆ. ಈ ನದಿಯು ಕುಡಿಯಲಿಕ್ಕೆ ಯೋಗ್ಯವಾಗಿದ್ದು ಬೆಂಗಳೂರಿಗೆ ಈ ನದಿಯಿಂದಲೇ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.ಒಟ್ಟಿನಲ್ಲಿ ಈ ನದಿ ಹಸಿರನು ತಣಿಸುವುದಲ್ಲದೆ.ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯ ಕಾಪಾಡುತ ಶಿರಸಿಯ ಜೀವನಾಡಿಯಾಗಿದೆ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading