ಕನ್ನಡಕ್ಕೆ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಮೊದಲ ಜ್ಞಾನ ಪೀಠ ಪ್ರಶಸ್ತಿ , ಮೊದಲ ಕರ್ನಾಟಕ ರತ್ನ ಪ್ರಶಸ್ತಿ ತಂದವರು ಕುವೆಂಪು ಅವರು, ಅವರ ಶ್ರೀ ರಾಮಾಯಣ ದರ್ಶನಂ ಕೃತಿಯ ಕುರಿತು ಪ್ರಭಾವತಿ ಎಸ್ ವಿ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಶ್ರೀ ರಾಮಾಯಣ ದರ್ಶನಂ
ಲೇಖಕರು : ಕುವೆಂಪು
ಪ್ರಕಾಶನ : ಕನ್ನಡ ಅಧ್ಯಯನ ಸಂಸ್ಥೆ – ೧೯೭೮ .
ಬೆಲೆ : ೬ ರೂ
ಪುಟ : ೮೮೫
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾಗಿ ಬೆಳೆದುದು ಒಂದು ರೋಚಕ ಇತಿಹಾಸ . ವರಕವಿ ಬೇಂದ್ರೆಯವರಿಂದ ಜಗದ ಕವಿ ಯುಗದ ಕವಿ ಎಂದು ಕರೆಸಿಕೊಂಡವರು ಕುವೆಂಪು . ಕನ್ನಡಕ್ಕೆ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಮೊದಲ ಜ್ಞಾನ ಪೀಠ ಪ್ರಶಸ್ತಿ , ಮೊದಲ ಕರ್ನಾಟಕ ರತ್ನ ಪ್ರಶಸ್ತಿ ತಂದಿತ್ತವರು ಅವರು .
ಮೊದಲು ಅಂದರೆ ಕನ್ನಡ ಆನರ್ಸ ಓದುವಾಗಲೇ ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆದು ಕಸಿನ್ಸ ಎಂಬ ಐರಿಶ್ ಕವಿಯೂ ತಮ್ಮ ಉಪಾಧ್ಯಾಯ ರೂ ಆದ ಅವರಿಗೆ ತೋರಿಸಿದಾಗ . ನಿಮ್ಮ ಭಾಷೆಯಲ್ಲಿ ಬರೆಯಿರಿ ಎಂಬ ಅವರ ಮಾತಿನಿಂದ ಸ್ಫೂರ್ತಿ ಗೊಂಡು . ಅನೇಕಾನೇಕ ಕವಿತೆಗಳು. ಕತೆಗಳು, ನಾಟಕಗಳು, ಎರಡು ಕಾದಂಬರಿಗಳು, ಒಂದು ಜೀವನ ಚರಿತ್ರೆ, ಪ್ರಬಂಧಗಳು, ವಿಮರ್ಶಾ ಲೇಖನಗಳು, ಖಂಡಕಾವ್ಯ ಕೊನೆಗೆ ರಾಮಾಯಣ ದರ್ಶನಂ ಮಹಾಕಾವ್ಯ ಬರೆದು ೨೦ ನೇ ಶತಮಾನದ ಎಲ್ಲಾ ಲೇಖಕರ ಮೇಲೂ ಅಗಾಧ ಪ್ರಭಾವ ಬೀರಿದವರು, ಅವರ ರಾಮಾಯಣ ದರ್ಶನ ಕುರಿತು ಬಂದಷ್ಟು ವಿಮರ್ಶಾ ಕೃತಿಗಳು ಕನ್ನಡದ ಬೇರಾವುದೇ ಕೃತಿಗೂ ಬಂದಿಲ್ಲವಂತೆ.

ಹಿಂದೆ ವಾಲ್ಮೀಕಿ ಬರೆದ ಕತೆಯಾದರೂ ಮರುಹುಟ್ಟು ಪಡೆದಂತೆ ಬೇರೆ ಮೈಯಾಂತಂತೆ ಅದರಲ್ಲಿ ಯುಗಧರ್ಮವನ್ನು ಮೇಳೈಸಿ ರಾಮನು ರಾವಣನನ್ನು ಕೊಂದನು ಎಂಬ ರೂಢಿ ಗತವಾದ ಮಾತನ್ನೇ ಅಳಿಸಿ ಹಾಕಿ ರಾವಣತ್ವವು ರಾಮತ್ವದೊಡನೆ ಒಂದಾಯಿತು ಎಂದು ಬರೆದರು . ಕನಕಲಂಕೆ ಎಂದು ಕರೆದರು . ರಾವಣನನ್ನು ದುರಂತ ನಾಯಕನಾಗಿಸಿದರು . ಶೂರ್ಪನಖಿಯನ್ನು ಚಂದ್ರ ನಖಿಯಾಗಿಸಿದರು ( ನಾಗಚಂದ್ರನ ಪ್ರಭಾವ ಇರಬಹುದು. ಇರಲಿ ) ಸೀತೆಯ ಜೊತೆಗೆ ರಾಮನಿಗೂ ಅಗ್ನಿಪ್ರ ವೇಶ ಮಾಡಿಸಿದರು. ಅಭಿಷೇಕ ವಿರಾಟ್ ದರ್ಶನಂ ಎಂಬ ಕೊನೆಯ ಅಧ್ಯಾಯದಲ್ಲಿ ಸಿಂಹಾಸನದ ಪ್ರಸಕ್ತಿಯೇ ಇಲ್ಲದಂತೆ ಮಹಾಮನಸ್ಸೊಂದು ಕವಿಯ ಜೊತೆ ಮಾತನಾಡುತ್ತಾ * ನೀನುಂ ನಾನೆಯೆ ಕುವೆಂಪು* ಎಂದು ಹೇಳುವಂತೆ ಮಾಡಿದರು ಇದರ ಸರಳ ರಗಳೆ ಯ ಛಂದಸ್ಸನ್ನು ಮಹಾ ಛಂದಸ್ಸು ಎಂದು ಕರೆದು ಹೊಸ ಮಾರ್ಗ ರೂಪಿಸಿದರು.

ರಾಮಸೇತು ಈಗ ತುಂಬಾ ವಿವಾದದ ವಸ್ತುವಾಗಿದೆ. ವಾಲ್ಮೀಕಿ ಪ್ರಕಾರ ರಾಮನು ಕಪಿಗಳ ಸಹಾಯದಿಂದ ಸೇತುವೆಯನ್ನು ನಿರ್ಮಿಸಿದ. ನಳ ಎಂಬ ವಾನರ ಬಂಡೆಗಳನ್ನು ಎತ್ತಿ ನೀರಿನಲ್ಲಿ ಎಸೆದರೆ ಅವು ತೇಲುತ್ತಿದ್ದುವಂತೆ . ಅಳಿಲೊಂದು ರಾಮನಿಗೆ ಸಹಾಯಮಾಡಿತಂತೆ. ರಾಮ ಅದರ ಬೆನ್ನ ಮೇಲೆ ಮೂರು ಗೆರೆ ಎಳೆದನಂತೆ . ಇದಕ್ಕೆ ಅಳಿಲಸೇವೆ ಎಂಬ ಹೆಸರು ಈಗಲೂ ಚಾಲ್ತಿಯಲ್ಲಿದೆ . ಮತ್ತು ಅಳಿಲಿನ ಬೆನ್ನಮೇಲೆ ಮೂರು ಗರೆಗಳಿವೆ. ಇವು ರಾಮ ಲಕ್ಷ್ಮಣ ಸೀತೆಯರಿಗೆ ಸಂಕೇತ. ಆದರೆ ವಾಸ್ತವ ಏನೆಂದರೆ ಸಮುದ್ರ ಮಟ್ಟಕ್ಕಿಂತ ಭೂ ಭಾಗವು ಕೆಳಗೆ ಹೋದಾಗ ಮುಳುಗುತ್ತದೆ . ಮೇಲೆ ಬಂದಾಗ ಪ್ರಕಟವಾಗುತ್ತದೆ. ಹಾಗೆಯೇ ಭಾರತ ಮತ್ತು ಶ್ರೀ ಲಂಕಾ ನಡುವೆ ಎರಡೂ ಭೂಖಂಡಗಳನ್ನು ಜೋಡಿಸುವ ಮಣ್ಣು ಅಥವಾ ಸಹಜ ಸೇತುವೆ ಇದೆ . ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತವೆ. ಪರಮಾತ್ಮ ಎಂಬ ಚಲನಚಿತ್ರದಲ್ಲೂ ಇದನ್ನು ತೋರಿಸಿದ್ದರು. ಅಂದರೆ ಸೇತುವೆ ಇತ್ತು ಎಂಬುದು ನಿರ್ವಿವಾದ . ಹಾಗಾದರೆ ರಾಮ ಮಾಡಿದ್ದೇನು . ಕುವೆಂಪು ಹೇಳುತ್ತಾರೆ – ರಾಮ ಸೀತೆ ಯರ ವಿರಹ ವೇದನೆಯು ಈಗಾಗಲೇ ಒಂದು ಮಾನಸಿಕ ಸೇತುವೆಯನ್ನು ಕಟ್ಟಿ ಬಿಟ್ಟಿದೆ . ಅದರ ಮೇಲೆ ವಾನರರು ಗಿಡ ಗುಚ್ಛಿ ಬೊಂಬು ಗಿಂಬು ರೆಂಬೆ ಕೊಂಬೆ ಅದೂ ಇದೂ ತಂದು ಕಟ್ಟಿದ ಸೇತುವೆಯ ಮೇಲೆ ರಾಮ ಲಕ್ಷ್ಮಣ ಮತ್ತು ವಾನರ ಸೈನ್ಯ ನಡೆಯಿತು ಎಂದು
ಪಾಶ್ಚಾತ್ಯ ವಿಮರ್ಶಕರು ೨೦ ನೇ ಶತಮಾನದಲ್ಲಿ ಇನ್ನು ಮಹಾಕಾವ್ಯ ಹುಟ್ಟುವುದಿಲ್ಲ ( ಅವರ ಅಭಿಪ್ರಾಯ ದಲ್ಲಿ ಮಿಲ್ಟನ್ ನ ಎರಡು ಮಹಾಕಾವ್ಯಗಳೇ ಕೊನೆಯವು ) ಎಂದು ಫರ್ಮಾನು ಹೊರಡಿಸಿದ ಮೇಲೆ ರಾಮಾಯಣ ದರ್ಶನಂ ಮಹಾಕಾವ್ಯ ಪ್ರಕಟವಾಗಿ ಅವರ ಮಾತನ್ನು ಸುಳ್ಳು ಮಾಡಿತು . ಅನಂತರದ ಹತ್ತಿಪ್ಪತ್ತು ವರ್ಷಗಳಲ್ಲಿ ೫೩ ಮಹಾಕಾವ್ಯಗಳು ಕನ್ನಡ ವೊಂದರಲ್ಲಿಯೇ ರಚನೆಯಾಗಿವೆ . ಇನ್ನು ಬೇರೆ ಭಾಷೆ ಗಳ ಮಾತು ಏನೋ . ಲತಾ ರಾಜಶೇಖರ ಅವರ. * ಬಸವ ಮಹಾದರ್ಶನ *ದ ಮುನ್ನುಡಿಯಲ್ಲಿ ಸಾ ಶಿ ಮರುಳಯ್ಯನವರು ಈ ಮಾಹಿತಿ ಕೊಟ್ಟಿದ್ದಾರೆ . ಅನಂತರದಲ್ಲಿ ಇನ್ನೆಷ್ಟು ರಚನೆಯಾಗಿವೆಯೋ . ಆದರೆ ಯಾವುದೂ ಅದರ ಸಮಕ್ಕೆ ಬರಲಿಲ್ಲ . ಅದಕ್ಕೆ ಅದೇ ಸಾಟಿ.
- ಪ್ರಭಾವತಿ ಎಸ್ ವಿ
