‘ಬರದ ನೆರಳಿಗೆ ಮಳೆ ರಾಯ…ಭೂಮಿ ಬಾನನು ಒಂದಾಗಿಸುತ್ತಿಲ್ಲ’..ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನೋಡ ನೋಡುತ್ತಲೇ
ಮನದ ಅಚ್ಚರಿ ಕಣ್ಣು ಹಾಯಿಸುತ್ತ,, ಬಿಸಿಲು
ಧಗೆಯ ಬಿರುಕು ನೆಲದೊಳು
ಉರುಳುತ್ತಿದೆ ನೀರಿಲ್ಲದ ಮಡಕೆ…
ಅಗೋ ಕುಳಿತಿದೆ ಎರಡು
ಎಲುಬು ಕವಿದ ಬಡ ಎಮ್ಮೆಗಳು,
ಬಿಸಿಲು ನೆರಳೆನ್ನದೆ ಖಾಲಿ
ಬಾವಿಯಲಿ ನೀರಿಗಾಗಿ
ಹಂಬಲಿಸಿ ವಟಗುಟ್ಟುತ್ತಿವೆ…
ಎತ್ತ ತಿರುಗಿದರೂ ಜಲ
ಎಬ್ಬಿಸುವ ಪರಿಗೆ
ಕಲ್ಲುಗಳೇ ಮೊಳಗುತ್ತಿವೆ
ಬಾರದ ಗಂಗೆ ಮನ ಸೋತಿದ್ದಾಳೆ…..
ಭಿಕ್ಷಾಟನೆಯ ಜೋಳಕೆ
ನ್ಯಾಯ ಬೆಲೆಯ ಬಾಗಿಲೊಳು
ರಾಜಕೀಯದ ಟೊಪ್ಪಿಗೆ
ಕರುಣೆ ಇಲ್ಲದೇ ಹಿಂಸಿಸುತಿದೆ….
ಆಶ್ವಾಸನೆಯ ಪೆಂಡಾಲುಗಳಿಗೆ
ರಿಕ್ಷಾದೊಳು ಸಾಗಿಸುತ್ತಿವೆಯಲ್ಲ
ತಂಪು ಪಾನೀಯಗಳ…
ಪರಿಹಾರದ ಬೇಗೆಗೆ
ಕೈ ಸೋತು ಕೂತಿದೆ ನೊಂದ ಮನ,
ಲಂಕೆಯ ಬೆಂಕಿಯೊಳು
ಕುತಂತ್ರದ ಫಲಕ
ಎದೆಯುಬ್ಬಿ ಚೀರುತ್ತಿದೆ
ಇದಕೆ ಷಡ್ಯಂತ್ರದ ಬೇಡಿ…
ಕಾವೇರಿದ ಕಾವಲಿಯು
ಕಾಲೆದ್ದು ತೂರುತಿದೆ
ಕಲ್ಲು ಚಪ್ಪಡಿಗಳ,,
ಸಿಡಿಲೆದ್ದ ಬುಗಿಲ ಕಬ್ಬಿಣ
ಗುಂಡ ಹಾರಿಸುತಿದೆ….
ಬಲಿಯಾದ ಬಡ
ಅಮಾಯಕ ಗೋಡೆಗಳೆಷ್ಟೋ?..
ಮತೀಯ ಸಂಕಟಕೆ
ರಾಜಕೀಯದ ಕುರ್ಚಿ
ತಳ ಬುಡ ಇಲ್ಲದೇ ಅಲುಗಾಡುತ್ತಿದೆ…
ಬರದ ನೆರಳಿಗೆ ಮಳೆ ರಾಯ
ಭೂಮಿ ಬಾನನು ಒಂದಾಗಿಸುತ್ತಿಲ್ಲ…..
ಇದು ಬರೀ ಬುಡು ಬುಡುಕೆಯ
ಡಮರು ಸದ್ದಲ್ಲ,,,
ಸ್ವತಂತ್ರ ಭಾರತದ ನೈಜ ಗೋಜಲು…..
75 ರ ಪ್ರಜಾ ರಾಜ್ಯದಿ
ಭಾವುಟ ಮುಗಿಲೇರಿ ಸಂತಸ
ಕಂಡರೂ,
ಭರತ ಮಾತೆ ಏಕೋ ಸಪ್ಪೆ ಗೈದಿದ್ದಾಳೆ.
- ಡಾ. ಕೃಷ್ಣವೇಣಿ. ಆರ್. ಗೌಡ
