ತೀರ್ಥಕ್ಷೇತ್ರಗಳಿವೆ ನದೀತೀರದಲಿ ಶ್ರದ್ಧೆಯ ಪಾವನಧಾಮ, ಪಾಪದ ಲೇಪವ ಕಳೆದುದ್ಧರಿಸುವ ಭಕ್ತಿಯ ಅಭಯಧಾಮ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು, ತಪ್ಪದೆ ಮುಂದೆ ಓದಿ…
ಹನಿಯಿಲ್ಲದೆ ತಿರೆಗೆಲ್ಲಿದೆ
ಬೆಳೆ ಬೆಳೆಯುವ ಕಸುವು
ಹನಿಹನಿಗೂಡಿದಾಗಲೇ
ಹಳ್ಳವಾಗುವ ಸ್ಥಿತಿಯು
ದಟ್ಟ ಕಾಡು, ಬೆಟ್ಟನೆತ್ತಿಯಲಿ
ಒಸರುವುದು ನೀರ ಸೆಲೆ
ಹೊಮ್ಮಿ ವಯ್ಯಾರದಲಿ
ಅವಳು ಬೆಡಗಿನಲಿ ಬಯಲ ಸೇರುವುದೇ ಒಂದು ಬೆರಗಿನ ಕಲೆ
ನದೀ ಪಾತ್ರಗಳು ನೆಲೆಯಾದುವು ನಾಗರಿಕ ವಿಕಾಸಕ್ಕೆ
ಸಂಸ್ಕೃತಿಯ ಉದಯವಾಯಿತು ಅಲ್ಲಿ ಜೀವಸೆಲೆ ಇರುವುದಕ್ಕೆ
ಜನಜೀವನದ ವಿಕಾಸಪಥದ ಕುರುಹು ತೋರಿವೆ ನದಿಗಳ ಜಾಡು
ಹಸಿರಿನ ನೆಲೆಯಾಗಿವೆ ಧಾನ್ಯಗಳ ಬೆಳೆಯುವ ಗೂಡು
ನದಿಯೊಂದಿರೆ ಸೆಳೆಯುವುದು ಜನರ ಹಲಕಾರಣಗಳಿಗೆ
ವಿಹಾರ,ಸ್ವಚ್ಛತೆ,ಬೆಳುವಲದೆಡೆಗೆ
ಒಡ್ಡು ಹಾಕಲು ವೃದ್ಧಿಸುವುದು
ಅದರ ಉಪಯೋಗ ಹಲಬಗೆ
ತೀರ್ಥಕ್ಷೇತ್ರಗಳಿವೆ ನದೀತೀರದಲಿ ಶ್ರದ್ಧೆಯ ಪಾವನಧಾಮ
ಪಾಪದ ಲೇಪವ ಕಳೆದುದ್ಧರಿಸುವ ಭಕ್ತಿಯ ಅಭಯಧಾಮ
ನದಿಗಳ ಒಡನಾಟದಿ ಬದುಕಾಗುವುದು ಸುಭಿಕ್ಷ
ಕಾಂತವಾಗುವುದು ನಂಬಿಕೆಯ ನೆಲೆ
ಬದುಕನು ಹರಸುತ ಪ್ರತಿನಿತ್ಯ
ನದಿಯೊಡಲ ಬೆಡಗಿಗೆ ಸಾಟಿಯೇನಿದೆ ಜಗದಲ್ಲಿ
ಗ್ರೀಷ್ಮ ಹೀರಿದರೂ ವರ್ಷೆಯೀವಳು ಜಲವ
ಕೊರತೆಯಾಗದ ಪರಿಯಲ್ಲಿ
ಕಾಡಿಗೆ ಜೀವವ ಹರಿಸುವ ಜೀವವಾಹಿನಿಯಿವಳು
ನಾಡಿಗೆ ಪೋಷಕಿ ಸಕಲಭ್ಯುದಯಕೆ
ಸಾವಿರದಂತೆ ನಿರಂತರವಾಗಲಿ
ಇವಳ ಜೀವನ ಸಂಸ್ಕೃತಿ…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
