ಮಣ್ಣಿನ ಸ್ಲೇಟಿನ ಮೇಲೆ ಅಕ್ಷರಗಳನ್ನು ಬರೆಯುತ್ತಲೋ, ಹಳಗನ್ನಡ ಕವಿತೆಗಳನ್ನು ಕಂಠಪಾಠ ಮಾಡುತ್ತಲೋ…ಅಕ್ಷರವನ್ನು ಶತಮಾನಗಳಿಂದಲೂ ಎಟುಕಿಸಿಕೊಳ್ಳಲಾರದ ನಮ್ಮ ವಂಶದಲ್ಲಿ ನಾನೇ ಮೊದಲ ಅಕ್ಷರಸ್ಥ!. ಮುಂದೆ ಓದಿ ಡಾ.ವಡ್ಡಗೆರೆ ನಾಗರಾಜಯ್ಯ ಅವರ ನೆನಪಿನ ಸುರಳಿ…
ಅಕ್ಷರದ ಬೆಳಕಿಗೆ ನಾನು ಕಣ್ಣುಬಿಟ್ಟ ಬಾಲ್ಯದ ದಿನಗಳು ಈ ಚಿತ್ರದಲ್ಲಿರುವ #ಹೊಂಗೆಬೀಜ ,ಸೀಗೆಕಾಯಿಯ ನೋಟದಿಂದ ಮತ್ತೆ ನೆನಪಾಗುತ್ತಿವೆ. ನಮ್ಮದು ಮಣ್ಣೆಂಟೆ ಗೋಡೆಯ ಜಂತೆ ಮನೆ. ರಾತ್ರಿ ದೀಪಾಲೆ ಕಂಬದ ಮೇಲಿರಿಸಿದ ಸಗಣಿ ಹೂಡು, ಅದರ ಮೇಲೆ ಉರಿಯುತ್ತಿದ್ದ ಹೊಂಗೆಣ್ಣೆಯ ಹಣತೆ ಬೆಳಕು. ಬಂಗಾರದ ಬಗ್ಗಡ ಬಳಿದು ಸಾರಣೆ ಮಾಡಿದಂತೆ ನಮ್ಮ ನಡುಮನೆಯಲ್ಲಿ ಹೊಂಗೆಣ್ಣೆಯ ಹಣತೆ ಬೆಳಕು ಚೆಲ್ಲುವರಿದಿರುತ್ತಿತ್ತು. ಆ ಹಣತೆಯ ಮಂದ ಬೆಳಕಿನಲ್ಲಿ ನಾನು ಪುಸ್ತಕ ಹಿಡಿದು ಓದುತ್ತಲೋ… ಮಣ್ಣಿನ ಸ್ಲೇಟಿನ ಮೇಲೆ ಅಕ್ಷರಗಳನ್ನು ಬರೆಯುತ್ತಲೋ… ಹಳಗನ್ನಡ ಕವಿತೆಗಳನ್ನು ಕಂಠಪಾಠ ಮಾಡುತ್ತಲೋ ಕುಳಿತಿರುತ್ತಿದ್ದೆನು.

ಹೊಂಗೆಣ್ಣೆ ಎಲ್ಲಿಂದ ಬರುತ್ತದೆಂದು ತಿಳಿಯಲು ನನಗೆ ಬಹಳ ಕಾಲವೇ ಹಿಡಿಸಿತು. ಅಷ್ಟೊತ್ತಿಗೆ ನಮ್ಮೂರಿನ ಜನರಿಗೆ ಶತಮಾನಗಳ ಕಾಲ ಹೊಂಗೆಣ್ಣೆ, ಬೇವಿನೆಣ್ಣೆ, ಹಿಪ್ಪೆ ಎಣ್ಣೆ, ಅರಳೆಣ್ಣೆ, ಎಳ್ಳೆಣ್ಣೆ, ಹುಚ್ಚೆಳ್ಳೆಣ್ಣೆ ಮುಂತಾದ ಎಣ್ಣೆ ಒದಗಿಸಿದ್ದ ಗಾಣಗಳು ಸೀಮೆಣ್ಣೆಯ ಬುಡ್ಡಿದೀಪಗಳ ಎದುರು ಮಂಡಿಯೂರಿ ಶರಣಾಗಿ ಕೇವಲ ಕಲ್ಲುಗುಂಬಗಳ ಅವಶೇಷಗಳಾಗಿ ನಿಂತಿದ್ದವು.
ಹೀಗೆಯೇ ಒಂದು ದಿನ ನಾನು, ನಮ್ಮ ಮನೆಯ ಹೊಂಗೆಣ್ಣೆ ಹಣತೆಯೊಳಗಿದ್ದ ತಾಮ್ರದ ತೂತುಕಾಸು ತೆಗೆದುಕೊಂಡು ಹೋಗಿ ಹುಲಿಯಪ್ಪಜ್ಜನ ಪೆಟ್ಟಿಗೆ ಅಂಗಡಿಯಲ್ಲಿ ಉಪ್ಪುಕಡಲೆಯನ್ನೋ ಬಟಾಣಿಯನ್ನೋ ಕೇಳಿ, ತೂತುಕಾಸು ಚಲಾವಣೆಯಾಗದೆಂದು ಆ ಅಜ್ಜನಿಂದ ಬೈಸಿಕೊಂಡಿದ್ದೆ. ನಮ್ಮ ಮನೆಯಲ್ಲಿ ನಾನು ಆಗಿನ ದಿನಗಳಲ್ಲಿ ದುಡ್ಡು ನೋಡಿರುವುದೇ ಅಪರೂಪ.
ನಮ್ಮದೇ ಎಣ್ಣೆಕಾಳು ಮತ್ತು ಎಣ್ಣೆಬೀಜಗಳನ್ನು ಗಾಣ ಆಡಿಸಿಕೊಂಡು ದುಡ್ಡಿನ ಖರ್ಚಿಲ್ಲದೆ ದೀಪಕ್ಕೆ ಎಣ್ಣೆ ಪಡೆಯುತ್ತಿದ್ದ ನಾವು, ಸೀಮೆಣ್ಣೆ ಕೊಳ್ಳಲು ದುಡ್ಡು ತೆರುವುದು ಅನಿವಾರ್ಯವಾಗಿತ್ತು. ದುಡ್ಡಿನ ವಹಿವಾಟು ನಿರೀಕ್ಷಿಸುವ ಬುಡ್ಡಿದೀಪ ಮತ್ತು ಸೀಮೆಣ್ಣೆ ನಮ್ಮ ಮನೆಗೆ ಬಂದ ಪರಿಣಾಮ ನಮ್ಮ ಮನೆಯ ಹೊಂಗೆಣ್ಣೆ ಹಣತೆ ಕೇವಲ ದೇವರ ಪಟದ ಮುಂದಿನ ಜಾಗಕ್ಕೆ ಸೀಮಿತವಾಯಿತು. ಹೊಗೆರಹಿತವಾದ ಹೊಂಗೆಣ್ಣೆಯ ಗಮಲನ್ನು ಹೊಗೆತುಂಬಿದ ಸೀಮೆಣ್ಣೆ ನಾತ ಓಡಿಸಿಬಿಟ್ಟಿತು. ಮೂಗಿನ ಒಳ್ಳೆಗಳಿಂದ ಸೀಮೆಣ್ಣೆಯ ಕಿಟ್ಟ ಶ್ವಾಸಕೋಶ ಸೇರಿತು. ನನ್ನ ಕಣ್ಣಿಗೆ ತಂಪಾದ ಶಾಖವನ್ನು ಕೊಡುತ್ತಿದ್ದ ಹೊಂಗೆಣ್ಣೆ ಹಣತೆಯ ಬೆಳಕು ಮಾಯವಾಗಿ, ಹೊಗೆ ಉಗುಳುವ ಸೀಮೆಣ್ಣೆ ನನ್ನ ಕಣ್ಣುಗಳನ್ನು ಉರಿಬೇಗೆಗೆ ದೂಡಿತು.
ಕುಂಬಾರರು ಎತ್ತಿನ ಗಾಡಿಯ ಮೇಲೆ ಮಡಕೆಗಳನ್ನು ಹೇರಿಕೊಂಡು ನಮ್ಮೂರಿಗೆ ಬಂದಾಗ ನನ್ನ ಅಜ್ಜಿ ಸಣ್ಣಹನುಮಕ್ಕಜ್ಜಿ ಮತ್ತು ಅಮ್ಮ ಕದರಮ್ಮ ನೆಲ್ಲನ್ನೋ ರಾಗಿಯನ್ನೋ ಕೊಟ್ಟು ಮಡಕೆ ಕೊಂಡುಕೊಳ್ಳುತ್ತಿದ್ದರು. ಮೇದಾರರು ಅಥವಾ ಯಾದಗೆರೆಯ ಕೊರಚರಿಂದ ಬಿದಿರು ಮಂಕರಿ, ಈಚಲಕಡ್ಡಿಯ ಜಲ್ಲೆ, ಹೆಡಿಗೆ ಗೂಡೆ ಮುಂತಾದ ವಸ್ತುಗಳನ್ನು ಧಾನ್ಯ ಕೊಟ್ಟು ಕೊಳ್ಳುತ್ತಿದ್ದರೇ ಹೊರತು ಹಣದ ವಹಿವಾಟು ನಮ್ಮ ಮನೆಯಲ್ಲಿ ಅಷ್ಟಾಗಿ ಇರಲೇ ಇಲ್ಲ.

ಫೋಟೋ ಕೃಪೆ : google
ನಾವು ಚಿಕ್ಕವರಿದ್ದಾಗ ಯಾರಾದರೂ ವ್ಯಾಪಾರಿಗಳು ತಮ್ಮ ಬುಟ್ಟಿಗಳಲ್ಲಿ ಟ್ರಂಕುಗಳಲ್ಲಿ ಕರಿಮಣಿ, ಬಳೆಬಿಚ್ಚೋಲೆ, ಸೂಜಿ ದಬ್ಬಳ, ಕನ್ನಡಿ, ಸ್ನೋ ಪೌಡರ್, ಸೀರಣಿಗೆ, ಬಾಚಣಿಗೆ, ಉಡುದಾರ, ಕಾಡಿಗೆ, ಹಲ್ಲುಕಡ್ಡಿ, ಗುಗ್ಗೆಕಡ್ಡಿ, ಬಟ್ಟೆಪಿನ್ನ, ಹೇರ್ ಪಿನ್ನ, ಟೇಪು, ಚೌಲಿಕೂದಲು, ಚಾಂದುಬೊಟ್ಟು, ಉಗುರುಬಣ್ಣ ಮುಂತಾದ ವಸ್ತುಗಳನ್ನು ಮಾರಲು ಬಂದಾಗ, ಅವರು ದವಸಧಾನ್ಯ ತೆಗೆದುಕೊಳ್ಳಲೊಪ್ಪದೆ ದುಡ್ಡು ಕೊಟ್ಟವರಿಗೆ ಮಾತ್ರ ಸಾಮಾನು ಮಾರುತ್ತಿದ್ದರು. ಅಕ್ಕಿರಾಂಪುರದ ಶನಿವಾರದ ಸಂತೆಯ ವ್ಯಾಪಾರಿಗಳಿಂದ ಹಣ್ಣು ತರಕಾರಿ ಉಪ್ಪು ಎಲೆಅಡಕೆ, ಕಡ್ಡಿಪುಡಿ, ಹೊಗೆಸೊಪ್ಪು, ಬೀಡಿ ಬೆಂಕಿಪೊಟ್ಟಣ, ಸಕ್ಕರೆ ಬೆಲ್ಲ, ಸುಣ್ಣ, ಗರಂಮಸಾಲ, ಜೀರಿಗೆ ಮೆಣಸು ಮುಂತಾದ ಸಾಮಾನುಗಳನ್ನು ಕೊಳ್ಳಲು ದುಡ್ಡಿನ ಚಲಾವಣೆ ಅನಿವಾರ್ಯವಾಗತೊಡಗಿತು. ಹೀಗೆ ದುಡ್ಡು ಅಗತ್ಯವಾದಾಗ ನನ್ನ ಅಪ್ಪ ಹನುಮಂತಯ್ಯ ಮತ್ತು ಅಮ್ಮ ಕದರಮ್ಮ ದುಡ್ಡು ದುಡಿಯುವ ಅನೇಕ ಮಾರ್ಗೋಪಾಯಗಳನ್ನು ಶೋಧಿಸಿಕೊಂಡಿದ್ದರು. ಇಂತಹ ಕೆಲಸಗಳಲ್ಲಿ ಚಿಕ್ಕ ಮಕ್ಕಳಾಗಿದ್ದ ನಾವು ಅವರಿಗೆ ಶಕ್ತ್ಯಾನುಸಾರ ನೆರವಾಗುತ್ತಿದ್ದೆವು.
ನನ್ನ ಅಪ್ಪ ಹನುಮಂತಯ್ಯ ಮತ್ತು ಅಮ್ಮ ಕದರಮ್ಮ, ನಮ್ಮ ಕುಟುಂಬದ ಸುಗಮ ಬದುಕಿನ ನಿರ್ವಹಣೆಗಾಗಿ ರೈತಾಪಿ ಹಾಗೂ ಕೂಲಿನಾಲಿ ಕೆಲಸಗಳೊಂದಿಗೆ ಕೋಳಿ ಸಾಕುತ್ತಲೂ, ಹಗ್ಗ ಹೊಸೆಯುತ್ತಲೂ, ಕಳ್ಳೇಗಿಡದ ಉಕ್ಕೆಯಲ್ಲಿ ಅಕ್ಕಲುಕಾಯಿ ಆಯ್ದುಕೊಂಡು ತರುತ್ತಲೂ, ಈಚಲ ಚಾಪೆ ಹೆಣೆದು ಮಾರುತ್ತಲೂ,.., ಮುತ್ತುಗದೆಲೆ ಕೊಯ್ದು ಇಸ್ತ್ರದೆಲೆ ಹೆಣೆಯುತ್ತಲೂ…., ಹಂಚಿಕಡ್ಡಿ ಕೊಯ್ದು ಹೂಗುಮುಳ್ಳು ಕೊಡವಿ ಪೊರಕೆ ಕಟ್ಟುತ್ತಲೂ…, ಹೊಂಗೆಕಾಯಿ – ಸೀಗೆಕಾಯಿ – ಹುಣುಸೆಹಣ್ಣು- ಬೇವಿನ ಬೀಜ- ಹಿಪ್ಪೆ ಬೀಜ ಮುಂತಾದುವುಗಳನ್ನು ನಮ್ಮೂರ ಸುತ್ತಮುತ್ತಲ ಗುಂಡುತೋಪುಗಳಲ್ಲಿ ಹೊಲಮಾಳಗಳಲ್ಲಿ ಅಯ್ದು ತರುತ್ತಲೂ, ಈ ಸಕಲೆಂಟು ವಸ್ತುಗಳನ್ನು ನೇರ್ಪುಮಾಡಿ…. ನಮ್ಮೂರ ಹತ್ತಿರದ ಅಕ್ಕಿರಾಂಪುರದ ಸಂತೆಯಲ್ಲಿ ಮಾರಾಟ ಮಾಡಿ…. ಇಂತಹ ವಹಿವಾಟಿನಿಂದಲೇ ಹಣ ಸಂಪಾದಿಸಿಕೊಳ್ಳುತ್ತಿದ್ದರು. ಅಪ್ಪ ಅಮ್ಮನ ಜೊತೆಗಿದ್ದು ದುಡ್ಡು ದುಡಿಯುವ ಮೂಲಕ ಸಂಸಾರದ ಬಂಡಿ ಸಾಗಲು ಚಿಕ್ಕ ಮಕ್ಕಳಾದ ನಾವು ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಹೆಗಲುಕೊಡುತ್ತಿದ್ದೆವು.
ನಮ್ಮೂರಿಗೆ ಬರುತ್ತಿದ್ದ ಸಾಬರ ವ್ಯಾಪಾರಿಗಳು, “ಹಳ್ಳು (ಔಡಲಬೀಜ) – ಹುಚ್ಚೆಳ್ಳು – ಹೊಂಗೆಬೀಜ – ಸೀಗೆಕಾಯಿ- ಹುಣಸೆಹಣ್ಣು..” ಎಂದು ಬೀದಿ ಮೇಲೆ ಕೂಗಿಕೊಂಡು ಬಂದು ಇವೆಲ್ಲವನ್ನೂ ನಮ್ಮಿಂದ ಕೊಂಡುಕೊಂಡು ನಮಗೆ ದುಡ್ಡು ಕೊಡುತ್ತಿದ್ದರು, ಹೀಗೆ ದುಡಿದ ದುಡ್ಡಿನಿಂದ ನಮಗೆ ಬೇಕಾದ ಬಟ್ಟೆಬರೆ – ಪಾತ್ರೆಪಗಡೆ- ಹಣ್ಣು ತರಕಾರಿ – ಹೆಂಡ ಗುಡ್ಡೆಬಾಡು- ಹಬ್ಬ ಹುಣ್ಣಿಮೆ- ಪರಿಶೆಪಾಡ್ಯ – ತಿಥಿಮತಿ, ಶಾಲೆಯ ಫೀಸು- ಪುಸ್ತಕಗಳು, ಖಾಯಿಲೆ ಕಸಾಲೆ- ಮದುವೆಮುಂಜಿ, ನೆಂಟರಿಷ್ಟರ ಬಾಬತ್ತು ಮುಂತಾದವುಗಳನ್ನು ನಿರ್ವಹಿಸಿಕೊಳ್ಳುತ್ತಿದ್ದೆವು.
ನಿಮ್ಮ, ಬದುಕಿನ ನೆನಪಿನ ಪುಟಗಳಲ್ಲಿ ಇಂತಹ ಅನುಭವಗಳಿದ್ದರೆ ದಯಮಾಡಿ ದಾಖಲಿಸಿರಿ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)
