‘ನಗೆ ದೀವಿಗೆ’ ಹಾಸ್ಯ ಲೇಖನಗಳು

ಜನಪ್ರಿಯ ಕಥೆಗಾರ್ತಿ, ಬರೆಹಗಾರ್ತಿ ಎಲ್ ಗಿರಿಜಾ ರಾಜ್ ಅವರ ಹದಿಮೂರನೆಯ ಪುಸ್ತಕವಿದ್ದು, ೨೦ ಹಾಸ್ಯ ಬರಹಗಳ ಸಂಕಲನವಿದು. ಲೇಖಕರಾದ ಬೆಂಶ್ರೀ ರವೀಂದ್ರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಲೇಖಕರು :  ಎಲ್ ಗಿರಿಜಾ ರಾಜ್
ಪ್ರಕಾಶಕರು: ಚಾರುಮತಿ ಪ್ರಕಾಶನ
ಖರೀದಿಗಾಗಿ : ೯೪೪೮೨೩೫೫೫೩ , ಮೊ : ೯೯೬೪೮೬೯೨೩೨
ಪುಟಗಳು : ೮೪.
ಬೆಲೆ : ₹೧೦೦/-

ಕನ್ನಡವನ್ನು ಪ್ರೀತಿಸುವ, ಹಲವಾರು ವರ್ಷಗಳ ಕಾಲ ಕನ್ನಡ ಅಧ್ಯಯನ ಮತ್ತು ಪ್ರಾಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಸಾಹಿತಿ ಗಿರಿಜಾ ಅವರಿಗೆ ಬರವಣಿಗೆ ಸರಳವಾದ ಪ್ರಕಿಯೆ ಮತ್ತು ಸಹಜ ಬಳುವಳಿ ಎನ್ನಬಹುದು. ಗಂಭೀರವಾದ ವಿಷಯಾಧಾರಿತ ಲೇಖನಗಳೊಂದಿಗೆ ಕಥಾರಚನೆಯೂ ಇವರಿಗೆ ಅಚ್ಚುಮೆಚ್ಚು. ಕವನ ಸಂಕಲನಗಳು, ಪ್ರಬಂಧಗಳು, ಹೀಗೆ ಬರಹದ ಹರವು ವಿಸ್ತಾರವಾದುದು. ನಗೆದೀವಿಗೆ, ಇವರ ಎರಡನೆಯ ಹಾಸ್ಯಸಂಕಲನ. “ನಗುವು ಸಹಜದ ಧರ್ಮ” ಎಂಬ ಡಿವಿಜಿ ಅವರ ಕಗ್ಗದ ನುಡಿಯಂತೆ, ಗಿರಿಜಾ ಅವರು ಚಿಮ್ಮಿಸುವ ಹಾಸ್ಯದ ಒರತೆಯೂ ಸಹಜ ಸಾಮಾನ್ಯ ಘಟನೆಗಳಿಂದ ಸ್ಪುರಿತವಾದುದು. ಹಾಸ್ಯ, ನಗೆ ನಮ್ಮ ದೈನಂದಿನ ಬದುಕಿನಲ್ಲಿ ಅವಿಚ್ಛಿನ್ನವಾಗಿ ಹರಿಯುವ ಸಹಜ ಝರಿ. ನಮ್ಮ ಅನ್ಯಮನಸ್ಕತೆಯಲ್ಲಿ, ದೈನಂದಿನ ಸಮಸ್ಯೆಗಳಲ್ಲಿ, ಇನ್ನಿತರ ಆದ್ಯತೆಯ ಕಾರ್ಯ ತನ್ಮಯತೆಗಳಲ್ಲಿ, ಆ ಹಾಸ್ಯರಸವನ್ನು ಗುರುತಿಸುವ, ಸವಿಯುವ ನಮ್ಮ ಶಕ್ತಿಗೆ ಒಂದಿಷ್ಟು ಮಂಕು ಹಿಡಿದಿರುತ್ತದೇನೋ. ಆದರೆ ಲೇಖಕಿಯವರು ಸೂಕ್ಷ್ನ ಗಮನಿಕೆಯಿಂದ ಇಂತಹ ಘಟನೆಗಳನ್ನು ಚಿತ್ರಿಸಿ, ನಗೆಚಾಟಿಯನ್ನು ಬೀಸುತ್ತಾರೆ. ಸ್ವಾರಸ್ಯವೆಂದರೆ “ಹಾಸ್ಯ ಹಾಸ್ಯಕಷ್ಟೆ” ಎಂಬ ಮಾತಿನಿಂದ ದೂರನಿಲ್ಲುವ ಲೇಖಕಿ ಹಾಸ್ಯವು ಬದುಕಿನ ಬಗೆಯನ್ನು ತಿದ್ದುವ ಸಾಧನವೂ ಹೌದು ಎಂಬುದನ್ನು ಈ ಲೇಖನಗಳಲ್ಲಿ ಸಾಬೀತು ಪಡಿಸಿದ್ದಾರೆ.

ಗಮನೀಯವಾದ ಮತ್ತೊಂದು ಅಂಶವೆಂದರೆ, ಒಂದು ಘಟನೆಯ ಸುತ್ತ ಆವರಿಸಿಕೊಳ್ಳುವ ಈ ಸಂಕಲನದ ಬರೆಹಗಳು ಎರಡು ಪುಟವನ್ನು ದಾಟುವುದಿಲ್ಲ. ಹಾಸ್ಯ ಹಗುರಾಗಿ, ಮೆಲುಕು ಹಾಕುವ ಹಾಗೆ ಆಗುತ್ತದೆ. ಭಾರವಾಗುವುದಿಲ್ಲ. ತಿಳಿನಗೆ ಸೌರಭವನ್ನು ಹೊಮ್ಮಿಸುವ ಸುಹಾಸ್ಯವಿದು, ಅಣಕದ, ವ್ಯಂಗ್ಯದ, ಗೌರವದ ಗಡಿದಾಟಿದ ಯಾವ ಅಂಶವೂ ಇಲ್ಲಿಲ್ಲವೆಂಬುದು ಈ ಸಂಕಲನದ ಹೆಚ್ಚುಗಾರಿಕೆ.

ನನಗೆ ಬಹಳ ಆನಂದವನ್ನು ಉಂಟುಮಾಡಿದ ಮತ್ತೊಂದು ವಿಷಯವೆಂದರೆ ಗಿರಿಜಾ ಅವರು “ಸಮನ್ವಯ ಸಮಿತಿ ಕನ್ನಡವೇ ಸತ್ಯ” ವೇದಿಕೆಯ ಕ್ರಿಯಾಶೀಲ ಸದಸ್ಯರು. ಸತತವಾಗಿ ಬರೆಯುತ್ತಾರೆ. ಚರ್ಚಿಸುತ್ತಾರೆ. ವೇದಿಕೆಯ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಪ್ರೀತಿಯಿಂದ, ಸೌಜನ್ಯದಿಂದ ವೇದಿಕೆಯ ಸಕಾರಾತ್ಮಕ ಕೊಡುಗೆಗಳನ್ನು
“ಲೇಖಕಿಯ ಅಂತರಂಗದಿಂದ…” ಎಂದು ಉದಾಹರಿಸಿದ್ದಾರೆ. ನನ್ನ ಬಗ್ಗೆ ಆದರಣೀಯವಾದ ನುಡಿಗಳನ್ನು ಆಡಿದ್ದಾರೆ. ಮಿಗಿಲಾಗಿ ನಗೆದೀವಿಗೆಯನ್ನು “ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಎಲ್ಲ ಹಿರಿಯ ಮತ್ತು ಕಿರಿಯ ಸಹೃದಯ ಸ್ನೇಹಿತರಿಗೆ ಪ್ರೀತಿ, ಗೌರವಗಳಿಂದ” ಅರ್ಪಿಸಿದ್ದಾರೆ.‌ ಶ್ರೀಮತಿ ಗಿರಿಜಾ ರಾಜ್ ಅವರಿಗೆ ಕೃತಜ್ಞತೆಗಳು. ನಗೆದೀವಿಗೆ ನಾಕುನುಡಿ ಬರೆಯುವ ಅವಕಾಶ ನನಗೆ ಸಿಕ್ಕಿತ್ತು. ನಿಮ್ಮ ಅವಗಾಹನೆಗಾಗಿ ಆ ಬರೆಹವನ್ನು ಲಗತ್ತಿಸುತ್ತಿದ್ದೇನೆ.

ಆರೋಗ್ಯಪೂರ್ಣ ಮನಸ್ಸುಗಳ ರೂವಾರಿ ನಗಿಸಲೇಬೇಕು ಎಂದು ಹಠ ತೊಟ್ಟಾಗ ಹಾಸ್ಯ ಹುಚ್ಚಾಟಕ್ಕೆ ತೊಡಗುತ್ತದೆ. ಆದರೆ ಶುದ್ಧ ಹಾಸ್ಯದ ಬುಗ್ಗೆ ನಮ್ಮ ಪರಿಸರದಲ್ಲಿಯೇ ತಂತಾನೆ ಚಿಮ್ಮುತ್ತಿರುತ್ತದೆ. ಅದನ್ನು ಗುರುತಿಸುವ ನಿರೂಪಿಸುವ ಕುಸುರಿ ಸೂಕ್ಷ್ಮದ್ದು. ಜೊತೆಗೆ ಹಾಸ್ಯದ ಹಿಂದಿರುವ ವಾಸ್ತವವನ್ನೂ, ನೋವನ್ನೂ ಓದುಗನಿಗೆ ನಗೆ ಬರೆಹದ ಮೂಲಕ ತಲುಪಿಸುವುದು ಅಷ್ಟು ಸುಲಭವಲ್ಲ. ಅನುಭವಿ ಬರಹಗಾರ್ತಿ, ಶ್ರೀಮತಿ ಗಿರಿಜಾ ರಾಜ್ ಅವರು ಇಂತಹ ಚಾಣಾಕ್ಷತೆಯನ್ನು ಈ ತಮ್ಮ ಹಾಸ್ಯ ಲೇಖನ ಗುಚ್ಛ ‘ನಗೆ ದೀವಿಗೆ’ಯಲ್ಲಿ, ಈ ಸಾಧನೆಯನ್ನು ಮಾಡಿದ್ದಾರೆ.

ತಾವು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಪರಿಸರದಲ್ಲಿ ಸೂಕ್ಷ್ಮವಾಗಿ ಹರಿಯುತ್ತಿದ್ದ ಹಾಸ್ಯದ ಝರಿಗೆ ಬರಹದ ಕಟ್ಟೆ ಕಟ್ಟಿ ಓದುಗರ ಗದ್ದೆಗೆ ಹರಿಯಬಿಟ್ಟಿದ್ದಾರೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದ ಕೆಲವು ಅನುಭವಗಳು, ಆ ಗಂಭೀರ ಚಟುವಟಿಕೆಯ ಸಂದರ್ಭದಲ್ಲೂ ಹುಟ್ಟುವ ಹಾಸ್ಯದಮೃತವನ್ನು ಹದವಾಗಿ ಬಡಿಸುತ್ತಾರೆ. ಅಂತೆಯೇ ಮನೆಯೊಳಗಿನ ಘಟನೆಗಳೂ ಆರೋಗ್ಯಪೂರ್ಣ ನಗೆಮುಗಿಲುಗಳಾಗುತ್ತವೆ. ಇನ್ನೂ ಕೆಲವು ಲೇಖನಗಳು ಕಲ್ಪನೆಯಿಂದ ಚಿಮ್ಮಿದರೂ ವಾಸ್ತವಕ್ಕೆ ಹತ್ತಿರವಾಗಿಯೇ ಇದೆ.

ಓಹೋ! ಈ ಘಟನೆ ನಮ್ಮ ಮನೆಯಲ್ಲೇ ನಡೆಯುತ್ತದಲ್ಲ ಅನ್ನುವಷ್ಟು ಆಪ್ತವಲಯಕ್ಕೆ ಸೇರಿದ ಲೇಖನಗಳ ಗುಚ್ಛ ‘ನಗೆ ದೀವಿಗೆ. ನಗೆ, ನಗೆಯಾಗಷ್ಟೇ ಉಳಿಯದೆ ಗೆಲುವಿನ ಬಗೆಯಾಗಿರುವ ಸೂತ್ರ ಈ ಲೇಖನ ಮಾಲೆಗಳಲ್ಲಿ ಕಂಡು ಬರುತ್ತದೆ. ನಾನಂತೂ ಚೆನ್ನಾಗಿ ನಕ್ಕಿದ್ದೇನೆ. ಅದಕ್ಕಾಗಿ ಶ್ರೀಮತಿ ಗಿರಿಜಾ ರಾಜ್ ಅವರಿಗೆ ಹಾರ್ದಿಕ ಧನ್ಯವಾದಗಳು ಬರಹಕ್ಕಾಗಿ ಅಭಿನಂದನೆಗಳು.

‘ಸಮನ್ವಯ ಸಮಿತಿ ಕನ್ನಡವೇ ಸತ್ಯ’ ವೇದಿಕೆಯಲ್ಲಿ ಪ್ರತಿನಿತ್ಯ ಬರೆಯುವ ಶಕ್ತಿ ಗಿರಿಜಾ ಅವರದು. ಮತ್ತಷ್ಟು ಬರೆಯಲಿ, ಮತ್ತಷ್ಟು ನಗಿಸಲಿ, ಮತ್ತಷ್ಟು ನಮ್ಮನ್ನು ಚಿಂತನೆಗೆ ಹಚ್ಚಲಿ, ಆರೋಗ್ಯಪೂರ್ಣ ಮನಸ್ಸುಗಳ ರೂವಾರಿಯಾಗಲಿ ಎಂದು ಹಾರೈಸುತ್ತೇನೆ.”.

ದಯವಿಟ್ಟು ಪುಸ್ತಕಕ್ಕಾಗಿ ಲೇಖಕಿ/ಪ್ರಕಾಶಕರನ್ನು ಸಂಪರ್ಕಿಸಿ, ಪ್ರತಿಕ್ರಿಯೆ ನೀಡಿರಿ.


  •  ಬೆಂಶ್ರೀ ರವೀಂದ್ರ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW