ತಪ್ಪು ಹೊರಿಸಬೇಕೆಂದು ದೂರಬೇಡಿ… ತಪ್ಪಾಗಿ ಯಾರನ್ನೂ ನೋಡಬೇಡಿ…ಹೊಂದಾಣಿಕೆ ಮಾಡಿಕೊಳ್ಳಲು ಅಸಾಧ್ಯ ಎಂದಾಗ ದೂರವಿದ್ದು ಹಾರೈಸಿಬಿಡಿ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಇಂದಲ್ಲ ನಾಳೆ ನಾವಿಲ್ಲಿ ಒಬ್ಬರನ್ನೊಬ್ಬರು
ಅಗಲಬೇಕಾಗಿ ಬರಬಹುದು ಅನಿವಾರ್ಯ
ಜೊತೆಗರಲಿ ಇಲ್ಲದಿರಲಿ ಮಾಡೋಣ
ಮನ ಮೆಚ್ಚುವಂತಹ ಒಳಿತಿನ ಕಾರ್ಯ
ಎಲ್ಲವೂ ಸರಿ ಎಂದೇ ಎನಿಸುವುದು
ಮನದೊಳಗೆ ಇದ್ದಾಗ ವ್ಯಾಮೋಹ
ಸಂಬಂಧ ಹಳಸಿ ಅಳಿದು ಹೋದರೂ
ಮಾಡಬಾರದು ಭಾವನೆಗಳಿಗೆ ದ್ರೋಹ
ಮನಸಿನೊಳಗಿನ ಮಾತುಗಳನ್ನೆಲ್ಲಾ
ಮನದೊಳಗೆ ಗಟ್ಟಿಯಾಗಿ ಬಂಧಿಸಿಡಿ
ಗುಟ್ಟುಗಳೆಲ್ಲ ಗುಟ್ಟಾಗಿಯೇ ಇರಲಿ
ದ್ವೇಷ ಸಾಧನೆಯ ಹಾದಿಯ ಬಿಟ್ಟುಬಿಡಿ
ತಪ್ಪು ಹೊರಿಸಬೇಕೆಂದು ದೂರಬೇಡಿ
ತಪ್ಪಾಗಿ ಯಾರನ್ನೂ ನೋಡಬೇಡಿ
ಹೊಂದಾಣಿಕೆ ಮಾಡಿಕೊಳ್ಳಲು ಅಸಾಧ್ಯ
ಎಂದಾಗ ದೂರವಿದ್ದು ಹಾರೈಸಿಬಿಡಿ
ಹಂಚಿಕೊಂಡ ಖುಷಿಯ ಕನಸುಗಳೊಂದಿಗೆ
ಬದುಕು ಖುಷಿ ಖುಷಿಯಲಿ ಸಾಗುತ್ತಲಿರಲಿ
ಯಾರ ಮನಸು ಯಾರ ಕನಸುಗಳೂ ಇಲ್ಲಿ
ನೊಂದು ಬೆಂದು ಕರಕಲಾಗಿ ಹೋಗದಿರಲಿ
ನೋವು ಮರೆಯಲಿ ನಗುವು ಅರಳಲಿ
ರಾಗ ದ್ವೇಷವ ಮರೆತು ಬದುಕು ಗೆಲುವಾಗಲಿ
ಸ್ನೇಹ ಸಂಬಂಧಗಳು ಮರುಜೀವವ ಪಡೆಯಲಿ
ಬದುಕು ಭಾವನೆ ನರಳದೆ ಸಾರ್ಥಕವಾಗಲಿ
- ನಾಗರಾಜ ಜಿ. ಎನ್. ಬಾಡ – ಕಮರ್ಷಿಯಲ್ ಟ್ಯಾಕ್ಸ ಇನ್ಸ್ಪೆಕ್ಟರ್, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ, ಕುಮಟ, ಉತ್ತರ ಕನ್ನಡ.
