ದ.ರಾ.ಬೇಂದ್ರೆಯವರ “ನಾಕುತಂತಿ”

ಕವಿಯ ಕವಿತ್ವಕ್ಕೇ ಸವಾಲೆಸೆಯುವ ಕವನಗಳ ಪೈಕಿ ತನ್ನದೇ ಛಾಪು ಮೂಡಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವನವೆಂದರೆ ದ.ರಾ.ಬೇಂದ್ರೆಯವರ “ನಾಕುತಂತಿ”. ಆ ಕೃತಿಯ ಕುರಿತು ಲೇಖಕಿ, ಶಿಕ್ಷಕಿ ಸೌಮ್ಯಾ ಸನತ್ ಅವರು ತಮ್ಮ ವಿಚಾರವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನು ನೀನು
ಆನು ತಾನು
 ನಾಕೇ ನಾಕು ತಂತಿ..

ಕವನಗಳೆಂದರೇನೆ ಹಾಗೆ..ತಿಳಿಯದ ಸಾವಿರಾರು ಅರ್ಥಗಳನ್ನು ತಮ್ಮೊಡಲಲ್ಲಿ ಬಚ್ಚಿಟ್ಟುಕೊಂಡು ಕೆಲವು ಜೀವನವೇನು ಎಂದು ತಿಳಿಸಿ ಕೊಟ್ಟರೆ, ಮತ್ತಲವು ಯಾರಿಂದ ಅಥವಾ ಯಾವುದರಿಂದ ಜೀವನ ಎಂಬ ಪ್ರಶ್ನೆಗಳ ಸಮಗ್ರ ಚಿತ್ರಣವನ್ನು ಚಿತ್ರಿಸಿ ಬಿಡುತ್ತವೆ.

ವಿಶ್ವವೆಂದರೆ ಏನು? ಮಾನವನ ಇರುವಿಕೆಯ ಮೂಲವೇನು? ಕಾಣದ ಒಂದು ಅತೀತ ಶಕ್ತಿ ಇರುವುದು ನಿಜವೆ ? ಆಧ್ಯಾತ್ಮ ಯಾಕೆ ಬೇಕು ? ಹೀಗೆ ಹತ್ತು ಹಲವು ಗೊಂದಲದ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತದೆ. ಆಧ್ಯಾತ್ಮ ಹಾಗೂ ತತ್ವಶಾಸ್ತ್ರ ಇವೆರಡರ ಬೆಸುಗೆಯನೊಳಗೊಂಡ ಮತ್ತು ಸಮಸ್ತ ವಿಶ್ವವನ್ನು ಕೆಲವೇ ಕೆಲವು ಅಂಶಗಳಿಗೆ ಹೋಲಿಸ ಬಹುದಾದ ಕವನಗಳು ಕಾಣ ಸಿಗುವುದು ಅಪರೂಪ. ಇಂತಹ ಕವಿಯ ಕವಿತ್ವಕ್ಕೇ ಸವಾಲೆಸೆಯುವ ಕವನಗಳ ಪೈಕಿ ತನ್ನದೇ ಛಾಪು ಮೂಡಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವನವೆಂದರೆ ದ.ರಾ.ಬೇಂದ್ರೆಯವರ “ನಾಕುತಂತಿ”.

ನಾಕುತಂತಿ ಕವನ ಸಂಕಲನದಲ್ಲಿ ಅನೇಕ ಕವಿತೆಗಳಿದ್ದರೂ ಹೆಚ್ಚಿನ ಆಕರ್ಷಣೆ ಮಾತ್ರ “ನಾಕುತಂತಿ” ಕವನ. “ಆವು ಈವಿನ ನಾವು ನೀವಿಗೆ ಆನು ತಾನಾದ ತನನನ…” ಎಂಬ ಸಾಲಿನಿಂದ ಆರಂಭವಾಗುವ ನಾಕುತಂತಿ ಕವನ ಹೇರಳವಾದ ಪ್ರಾಸದಿಂದ ಕೂಡಿದ್ದು “ತನನನ, ಚತುರಸ್ವನ, ಮಿತಿಗೆ ಮಿತಿ ಇತಿ ನನನನ, ಸಹಿತಸ್ವನ ಎಂಬ ಪದಗಳು ಕವನಕ್ಕೆ ಒಂದು ವಿಶೇಷ ಮೆರುಗು ತಂದು ಕೊಟ್ಟಿವೆ . ಈ ಕವಿತೆಯಲ್ಲಿ “ಈ ಜಗ ಅಪ್ಪ ಅಮ್ಮನ ಮಗ….ನಾ ಅವರ ಕಂದ ಶ್ರೀ ಗುರುದತ್ತ ಅಂದ” ಸಾಲುಗಳು ಅತೀ ಇಷ್ಟವಾಗಿ ಪ್ರಮುಖ ಆಕರ್ಷಣಿಯವಾಗಿದೆ. ಬೇಂದ್ರೆಯವರ ಈ ಕವನ ಲಕ್ಷಾಂತರ ಮನಸ್ಸುಗಳನ್ನು ಆಕರ್ಷಿಸಲು ಸಂಗೀತ ಪ್ರಮುಖ ಕಾರಣಗಳಲ್ಲೊಂದು. ಮೈಸೂರು ಅನಂತ ಸ್ವಾಮಿಯವರ ಮನಕಲುಕುವ ಸಂಗೀತ ಈ ಕವನಕ್ಕೆ ವಿಶೇಷ ಮೆರುಗು ತಂದು ಕೊಟ್ಟಿದೆ. ಸ್ವತಃ ತಾವೇ ರಾಗ ಸಂಯೋಜಿಸಿ, ತಮ್ಮ ಕಂಚಿನ ಕಂಠದಿಂದ ಹಾಡಿದ ಅವರು, ಬೇಂದ್ರೆಯವರ ಈ ಕವನವನ್ನು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ.

ಹಲವು ವರ್ಷಗಳಿಂದ ವಿಚಿತ್ರವಾದ ಅನುಭವದೊಂದಿಗೆ ಅಪೂರ್ಣವಾಗಿ ಅರ್ಥವಾಗುತ್ತಿದ್ದ ಈ ಹಾಡು ಇಂದಿಗೆ ದಿವ್ಯ ಅನುಭೂತಿಯನ್ನು ಧಾರೆಯೆರೆಯುತ್ತಿದೆ. ವರಕವಿ ಬೇಂದ್ರೆಯವರ ನಾಕುತಂತಿ ಆಧ್ಯಾತ್ಮಿಕ ನೆಲೆಯ ಒಂದು ನಿಗೂಢ ಕವನವಾಗಿದ್ದು ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್ ವೀಣೆ. ವಿಶ್ವವೆಂಬ ವಿರಾಟ್ ವೀಣೆಗೆ ಬರಿ ನಾಕು ನಾಕೆ ತಂತಿ.

ಆ ವೀಣೆಯ ನಾಲ್ಕು ತಂತಿಗಳೆಂದರೆ ನಾನು, ನೀನು, ಆನು, ತಾನು. ನಾನು ಪುರುಷ, ನೀನು ಸ್ತ್ರೀ ,ಆನು ಎಂದರೆ ಗಂಡು ಹೆಣ್ಣಿನ ಮನೋದೈಹಿಕ ಮಿಲನದ ಫಲವಾದ ಸಂತಾನವೇ ಈ ಆನು ಎಂಬ ತತ್ವ. ಈ ನಾನು,ನೀನು,ಆನುಗಳಿಗೆ ಆಧಾರವಾಗಿರುವುದೇ ಪರಾತ್ಪರ ಶಕ್ತಿಯಾದ “ತಾನು”. ತಾನು ಎಂದರೆ ಈ ಮೂವರನ್ನೂ ಪೋಷಿಸುತ್ತಿರುವ ನಿಸರ್ಗ ಅಥವಾ ಸೃಷ್ಟಿಕರ್ತ. ಈ ನಾಕುತಂತಿಗಳನ್ನು ಬಿಟ್ಟರೆ ವಿಶ್ವವೆಂಬುದು ಜನ್ಮ ತಾಳುತ್ತಿರಲಿಲ್ಲ. ಈ ನಾಕುತಂತಿಗಳ ತುಡಿತವೇ ವಿಶ್ವ ವಿಕಸನಕ್ಕೆ ದಾರಿ ಮಾಡಿಕೊಟ್ಟಿದೆ. ಈ ನಾಕುತಂತಿಗಳ ಮಿಡಿತವೇ ವಿಶ್ವ ಕೇಂದ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿದೆ. ಈ ನಾಕುತಂತಿಗಳ ಕಲಹದಿಂದ ಸಂಭವಿಸಿರುವ ಹೋರಾಟವೇ ವಿಶ್ವದ ಇತಿಹಾಸವಾಗಿ ರೂಪಗೊಂಡಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ನಿಜವೆನ್ನಿಸುತ್ತದೆ. ತಾತ್ವಿಕ ನೆಲೆಗಟ್ಟಿನಲ್ಲಿ ನೋಡಿದಾಗಲೂ ಇದು ಸತ್ಯವೆನ್ನಿಸುತ್ತದೆ. ವಿಶ್ವವೆಂಬ ವಿರಾಟ್ ವೀಣೆ ಈ ನಾಲ್ಕು ತತ್ವದಿಂದ ವಿಕಸನಗೊಂಡಿದೆ ಎಂಬುದು ಬೇಂದ್ರೆಯವರ ಆಧ್ಯಾತ್ಮಿಕ ದರ್ಶನವಾಗಿದೆ.

ಕುಮಾರವ್ಯಾಸನ ತರುವಾಯ ಕಾವ್ಯಕೆ ಗುರುವೆನಿಸುವಂತೆ ಕವನ ರಚಿಸಿದ ಕವಿ ಬೇಂದ್ರೆ ಅಂದರೆ ಅತಿಶಯೋಕ್ತಿಯಲ್ಲ. ಬೇಂದ್ರೆ ಎಂದೊಡನೆ ಸಹಸ್ರತಂತ್ರಿಯ ವೀಣೆಯನ್ನು ನುಡಿಸಿದಂತಾಗುತ್ತದೆ. ಮೈಯಲ್ಲಿ ಮಿಂಚಿನ ಹೊಳೆ ಸಂಚರಿಸುತ್ತದೆ. ಹೃದಯ ಸಮುದ್ರ ಉಕ್ಕೇರುತ್ತದೆ. ಸಾವಿರದ ನೆನಪುಗಳು ಬರತೊಡಗುತ್ತವೆ. ಬೇಂದ್ರೆ ಕಾವ್ಯ ಪ್ರತಿಮೆಗಳ ಒಂದು ಮೆರವಣಿಗೆಯೇ ಮನಃಪಟಲದ ಮೇಲೆ ಮೂಡುತ್ತದೆ. ತಮ್ಮ ಭಾಷೆಯ ಮೂಲಕವೇ ಕೋಟ್ಯಾಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದ ದ.ರಾ.ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ “ವರಕವಿ”ಯೇ ಸರಿ.

ವರಕವಿ ಡಾ. ದ ರಾ ಬೇಂದ್ರೆಯವರ ಸುಪ್ರಸಿದ್ದ ಕವನ ಸಂಕಲನ ‘ನಾಕುತಂತಿ’. ನಾಕುತಂತಿ ಕನ್ನಡ ಸಾಹಿತ್ಯ ಜಗತ್ತಿನ ಒಂದು ಮಹೋನ್ನತ ಕವಿತೆಯೆಂದರೆ ಅತಿಶಯೋಕ್ತಿಯಾಗಲಾರದು. ಈ ತಿಂಗಳ ನಾವು ಓದುವ ಹೊತ್ತಿಗೆ. ಬೇಂದ್ರೆಯವರಿಗೆ ಜ್ಞಾನಪೀಠ ತಂದುಕೊಟ್ಟ ಈ ಕೃತಿ ಲೋಕಾರ್ಪಣವಾಗಿ ಅರವತ್ತು ವರ್ಷವಾಯಿತು. ಈ ವರ್ಷ ಪೂರ್ತಿ ಕರ್ನಾಟಕದಲ್ಲಿ “ನಾಕು ತಂತಿ, ಷಷ್ಠಿ ಪೂರ್ತಿ” ಎಂಬ ಕಾರ್ಯಕ್ರಮ ಸಹ ನಡೆಯಲಿದೆ. ಈ ಮಹೋನ್ನತ ಕವಿತೆಯನ್ನು ಕರುಣಿಸಿದ ‘ಬೇಂದ್ರೆ ಎಂಬ ನಿಗೂಢ ದಾರ್ಶನಿಕನಿಗೆ ನಮ್ಮ ಕೋಟಿ ನಮನಗಳನ್ನು ಸಲ್ಲಿಸೋಣ.

ಬನ್ನಿ, ‘ನಾಕು ತಂತಿ’ ಹಾಗೂ ಬೇಂದ್ರೆಯವರ ಇನ್ನೂ ಕೆಲವು ಕವನಗಳನ್ನು ಓದುತ್ತಾ ಬೇಂದ್ರೆಯವರ ಅಧ್ಯಾತ್ಮಲೋಕದ ರಹಸ್ಯಗಳನ್ನು ಬಿಡಿಸಲು ಪ್ರಯತ್ನಿಸೋಣ !!


  • ಸೌಮ್ಯಾ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW