ನಳಿನಿ ಟಿ. ಭೀಮಪ್ಪರವರು ಹುಟ್ಟಿದ್ದು ಚಿತ್ರದುರ್ಗದಲ್ಲಿ, ಅವರು ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದು ತುಂಬ ಆಕಸ್ಮಿಕ. ಅವರ ಯಜಮಾನರು ಬರವಣಿಗೆಯ ಕ್ಷೇತ್ರಕ್ಕೆ ಬರಲು ಪ್ರೇರಣೆಯಾದರು. ಅವರ ಸಾಹಿತ್ಯಸೇವೆಯ ಕುರಿತು ನಾರಾಯಣಸ್ವಾಮಿ ಮಾಲೂರು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ಕನ್ನಡ ಬರವಣಿಗೆ ಒಂದು ಸೆಳೆತವಾಗುತಿದೆ. ಹಿಂದೆ ಬಹಳಷ್ಟು ಜನರಿಗೆ ಓದುವ ಹವ್ಯಾಸವಿದ್ದರೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಈ ಮುಖಪುಟವೆಂಬುದು ಒಂದು ವೇದಿಕೆಯಾಗಿ ಸಿಕ್ಕಾಗ ಬಹಳಷ್ಟು ಬರಹಗಾರರು ತಾವು ಕೂಡ ಕನ್ನಡ ಬರವಣಿಯಲ್ಲಿ ತೊಡಗಿಸಿಕೊಂಡು ಅದನ್ನು ಪ್ರವೃತ್ತಿಯಾಗಿಸಿಕೊಂಡು ಸಾಹಿತ್ಯಲೋಕದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ.
ಕನ್ನಡದ ಅಕ್ಷರಲೋಕದ ಬರಹದಲ್ಲಿ ತೊಡಗಿಸಿಕೊಳ್ಳಲು ಮಹಿಳೆಯರು ಕೂಡ ಏನು ಹಿಂದೆ ಬಿದ್ದಲ್ಲ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿಕೊಂಡರೆ ಇಂದು ಬಹಳಷ್ಟು ಮಹಿಳೆಯರು ಕನ್ನಡ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯಲೋಕದಲ್ಲೂ ಕೂಡ ತಮ್ಮ ಪ್ರಭುತ್ವವನ್ನು ಸ್ಥಾಪಿಸಿಕೊಂಡು ಹೆಸರನ್ನು ಗಳಿಸಿಕೊಂಡಿದ್ದಾರೆ.
ತಾನು ಗೃಹಿಣಿಯಾಗಿದ್ದರೂ ಕೂಡ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿ ತನ್ನ ಜ್ಞಾನದ ಪ್ರಬುದ್ಧತೆಯನ್ನು ಬಳಸಿಕೊಂಡು ತಾನು ಕೂಡ ಬರೆಯಬಲ್ಲೆಯೆಂದು ಲೇಖನ ಪ್ರಬಂಧ ಕವಿತೆಯನ್ನು ಬರೆಯುತ್ತಾ ಕನ್ನಡ ನಾಡಿನ ಬಹುತೇಕ ಪತ್ರಿಕೆಗಳ ಅಂಕಣಗಾತಿ೯ಯಾಗಿ ಕನ್ನಡ ಮಹಿಳಾ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡು ಪತ್ರಿಕಾ ವಲಯದ ಬರಹದಲ್ಲಿ ಮುಂಚೂಣಿಯಲ್ಲಿರುವ ಹೆಸರು ಶ್ರೀಮತಿ ನಳಿನಿ ಟಿ ಭೀಮಪ್ಪನವರದು.

ಶ್ರೀಮತಿ ನಳಿನಿ ಟಿ. ಭೀಮಪ್ಪರವರು ಶ್ರೀ ಹೆಚ್. ತಿಪ್ಪೇಸ್ವಾಮಿ ಮತ್ತು ರತ್ನಮ್ಮನವರ ಮಗಳಾಗಿ ಚಿತ್ರದುರ್ಗ ಜನಿಸಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸ ಚಿತ್ರದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನಡೆಯಿತು. ಪ್ರೌಢಶಾಲಾ ಶಿಕ್ಷಣವನ್ನು ಹುಬ್ಬಳ್ಳಿಯ ಲ್ಯಾಮಿಂಗ್‌ಟನ್ ಹೈಸ್ಕೂಲಿನಲ್ಲಿ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಹುಬ್ಬಳ್ಳಿಯ ಪಿ ಸಿ ಜಾಬಿನ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಚಿತ್ರದುರ್ಗದ ಎಸ್. ಜೆ. ಎಂ ಕಾಲೇಜಿನಲ್ಲಿ ಪದವಿಯನ್ನು ಪಡೆದರು.
ಶಾಲಾ ವಿಧ್ಯಾಭ್ಯಾಸದ ದಿನಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು ಉತ್ತಮ ಕ್ರೀಡಾಪಟುವೂ ಹೌದು ವಾಲಿಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್, ಚೆಕ್, ಕೇರಂ ಇವು ಇವರ ಇಷ್ಟದ ಆಟಗಳಾಗಿದ್ದವು. ಶಾಲೆಯಲ್ಲಿ ವಾಲಿಬಾಲ್ ತಂಡದ ನಾಯಕಿಯಾಗಿ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ರಾಜ್ಯಮಟ್ಟಕ್ಕೆ ಕೂಡಾ ಆಯ್ಕೆಯಾಗಿದ್ದರು. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಟೈಪಿಂಗ್ ಸೀನಿಯರ್ ಕೋಸ್೯ನ್ನು ಮುಗಿಸಿದ್ದಾರೆ. ಪದವಿಯು ಮುಗಿದ ನಂತರದ ದಿನಗಳಲ್ಲಿ ಶ್ರೀಮತಿ ನಳಿನಿ ಟಿ. ರವರು ಡಾ. ಭೀಮಪ್ಪರನ್ನು ವಿವಾಹವಾಗಿ, ಗೃಹಿಣಿಯಾಗಿ ಸಾಂಸಾರಿಕ ಜೀವನದತ್ತಾ ಪಯಣವನ್ನು ಬೆಳೆಸಿದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಗ ತಮ್ಮ ಪತಿ ಡಾ. ಭೀಮಪ್ಪನವರು ಬಿಜಾಪುರ ಕೃಷಿ ಮಹಾವಿದ್ಯಾಲಯ ಬಿಜಾಪುರ ಇಲ್ಲಿ ಡೀನ್ ಆಗಿ ಕಾಯ೯ವನ್ನು ನಿವ೯ಹಿಸುತ್ತಿದ್ದಾರೆ. ತಮ್ಮ ಇಬ್ಬರೂ ಹೆಣ್ಣುಮಕ್ಕಳು ಇಂಜಿನಿಯರಿಂಗ್ ಪದವೀಧರರಾಗಿದ್ದು ಇವರು ತಮ್ಮ ಕುಟುಂಬ ಸಮೇತ ಧಾರವಾಡದಲ್ಲಿ ನೆಲೆಸಿದ್ದಾರೆ.
ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದು ತುಂಬ ಆಕಸ್ಮಿಕ. ಚಿಕ್ಕಂದಿನಿಂದಲೂ ಓದುವುದರಲ್ಲಿ ತುಂಬ ಆಸಕ್ತಿಯಿತ್ತು. ಆದರೆ ನಾನೂ ಕೂಡ ಬರೆಯಬಹುದು ಎಂದು ಎಂದೂ ಯೋಚಿಸಿರಲಿಲ್ಲ. ಬರವಣಿಗೆಯ ಕ್ಷೇತ್ರಕ್ಕೆ ಬರಲು ಕಾರಣ ಭೀಮಪ್ಪನವರಾದ ನನ್ನ ಯಜಮಾನರೇ ಎಂದು ಹೇಳಬಹುದು. ಸದಾ ಯಾವುದಾದರೊಂದು ಓದಿನಲ್ಲಿ ಮೈಮರೆಯುತ್ತಿದ್ದವಳನ್ನು ‘ ನೀನೂ ಯಾಕೆ ಬರೆಯುವುದಕ್ಕೆ ಪ್ರಯತ್ನಿಸಬಾರದು, ಎಷ್ಟೆಲ್ಲ ಓದುತ್ತಿರುತ್ತೀಯ’ ಎಂದು ಸಲಹೆ ನೀಡಿದ್ದರು. ಆ ಮಾತು ನನ್ನ ಬರವಣಿಗೆಗೆ ತುಂಬ ಪ್ರೇರಣೆಯಾಯಿತು. ಮೊದಲಿನಿಂದಲೂ ಮನೆಗೆ ತರಿಸುತ್ತಿದ್ದ ಪತ್ರಿಕೆಗಳನ್ನು ಹಾಗೂ ವಿವಿಧ ಲೇಖಕರ ಪುಸ್ತಕಗಳನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದೆ. ವಿವಿಧ ಬರಹಗಾರರು ಬರೆಯುತ್ತಿದ್ದ ಶೈಲಿ, ನಿರೂಪಣೆ, ವಿಷಯ ಮಂಡಿಸುವ ರೀತಿಯನ್ನು ಅವಲೋಕಿಸುತ್ತ ಚಿಕ್ಕ ಪುಟ್ಟ ಬರಹಗಳನ್ನು ಪತ್ರಿಕೆಗಳಿಗೆ ಬರೆದು ಕಳುಹಿಸಲು ಆರಂಭಿಸಿದೆ. ಅದರಲ್ಲೂ ಪ್ರಜಾವಾಣಿ ಪತ್ರಿಕೆಯಲ್ಲಿ ತಿಂಗಳಿಗೊಮ್ಮೆ ಒಂದು ವಿಷಯ ಕೊಟ್ಟು ಓದುಗರು ಭಾಗವಹಿಸುವಂತೆ ಉತ್ತೇಜಿಸುತ್ತಿದ್ದ ‘ ಕಾಮನಬಿಲ್ಲು’ ಎನ್ನುವ ಅಂಕಣದಲ್ಲಿ ಮೊದಲ ಬಾರಿ ೨೦೧೪ ರಲ್ಲಿ ನನ್ನ ಬರಹ ಆಯ್ಕೆಯಾಗಿ ಪ್ರಕಟವಾಯಿತು. ಅದು ನನ್ನ ಬರವಣಿಗೆಗೆ ಮುನ್ನುಡಿ ಹಾಡಿತು ಎನ್ನಬಹುದು. ಅಂದಿನಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಸರಸ್ವತಿ ಮಾತೇ ಕೈಹಿಡಿದಿದ್ದಳು. ಸತತವಾಗಿ ಪತ್ರಿಕೆಗಳಿಗೆ ಬರೆಯುತ್ತಾ ಹೋದೆ.

ಫೇಸ್ ಬುಕ್ ನಲ್ಲಿ ಇತರ ಲೇಖಕರ ಬರಹಗಳು, ಓದುಗರ ಪ್ರೋತ್ಸಾಹ ಮತ್ತಷ್ಟು ಹುರುಪಿನಿಂದ ಬರೆಯುವಂತೆ ಪ್ರೇರೇಪಿಸಿತು. ಲೇಖನ, ಪ್ರಬಂಧ, ಲಲಿತ ಪ್ರಬಂಧಗಳಿಗೆ ಮಾತ್ರ ಸೀಮಿತವಾಗಿದ್ದ ನನ್ನ ಬರವಣಿಗೆ, ಸಾಹಿತ್ಯದ ಮನಸುಗಳ ಸಲಹೆ, ಹಾಗೂ ಓದುಗರ ಒತ್ತಾಸೆಯಿಂದ ಕಥೆಗೂ ವಿಸ್ತರಿಸಿತು. ಕಥಾಸ್ಪರ್ಧೆಗಳಲ್ಲೇ ಅತಿ ಹೆಚ್ಚು ಬಹುಮಾನ ಬಂದಿರುವುದು ಸಾಕಷ್ಟು ಉತ್ತೇಜನ ಸಿಕ್ಕಂತಾಯಿತು. ಎಂದು ತಾವು ಕನ್ನಡ ಸಾಹಿತ್ಯ ಲೋಕದ ಪ್ರವೇಶವನ್ನು ಪ್ರೀತಿಯಿಂದ ನೆನೆಯುತ್ತಾರೆ ಶ್ರೀಮತಿ ನಳಿನಿ ಟಿ ಭೀಮಪ್ಪನವರು.
ಬಿಡುವಿನ ಸಮಯದಲ್ಲಿ ಓದು ಬರಹದಲ್ಲಿ ತೊಡಗಿಸಿಕೊಂಡ ಶ್ರೀಮತಿ ನಳಿನಿ ಟಿ ಭೀಮಪ್ಪರವರು ಕನ್ನಡದ ಬರವಣಿಗೆಯನ್ನು ಪ್ರವೃತ್ತಿಯಾಗಿ ಬಳಸಿಕೊಂಡು ‘ಒಂದು ಕಪ್ ಕಾಫೀ’(ಹರಟೆಗಳ ಗುಟುಕು) ಕೃತಿಯನ್ನು ತಮ್ಮ ಚೊಚ್ಚಲ ಕೃತಿಯಾಗಿ ಲೋಕಾರ್ಪಣೆ ಮಾಡಿ ತನ್ನನ್ನು ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯೆಂದು ಗುರುತಿಸಿಕೊಂಡರು. ನಂತರ ಲಲಿತ ಪ್ರಬಂಧಗಳ ಸಂಕಲನ, ೨೦೨೦ರಲ್ಲಿ ಪ್ರಕಟವಾಯಿತು. ತಮ್ಮ ಮೂರನೇಯ ಕೃತಿ ಸೆಲ್ಫೀ… (ನಮ್ನಮ್ದೇ ಪ್ರಪಂಚ)ಲಲಿತ ಪ್ರಬಂಧಗಳ ಸಂಕಲನ,೨೦೨೨ ಪ್ರಕಟವಾಯಿತು.
ಒಂದ್ ಕಪ್ ಕಾಫಿ ಈ ಕೃತಿಗೆ ‘ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ)’ ಬೆಳಗಾವಿ ಇವರು ಕೊಡಮಾಡುವ ೨೦೨೦ನೇ ಸಾಲಿನ ರಾಜ್ಯಮಟ್ಟದ ‘ರಾಷ್ಟಕೂಟ ಸಾಹಿತ್ಯಶ್ರೀ’ ಪ್ರಶಸ್ತಿ, ಹರಟೆ ವಿಭಾಗದಲ್ಲಿ ದೊರೆತಿದೆ. ಸೆಲ್ಫೀ… (ನಮ್ನಮ್ದೇ ಪ್ರಪಂಚ) ಲಲಿತ ಪ್ರಬಂಧಗಳ ಸಂಕಲನಕ್ಕೆ ‘ಕರ್ನಾಟಕ ಲೇಖಕಿಯರ ಸಂಘ(ರಿ.)’ ಅವರು ಕೊಡಮಾಡುವ ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ದತ್ತಿ ಪ್ರಶಸ್ತಿಗೆ ೨೦೨೨ರಲ್ಲಿ ಭಾಜನವಾಗಿದೆ.
ನಳಿನಿ ಟಿ. ಭೀಮಪ್ಪ ರವರು ಕಥೆ, ಲೇಖನ, ಪ್ರಬಂಧ, ಲಲಿತ ಪ್ರಬಂಧ, ಕವಿತೆ, ಹೀಗೆ ಬರಹಗಳು ಎಲ್ಲ ಪ್ರಾಕಾರಗಳನ್ನು ಬರೆಯುತ್ತಾ ಲೇಖಕಿಯಾಗಿ ಗುರುತಿಸಿಕೊಂಡಿದ್ದರೂ ಲಲಿತ ಪ್ರಬಂಧಗಳನು ಬರೆಯುವ ಮೂಲಕವೇ ಹೆಚ್ಚು ಗುರುತಿಸಿಕೊಂಡರು. ರಾಜ್ಯದ ಬಹುತೇಕ ಎಲ್ಲಾ ದಿನಪತ್ರಿಕೆಗಳು ಪ್ರಜಾವಾಣಿ ವಿಶ್ವವಾಣಿ ಸಂಯುಕ್ತ ಕನಾ೯ಟಕ ವಿಜಯ ಕನಾ೯ಟಕ ಹಾಗೂ ಸುಧಾ ಮಯೂರ ಮುಂತಾದ ಬಹುತೇಕ ಮ್ಯಾಗಜೀನ್‌ಗಳಲ್ಲಿ ಪ್ರಕಟಗೊಂಡ ಬರಹಗಳ ಇವರ ಸಂಖ್ಯೆ ಐದುನೂರಕ್ಕೆ ಹತ್ತಿರವಿದೆ.

ಇವರ ಬರಹಗಳು ಲೇಖನಗಳು ರಾಜ್ಯಮಟ್ಟದ ಹಲವಾರು ಸ್ವಧೆ೯ಗಳಲ್ಲಿ ಬಹುಮಾನ ಪಡೆದಿವೆ. ಲಹರಿ ದೀಪಾವಳಿ ಕಥಾಸ್ಪರ್ಧೆ- ೨೦೧೯ರಲ್ಲಿ ಪ್ರಥಮ ಬಹುಮಾನವನ್ನು, ಪ್ರಜಾವಾಣಿ ಭೂಮಿಕಾ ಲಲಿತ ಪ್ರಬಂಧ ಸ್ಪರ್ಧೆ-೨೦೨೦ರಲ್ಲಿ ದ್ವಿತೀಯ ಸ್ಥಾನವನ್ನು, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ-೨೦೨೧ರಲ್ಲಿ ಮೆಚ್ಚುಗೆ ಬಹುಮಾನವನ್ನು , ಮುಂಬೈನ ಮೊಗವೀರ ಮಾಸಪತ್ರಿಕೆ ನಡೆಸಿದ ೨೦೨೨ರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನವನ್ನು , ಚೆನೈನ ಲಹರಿ ದ್ವೈಮಾಸಿಕದವರು ನಡೆಸಿದ ೨೦೨೨ರ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು, ಜನಕಲ್ಯಾಣೋತ್ಸವ ರಾಜ್ಯಮಟ್ಟದ ಕಥಾ ಸ್ಪರ್ಧೆ-೨೦೨೨ ರಲ್ಲಿ ಸಮಾಧಾನಕರ ಬಹುಮಾನವನ್ನು, ಸೌರಭ ವಿಕಸನವೃಂದ ಕಥಾಸ್ಪರ್ಧೆ-೨೦೨೨ ರಲ್ಲಿ ದ್ವಿತೀಯ ಬಹುಮಾನವನ್ನು, ಪುತ್ತೂರು ಹಾಸ್ಯಲೇಖನ ಸ್ಪರ್ಧೆ-೨೦೨೨ರಲ್ಲಿ ಪ್ರಥಮ ಬಹುಮಾನವನ್ನು, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ-೨೦೨೩ ರಲ್ಲಿ ಮೆಚ್ಚುಗೆ ಬಹುಮಾನವನ್ನು,
ದಿ ಡೈಲಿ ನ್ಯೂಸ್ ಅವರ ದೀಪಾವಳಿ ಕಥಾಸ್ಪರ್ಧೆ- ೨೦೨೩ರಲ್ಲಿ ಮೂರನೆಯ ಬಹುಮಾನವನ್ನು ಪಡೆದುಕೊಂಡಿವೆ.
ಅಂಕಣಕಾರರಾದ ಶ್ರೀಮತಿ ನಳಿನ ಟಿ ಭೀಮಪ್ಪರವನ್ನು. ಅಭಿನಂದಿಸುತ್ತಾ ಮುಂದೆ ಹಲವಾರು ಕನ್ನಡದ ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಆ ಕೃತಿಗಳು ಮನುಜನ ಬದುಕಿನ ತಲ್ಲಣಗಳಾಗಲಿ. ತಮ್ಮ ಬರಹ ವೈಚಾರಿಕತೆ ಪ್ರಬುದ್ದತೆಯಡೆಗೆ ಸಾಗಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ. ಶುಭವಾಗಲಿ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ಕನ್ನಡದ ಅಕ್ಷರ ಲೋಕದಲ್ಲಿ ಬೆಳಗುತ್ತಿರುವ ನಂದಾದೀಪ
- ಮನದ ಭಾವನೆಯನ್ನೇ ಭಾವಗೀತೆಯಾಗಿಸುವ ಕವಯಿತ್ರಿ
- ಚಿತ್ರದೊಳಗೆ ಪದವನರಳಿಸುವ ಕಲೆಗಾರ : ಜಬೀವುಲ್ಲಾ ಎಮ್ ಅಸದ್
- ಮಾಲೂರಿನ ಯುವ ಸಾಹಿತಿ ನಾಗೊಂಡಹಳ್ಳಿ ಸುನಿಲ್
- ನಾರಾಯಣಸ್ವಾಮಿ ಮಾಲೂರು – ವಕೀಲರು ಮತ್ತು ಲೇಖಕರು, ಕೋಲಾರ ಜಿಲ್ಲೆ.
