ಪವಿತ್ರವಾದ ಪ್ರೀತಿಗೆ ತಾಜಮಹಲ್ ಕಟ್ಟಬೇಕಾಗಿಲ್ಲ. ಪ್ರೀತಿಸಿದವಳು ಕಷ್ಟ ಪಡದಂತೆ ನೋಡಿಕೊಳ್ಳೋದು ಮುಖ್ಯ ಉತ್ತಮ ಸಂದೇಶವಿರುವ ಬಿ ಆರ್ ಯಶಸ್ವಿನಿ ಅವರ “ನಂಬಿಕೆ” ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಗಂಗಾ ನನಗೆ ವಯಸ್ಸಾಯಿತು. ನಮಗೆ ಬೇರೆ ಮಕ್ಕಳಿಲ್ಲ. ನನಗೆನಾದರೂ ಆದ್ರೆ ನೀನು ಇಲ್ಲಿ ಒಬ್ಬಳೇ ಏನ್ಮಾಡ್ತೀಯಾ. ಅದಕ್ಕೆ ಇಲ್ಲಿರುವ ತೋಟಗಳನ್ನೇಲ್ಲಾ ಮಾರಿ ನಿಮ್ಮ ತವರುಮನೆ ಹತ್ತಿರ ಯಾವುದಾದರೂ ಮನೆ ತೆಗೆದುಕೊಳ್ಳೊಣ. ಅಲ್ಲಿಗೆ ಹೋದರೆ ನಿಮ್ಮವರು ಎಲ್ಲ ಇರುವರು.ನಿನ್ನ ಚೆನ್ನಾಗಿ ನೋಡಿಕೊಳ್ಳುವರು. ನನ್ನ ಈ ಯೋಚನೆಗೆ ನಿನ್ನ ಒಪ್ಪಿಗೆ ಇದೆಯೇ?
ಮಾರಿ ಬಂದ ಹಣವನ್ನು ಫಿಕ್ಸೆಡ್ ಇಡುತ್ತೇನೆ.ಬಂದ ಬಡ್ಡಿದುಡ್ಡು ನಿನಗೆ ಖರ್ಚಿಗೆ ಆಗುತ್ತೆ.ಎರಡು ಅಂತಸ್ತಿನ ಮನೆ ತೆಗೆದುಕೊಂಡು ಒಂದರಲ್ಲಿ ನೀನು ಇರು.ಮತ್ತೊಂದನ್ನು ಬಾಡಿಗೆಗೆ ಕೊಡು.ಇರುವ ಒಬ್ಬಳಿಗೆ ಇದರಿಂದ ಬರುವ ದುಡ್ಡು ಸಾಕಾಗುತ್ತೆ. ಆಗ್ಲಿಂದ ನಾನೇ ಮಾತನಾಡುತ್ತಿದ್ದೇನೆ. ನೀನು ಏನು ಹೇಳುತ್ತಿಲ್ಲ. ಏಕೆ ನಿನಗೆ ಒಪ್ಪಿಗೆ ಆಗಲಿಲ್ವಾ?
‘ಅಲ್ಲ ರೀ…’
‘ಏನು ಹೇಳು… ನಾವಿಬ್ಬರೂ ಚರ್ಚಿಸಿದರೆ ತಾನೇ ಸಮಸ್ಯೆಗಳಿಗೆ ಪರಿಹಾರ ಸಿಗುವುದು’.
‘ನಾವು ದೂರ ಇರುವುದರಿಂದ ನಮ್ಮ ಬಂಧುಗಳು ಬಂದು ಚೆನ್ನಾಗಿ ಮಾತಾಡಿಸಿ ಹೋಗುತ್ತಾರೆ. ಆದ್ರೆ ಹತ್ತಿರಕ್ಕೆ ಹೋದರೆ ಇವರದು ಇದ್ದಿದ್ದೆ ಗೋಳು ಅಂತಾರೆ. ಅಲ್ಲೇ ಇರೋದು ಬಿಟ್ಟು ಇಲ್ಲಿಗೆ ಬಂದು ಪ್ರಾಣ ತಿನ್ನುತ್ತಿದ್ದೇವೆ ಅಂತ ಗೊಣಗುಡುತ್ತಾರೆ. ಇಲ್ಲಿಂದ ಅಲ್ಲಿಗೆ ಹೋಗಿ ಬಾಯಿಗೆ ಬಂದಂತೆ ಬೈಯುವುದನ್ನು ಕೇಳಿಸಿಕೊಳ್ಳಬೇಕು. ಮತ್ತೆ ಏನ್ಮಾಡೋದು? ಹೇಗಿದ್ದರೂ ಇದು ಸ್ವಂತ ಮನೆ ಬಾಡಿಗೆ ಕಟ್ಟು ಅನ್ನೊ ಆಗಿಲ್ಲ. ತೋಟವಿದೆ ಚಿಂತೆಯಿಲ್ಲ ನನಗೆ. ನಾನು ನನ್ನ ಅಪ್ಪನ ಮನೆಯಲ್ಲಿ ಮುದ್ದಾಗಿ ಬೆಳೆದೆ. ನನಗೆ ಅಡುಗೆ ಮಾಡುವುದಕ್ಕೆ ಬರುತ್ತಿರಲಿಲ್ಲ. ಅಡುಗೆನು ಕಲಿಸಿದ್ರಿ. ತೋಟಗಳಲ್ಲಿ ಹೇಗೆ ಕೆಲಸ ಮಾಡೋದು ಅಂತ ಅದನ್ನು ಕಲಿಸಿಕೊಟ್ಟಿದ್ದೀರಾ. ನೀವು ಪೇಟೆಗೆ ಹೋಗಿದ್ದರೆ ಆಳುಗಳನ್ನು ಕಟ್ಟಿಕೊಂಡು ಕೆಲಸ ಮಾಡಿಲ್ವಾ ನಾನು. ಎಷ್ಟೊಂದು ಸಲ ನನ್ನ ಮೇಲೆ ಕೆಲಸ ಬಿಟ್ಟು ಹೋಗಿರುತ್ತಿದ್ರಿ. ಆದರಿಂದ ನನಗೆ ಎಲ್ಲಾ ನಿಭಾಯಿಸುತ್ತೇನೆ ಅನ್ನೊ ಧೈರ್ಯವಿದೆ ಚಿಂತಿಸಬೇಡಿ’.
‘ಅದು ನನಗೆ ಗೊತ್ತು. ನೀನು ಎಲ್ಲ ಕೆಲಸಗಳನ್ನು ಬಲ್ಲ ಪ್ರವೀಣೆ ಅಂತ. ನನ್ನ ಚಿಂತೆ ನಿನಗೆ ವಯಸ್ಸಾದಾಗ ನಿನ್ನ ನೋಡಿಕೊಳ್ಳುವರು ಯಾರು ಇಲ್ಲ ಅಂತ’.
‘ಅಯ್ಯೋ ಅದಕ್ಕೆ ಏಕೆ ಚಿಂತೆ ಮಾಡುತ್ತಿರಾ. ಪಕ್ಕದ್ಮನೆ ಪದ್ದುಗೆ ಇಬ್ಬರು ಗಂಡು ಮಕ್ಕಳು, ಒಬ್ಬಾಕೆ ಮಗಳು. ಮೂವರು ಇದ್ರು ಪದ್ದು, ಆಕೆ ಯಜಮಾನರು ಬೇರೆ ಇಲ್ವಾ. ಮಕ್ಕಳಿದ್ದು ಅವರು ಅನಾಥರಂತೆ ಇಲ್ವಾ’.
‘ಹೇ… ಅವರಿಗೂ ನಮ್ಮದು ಬೇರೆ. ಅವರು ಹಾಸಿಗೆ ಹಿಡಿದರೆ ನೋಡಿಕೊಳ್ಳೋಕೆ ಮಕ್ಕಳು ಬರುತ್ತಾರೆ. ಈಗ ಚೆನ್ನಾಗಿ ಇದರಲ್ಲ, ಅದಕ್ಕೆ ಬೇರೆ ಇದ್ದಾರೆ. ನಮಗೆ ಯಾರು ದಿಕ್ಕು ನೀನೇ ಹೇಳು’.
‘ಚಿಂತೆ ಮಾಡಬೇಡಿ. ನಿಮ್ಮ ಅಣ್ಣನ ಮಗ ರಾಜೇಶ ಚಿಕ್ಕಮ್ಮ, ಚಿಕ್ಕಮ್ಮ ಅಂತ ಬಾಯಿ ತುಂಬಾ ಕರೆಯುತ್ತಾನೆ. ಅವನಿಗೆ ನಾನು ಅಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಇರುವುದಕ್ಕಿಂತ ನಮ್ಮ ಮನೆಯಲ್ಲೇ ಇರುತ್ತಾನೆ. ಅವನು ನನ್ನ ನೋಡಿಕೊಳ್ಳುತ್ತಾನೆ’.
‘ನಿನಗೆ ಅವನ ಮೇಲೆ ಅಷ್ಟೊಂದು ನಂಬಿಕೆ ಇದೆಯಾ?’
‘ಹ್ಞೂಂ ಮತ್ತೆ, ನಾನು ಅವನನ್ನು ಚಿಕ್ಕ ಹುಡುಗನಿಂದ ಬೆಳಸಿದ್ದೇನೆ. ನಿಮ್ಮ ಅಣ್ಣ ಅವರ ಅಮ್ಮನ ತವರು ಮನೆಗೆ ಕಳಿಸಿ ಬೇರೆ ಮದುವೆ ಆದ್ರು. ಪಾಪ ಆ ಮಗುವಿಗೆ ಸ್ವಂತ ಅಮ್ಮ ಇದ್ರು ಅಮ್ಮನ ಹತ್ತಿರ ಹೋಗುವುದಕ್ಕೆ ಆಗಲಿಲ್ಲ. ಇದೇ ಚಿಂತೆಯಲ್ಲೇ ಅವರ ಅಮ್ಮನಿಗೆ ಹುಚ್ಚು ಹಿಡಿಯಿತು. ಇನ್ನೊ ಈ ಮಲತಾಯಿ ಚಂದ್ರಿ ಈ ಮಗುವಿಗೆ ಚಿತ್ರ ಹಿಂಸೆ ಕೊಡುವಳು. ಅದನ್ನು ತಡೆದುಕೊಳ್ಳಲು ಆಗದೆ ರಾಜೇಶ ನಮ್ಮ ಮನೆಗೆ ಬರುತ್ತಾನೆ. ಅವನ ಮೇಲೆ ಬೆಟ್ಟದಷ್ಟು ನಂಬಿಕೆ ಇದೆ ನನಗೆ’.
‘ನನಗೆ ಈಗ ಧೈರ್ಯ ಬಂತು’.
‘ರೀ… ನೀವು ನನಗೆ ಎಲ್ಲಾ ಕಲಿಸಿದ್ರಿ. ನಾನು ಅನಕ್ಷರಸ್ಥೆ ಸ್ವಲ್ಪವಾದರೂ ಬರೆಯುವುದನ್ನು ಓದುವುದನ್ನು ಕಲಿಸಬೇಕಿತ್ತು. ಇದೊಂದೆ ಭಯ ನನಗೆ ಯಾರು ಏನಾದರೂ ಮೋಸ ಮಾಡಿದ್ರೆ ಅಂತ. ಆ ರಾಜೇಶನಾದರು ಓದಿದ್ದರೆ ಚಿಂತೆ ಇರುತ್ತಿರಲಿಲ್ಲ. ಅವರ ಅಪ್ಪ ಆ ಚಂದ್ರಿ ಮಾತು ಕಟ್ಟಿಕೊಂಡು ರಾಜೇಶನನ್ನು ಓದುವುದಕ್ಕೆ ಕಳಿಸಲಿಲ್ಲ. ಅವಳ ಮಕ್ಕಳನ್ನು ಪೇಟೆಯಲ್ಲಿ ಚೆನ್ನಾಗಿ ಓದಿಸಿ ನೌಕರಿ ಪಡೆದುಕೊಳ್ಳುವಂತೆ ಮಾಡಿದಳು’.
‘ಅಯ್ಯೋ ಮಾರಾಯ್ತಿ’…
‘ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ ನನಿಗೆ ಈಗ ಕೇಳುತ್ತಿದ್ದಿಯಾ. ಬರೆಯುವುದನ್ನು ಓದುವುದನ್ನು ಕಲಿಸಬೇಕಿತ್ತು ಅಂತ. ನನಗೆ ಈಗ ಹೇಳಿಕೊಡುವುದಕ್ಕೆ ಆಗುವುದಿಲ್ಲ, ನಿನಗೆ ಓದುವುದನ್ನು ಬರೆಯುವುದನ್ನು ಈಗ ಕಲಿಯುವುದಕ್ಕೆ ಆಗುವುದಿಲ್ಲ. ಯಾವ ವಯಸ್ಸಿನಲ್ಲಿ ಯಾವುದನ್ನು ಮಾಡಲು ಆಗುತ್ತದೆಯೊ ಆ ವಯಸ್ಸಿನಲ್ಲಿಯೇ ಮಾಡಬೇಕು.ಇಲ್ಲ ಅಂದರೆ
ಹೀಗೆ ಆಗೋದು’.
‘ರಾತ್ರಿ ಹನ್ನೆರಡು ಗಂಟೆ ಆಯ್ತು ಮಲಗು. ನನಗೆ ನಿನ್ನ ಮೇಲೆ ನಂಬಿಕೆ ಬಂತು. ನೀನು ಧೈರ್ಯವಂತೆ ಅಂತ’.
‘ಸರಿ ಮಲಗುತ್ತೇನೆ. ನೀವು ಮಲಗಿ ನನ್ನ ಚಿಂತೆ ಬಿಟ್ಟು ಬಿಡಿ’.
ಬೆಳ್ಳಿಗ್ಗೆ ಎಂಟು ಗಂಟೆ ಆಯ್ತು ಇವರು ಇನ್ನೂ ಏಕೊ ಎದ್ದಿಲ್ಲ. ನನಗಿಂತ ಮುಂಚೆ ಎದ್ದು ತೋಟಕ್ಕೆ ಹೋಗಿ ಬಂದು ಪೇಪರ್ ಓದಿಕೊಂಡು ಕುಳಿತಿರುವರು. ಇವತ್ತು ಏಕೆ ಎದ್ದಿಲ್ಲ.
‘ಓ… ರಾತ್ರಿ ತಡವಾಗಿ ಮಲಗಿದ್ವಿ ಅದಕ್ಕೆ ನಾನು ತಿಂಡಿ ಮಾಡಿ ಆದ್ಮೇಲೆ ಎಬ್ಸೋಣ’
‘ರೀ…ತಿಂಡಿ ಮಾಡಿ ಆಯ್ತು ಎದ್ದೇಳಿ. ಜಲ್ದು ಸ್ನಾನ ಮಾಡಿ ಪೂಜೆ ಮಾಡಿ ಬನ್ನಿ ತಿಂಡಿ ತಿನ್ನೋಣ’;..
‘ಯಜಮಾನ್ರು ಮಹೇಶಣ್ಣ ಯಾವ ಉತ್ತರವು ಕೊಡಲಿಲ್ಲ’.
ಗಾಬರಿಯಾಗಿ ಗಂಗಮ್ಮ ಅವರ ಕೋಣೆಗೆ ಓಡಿದರು. ಮಹೇಶಣ್ಣ ಚಿರನಿದ್ರೆಗೆ ಜಾರಿದ್ದರು. ಗಂಗಮ್ಮ,ರಾಜೇಶ ಮಹೇಶಣ್ಣನ ಅಂತ್ಯಕ್ರಿಯೆ ಮಾಡಿದರು. ಒಂದೆರಡು ತಿಂಗಳ ನಂತರ ರಾಜೇಶನ ಸಹೋದರರು ರಾಕೇಶ, ನಾಗೇಶ ಗಂಗಮ್ಮನ ಮನೆಗೆ ಬಂದು ಚಿಕ್ಕಮ್ಮ… ಅಂತ ಕರೆದರು. ಎಂದೂ ಬಾರದವರು ಈ ರಾಜೇಶನ ತಮ್ಮಂದಿರು ಇವತ್ತೇನು ನನ್ನ ಮನೆಗೆ ಬಂದಿದ್ದಾರೆ ಅಂದುಕೊಳ್ಳುತ್ತಾ ಹೊರಗೆ ಬಂದ ಗಂಗಮ್ಮ
‘ಏನು ಮಕ್ಕಳೇ… ಇವತ್ತು ನಮ್ಮ ಮನೆಗೆ ಬಂದಿದ್ದಿರಾ… ಏನು ಸಮಾಚಾರ?’
‘ಅದು ಚಿಕ್ಕಮ್ಮ ನಿಮಗೆ ಓದುವುದಕ್ಕೆ, ಬರೆಯುವುದಕ್ಕೆ ಬರುವುದಿಲ್ಲ ಅದಕ್ಕೆ ಬಂದಿದ್ದು. ಚಿಕ್ಕಪ್ಪನ ಹೆಸರಿನಲ್ಲಿ ಇರುವ ಆಸ್ತಿ ನಿಮ್ಮ ಹೆಸರಿಗೆ ಬರಬೇಕು ಅಲ್ವಾ, ಅದಕ್ಕೆ ನಾವು ನಿಮ್ಮ ಹತ್ತಿರ ಸಹಿ ಹಾಕಿಸಿಕೊಂಡು ಹೋಗೊಣ ಅಂತ ಬಂದಿದ್ದು. ಈಗೋ ನೋಡಿ ಸೆಕ್ರೆಟರಿ ಭಾನುಪ್ರಕಾಶ್ ಅವರು ಬಂದಿದ್ದಾರೆ. ನಾವು ಸುಳ್ಳು ಹೇಳುತ್ತಿಲ್ಲ. ನೀವು ಭಾನು ಅವರನ್ನೇ ಕೇಳಿ?’
ಭಾನುಪ್ರಕಾಶ್
‘ಹ್ಞೂಂ ಅಮ್ಮ ನಿಮ್ಮ ಸಹಿ ಬೇಕು. ನಿಮ್ಮ ಮನೆಗೆ ಬರುತ್ತಿದ್ದೆ. ಅಷ್ಟರಲ್ಲಿ ಇವರು ಸಿಕ್ಕಿದರು. ನಮ್ಮ ಚಿಕ್ಕಮ್ಮನ ಮನೆ ಎಂದು ಅವರೇ ಕರೆದುಕೊಂಡು ಬಂದರು’.
‘ಓ ಹೌದಾ…ನನಗೆ ಸಹಿ ಮಾಡುವುದಕ್ಕೆ ಬರೊಲ್ಲ ನಾನು ಹೆಬ್ಬೆಟ್ಟು’..
‘ಸರಿ ಅಮ್ಮ ಅದನ್ನೇ ಮಾಡಿಬನ್ನಿ’…
‘ಅಷ್ಟರಲ್ಲಿ ಮಹೇಶಣ್ಣನ ಗೆಳೆಯ ಜಯಣ್ಣ ಲಾಯರ್ ಕರೆದುಕೊಂಡು ಮನೆಗೆ ಬಂದರು’.
‘ಏನು ಜಯಣ್ಣ, ಅಪರೂಪ ನಮ್ಮ ಯಜಮಾನರು ಹೋದ ಮೇಲೆ ಇವತ್ತು ನಮ್ಮ ಮನೆಗೆ ಬಂದಿದ್ದೀರಾ’…
‘ಏನು ಮಾಡೋದು ತಂಗ್ಯವ್ವ… ನನಗೆ ಮಹೇಶಣ್ಣ ಒಂದು ಜವಾಬ್ದಾರಿ ಕೊಟ್ಟಿ ಹೋಗಿದ್ದಾನೆ’.
‘ಏನು ಅದು?’..
‘ಮತ್ತೆ ನಿನಗೆ ಓದುವುದಕ್ಕೆ, ಬರೆಯುವುದಕ್ಕೆ ಬರೊಲ್ಲ ಅಂತ ಮಹೇಶಣ್ಣ ಮೊದಲೇ ತಿಳಿದು ವಿಲ್ ಬರೆದಿದ್ದಾನೆ. ಯಾರಾದರೂ ನಿನಗೆ ಮೋಸ ಮಾಡಿ ಸಹಿ ಹಾಕಿಸಿಕೊಂಡು ನಿನ್ನ ಮನೆಯಿಂದ ಹೊರಹಾಕಿ, ಆಸ್ತಿಯನ್ನೆಲ್ಲಾ ಅವರ ಹೆಸರಿಗೆ ಮಾಡಿಸಿಕೊಂಡರೆ ಅಂತ ಭಯ ಅವನಿಗೆ ಅದಕ್ಕೆ ವಿಲ್ ಮಾಡಿಸಿದ್ದ’.
‘ನೋಡು ರಾಕೇಶ, ನಾಗೇಶ ನಿನಗೆ ಮೋಸ ಮಾಡೋಕೆ ಬಂದಿದ್ದಾರೆ’.
‘ನಿಜ ಹೇಳು ಭಾನುಪ್ರಕಾಶ್’..
‘ಹೌದು ಅಮ್ಮ…ಇವರು ನನಗೆ ದುಡ್ಡಿನ ಆಮಿಷ ತೋರಿಸಿ ಹೆದರಿಸಿ ನಿಮ್ಮ ಬಳಿ ಸುಳ್ಳು ಹೇಳು ಅಂತ ಹೇಳಿದರು. ಮಹೇಶಣ್ಣ ಬದುಕಿದ್ದಾಗ ನನಗೆ ಎಷ್ಟೊ ಸಲ ಹಣದ ಸಹಾಯ ಮಾಡಿ ವಾಪಸ್ ಸಹ ಕೇಳಿರಲಿಲ್ಲ. ಅವರ ಸಹಾಯವನ್ನು ನೆನೆದು ನಾನು ಜಯಣ್ಣನಿಗೆ ಫೋನ್ ಮಾಡಿ ಎಲ್ಲ ಹೇಳಿದೆ ಅದಕ್ಕೆ ಜಯಣ್ಣನವರು ಅವರ ಮಗಳು ಲಾಯರ್ ಜ್ಞಾನಳನ್ನು ಕರೆದುಕೊಂಡು ಬಂದರು’.
‘ಲಾಯರ್ ಜ್ಞಾನಳು ವಿಲ್ ಅಲ್ಲಿ ಬರೆದಿರುವುದನ್ನು ಓದಿ ಹೇಳಿದಳು. ಆಸ್ತಿಯನ್ನು ಗಂಗಮ್ಮಳಿಗೆ ಉಳಿಯುವಂತೆ ಮಾಡಿದರು’.
ವಿಲ್ ಅಲ್ಲಿ ಬರೆದಿರುವುದನ್ನು ತಿಳಿದ ಮೇಲೆ ರಾಕೇಶ ,ನಾಗೇಶ ಬಂದ ದಾರಿಗೆ ಸುಂಕವಿಲ್ಲ ಅಂತ ಸುಮ್ಮನೆ ಆಗಿ ಮನೆಯ ದಾರಿ ಹಿಡಿದರು. ನಂತರದ ದಿನಗಳಲ್ಲಿ ರಾಜೇಶ ಗಂಗಮ್ಮನ ಚೆನ್ನಾಗಿ ನೋಡಿಕೊಂಡನು. ಅವರಿಬ್ಬರೂ ಸಂತಸದಿಂದ ಜೀವನ ಸಾಗಿಸಿದರು.
ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ನಮ್ಮಯಜಮಾನ್ರು ಅಣ್ಣನಂತೆ ಮುಂದೆ ಬಂದು ಕಾಪಾಡಿದ ಜಯಣ್ಣನವರು ಮತ್ತು ಅವರ ಮಗಳು ಲಾಯರ್ ಜ್ಞಾನ, ನಮ್ಮ ಯಜಮಾನರಿಗೆ ಕೃತಜ್ಞತೆ ಸಲ್ಲಿಸಿದ ಸೆಕ್ರೆಟರಿ ಭಾನುಪ್ರಕಾಶ್. ಮತ್ತೆ ನನ್ನ ಮಗನಂತೆ ಜೊತೆಗಿರುವ ರಾಜೇಶ ಸರಿಯಾದ ಸಮಯಕ್ಕೆ ಬಂದು ಕಾಪಾಡಿದರು. ಇಲ್ಲ… ಅಂದಿದ್ದರೆ ನನ್ನ ಗತಿ ಏನು ಆಗೋದೊ ಗೊತ್ತೆ ಇಲ್ಲ.
ಅದಕ್ಕೆ ಸ್ವಲ್ಪವಾದರೂ ಓದುಬರಹ ಕಲಿತಿರಬೇಕು. ನನ್ನಂತ ಎಷ್ಟೊ ಅನಕ್ಷರಸ್ಥರಿಗೆ ಯಾವ ಯಾವ ರೀತಿಯಲ್ಲಿ ತೊಂದರೆ ಆಗಿದೆಯೋ ಏನೋ. ನಾನು ಮದುವೆಯಾಗಿ ಬಂದಾಗ ಎಲ್ಲವನ್ನೂ ಹೇಳಿಕೊಟ್ಟರು ನಮ್ಮ ಯಜಮಾನರು. ಪಾಪ ಓದು ಬರಹ ಕಲಿ ಅಂತ ಎಷ್ಟು ಸಲ ಹೇಳಿಕೊಟ್ಟರು. ನನಗೇಕೆ ಅಂತ ಸುಮ್ಮನಾದೆ. ಅವರು ಹೇಳಿಕೊಟ್ಟಾಗ ನಾನು ಮನಸ್ಸು ಮಾಡಿದರೆ ಅದು ಸಾಧ್ಯವಾಗುತ್ತಿತ್ತು.
ಕೆಲವೊಮ್ಮೆ ಅವಕಾಶಗಳು ಸಿಗುತ್ತವೆ. ಅವಕಾಶ ಸಿಕ್ಕಿದಾಗ ಉಪಯೋಗಿಸಿಕೊಳ್ಳದೆ ಹೋದಾಗ ಅದರ ಪರಿಣಾಮ ಅಂದು ತಿಳಿಯದಿದ್ದರೂ ಮುಂದೊಮ್ಮೆ ತಿಳಿಯುತ್ತದೆ.ಅವಕಾಶ ಸಿಕ್ಕಿದಾಗ ಬಳಸಿಕೊಂಡರೆ ಅದು ನಮಗೆ ಅದೃಷ್ಟವನ್ನೆ ತಂದುಕೊಡಬಹುದು.
ನಮ್ಮ ಅತ್ತೆ ಮಾವ ನನಗೆ ಮಕ್ಕಳು ಆಗಲಿಲ್ಲವೆಂದು ಇನ್ನೊಂದು ಮದುವೆ ಮಾಡಲು ಒತ್ತಾಯ ಮಾಡಿದರು ಸಹ ನಮ್ಮ ಯಜಮಾನರು ನನ್ನನ್ನು ಬಿಡುವುದಿಲ್ಲ, ಬೇರೆ ಮದುವೆ ಆಗುವುದಿಲ್ಲ ಎಂದರು. ನಮ್ಮ ಯಜಮಾನರು ನನ್ನ ಹೆಸರಿಲ್ಲ ತಾಜಮಹಲ್ ಕಟ್ಟಿಸದೆ ಇರಬಹುದು. ಆದರೆ ನನ್ನ ಬಿಟ್ಟು ಹೋದ ಮೇಲೆ ನಾನು ಎಲ್ಲಿ ಕಷ್ಟಪಡುತ್ತೇನೊ ಅಂತ ಮುಂದಾಲೋಚನೆ ಮಾಡಿ ಎಲ್ಲ ಸರಿಮಾಡಿ ಹೋಗಿದ್ದಾರೆ.ಅವರಿಗೆ ನನ್ನ ಮೇಲೆ ಇರುವುದು ಪವಿತ್ರವಾದ ಪ್ರೀತಿ.
ನನ್ನ ನಂಬಿ ಬಂದವಳಿಗೆ ಉಸಿರುವವರೆಗೂ ಮತ್ತು ನಂತರವೂ ಚೆನ್ನಾಗಿರಲಿ ಎಂದು ಬಯಸಿ ಕಾಪಾಡಿದವರು.ಇಂತಹ ಪ್ರೀತಿ ಮುಂದೆ ಯಾವ ಕಾಣಿಕೆ ಕೊಟ್ಟರು ಅದೆಲ್ಲಾ ಶೂನ್ಯದಂತೆ. ನಮ್ಮಿಬ್ಬರ ನಡುವೆ ಇದ್ದಂತ ಸುಮಧುರವಾದ ಪ್ರೀತಿಗೆ ಒಬ್ಬರಿಗೊಬ್ಬರಿಗಿದ್ದ ಗಾಢವಾದ ನಂಬಿಕೆಯೇ ಕಾರಣ.ನಂಬಿಕೆಯನ್ನುವುದು ಇಲ್ಲ ಅಂದರೆ ಯಾವ ಸಂಬಂಧವು ಗಟ್ಟಿಯಾಗಿರುವುದಿಲ್ಲ.
- ಬಿ ಆರ್ ಯಶಸ್ವಿನಿ (ಯಶು)
