ಕುಷ್ಟಗಿಯಲ್ಲಿ ನಿಜಾಮ್ ನ ಕಾಲದ ಬಾವಿಯಿದೆ, ಅದನ್ನು ಚಾಮರಬಾವಿ ಎಂತಲೂ ಕರೆಯುತ್ತಾರೆ. ಅವು ಇಂದಿಗೂ ಗಟ್ಡಿಮುಟ್ಟಾಗಿ ಇತಿಹಾಸ ಹೇಳುತ್ತಿವೆ, ಆ ಬಾವಿ ಅದರ ವಿಶೇಷತೆಯನ್ನು ಅದೇ ಊರಿನವರಾದ ಲೇಖಕ ನಟರಾಜ ಸೋನಾರ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಕೊಪ್ಪಳ ಜಿಲ್ಲಾ ಕೇಂದ್ರದಿಂದ ಉತ್ತರ ದಿಕ್ಕಿಗೆ ೫೦ ಕೀ ಮೀ ಅಂತರದಲ್ಲಿರುವ ಪಟ್ಟಣ ಕುಷ್ಟಗಿ ಸಮುದ್ರಮಟ್ಟದಿಂದ ೬೩೯ ಮೀಟರ್ ಎತ್ತರ ಪ್ರದೇಶದಲ್ಲಿ , ೨೦೯೬ ಫೀಟ್ ಅಂತರದಲ್ಲಿ, ೧೫. ಡಿಗ್ರಿ ೭೭ ಸೆಕೆಂಡ್ ಉತ್ತರ ಅಕ್ಷಾಂಶ ಹಾಗೂ ೨೫.ಡಿಗ್ರಿ ೦೨ ಸೆಕೆಂಡ್ ಪೂರ್ವ ರೇಖಾಂಶದಲ್ಲಿ ಭೌಗೋಳಿಕ ವಿಸ್ತಾರಹೊಂದಿರುವ ನಗರ ತಾಲೂಕಿನ ಉತ್ತರಕ್ಕೆ ,ಬಾಗಲಕೋಟ ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ತಾಲೂಕುಗಳು. ಪೂರ್ವ ದಿಕ್ಕಿಗೆ ರಾಯಚೂರು ಜಿಲ್ಲೆಯ ಸಿಂಧನೂರು, ಮತ್ತು ಲಿಂಗಸೂರು ತಾಲೂಕುಗಳು, ಪಶ್ಚಿಮ ದಿಕ್ಕಿಗೆ, ಗದಗ, ರೋಣ ತಾಲೂಕುಗಳು, ದಕ್ಷಿಣ ದಿಕ್ಕಿಗೆ ,ಕೊಪ್ಪಳ, ಗಂಗಾವತಿ ಯಲಬುರ್ಗಾ ತಾಲೂಕಗಳ ವ್ಯಾಪ್ತಿಒಳಗೊಂಡಿದ್ದು, ನಾಲ್ಕು ಕಂದಾಯ ಹೋಬಳಿಗಳಿವೆ, ಕುಷ್ಟಗಿ ಇತಿಹಾಸದ ಕಾಲ ಕ್ರಿ.ಪೂ ೨ ರಿಂದ ೩ ನೇ ಶತಮಾನದ ಅವಶೇಷಗಳು ಕಂಡುಬಂದಿವೆ, ಕ್ರಿ ಶ.೧೮೬೧ರಲ್ಲಿ ಕ್ಯಾಪ್ಟನ್ ಡಬ್ಲೂ ಸಿ. ಅಂಡರ್ಸನ್ ಎಂಬವರು ತಾಲೂಕಿನ ನೂರು ಗ್ರಾಮಗಳ ಜಮೀನುಗಳ ಸಮೀಕ್ಷೆಯನ್ನೂ , ಹಾಗೂ ೧೮೮೫ ರಲ್ಲಿ ಇತರೆಗ್ರಾಮಗಳ ಸಮೀಕ್ಷೆ ಮಾಡಿಸಿದಾತ. ಹೀಗೆ ನೂತನ ಶಿಲಾಯುಗದಿಂದ ಕಲ್ಯಾಣ ಚಾಲುಕ್ಯರ ಕಾಲದವರೆಗಿನ ವೈಭವದ ಕುರುಹುಗಳು ಕಂಡುಬರುವವು.

ತಾಲೂಕಿನ ವಾಯುಗುಣವು ಒಣ ಹವೆಯಿಂದ ಕೂಡಿದ್ದು , ಹವಮಾನ ಹಿತಕರವಾಗಿದೆ ಸಾಮಾನ್ಯ ಮಳೆಯಪ್ರಮಾಣವು ಕಡಿಮೆಯಾಗುತ್ತಿದ್ದು, ಮಳೆಯಾಶ್ರೀತ ಬೆಳೆಗಳನ್ನು ಬೆಳೆಯುವರು, ,ಕೊಳವೆ ಬಾವಿ ತೋಟಗಳಿವೆ. ವಾಡಿಕೆ ಮಳೆಯ ಪ್ರಮಾಣ ಅಂದಾಜು ೫೮೨ಮೀ ಮೀ ಗಳಾಗಿವೆ. ಅಲ್ಲಲ್ಲಿ ಗುಡ್ಡ ಬೆಟ್ಟಗಳು, ಗ್ರಾನೈಟ್, ಖನಿಜ ಸಂಪತ್ತು ಫ್ರೀ ಕೇಂಬ್ರೀಯನ್, ಸೋಪ್ ಸ್ಟೋನ್ , ಭೂಪದರುಗಳಿಂದ ಕೂಡಿದೆ.
ನಾಲಾಗಳು ಕೆರೆ ಹಳ್ಳಗಳು ಸಣ್ಣ ಜಲಪಾತಗಳು ಅಂದಾಜು ೩೫ ಹೆಕ್ಟೇರ್ ನಷ್ಟು ಅರಣ್ಯ ಸಂಪತ್ತು ಹೊಂದಿದ ಪ್ರದೇಶ ಇದಾಗಿದೆ.
ಕುಷ್ಟಿಗಿ _ ಕುಷ್ಟಗಿ , ಎಂದು ಹೆಸರು ಬರಲು ಇಲ್ಲಿಯ ವಾತಾವರಣ , ಗಿಡ ಮೂಲಿಕೆಗಳ ಹೇರಳವಾದ ಪೊರೈಕೆ ಜಲಮೂಲ ದಂತಹ ಕಪಿಲೆಪ್ಪ ಗುಡ್ಡದ ಔಷಧೀಯ ಗುಣಗಳ ಸಸ್ಯ ಸಂಪತ್ತು ಹಿತ ಮಿತವಾದ ಹವಮಾನ ವಿಶೇಷ ನೀರಿನ ಗುಣ ಧರ್ಮಕ್ಕೆ ಎಂತಹ ಕಾಯಿಲೆಗಳಿದ್ದರು ಗುಣವಾಗುವ ನಂಬಿಕೆಇತ್ತು ,ಕುಷ್ಟರೋಗಿಗಳು ಬಂದು ಇಲ್ಲಿವಾಸವಾದರೆ, ಅವರ ರೋಗ ರುಜಿನಗಳು ಕಡಿಮೆಯಾಗುವ ಪ್ರತೀತಿ ಇತ್ತು ಎಂದು ಹಿರಿಯರು ಹೇಳುವ ಮಾತಿದು. ಇಂದು ಪ್ಲೋರೈಡ್ ಯುಕ್ತ ನೀರಿನ ಬಳಕೆ ಹೆಚ್ಚಾಗಿದ್ದು ಪುರಸಭೆಯ ವತಿಯಿಂದ ಕೊಳವೆಬಾವಿ ಹಾಗೂ ಸಂಗಮದಿಂದ ಬರುವ ನಲ್ಲಿ ನೀರು ಉಪಯೋಗಿಸುತ್ತಿರುವರು ,ನಿಡಸೇಸಿ ಕೆರಯೇ , ನಮ್ಮ ಜೀವನ ಉಳಿಸಿದ ಏಕೈಕ ಕೆರೆ , ” ಕುಷ್ಟಗಿ ಜೀವನಾಡಿ , ”

ಕುಷ್ಟಗಿಯ ಹಳೆಮಂದಿ ಎರಡುಗಾಡಿ ,ನಾಲ್ಕುಗಾಡಿ ಆರುಗಾಡಿ ಬಾವಿಗಳಿಗೆ , ಹಗ್ಗ ಬಿಟ್ಟು ನೀರನ್ನು ಸೇದಿಕೊಂಡು ಹೆಚ್ಚಾಗಿ ಬಳಕೆಮಾಡುತ್ತಾ ಇದ್ದರು, ಮೊದಲು ಕುಷ್ಟಗಿ ಹುಟ್ಟಿದಾಗ ಇದ್ದ ಬಾವಿ ” ಚಾಮರಬಾವಿ ” ಈ ಬಾವಿಯು ಪೂರ್ವಿಯಾಗಿದ್ದು ,ಈ ನೀರು ಕುಡಿದರೆ, ನಾರಿನ ಹುಳದಿಂದ ನಾರುಹುಣ್ಣು ಬಂದಿದ್ದರಿಂದ ಬಾವಿ ಮುಚ್ಚಲಾಯಿತು, ಕೆರೆ ಅಂಗಳದ ಪ್ರದೇಶದಲ್ಲಿ ಮಳೆಬಂದರೆ , ನೀರಿನ ಊಟಿ ಕಿತ್ತು ಮನೆಯಲ್ಲಿ ನೀರು ನುಗ್ಗುವುದು ಸರ್ವೆ ಸಾಮಾನ್ಯ ವಾಗಿತ್ತು, ಕಲ್ಲಬಾವಿಗೆ ನಾಲ್ಕೂ ತೂಬುಗಳಿದ್ದವು , ಇದೇ ಆಗಿನ ಕಾಲದ ಬಾವಿಗಳ ನೀರಿನ ಮೂಲ ಸೆಲೆಯಾಗಿತ್ತು ದೇಸಾಯಿಯವರ ಬಾವಿ , ಅಡವಿರಾಯ ಬಾವಿ, ಈಜು ಕಲಿಯುವ ,ಕಲಿಸುವ ಬಾವಿ ಇದಾಗಿದ್ದು ರೈಟ್ ಸಾಬ ತರಬೇತಿ ನೀಡುತ್ತಿದ್ದರು ಸಿದ್ದವೀರಯ್ಯ ಮಳಿಮಠ ಅವರ ಹತ್ತಿಗಿರಣಿ ಬಾವಿ, ತಾವರಗೇರಾ ರಸ್ತೆಯ ಶೆಟ್ಟರ ಹತ್ತಿ ಗಿರಣಿ ಬಾವಿ, ಸಂತೆಬಜಾರದ ಚತ್ರಿಬಾವಿ, ದವಾಖಾನಿಬಾವಿ, ಹಳೆ ಐ ಬಿ ಹತ್ತಿರದ ಬಂಗಲೆಬಾವಿ.ಬಿ ಡಿ ಒ ಅಪೀಸ್ ಹತ್ತಿರದ ಬೀಡಿಬಾವಿ, ಕೆಇಬಿ ಬಳಿ ಇರುವ ಕರೆಂಟಿನ ಬಾವಿ, ಮಂತ್ರಲಾಕ್ಷಯ್ಯ ಅವರ ಮನೆ ಪಕ್ಕದ ದೊಡ್ಡ ಮಸೂತಿ ಬಾವಿ, ವಿಠ್ಠಲದೇವರಗುಡಿ ಹತ್ತಿರದ ಅಗಳತಿಬಾವಿ, ಇದರ ಸಮೀಪದ ಸಂದಿಯಲ್ಲಿ ಇರುವ ಜಿಗಜಿನ್ನಿ ಯವರ ಮನೆ ಹಿಂದಿನ ಭಾಗದ ಬಾವಿ, ಗೌಡರ ಓಣಿಯ, ರುದ್ರ ಗೌಡರ ಮನೆಸಮೀಪದ ಸುಗೀರಬಾವಿ, ( ಇದರ ನೀರು ಬಲು ಸಿಹಿ,)ಕಿಡಿಯಪ್ಪನ ಮನೆಹತ್ತಿರದ ಕಿಡಿಯಪ್ಪನ ಬಾವಿ.ರಾಜಪ್ಪನ ಮನೆಹತ್ತಿರದ ಅಂಬಲಿಬಾವಿ. ಸಾವುಕಾರ ಅಡಿವೆಪ್ಪನವರ ಮನೆ ಹತ್ತಿರದ ಕುಂಬಾರ ಬಾವಿ, ಕೇರಿಯಲ್ಲಿ ಇರುವ ಹಳೆಯ ಎರಡುಬಾವಿಗಳು , ಹಳೆ ನಿಡಸೇಸಿ ರಸ್ತೆಯ ಸಿದ್ದಪ್ಪಜ್ಜನ ಬಾವಿ ,ಹಳೆರಾಮದೇವರ ಗುಡಿ ಹತ್ತಿರದ ಆರು ಗಾಡಿಯ ಬಾವಿ, ( ಮುಖ ಪುಟದ ಚಿತ್ರ) ತೆಗ್ಗಿನ ಓಣಿಯ ನಾರಾಯಾಣಚಾರ ಬಾವಿ,ಮುಲ್ಲಾರವಾಡಿಯ ಮಾಟಲದಿನ್ನಿಯವರ ಮನೆಬಾವಿ. ಮಲ್ಲಿಕಾರ್ಜುನ ದೇವಾಲಯ ದ ಬಳಿಯ ಮಲ್ಲಯ್ಯನ ಬಾವಿ ಕೋರಿಬಾವಿ, (ಇಳಿದು ತುಂಬುವದು )ಎನ್ಎಚ್ ಗೆ ರಸ್ತೆ ಅಗಲೀಕರಣಕ್ಕೆ ತುತ್ತಾದ ಕಲಾತ್ಮಕ ಬಾವಿ , ತಹಶೀಲಬಾವಿ, ಬುತ್ತಿ ಬಸವಣ್ಣನ ಬಾವಿ,ದಾನನಗೌಡರ ಬಾವಿ, ನಿಡೇಶೆಸಿ ಅಜ್ಜರ ಹೊಸಬಾವಿ ( ಅಲಾಯಿ ದೇವರು ಹೊಳೆಗೆ ಹೋಗುವದು )
ರಾಯರ ಮಠದ ಹತ್ತಿರ ಭಾಗ್ಯದ ಹನುಮಂತ ದೇವರ ಗುಡಿ ಹಿಂದೆ , ನಿಜಾಮ್ ಕಾಲದ್ದು ವರದಪ್ಪನ ಬಾವಿ.ವಾಡಿಕೆಯಂತೆ ಮಡಿ ನೀರಿನ ಮನೆ ಬಾವಿಗಳು : ರೂಡಿಯಲ್ಲಿದ್ದವು
(ಬ್ರಾಹ್ಮಣರ ಪ್ರತಿಯೊಂದು ಮನೆಯಲ್ಲಿ ಬಳಕೆಮಾಡುವ ನೀರಿನ ಬಾವಿಗಳು ಇರುತ್ತಿದ್ದವು), ಮದ್ದಾನೇಶ್ವರ ಮಠದ ಬಾವಿ, ದುರ್ಗಾಕಾಲೋನಿಯ ಕಾರಟಗಿಯರ ಬಾವಿ, ಸೋದೆಗಾರ ಬೀಮಣ್ಣನ ಬಾವಿ, ( ಜನಿವಾರದವರ ಸ್ಮಶಾನದ ಹತ್ತಿರ ,)
ಗ್ರಾಮದೇವತೆಯ ಬಚ್ಚಲಬಾವಿ ಹಳೆಬಜಾರದ ಹಳೆ ಪೋಸ್ಟ ಆಪೀಸ್ ಬಳಿ , ಸಣ್ಣಕ್ಕಿ ಬಾವಿ ಇನ್ನೂ ಅನೇಕ ಬಾವಿಗಳು ಹುಡುಕಿದರೆ , ಕಂಡುಬರುತ್ತವೆ , ಮುಚ್ಚಿಹೋದ ಬಾವಿಗಳೇ ಜಾಸ್ತಿ , ಉಳಿದ ಬಾವಿಗಳು ಅಲ್ಲಲ್ಲಿ ಕಂಡುಬಂದರೂ ನೀರಿನ ಲಕ್ಷಣಗಳಿಲ್ಲ. ನಿಜಾಮ್ ನ ಕಾಲದ ಬಾವಿಗಳು ಇವು ,ಇನ್ನೂ ಗಟ್ಡಿಮುಟ್ಟಾಗಿ ಇತಿಹಾಸ ಹೇಳುತ್ತಿವೆ , ಹಳೆಯ ಕಾಲದ ಕುಷ್ಟಗಿಯಲ್ಲಿ ವಾರ್ಡಗೊಂದು ಬಾವಿಗಳಿರುವ ಕುರುಹುಗಳು ಕಾಣುತ್ತಿವೆ, ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಕ್ರಿಟ್ ಕಾಡಾಗುವ ಈ ಸಂಧರ್ಭದಲ್ಲಿ ಮರೆತುಹೋದ ಗತಕಾಲದ ಬಾವಿಗಳು. ನಮ್ಮವು ನಮ್ಮೂರಿನವು,
- ನಟರಾಜ ಸೋನಾರ್ (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ) ಕುಷ್ಟಗಿ
