ಸಾಧನೆಗೆ ಭಾಷೆ ಎಂದೂ ಕೂಡಾ ತೊಡಕಾಗುವುದಿಲ್ಲ ಎನ್ನುವುದಕ್ಕೆ ಈ ಮಂದರ ಸಾಕ್ಷಿಯಾಗಿದ್ದಾಳೆ.ಪೋಸ್ಟ್ ಕಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಷ್ಟೇ ಅಲ್ಲ, ಕನ್ನಡ ಭಾಷೆಯಲ್ಲಿ ಬರೆದು ದೇಶದ ಪ್ರಧಾನಿಯವರನ್ನ ಭೇಟಿಯಾಗಲು ಅವಕಾಶ ಪಡೆದಿರುವ ರಾಜ್ಯದ ಏಕೈಕ ವಿದ್ಯಾರ್ಥಿನಿ ಇವಳು. ಮುಂದೆ ಓದಿ ನಮ್ಮ ಹೆಮ್ಮೆಯ ಮಂದಾರ…
ಬಡತನದಲ್ಲಿ ಹುಟ್ಟಿದ ಮಾತ್ರಕ್ಕೆ ಸಾಯುವವರೆಗೂ ಬಡತನದ ಬೇಗೆಯಲ್ಲಿ ಬೇಯಬೇಕು ಎನ್ನುವ ನಿಯಮವೇನು ಇಲ್ಲ. ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳುವುದು ಅವರವರ ಕೈಯಲ್ಲಿದೆ. ಅದಕ್ಕೆ ಮಾದರಿಯಾಗಿದ್ದಾಳೆ ಈ ಬಾಲಕಿ. ಸರ್ಕಾರಿ ಶಾಲೆಯಲ್ಲಿ ಓದಿ, ಕನ್ನಡ ಭಾಷೆಯಲ್ಲಿಯೇ ‘ನಮ್ಮ ದೇಶ ಹೇಗಿರಬೇಕು’ ಎನ್ನುವುದನ್ನು ತನ್ನ ಸುಂದರ ಕಲ್ಪನೆಯನ್ನು ಪೋಸ್ಟ್ ಕಾರ್ಡ್ ಮೂಲಕ ಪ್ರಧಾನಿಗೆ ಪತ್ರ ಬರೆದು ಕಳುಹಿಸಿ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಈ ಮಂದಾರ.

ತೀರ್ಥಹಳ್ಳಿ ತಾಲೂಕು ಶಿರಗಾರು ಎನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಮಂದಾರ ಬಾಲ್ಯದಿಂದಲೂ ಕವನ, ಚಿತ್ರಕಲೆ, ಆಟಪಾಠಗಳಲ್ಲಿ ಮುಂದಿರುವ ಬಹುಮುಖ ಪ್ರತಿಭೆ. ಬಡತನದಲ್ಲಿಯೇ ಹುಟ್ಟಿ ಬೆಳೆದರೂ ಸಾಧಿಸಬೇಕು ಎನ್ನುವ ಛಲಗಾರ್ತಿ. ಹದಿನಾರು ವರ್ಷದ ಈ ಬಾಲಕಿ, ಶಿವಮೊಗ್ಗದ ವಿಕಾಸ ಕಾಲೇಜಿನಲ್ಲಿ ಈಗ ಪ್ರಥಮ ಪಿಯುಸಿ ಓದುತ್ತಿದ್ದಾಳೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೋಣಬೂರುನಲ್ಲಿ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ ವರೆಗೂ ಕನ್ನಡ ಮಾಧ್ಯಮದಲ್ಲೇ ಓದಿ, ತೇಜಸ್ ಎನ್ನುವ ಪರೀಕ್ಷೆ ಬರೆದು ವಿಕಾಸ್ ಕಾಲೇಜನಲ್ಲಿ ಸೀಟು ಗಿಟ್ಟಿಸಿಕೊಂಡಳು. ಈ ಕಾಲೇಜಿನಲ್ಲಿ ಏಳು ವರ್ಷ ಉಚಿತ ವಿದ್ಯಾಭ್ಯಾಸವಿರುವುದರಿಂದ ಓದಿಗೆ ಯಾವುದೇ ಅಡೆತಡೆಗಳಿಲ್ಲದೆ, ಸಂತೋಷದಿಂದ ಮುನ್ನುಗ್ಗುತ್ತಿದ್ದಾಳೆ ಮಂದಾರ.

(ಮಂದಾರ ಓದಿದ ನೋಣಬೂರು ಸರ್ಕಾರಿ ಶಾಲೆ)

(ಮಂದಾರ ಓದುತ್ತಿರುವ ವಿಕಾಸ್ ಕಾಲೇಜು)
ಪೋಸ್ಟ್ ಕಾರ್ಡ್ ನಲ್ಲಿ ಆಯ್ಕೆ ಆಗುವುದೆಂದರೆ ಏನು?
ಒಂದು ದಿನ ತಾನು ಓದುತ್ತಿದ್ದ ಕಾಲೇಜಿಗೆ ಮೆಮೋ ಬಂದಿತ್ತು, ಅದರಲ್ಲಿ ೨೦೪೭ ರಲ್ಲಿ ನಮ್ಮ ದೇಶ ಹೇಗಿರಬೇಕು? ಅಥವಾ ಸ್ವಾತಂತ್ರ ಹೋರಾಟಗಾರರು, ಈ ಎರಡು ವಿಷಯದಲ್ಲಿ ಒಂದನ್ನು ಆಯ್ಕೆ ಮಾಡಿ ತಮ್ಮ ಅನಿಸಿಕೆಯನ್ನು ಪೋಸ್ಟ ಕಾರ್ಡ್ ನಲ್ಲಿ ಬರೆದು ಪ್ರಧಾನಿಯವರ ವಿಳಾಸಕ್ಕೆ ಕಳುಹಿಸಿಕೊಡಬೇಕಿತ್ತು. ಅತ್ಯುತ್ತಮ ಬರವಣಿಗೆ ಇರುವ ವಿದ್ಯಾರ್ಥಿಗೆ ಬಹುಮಾನದ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶವಿತ್ತು.

(ಮಂದಾರ ವಿಜ್ಞಾನ ಶಿಕ್ಷಕಿ)

(ಮಂದಾರ ಅವರ ಶಿಕ್ಷಕರ ವರ್ಗ)
ಆಗ ಮಂದರಾ ಅವರು ಆಯ್ಕೆ ಮಾಡಿಕೊಂಡಿದ್ದು ,೨೦೪೭ ರಲ್ಲಿ ನಮ್ಮ ದೇಶ ಹೇಗಿರಬೇಕು? ಎನ್ನುವ ವಿಷಯ. ” ನನ್ನ ಮಾತೃಭಾಷೆಯಾದ ಕನ್ನಡ ಭಾಷೆಯಲ್ಲಿಯೇ ಪತ್ರ ಬರೆದು ಕಳುಹಿಸಿದ್ದೆ, ಅದು ಆಯ್ಕೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಸಿಕ್ಕ ಸಣ್ಣ ಅವಕಾಶವನ್ನು ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ಭಾಗವಹಿಸಿದ್ದೆ. ಅಷ್ಟೇ ಪೋಸ್ಟ್ ಕಾರ್ಡ್ ಆಯ್ಕೆಯಾಗಿದ್ದು ಸಂತೋಷ ತಂದಿದೆ. ಸದ್ಯದಲ್ಲೇ ನಮ್ಮ ಪ್ರಧಾನಿಯನ್ನು ಭೇಟಿಯಾಗುತ್ತೇನೆ ” ಎಂದು ತನ್ನ ಹರ್ಷವನ್ನುಮಂದಾರ ವ್ಯಕ್ತಪಡಿಸುತ್ತಾಳೆ .
”ನಾನು ಓದಿದ್ದು ಕನ್ನಡ ಮಾಧ್ಯಮದಲ್ಲೇ, ನನ್ನ ಭಾಷೆಯ ಮೇಲೆ ನನಗೆ ಹೆಮ್ಮೆಯಿದೆ. ಕನ್ನಡ ಮಾಧ್ಯಮ ಎಂದು ಮೂಗುಮುರಿಯುವವರಿಗೆ ಹೇಳುವುದಷ್ಟೇ ಸಾಧಿಸಬೇಕು ಎನ್ನುವ ನಿರ್ಧಾರ ನಮ್ಮಲ್ಲಿ ಧೃಡವಾಗಿದ್ದರೆ, ಭಾಷೆ ಅಡ್ಡಿಯಾಗುವುದಿಲ್ಲ. ಕನ್ನಡದಲ್ಲೇ ಸಾಧನೆ ಮಾಡಿದ ಸಾಕಷ್ಟು ಸಾಧಕರು ನಮ್ಮ ನಡುವೆ ಇದ್ದಾರೆ. ಅವರನ್ನು ಮಾದರಿಯಾಗಿಟ್ಟುಕೊಂಡು ಮುನ್ನುಗ್ಗಲು ಪ್ರಯತ್ನಿಸಬೇಕು. ಕನ್ನಡ ಭಾಷೆಯನ್ನು ತಿರಸ್ಕಾರದಿಂದ ನೋಡಬೇಡಿ. ನಮ್ಮ ಭಾಷೆಯನ್ನು ನಾವು ಮೊದಲು ಪ್ರೀತಿಸಬೇಕು” ಎಂದು ಭಾಷಾಭಿಮಾವನ್ನು ವ್ಯಕ್ತಪಡಿಸುತ್ತಾಳೆ ಮಂದಾರ.
ಮುಂದೊಂದು ದಿನ ಐಎಎಸ್ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕು ಎನ್ನುವ ಕನಸ್ಸನ್ನು ಹೊತ್ತು ನಿಂತಿದ್ದಾಳೆ. ವಿಕಾಸ್ ಕಾಲೇಜ್ ನನ್ನ ಕನಸಿಗೆ ನೀರೆರೆಯುತ್ತಿದೆ. ಅಲ್ಲಿಯ ಶಿಕ್ಷಕರು, ನೊಣಬೂರು ಎಲ್ಲಾ ಗುರುವೃಂದದವರಿಗೆ ಹಾಗು ನನ್ನ ಬೆನ್ನೆಲುಬಾಗಿ ನಿಂತ ನನ್ನ ಪೋಷಕರಿಗೆ ನಾನು ಯಾವಾಗಲೂ ಚಿರಋಣಿ ಎನ್ನುತ್ತಾ ತನ್ನ ಮಾತನ್ನು ಮುಗಿಸಿತ್ತಾಳೆ ಈ ಪ್ರತಿಭಾನ್ವಿತೆ ಮಂದಾರ.
ಮಂದಾರಳ ಕನಸು ಸಾಕಾರಗೊಳಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.
ಮಾಹಿತಿ ಕೃಪೆ : kannadigana creations
- ಶಾಲಿನಿ ಹೂಲಿ ಪ್ರದೀಪ್
