ಸ್ವಾತಂತ್ರ್ಯ ಹೋರಾಟಗಾರ ನನ್ನ ಅಜ್ಜ – ಮಾಲತಿ ಗಣೇಶ್



ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಸತ್ಯನಾರಾಯಣ ಪರಮೇಶ್ವರ ಹೆಗಡೆ ನನ್ನ ಅಜ್ಜ. ಸ್ವಾತಂತ್ರಕ್ಕಾಗಿ ಹೋರಾಡಿದ ಹೋರಾಟಗಾರರಲ್ಲಿ ನನ್ನ ಅಜ್ಜನು ಕೂಡಾ ಒಬ್ಬರು. ನನ್ನ ಅಜ್ಜ ನನ್ನ ಹೀರೊ – ಮಾಲತಿ ಗಣೇಶ್. ಮುಂದೆ ಓದಿ…

‘ದೇಶಭಕ್ತಿ ಗೀತೆಗಳ ವಾಚನ ಸ್ಪರ್ಧೆ ‘ ಅಂತ ಮೊನ್ನೆ ಒಬ್ರು share ಮಾಡಿದ್ರು. ಓದಿದಾಕ್ಷಣ ನೆನಪಾಗಿದ್ದು ಅಜ್ಜ. ನಮ್ಮ ಅಜ್ಜ, ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸತ್ಯನಾರಾಯಣ ಪರಮೇಶ್ವರ ಹೆಗಡೆ (1919-1998), ಸ ಪ ಹೆಗಡೆ ಮಾಸ್ತರರು.. In short ಸತ್ತಿಮಾಸ್ತರ್ರು. ಊರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ಹೊಲನಗದ್ದೆ ಗ್ರಾಮ. ವೃತ್ತಿಯಲ್ಲಿ ಹಿಂದಿ ಶಿಕ್ಷಕರು. ಅಂದಿನ ಪ್ರಧಾನಿ Smt ಇಂದಿರಾಗಾಂಧಿಯವರ ಅಮೃತ ಹಸ್ತದಿಂದ ‘ತಾಮ್ರ ಪಟ’ ಪಡೆದವರು. ಸ್ವಾತಂತ್ರ ಹೋರಾಟಗಾರರಿಗಾಗಿ ತಾಮ್ರದ ಹಾಳೆಯಲ್ಲಿ ಬರೆದ ಪ್ರಶಸ್ತಿ ಪಾತ್ರವೇ ಈ ‘ತಾಮ್ರ ಪಟ ‘. ಖಾದಿ ಧೋತ್ರ, ಕುರ್ತಾ, ನೆಹರು ಜಾಕೆಟ್, ತಲೆಮೇಲೆ ಖಾದಿ ಟೊಪ್ಪಿ, ಜೊತೆಗೆ ಒಂದು cotton ಬಗಲಚೀಲ.. ಇವು ಅಜ್ಜನ ಯಾವತ್ಕಾಲದ identity. ಇಲ್ಲಿಂದ ದಿಲ್ಲಿಗೇ ಹೋಗೋವಾಗ್ಲೂ ಇಷ್ಟೇ ಅಜ್ಜನ ಪೋಷಾಕು. ಬಗಲಚೀಲದಲ್ಲಿ ಇನ್ನೊಂದು ಜೊತೆ ವಸ್ತ್ರ ಜೊತೆಗೆ ಅವನ ‘ತಾಮ್ರಪಟ ‘. ಈ ತಾಮ್ರಪಟ ಬಿಟ್ಟು ಅಜ್ಜ ಇಲ್ಲ, ಅಜ್ಜನ ಬಿಟ್ಟು ತಾಮ್ರಪಟ ಇಲ್ಲ. ಎಲ್ಲೇ ಹೋಗಲಿ ಅಜ್ಜನ ಮಾತಿನ ವರಸೆ ಶುರುವಾಗೋದೇ ಉತ್ತರ ಕರ್ನಾಟಕದ ಭಾಷಾ ಶೈಲಿಯಲ್ಲಿ.. ” ನಾನು ಸ್ವಾತಂತ್ರ್ಯ ಹೋರಾಟಗಾರ ಅದೇನಿ, ಇಂದಿರಾಗಾಂಧಿ ನನಗೆ ತಾಮ್ರಪಟ ಕೊಟ್ಟಾಳ.”

ಅಜ್ಜ teachers training ಮಾಡಿದ್ದು ಧಾರವಾಡದಲ್ಲಿ. ಆವಾಗ ಓದುವಾಗಲೇ ಜೈಲುವಾಸ. ಇನ್ನು ಮುಂದೆ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ ಅಂತ ಹಸ್ತಾಕ್ಷರದಲ್ಲಿ ಬರೆದು ಕೊಟ್ರೆ ಜೈಲಿಂದ ಬಿಡುಗಡೆ. ಜೈಲು ಸೇರಿದ ಯಾರೂ ಅದಕ್ಕೆ ತಯಾರಿಲ್ಲ. ಹಲವು ತಿಂಗಳುಗಳು ಜೈಲಿನಲ್ಲಿ ಕಳೆದು ತೀವ್ರ ಅನಾರೋಗ್ಯ ಪೀಡಿತರಾದ ಕಾರಣ ಜೈಲಿಂದ ಬಿಡುಗಡೆಯ ಭಾಗ್ಯ. ಆಮೇಲೆ ಶಿಕ್ಷಕ ವೃತ್ತಿ ಶುರು. ಆವಾಗಿನ Grants ಸ್ಕೂಲಗಳಲ್ಲಿ ಹಿಂದಿ ಶಿಕ್ಷಕರಾಗಿ ಶಿರಸಿಯ ಬಪ್ಪನಳ್ಳಿ,ಕೊಳಗಿಬೀಸ್ ಗಳಲ್ಲಿ ಸೇವೆ ಪ್ರಾರಂಭ. ಕೊಳಗಿಬೀಸಿನ ಹೆಗಡೆರ ಮನೆಯಲ್ಲಿ ವಾಸ್ತವ್ಯ. ಅಲ್ಲಿಯೇ ಶ್ರೀ ಶ್ರೀ ಅವಧೂತರ ಪರಿಚಯ. ಅವಧೂತರ ಜೀವನಶೈಲಿಯಿಂದ ಅಜ್ಜ ತುಂಬಾ ಪ್ರಭಾವಿತಾರಾಗಿದ್ದರು ಮತ್ತು ಅದನ್ನು ತಮ್ಮ ಜೀವನದ ಕೊನೆಯ ಹಲವಾರು ವರ್ಷ ಆಚರಿಸಿದರು ಕೂಡ. ಚಾತುರ್ಮಾಸ, ತ್ರಿಕಾಲ ಸ್ನಾನ, ಸಂಧ್ಯಾವಂದನೆ, ಪೂಜೆ. ಪ್ರತಿದಿನ ಭಜನೆ, ಏಕಾದಶಿ ಮೌನ. ಇವೆಲ್ಲ ಮೊಮ್ಮಕ್ಕಳಾದ ನಾವೂ ನೋಡಿದ್ದೇವೆ. ಈಗಿನ ದೀವಗಿಯ ಪರಮಪೂಜ್ಯ  ಶ್ರೀ ಶ್ರೀ ರಾಮಾನಂದ ಗುರುಗಳ ಪೂರ್ವಾಶ್ರಮದಲ್ಲಿ ಅವರಿಗೆ ಕಲಿಸಿದ ಹೆಗ್ಗಳಿಕೆ ಅಜ್ಜನದು. ಗುರುಗಳು ಅಜ್ಜನಿಗೆ ” ನೀವು ನಂಗೆ ವಿದ್ಯೆ ಕಲಿಸಿದ ಗುರುಗಳು ” ಅಂತ ಕೈ ಮುಗಿತಿದ್ದಿದ್ದು ನನಗೂ ನೆನಪಿದೆ.  ಹಲವು ವರ್ಷಗಳ ನಂತರದಲ್ಲಿ ಶಿರಸಿಯಿಂದ ವರ್ಗಾವಣೆ ತಗೊಂಡು ಅಜ್ಜ ನಮ್ಮ ಊರಾದ ಹೊಲನಗದ್ದೆಯಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದರು. ಒಂಥರಾ full hyper active personality ಅಜ್ಜನದು. ಅದಕ್ಕೆಲ್ಲ ಸಾಕ್ಷಿಯಾಗಿದ್ದು ಈ ಹೊಲನಗದ್ದೆ ಊರು.

(ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸತ್ಯನಾರಾಯಣ ಪರಮೇಶ್ವರ ಹೆಗಡೆ)

ಈ “ದೇಶಭಕ್ತಿ ಗೀತೆಗಳ ವಾಚನ ” ಅಂದೆನಲ್ಲ ಅದರಿಂದ ಅಜ್ಜನ ಕಾಲಕ್ಕೆ ಹೋಯಿತು ಮನಸ್ಸು. 79 ನೇ ವಯಸ್ಸಿನಲ್ಲಿ ಇನ್ನೂ ಆಗಸ್ಟ್ ತಿಂಗಳು ಬರುವ ಮೊದಲೇ ಅಜ್ಜ ತೀರಿಕೊಂಡರು. ಅವರು ಅದಕ್ಕೂ ಮೊದಲ ಆರು ತಿಂಗಳು ಅಷ್ಟೇ ಮಲಗಿದಲ್ಲೇ ಆಗಿದ್ದು. ಅದಕ್ಕೂ ಮೊದಲ ಎಲ್ಲಾ ಸ್ವಾತಂತ್ರ್ಯ ದಿನಾಚರಣೆಗಳೂ ಧ್ವಜರೋಹಣ ಕಂಡಿದ್ದು ಅಜ್ಜನ ಕೈಯಿಂದಲೇ. ಹೊಲನಗದ್ದೆ ಶಾಲೆ, ಗ್ರಾಮಪಂಚಾಯತಿ ಕಟ್ಟೆ ಅಜ್ಜನ ವೀರಾವೇಶದ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಸಾಕ್ಷಿ. ನಾನು ಅಜ್ಜನ ಮೊದಲನೇ ಮಗನ ಮೊದಲನೇ ಮಗಳು. ಅಜ್ಜನಿಗೆ ಐದು ಗಂಡು ಮಕ್ಕಳು, ಹೆಣ್ಣು ಮಕ್ಕಳಿಲ್ಲ. ಇಡೀ ಕುಟುಂಬವೇ ಪ್ರೀತಿಯಿಂದ ಬರಮಾಡಿಕೊಂಡ ಮಗಳು ನಾನು. ಅಜ್ಜ ಅಜ್ಜಿಯ ಪ್ರೀತಿಯ ಮೊಮ್ಮಗಳು. ಹುಟ್ಟಿದ ಹತ್ತು ತಿಂಗಳಿಗೆ ನನ್ನ ಸಾಕಿದವರು ಅಜ್ಜ ಅಜ್ಜಿ. ಅಪ್ಪ ದೂರದ ರಾಯಚೂರಿನಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಾನು ಬೆಳೆದದ್ದು ಈ ಹೊಲನಗದ್ದೆಯಲ್ಲಿ, ಅಜ್ಜ ಅಜ್ಜಿ ಜೊತೆಗೆ. ನಾನು ಒಂದನೇ ತರಗತಿಯಿಂದ ಐದನೇ ತರಗತಿಯ ವರೆಗೆ ಅಜ್ಜನ ಸ್ವಾತಂತ್ರ್ಯ ದಿನದ ಭಾಷಣ ಕೇಳಿದವಳು, ನೋಡಿದವಳು. ಅಜ್ಜ, ಮುಂಚಿನ ದಿನ ರಾತ್ರಿ ಮಲಗುವಾಗ neat ಆಗಿ ತನ್ನ ವಸ್ತ್ರಗಳನ್ನೆಲ್ಲ ಮಡಚಿ ತಲೆದಿಂಬಿನ ಕೆಳಗೆ ಇಟ್ಟು ಮಲಗ್ತಿದ್ದ. ಅದೇ ಇಸ್ತ್ರಿ. ಮರುದಿನ ಶಾಲೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣಕ್ಕೆ ನಿಂತರೆ ಮುಗೀತು…, ಗ್ರಾಮಪಂಚಾಯಿತಿ ಯಿಂದ ಕರೆ ಬರುವವರೆಗೂ ಭಾಷಣ. ಅದು ಭಾಷಣವೋ,ವಾ ಚನವೋ, ಏಕಪಾತ್ರಭಿನಯವೋ,… All in one… ಅಜ್ಜ ಅಳತಿದ್ದ, ಜೋರಾಗಿ ನಗತಿದ್ದ, ಎಲ್ಲಾನೂ ಅಭಿನಯಿಸಿ, ಅನುಭವಿಸಿ ಭಾಷಣ ಮಾಡ್ತಿದ್ದ… ಅದರಿಂದಾನೆ ಸಿಕ್ಕಾಪಟ್ಟೆ famous ಇದ್ದ.. ಏನೇನೋ ಹಾಡುಗಳು, ಯಾರ್ಯಾರದೋ ಮಾತುಗಳು ಎಲ್ಲಾ quote ಮಾಡ್ತಿದ್ದ. ಅವನು ಸ್ವಾತಂತ್ರ್ಯ ಚಳುವಳಿಯಲ್ಲಿ ಎದುರಿಸಿದ, ಅನುಭವಿಸಿದ ಎಲ್ಲಾ ಸಂಧರ್ಭಗಳನ್ನೂ ಸೊಗಸಾಗಿ ವಿವರಿಸ್ತಿದ್ದ.. ಯಾವದೂ ಈಗ ನನಗೆ ನೆನಪೇ ಇಲ್ಲ ಅನ್ನೋದು ಬಹಳ ಬೇಜಾರಿನ ಸಂಗತಿ. ಒಂದು ಕವನ ಇನ್ನೂ ಬಾಯಿಗೆ ಬರುವುದು, ಅದೂ ಅರ್ಧಂಬರ್ಧ.

“ಇಂಗ್ಲೀಷು ವಿದ್ಯೆಯು ನಮಗೊಂದು ಗಿಲೀಟ್ರಿ
ಇಂಗ್ಲೀಷರಿಗೈತಾಲ್ರಿ ಬಂಗ್ಲೆಯ ಸೈಟು…
ರೇಷ್ಮೆದಡಿ ಸೀರೆ..”

ಹೀಗೇ ಏನೇನೋ ಇದೆ. ಏನೂ ನೆನಪಿಲ್ಲ.. ಹೀಗೇ ಎಲ್ಲಾ ರಾಗರಸಗಳನ್ನೂ ಸೇರಿಸಿ ಭಾಷಣ ಮಾಡುವ ಅಜ್ಜ,ಅಲ್ಲಿ ಕೊಡುವ ಸನ್ಮಾನದಲ್ಲಿ ಏನು ತಗೊಳ್ಳತಿದ್ನೋ ಇಲ್ವೋ,,  ಚಾಕಲೇಟ್ ಮಾತ್ರ ಎರಡು ಜಾಸ್ತಿ ತಗೊಳ್ಳತಿದ್ದ.. ಅದು ಅವನ ಮೊಮ್ಮಗಳಿಗೆ. ಅವನ ಜುಬ್ಬಾ ದ ಎರಡೂ ಕಿಸೆ ತುಂಬಬೇಕು.. ಅದು ಆಮೇಲೆ ಮೊಮ್ಮಗಳ ಕೈ ಸೇರಬೇಕು. ಇಷ್ಟಾದ್ರೂ ಮೊಮ್ಮಗಳು ಮಾತ್ರ ಅಜ್ಜನಿಗೆ complaint. ಏನಪ್ಪಾ ಅಂದ್ರೆ ” ಅಜ್ಜಾ, ನೀ ಮುಂದಿನಸಲ ಈ ತರ ಭಾಷಣ ಮಾಡಿದ್ರೆ ನಾ ಚಾಕಲೇಟ್ ತಕನ್ನೆ ಇಲ್ಲೆ “ಅಂತ. ಅಜ್ಜಾ ಅಲ್ಲೂ ರಾಗವಾಗೇ ಕೇಳೋದು “ಎಂತಕ್ಕೆ.. ನನ್ನ ಮೊಮ್ಮಗಳೇ “” ಅಂತ. ಹೌದು,ಅದು  ಮೂರನೇ ಇಯುತ್ತೆ ಯಲ್ಲಿ ಓದುವ ಮೊಮ್ಮಗಳ ಸಂಕಟ. ಅಜ್ಜಾ ಆ ತರ ಆವೇಶದಿಂದ ಭಾಷಣ ಮಾಡ್ತಿದ್ರೆ, ಎಲ್ಲಾ ನನ್ನ ಸಹಪಾಠಿಗಳು ನನ್ನ ನೋಡಿ ಗಿಸಿಗಿಸಿ ನಗುವುದು. ಆ ವಯಸ್ಸಿಗೆ ಅದರ ಮಹತ್ವ ತಿಳಿದಿರಬೇಕಲ್ಲ. ಪ್ರತಿ ವರ್ಷ ಸ್ವಾತಂತ್ರ್ಯ ದಿನ ಬಂದಾಗಲೂ,ಈಗಲೂ ಅಜ್ಜನ ಧ್ವಜಾರೋಹಣ, ಅವನ ಅಭಿನಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಜ್ಜ, ಗ್ರಾಮಪಂಚಾಯಿತಿ ಕೆಲಸ ಕಾರ್ಯಗಳಲ್ಲೂ ಅವನನ್ನು ತೊಡಗಿಸಿಕೊಂಡಿದ್ದ. ಒಂದು ಬಾರಿ ಎಲೆಕ್ಷನ್ ಗೂ ನಿಂತು ಸೋತಿದ್ದ ಅಂತ ನೆನಪು. ಖಡಕ್ ಮನಷ.. ಒಟ್ಟಾರೆ ಊರಿನವರಿಗೆಲ್ಲ “ಸತ್ತಿಮಾಸ್ತರ್ರು ಬಲು ಜೋರು “.

(ಇಂದಿರಾಗಾಂಧಿ ಅವರ ಕೈಯಿಂದ ಶ್ರೀ ಸತ್ಯನಾರಾಯಣ ಪರಮೇಶ್ವರ ಹೆಗಡೆ ಅವರಿಗೆ ನೀಡಿದ freedom fighters ಗೌರವ)

ಅಜ್ಜನ ತಾಮ್ರಪಟದ ಸಂಗತಿಗಳೇ ಸ್ವಾರಸ್ಯಕರ : 

ಅವನ ಹೆಮ್ಮೆ ಆ ತಾಮ್ರಪಟ. ಅದರ ಜೊತೆ ಅವನ ದಾಡ್ಸಿ ಮಾತುಗಳು. He was like active freedom fighter even after independence. ನನ್ನ ಅಪ್ಪನನ್ನು ದೂರದ ರಾಯಚೂರಿನಿಂದ ಕುಮಟಾಕ್ಕೆ transfer ಮಾಡಲು ರಿಕ್ವೆಸ್ಟ್ ಗಾಗಿ ಕಾರವಾರ DC office ಗೆ ಹೋದ ಅಜ್ಜ ಅಲ್ಲಿ ಬಾಗಿಲು ಕಾಯುವವನು ತಡೆದಾಗ, ” ನಾನ್ ಯಾರು ಗೊತ್ತಿದೆ ಏನು? ಸ್ವಾತಂತ್ರ್ಯ ಹೋರಾಟಗಾರ ಅದೇನಿ, ಇಂದಿರಾಗಾಂಧಿ ನನಗೆ ತಾಮ್ರಪಟ ಕೊಟ್ಟಾಳ.. ನನ್ನನ್ನೇ ತಡೀತಿಯೇನು ” ಅಂತ ರೇಗಾಡಿ,ಅದು ಒಳಗೆ ಕೂತ ಸಾಹೇಬ್ರಿಗೆ ಕೇಳಿಸಿ, ಅವರೇ ಎದ್ದು ಬಂದು ಇವರನ್ನು ಒಳಗೆ ಕರೆದುಕೊಂಡು ಹೋಗಿ ಕುರ್ಚಿ ಕೊಟ್ಟು ಕೂಡಿಸಿ, ಇವರ ಮಗನ ಟ್ರಾನ್ಸ್ಫರ್ ಗೆ ಅಸ್ತು ಅಂದಿದ್ದರಂತೆ. ಇನ್ನೊಮ್ಮೆ ಬೆಂಗಳೂರಿಗೆ ತೆರಳುವ ಸಂಧರ್ಭದಲ್ಲಿ MLA reserved seat ನಲ್ಲಿ ಕುಳಿತ ಅಜ್ಜ, ಆಗಿನ MLA ಶ್ರೀ R N Naik(ಮಾಜಿ ಮಂತ್ರಿ ಕೂಡ )ಅವರೇ ಆವತ್ತು ಪ್ರಯಾಣ ಮಾಡಲು ಬಸ್ ಹತ್ತಿದರೂ ಅವರಿಗೇ ಸೀಟ್ ಬಿಟ್ಟು ಕೊಡಲಿಲ್ಲ. ನಾವು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಕ್ಕೆ ನೀವು MLA ಆಗಿದ್ದು ಅಂತ ಹೇಳಿ ತಾಮ್ರಪಟ ತೆಗೆದು ತೋರಿಸಿದ್ದೇ. ಈ ತಾಮ್ರಪಟ ವಿಧಾನಸೌಧದಲ್ಲೂ ಒಮ್ಮೆ ಘರ್ಜಿಸಿದ ಸುದ್ದಿ, ಚಿಕ್ಕಪ್ಪ ಯಾವತ್ತೂ ನೆನಪಿಸಿಕೊಳ್ತಾರೆ. ಇನ್ನೂ ಮಜಾ ಎಂದರೆ ಒಮ್ಮೆ ನನ್ನ ಅಪ್ಪನ ಜೊತೆ ಧರ್ಮಸ್ಥಳಕ್ಕೆ ಹೋದಾಗ ನಡೆದದ್ದು. ಅಲ್ಲಿನ ಕ್ಯಾಂಟೀನ್ ಗೆ ಹೋದಾಗ ಇವರಿಗೆ ಸ್ವಲ್ಪ ತಣ್ಣಗಿನ ಚಾ ತಂದು ಕೊಟ್ಟಾಗ ಕೆಂಡಾಮಂಡಲನಾದ ಅಜ್ಜ, ಅಲ್ಲಿಯೂ ಶುರು ಮಾಡಿದ್ದು “ಎಷ್ಟು ಧೈರ್ಯ ನಿನಗೆ,, ನಾನು ಸ್ವಾತಂತ್ರ್ಯ ಹೋರಾಟಗಾರ ಅದೇನಿ………. “”” ಹೀಗೇ…..

ಈ ಅಜ್ಜ ಹೊರಗೆ ಎಷ್ಟು ಖಡಕ್… ಆದ್ರೆ ಮೊಮ್ಮಕ್ಕಳಿಗೆ ಮಾತ್ರ ಚಾಕಲೇಟ್ ಅಜ್ಜ. ದಿನಾ ಸಂಜೆ ಮೇಲಿನ ರಸ್ತೆಯ ಅಂಗಡಿಗೆ ಹೋಗಬೇಕು, ಅಲ್ಲಿಂದ ಮೊಮ್ಮಗಳಿಗೆ ಎರಡು ಲಿಮಜಿ ಬಿಸ್ಕೆಟ್, ಹುರಿಗಡಲೆ, ಮತ್ತೆ ಪೆಪ್ಪರ್ mint.. ಇಷ್ಟು ಖಾಯಂ ತರೋದೇ. ಮತ್ತೆ ಉಳಿದ ಮೊಮ್ಮಕ್ಕಳು ಬಂದಾಗ ಅದೇ ಸ್ವಲ್ಪ ದೊಡ್ಡ ಪೊಟ್ಟಣ. ಎಲ್ಲಾ ಮೊಮ್ಮಕ್ಕಳಿಗೂ same quantity. ನಾನಂತೂ ಅಜ್ಜನ ಈ ಪ್ರೀತಿನ ಸಂಪೂರ್ಣ ಅನುಭವಿಸಿದವಳು. ಆರನೇ ತರಗತಿಯಲ್ಲಿ ಹೊಲನಗದ್ದೆ ಬಿಟ್ಟ ನಾನು, ಕಾಲೇಜು ಶಿಕ್ಷಣಕ್ಕಾಗಿ ಮತ್ತೆ ಹೊಲನಗದ್ದೆಗೆ ಬಂದೆ. ಆಗಲೂ ನನ್ನ ಅಜ್ಜ ದಿನಾ ಮೇಲಿನ ಅಂಗಡಿಗೆ ಹೋಗಿ ಪೆಪ್ಪರಮಿಂಟ್ ತರ್ತಿದ್ದ. ಲಿಮಜಿ ಬಿಸ್ಕೆಟ್ ಒಂದು ಆವಾಗ ಸಿಗ್ತಿರಲಿಲ್ಲ. ದಿನಾಲೂ ಹೋಗುವ ಅಜ್ಜನಿಗೆ ಅಂಗಡಿಯವ ಪೊಟ್ಟಣ ಕಟ್ಟಿ “ತಕಳಿ,, ನಿಮ್ಮ ಮೊಮ್ಮಗಳ ಬೂಸಾ ” ಅಂತ ಹೇಳಿ ಕೊಡ್ತಿದ್ದ…



ಆಗಿನ ಕಾಲದ ಎಲ್ಲಾ ಗಂಡಸರಂತೆ ಅವನ ಹೆಂಡತಿಗೆ, ಮಕ್ಕಳಿಗೆ ಸ್ವಲ್ಪ ವಿಲನ್ ಆಗಿದ್ದ ಅಜ್ಜ. ನನಗೆ ಗುತ್ತಿದ್ದಂತೆ ಇಸ್ಪೀಟ್ ಆಡುವ ಒಂದೇ ಒಂದು ಚಟ ಇತ್ತು. ಅದರ ಬಗ್ಗೆ ಬಹುವಾಗಿ ನನಗೆ ತಿಳಿಯದು. ನಾನು ನೋಡಿದ ಅಜ್ಜ, ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ, ಅವನಿಗೆ ಬರುತ್ತಿದ್ದ freedom fighter pension ಮತ್ತು ಶಿಕ್ಷಕ ವೃತ್ತಿ pension ತಗೊಂಡು ಮೂರು ಹೊತ್ತು ಪೂಜೆ ಮಾಡ್ಕೊಂಡು, ಅವನು ಮಾಡಿಕೊಂಡ ಗೋಬರ್ ಗ್ಯಾಸ್ ಗೆ ಸಗಣಿ ತಂದುಕೊಂಡು, ಬೇರೆ ಬೇರೆ ಊರಲ್ಲಿ ನೆಲೆಸಿದ್ದ ಅವನ ಮಕ್ಕಳ ಮನೆ ತಿರುಗಾಡ್ತಾ ಆರಾಮಾಗಿ ಇದ್ದ. ಈ ಸಗಣಿ ಅಂದ್ರೆ ಅಜ್ಜನಿಗೆ ಸಿಕ್ಕಾಪಟ್ಟೆ ಪ್ರೀತಿ. ಮನೆಯಲ್ಲಿ ಇರೋ ಎರಡು ದನದ ಸಗಣಿ, ಗೋಬರ್ ಗ್ಯಾಸ್ ಗೆ ಸಾಕಾಗ್ತಾ ಇರಲಿಲ್ಲ. ಅದ್ಕೇ ಮನೆ ಎದುರಿಗೆ ಇರೋ ಗದ್ದೆ ಬೈಲಿಗೆ ಹೋಗ್ತಿದ್ದ. ಬೆಳಿಗ್ಗೆ ಪೂಜೆ ಮುಗಿಸಿ ಒಂದು ಕಪ್ ಕಷಾಯ(ಹಾಲನೀರು) ಕುಡಿದು ಹೊರಟರೆ ಬರೋದು ಮದ್ಯಾಹ್ನ ಸ್ನಾನಕ್ಕೆ ಮೊದಲು. ಗದ್ದೇಲಿದ್ದ ಎಲ್ಲಾ ದನಗಳೂ ( ಊರ ದನಗಳು, ಮಳೆಗಾಲ ಬಿಟ್ಟು ಉಳಿದ ಸಮಯ ಬಿಟ್ಟ ಕಾವಲು ಇರ್ತಿತ್ತು) ಒಂದು ರೌಂಡ್ ಸಗಣಿ ಹಾಕಬೇಕು ಇವನಿಗಾಗಿ.. ಕೈಯಲ್ಲೇ ಎಲ್ಲಾ ಬರಗಿಕೊಂಡು ಬಂದವನು ಬಚ್ಚಲು ಮನೇಲಿದ್ದ ಹಂಡೇಲಿ ಹಾಗೇ ಕೈ ಅದ್ದುತ್ತಿದ್ದ. ಅದೇ ನೀರು ಆಮೇಲೆ ಸ್ನಾನಕ್ಕೆ, ಕಡೆಗೆ ಅವನ daily wear ಪಂಜಿ ತೊಳೆಯಲಿಕ್ಕೆ. ಪಂಜಿ ಬಣ್ಣ ಮತ್ತೆ ಸಗಣಿ ಬಣ್ಣಕ್ಕೆ ತೀರಾ ವ್ಯತ್ಯಾಸ ಏನೂ ಇರ್ತಿರಲಿಲ್ಲ. Soap(ಸಬಕರಾ) ಅಂದ್ರೆ ಅಜ್ಜಂಗೆ ಮತ್ತೆ ಅವನ ಬಟ್ಟೆಗೆ ಅಲರ್ಜಿ ಆಗಿತ್ತು. ನಾವೆಲ್ಲ ಅದ್ಕೇ ಅಜ್ಜ ಬರೋಕಿಂತ ಮೊದಲು ಸ್ನಾನ ಮುಗಿಸಿಕೊಳ್ಳಬೇಕಿತ್ತು. ಮಳೆಗಾಲದಲ್ಲಿ ಕಾಲಿಗೆ ನಂಜಾಗಿದ್ರೆ ಸೀದಾ ಚಿಮಣಿ ಬುರುಡೆ ಹಚ್ಚಕಂಡು ಅದ್ಕೇ ಕಾಲು ಹಿಡಿತಿದ್ದ ಅಜ್ಜ. ಅಜ್ಜನಿಗೆ ಈ ಪಿಕ್ಚರ್ ನೋಡೋದು, ಅದರ ಹಾಡು ಕೇಳೋದು ಅಂದ್ರೆ ಆಗ್ತಿರಲಿಲ್ಲ. ಅವನೂ ನೋಡ್ತಿರಲಿಲ್ಲ. ಒಮ್ಮೆ ನನ್ನ ಚಿಕ್ಕಮ್ಮ ಆಗಿನ ಹಿಂದಿ ಹಾಡು “ಆಜಾನಾ ಮೇರಾ dil ಹೈ deevana “.. ಅಂತ ಹಾಡು ಕೇಳ್ತಾ ಕೂತಿದ್ಲು ರೇಡಿಯೋ ದಲ್ಲಿ. ಅಜ್ಜ ಬಂದವನೇ ಅದರ ಯಥಾವತ್ ತರ್ಜುಮೆ ಮಾಡಿ ಬೈದಿದ್ದೇ ಬೈದಿದ್ದು.” ಬಾ ಬಾರೋ.. ನನ್ನ ಎದೆಯ ಹುಚ್ಚಪ್ಪಾ… ”  ಒಂದು ಸರಿಯಾಗಿ ಅರ್ಥ ಗೊತ್ತಿಲ್ಲದೇ, ಏನೇನೆಲ್ಲ ಹಾಡ್ತೀರಲ್ಲಾ ಅಂತ ಕೂಗಿದ್ದೇ ಕೂಗಿದ್ದು.

ಅಜ್ಜಾ, ಅಜ್ಜಾ… ಒಂಥರಾ ಯಾರಿಗೂ ಬಗ್ಗದೇ ಸಿಂಹದಂತೆ ಬದುಕಿದ ಅಜ್ಜ, ಅವನಿಗೆ ಬಂದ ಕಾಯಿಲೆನೂ ಹಾಗೇ ಎದುರಿಸಿ ಕೊನೆಯುಸಿರೆಳೆದ. Motor Nerve Desease(MND) ಅನ್ನೋ ಕಾಯಿಲೆಯಿಂದ ಆರು ತಿಂಗಳುಗಳ ಕಾಲ ಬಳಲಿ ದೈವಾಧೀನರಾದ ಅಜ್ಜ, ನಮ್ಮ ಮನೆತನದ ಹೆಮ್ಮೆ ಹಾಗೂ ನನ್ನ ಮನದ ಪ್ರೀತಿಯ ಅಜ್ಜ. ಈ ಎಪ್ಪತೈದನೆ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಅಜ್ಜನಿಗೊಂದು ನುಡಿನಮನ .

ಫೋಟೋ ಕೃಪೆ : satwadhara.news

ದುಃಖಕರ ಸಂಗತಿ : ದೀವಗಿಯ ಪರಮಪೂಜ್ಯ ಶ್ರೀ ಶ್ರೀ ರಾಮಾನಂದ ಸ್ವಾಮಿಗಳು ಪಂಚಭೂತಗಳಲ್ಲಿ ಲೀನರಾದ ವಾರ್ತೆ ಈಗಷ್ಟೇ ದೊರಕಿತು.


  • ಮಾಲತಿ ಗಣೇಶ್ (ಯುವ ಬರಹಗಾರ್ತಿ) ಕುಮಟಾ

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW