ಟಿಕೆಟ್ ಕೊಟ್ಟ ಮಹಿಳಾ ನಿರ್ವಾಹಕಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮೀಸಲಿಟ್ಟ ಸೀಟಿನಲ್ಲಿ ಲೇಖಕರಿಗೆ ಕೂತುಕೊಳ್ಳಿ ಎಂದಾಗ ಏನೆಲ್ಲಾ ಯೋಚನೆ ನಡೆಯಿತು, ಅದಕ್ಕೆ ಸಿಕ್ಕ ಉತ್ತರ ನಗು ಹುಟ್ಟಿಸುತ್ತದೆ. ಪ್ರೊ. ರೂಪೇಶ್ ಪುತ್ತೂರು ಅವರ ಈ ಲೇಖನ ಹಾಸ್ಯದ ಜೊತೆಗೆ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ.ಮುಂದೆ ಓದಿ…
ಕೋರೋನಾ ದಿನಗಳಲ್ಲಿ ಸುಮಾರು ವರುಷಗಳ ನಂತರ ನನ್ನ ಮಿತ್ರನನ್ನು ನೋಡಲು ಯಶವಂತಪುರ ಮೆಟ್ರೋದಲ್ಲಿ ಪ್ರಯಾಣಿಸುವಾಗ, ನನ್ನ ಹಳೆಯ ಶಿಷ್ಯನ ವಾಟ್ಸಾಪ್ ಸಂದೇಶ ನೋಡಿ, ಅವನಿಗೆ ಪ್ರಯಾಣದ ಮಧ್ಯೆ ಕರೆ ಮಾಡಿ ಕುಶಲ ವಿಚಾರಿಸಿದೆ. ಬಸವೇಶ್ವರ ನಗರದ ಅವನ ವ್ಯವಹಾರಿಕ ಅಂಗಡಿಯ ಉದ್ಘಾಟನೆಗೆ ನಾನು ಹೋಗಿರಲಿಲ್ಲ. “ಈಕಡೆ ಬಂದಿದ್ದೀರಾ, ಈವತ್ತು ಒಂದ್ಸಲ ಬಂದು ಹೋಗಲೇ ಬೇಕು ಸಾರ್” ಎಂದು ಬೇಡಿಕೊಂಡ. ತಾನೇ ಗಾಡಿ ತೆಗೊಂಡು ಬರುತ್ತೇನೆ ಎಂದ. ನಾನು “ನನ್ನ ಸಮಯದ ಸ್ಪಷ್ಟತೆ ಹೇಳಲು ಆಗೋಲ್ಲ. ನಾನೇ ಖುದ್ದು #ಬಸವೇಶ್ವರ_ನಗರ ಬಂದು ನಿನಗೆ ಕರೆ ಮಾಡುತ್ತೇನೆ” ಎಂದೆ.
ಮಿತ್ರನನ್ನು ಭೇಟಿಯಾಗಿ, ಆಹ್ವಾನಿಸಿದ ಶಿಷ್ಯನನ್ನೂ ಕಂಡು ಹೋಗೋಣ ಎಂದು , ಗೋವರ್ಧನ ನಿಲ್ದಾಣದಲ್ಲಿ ಬಸ್ಸಿಗೆ ಕಾದೆ. ಆದರೆ ಅಲ್ಲಿ ಕಬ್ಬಿನ ಹಾಲಿನ ಅಂಗಡಿಯವರು ” ಸ್ವಾಮೀ ಈಗ ಊಟದ ಸಮಯ, ಅದೂ ಅಲ್ವದೆ ಕೊರೋನಾ ಇರೋದ್ರಿಂದ ಬಸ್ಸುಗಳೂ ಕಮ್ಮಿ. ನೇರ ಯಶವಂತಪುರ ಡಿಪೋದಿಂದ ಬಸ್ಸು ಹೊರಡುತ್ತದೆ, ಇಲ್ಲಿ ಸಿಗೊಲ್ಲ. ಇಸ್ಕೋನ್ ಸ್ಟಾಪಿಗೆ ಆಟೋದಲ್ಲಿ ಹೋಗಿ, ಅಲ್ಲಿಯಾಗಿ ವಿಜಯನಗರ ಮಾರ್ಗದ ಬಸ್ಸು ಸಿಗಬಹುದು” ಎಂದರು. ಸಮಯವ್ಯಯ ಮಾಡೋದು ಬೇಡ ಎಂದು, ಗೋವರ್ಧನ ಸ್ಟಾಪಿನಿಂದ ಮಹಾಲಕ್ಷ್ಮಿ ಲೇಔಟ್ ಇಸ್ಕಾನ್ ತಂಗುದಾಣಕ್ಕೆ ಮೆಲ್ಲನೆ ನಡೆಯುತ್ತಾ ಬಂದೆ. ಬಂದ ಬಸ್ಸಿನಲ್ಲಿ ಹತ್ತಿದರೆ ಸಾಮಾಜಿಕ ಅಂತರದ ಮೇಲೆ ಎಲ್ಲಾ ಸೀಟಿನಲ್ಲೂ ಒಬ್ಬೊಬ್ಬರು ಕೂತಿದ್ದಾರೆ. ನಾನೂ ನನಗಿಂತ ಐದಾರು ವರುಷ ಹಿರಿಯ – ಇಬ್ಬರೇ ನಿಂತವರು.

ಫೋಟೋ ಕೃಪೆ :TOI
ಟಿಕೇಟು ಕೊಟ್ಟು ಮಹಿಳಾ ನಿರ್ವಾಹಕಿ/ಕಂಡೆಕ್ಟರ್ ತತ್ ಕ್ಷಣ ಬದಲು/ಚೇಂಜ್ ಕೊಟ್ಟಾಗ “ಧನ್ಯವಾದ” ಹೇಳಿದೆ. ನಿರ್ವಾಹಕಿ ಸ್ವಲ್ಪ ಮುಂದೆ ಕೂತ ಒಬ್ಬನಲ್ಲಿ ಏನೋ ಜೋರಾಗಿ ಮಾತನಾಡಿದಾಗ ಆ ಪ್ರಯಾಣಿಕ ಅಲ್ಲಿಂದ ಎದ್ದ. ಕೂಡಲೇ ನಿರ್ವಾಹಕಿ ” ಸಾರ್… ಬನ್ನಿ ಕೂತ್ಕೊಳ್ಳಿ” ಎಂದಳು. ನಾನು ನನ್ನ ಹಿಂದೆ ನಿಂತವ, ನನ್ನಿಂದ ಹಿರಿಯನನ್ನು ತಿರುಗಿ ನೋಡಿದೆ. ಆ ಹಿರಿಯ ಕೈಯಲ್ಲಿ ತಾನು ಮುಂದಿನ ನಿಲ್ದಾಣ ಎಂದು ನನಗೆ ಸನ್ನೆ ತೋರಿದರು. ಆವಾಗ ನಿರ್ವಾಹಕಿ ” ಸಾರ್, ನೀವೇ …ಬನ್ನಿ” ಎಂದು ನನಗೆ ನೇರ ಹೇಳಿದಳು.
ನಾನು … ಇವಳು ನನ್ನ ವಿದ್ಯಾರ್ಥಿನಿಯೇ ಆಗಿರಬೇಕು. ಎಂದು ಅವಳನ್ನು ಸಂತೋಷದಿಂದ ನೋಡುತ್ತಾ ಸೀಟಿನಲ್ಲಿ ಕೂತೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಕೆಲಸ ಮಾಡುವ ನಾನು ಬೆಂಗಳೂರಿನ ಈ ಪಶ್ಚಿಮ ಭಾಗ ಬಾರದೇ ತುಂಬಾ ಕಾಲವಾಗಿತ್ತು. ತುಂಬಾ ಬದಲಾವಣೆ ಆಗಿತ್ತು. ನನ್ನ ನಿಲ್ದಾಣ ಬಂದಾಗ ತಿಳಿಸಲು ನಿರ್ವಾಹಕಿಯಲ್ಲಿ ಕೋರಿದೆ. ಅವಳು ಒಪ್ಪಿದಳು.
ನಾನು ಎಣಿಸತೊಡಗಿದೆ , ಈ ನಿರ್ವಾಹಕಿ ನನ್ನ ಯಾವ ವರುಷದ ವಿದ್ಯಾರ್ಥಿನಿ ಆಗಿರಬಹುದು? (ನಾನು ಪಿಯುಸಿ ವಿಜ್ಞಾನ ಹೇಳಿಕೊಡೋದ್ರಿಂದ ನನ್ನ ವಿದ್ಯಾರ್ಥಿನಿ ವಿಜ್ಞಾನ ಕಲಿಕೆ ಮಾಡಿರಲೇ ಬೇಕು) ಪಿಯುಸಿ ವಿಜ್ಞಾನ ಕಲಿತ ವಿದ್ಯಾರ್ಥಿನಿ ನಿರ್ವಾಹಕಿ ಆಗಬೇಕಿದ್ದರೆ ಅವಳ ಜೀವನ ಏನಾಗಿರಬಹುದು? ಏನೇ ಆಗಲಿ ಒಂದು ಜೀವನ ಮಾರ್ಗದ ಒಳ್ಳೆಯ ಕೆಲಸ ಆಯ್ಕೆ ಮಾಡಿದ್ದಾಳಲ್ಲಾ, ಅದು ಅವಳ ಅಭಿನಂದನೀಯ ಬುದ್ದಿವಂತಿಕೆ. ಖಾಸಗಿ ಕೆಲಸ ಸೇರದೆ, ಒಳ್ಳೆಯ ಜೀವನದ ಸುಗಮ ದಾರಿ ಗಿಟ್ಟಿಸಿಕೊಂಡಳಲ್ಲ ಸಂತೋಷ- ಎಂದು ಮನದೊಳಗೆ ಮನನ ಮಾಡುತ್ತಿರುವಾಗ…
” ಸಾರ್…. ಮುಂದಿನ ಸ್ಟಾಪು ನಿಮ್ಮ ನಿಲ್ದಾಣ. ಅಲ್ಲಿಂದ ಬಲಗಡೆ ರಸ್ತೆಯಲ್ಲಿ ನಿಂತರೆ ನಿಮಗೆ ಬಸವೇಶ್ವರ ನಗರದ ಬಸ್ಸು ಸಿಗುತ್ತೆ” ಅಂದಳು. ನಾನು ” ನಿನಗೆ ದೇವರು ಒಳ್ಳೆಯದು ಮಾಡಲಿ ಮಗು” ಎಂದಾಗ ಎರಡೂ ಕೈಗಳಿಂದ ಅವಳು ನಮಸ್ಕರಿಸಿದಳು.
ನನ್ನ ನಿಲ್ದಾಣಕ್ಕೆ ಬಸ್ಸು ಚಲಿಸುತ್ತಲೇ ಇತ್ತು. ಆದರೂ ಇಳಿಯುವ ತಯಾರಿಗೆ ಸೀಟಿನಿಂದ ಎದ್ದು ನಿಂತಾಗ, ನನ್ನ ಕಣ್ಗಳ ಬದಿಯಲ್ಲಿ, ನಾನು ಕೂತ ಸೀಟಿನ ಮೆಲ್ಬಾಗದ, ಕನ್ನಡ ಅಕ್ಷರಗಳು ಬಸ್ಸಿನ ಓಡಾಟಕ್ಕೆ, ನನ್ನ ತಲೆ ಅದರ ಪಕ್ಕಕ್ಕೆ ಬಂದಾಗ, ಕಣ್ಣು ಆ ಅಕ್ಷರ ತಟ್ಟನೆ ಓದಿತು.

ಫೋಟೋ ಕೃಪೆ : prasoonconsultancy
ತಲೆಗೆ ಬಣ್ಣ ಹಾಕದ ನನ್ನ ತಲೆಗೂದಲು ಹಣ್ಣು ಕೂದಲಿನ ಬಹುಮತ ತೋರುತ್ತಿತ್ತು. ಅತ್ಯಂತ ಹೆಚ್ಚು ಬಿಳಿಗೂದಲಿನ ನನ್ನ ತಲೆ , ಬುದ್ದಿ ಇಲ್ಲದ ನನ್ನ , ಹಿರಿ ಹಿರಿಯನೆಂದು ತೋರುತ್ತಿತ್ತು. ನನ್ನ ಜೊತೆ ನಿಂತಿದ್ದ ಮೊಗದಲ್ಲಿ ನನಗಿಂತ ಹಿರಿಯ ವ್ಯಕ್ತಿ, ತಲೆಗೆ ಬಣ್ಣ ಹಾಕಿದವನಿಗೆ ಆ ನಿರ್ವಾಹಕಿ ಸೀಟು ಕೊಡಲಿಲ್ಲ. ಆದರೆ, ಅವರಿಗಿಂತ ಕಿರಿಯನಾದ, ನನ್ನ ದೇಹ ಹಿರಿಯನೆಂಬ ಸುಳ್ಳುತನ ತೋರುವ, ಅವಿರ್ಭಾವತೆಯ ಅನವರಣಕ್ಕೆ ನಿರ್ವಾಹಕಿಯ ಗೃಹಿಕೆ ತಪ್ಪಿತ್ತು.
ಈ ಮಾನವೀಯ ಮೌಲ್ಯವೆಂಬ #ಸಂಸ್ಕೃತಿಯಲ್ಲಿ, ಹಿರಿಯರಿಗೆ ಗೌರವ ಕೊಡಬೇಕು ಎಂಬ ಅಲಿಖಿತ ಶಾಸನ , ಎಷ್ಟು ಮುಗ್ದ ಅಲ್ಲವೇ?
ಅದನ್ನು ಸಂರಕ್ಷಿಸಲು ಕಾನೂನು ದಾನ ಕೊಟ್ಟ ಮೀಸಲಾತಿ-
ನನ್ನಂತವರು ಅದನ್ನು ಅನರ್ಹತೆಯಲ್ಲೂ ಉಪಯೋಗಿಸುತ್ತಿಲ್ಲವೇ?
ಸಂಸ್ಕೃತಿಯೆಂಬ ಮುಗ್ದತೆಯಲ್ಲಿ ,
ಕಾನೂನಿನ ಪುರಾವೆಯ/proof ಮಾನದಂಡಗಳ ನೆರಳಿನಲ್ಲಿ…
ಸತ್ಯವೂ ಸುಳ್ಳು ಹೇಳುತ್ತಿದೆಯೋ ಎಂದು ಚಿಂತಿಸುತ್ತಾ…
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು) ಬೆಂಗಳೂರು.
