‘ನಮ್ಮ ಪ್ರೀತಿಯ ರಾಮು’ ಸಿನಿಮಾ ದರ್ಶನ್’ಗೆ ಅಗ್ನಿ ಪರೀಕ್ಷೆಯ ಚಿತ್ರವಾಗಿತ್ತು. ಅದು ತೀರಾ ಖಾಸಗಿಯದ್ದಾದ ಪ್ರದರ್ಶನ. ಇಂಥಾದ್ದೊಂದು ಪ್ರದರ್ಶನಕ್ಕೆ ಸಿನಿಮಾ ಪತ್ರಕರ್ತನಾಗಿ ನನ್ನೊಬ್ಬನನ್ನೇ ಯಾಕೆ ಆಹ್ವಾನಿಸಿದ್ದರೋ ಎಂಬುದು ಇಂದಿಗೂ ಯಕ್ಷಪ್ರಶ್ನೆ! ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬರೋಬ್ಬರಿ 22 ವರ್ಷಗಳ ಹಿಂದೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕಣ್ಣು ಕಳೆದುಕೊಳ್ಳಬೇಕಾಗಿತ್ತು!
ನಾನೀಗ ಬರೆಯಲು ಹೊರಟಿರುವ ಸುದ್ದಿ ಬರೋಬ್ಬರಿ 22 ವರ್ಷಗಳ ಹಿಂದೆ ನಡೆದದ್ದು. 2003ನೇ ಇಸವಿಯಲ್ಲಿ ನಾನು ‘ವಿಜಯಕರ್ನಾಟಕ’ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥನಾಗಿದ್ದೆ. ಆಗ ನಡೆದ ಘಟನೆ ಇನ್ನೂ ನೆನಪಿನಂಗಳದಲ್ಲಿ ಭದ್ರವಾಗಿ ಕೂತಿದೆ. ದರ್ಶನ್ ಹುಟ್ಟು ಹಬ್ಬದಂದು ಮರು ಬಿಡುಗಡೆ ಕಾಣುತ್ತಿರುವ ‘ನಮ್ಮ ಪ್ರೀತಿಯ ರಾಮು’ ಚಿತ್ರದ ಮೊದಲ ಬಿಡುಗಡೆ ಸಂದರ್ಭದಲ್ಲಿ ಈ ಘಟನೆ ನಡೆಯಿತು.
2003, ಜುಲೈ 20ರ ಸಂಜೆ ನಿರ್ಮಾಪಕರಾದ ರಾಮೇಗೌಡರು ತಮ್ಮ ಹೊಸ ಸಿನಿಮಾವೊಂದನ್ನು ನನಗಾಗಿ ಮಾತ್ರ ತೋರಿಸಲೆಂದು ಪ್ರಸಾದ್ ಪ್ರೀವ್ಯೂ ಥಿಯೇಟರಿನಲ್ಲಿ ವ್ಯವಸ್ಥೆ ಮಾಡಿದ್ದರು. ಸಿನಿಮಾದ ಹೆಸರು : ‘ನಮ್ಮ ಪ್ರೀತಿಯ ರಾಮು’. ಸಿನಿಮಾ ನೋಡಿ ಹೊರ ಬಂದ ನನಗೆ ಗುಂಗು ಆವರಿಸಿತ್ತು. ಅದೇ ಮೂಡ್’ನಲ್ಲಿ ಪುಟ್ಟದೊಂದು ರಿಪೋರ್ಟ್ ರೆಡಿ ಮಾಡಿ ‘ವಿಜಯಕರ್ನಾಟಕ’ ಪತ್ರಿಕೆಯ ‘ಸಿನಿ ವಿಜಯ’ದ ಜುಲೈ 25, 2003ರ ಸಂಚಿಕೆಯಲ್ಲಿ ಪ್ರಕಟಿಸಿದೆ. ಅದರ ಆಯ್ದ ಭಾಗ ಇಲ್ಲಿದೆ : ‘ಈ ಚಿತ್ರದಲ್ಲಿ ಸಿಂಗಾಪುರ ಇಲ್ಲ, ಆಸ್ಟ್ರೇಲಿಯ ಇಲ್ಲ, ಕುಲು ಮನಾಲಿಗಳೂ ಇಲ್ಲ. ಆದರೆ ಈ ಚಿತ್ರದಲ್ಲಿ ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಇದ್ದಾನೆ. ಕಲಾಕೇಸರಿ ಉದಯಕುಮಾರ್ ಮೊಮ್ಮಗಳು ಹಂಸ ವಿಜೇತ ಇದ್ದಾಳೆ. ಮೈಸೂರು ಲೋಕೇಶ್ ಅವರ ಮಗಳು ಪವಿತ್ರಾ ಲೋಕೇಶ್ ಇದ್ದಾಳೆ. ಉಮಾಶ್ರೀ ಇದ್ದಾರೆ. ದೊಡ್ಡಣ್ಣ, ಕೃಷ್ಣೇಗೌಡ, ಕರಿಬಸವಯ್ಯ, ರಮೇಶ್ ಪಂಡಿತ್, ಹನುಮಂತೇಗೌಡ ಮೊದಲಾದ ಅಪ್ಪಟ ಕಲಾವಿದರಿದ್ದಾರೆ. ಈ ಚಿತ್ರದ ನಾಯಕನಿಗೆ ಕಣ್ಣಿಲ್ಲದಿರಬಹುದು, ಆದರೆ ಗಾಂಧಿನಗರದ ಮಂದಿಯ ಕಣ್ಣು ತೆರೆಸುವ ಗುಣವಿದೆ…’

ಅದು ತೀರಾ ಖಾಸಗಿಯದ್ದಾದ ಪ್ರದರ್ಶನ. ಇಂಥಾದ್ದೊಂದು ಪ್ರದರ್ಶನಕ್ಕೆ ಸಿನಿಮಾ ಪತ್ರಕರ್ತನಾಗಿ ನನ್ನೊಬ್ಬನನ್ನೇ ಯಾಕೆ ಆಹ್ವಾನಿಸಿದ್ದರೋ ಎಂಬುದು ಇಂದಿಗೂ ಯಕ್ಷಪ್ರಶ್ನೆ! ಇರಲಿ, ಇದು ದರ್ಶನ್’ಗೆ ಅಗ್ನಿ ಪರೀಕ್ಷೆಯ ಚಿತ್ರ. ಆತ ತನ್ನ ತಾಯಿ, ಅಜ್ಜಿಯೊಂದಿಗೆ ಬಂದಿದ್ದ. ನಿರ್ಮಾಪಕದ್ವಯರಾದ ರಾಮೇಗೌಡರು ಮತ್ತು ‘ಅಮೆರಿಕಾ ಅಮೆರಿಕಾ’ ಖ್ಯಾತಿಯ ನಂದಕುಮಾರ್, ನಿರ್ದೇಶಕದ್ವಯರಾದ ಸಂಜಯ್-ವಿಜಯ್ ಬಂದಿದ್ದರು. ಎರಡೂವರೆ ಗಂಟೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾವನ್ನು ನೋಡಿ ಹೊರಬಂದಾಗ ಬಾಗಿಲ ಬಳಿ ನಿಂತಿದ್ದ ದರ್ಶನ್ ಹೆಗಲಿಗೆ ಜೋತು ಬಿದ್ದ ಅವರ ಅಜ್ಜಿ ಗೋಳೋ ಎಂದು ಅಳುತ್ತಿದ್ದರು! ದರ್ಶನ್ ಅಮ್ಮನ ಮುಖದಲ್ಲಿ ಸಾರ್ಥಕ ಭಾವ. ನಾನು ಮಾತ್ರ ದರ್ಶನ್’ನನ್ನು ಹತ್ತಿರ ಕರೆದು ಹೇಳಿದ್ದಿಷ್ಟು : ‘ಕುರುಡು ಕನ್ನಡ ಚಿತ್ರೋದ್ಯಮಕ್ಕೆ ಕಣ್ಣು ಕೊಟ್ಟೆ ಮಾರಾಯಾ…’
ಇದೇ ಟೈಟಲ್ ಕೊಟ್ಟು ‘ವಿಜಯಕರ್ನಾಟಕ’ದಲ್ಲಿ ಪ್ರಕಟಿಸಿದೆ. ಆಗ ಸಂಪಾದಕರಾಗಿದ್ದವರು ವಿಶ್ವೇಶ್ವರ ಭಟ್. ಮಲಯಾಳಂ ಚಿತ್ರಲೋಕದಲ್ಲೊಂದು ಹೊಸ ಅಲೆ ಎಬ್ಬಿಸಿದ ‘ವಾಸಂತಿಯುಮ್, ಲಕ್ಷ್ಮಿಯುಮ್, ಪಿನ್ನೆ ನಾನುಮ್’ ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ವಾಸ್ತವವಾಗಿ ಜಗ್ಗೇಶ್ ಅಭಿನಯಿಸಬೇಕಾಗಿತ್ತು. ನಂತರ ಆಫರ್ ಸುದೀಪ್ ಕಡೆ ತಿರುಗಿತು. ಕೊನೆಗೆ ಆಯ್ಕೆಯಾದದ್ದು ದರ್ಶನ್!

ಮಲಯಾಳಂ ಭಾಷೆಯ ಮೂಲ ಚಿತ್ರವನ್ನು ನೋಡಿ ಪ್ರಭಾವಿತರಾದ ದರ್ಶನ್ ಅದೇ ರೀತಿ ಅಭಿನಯಿಸುವ ದೃಷ್ಟಿಯಿಂದ ರಾತ್ರಿ ಹಗಲೂ ಕಣ್ಣನ್ನು ಕುರುಡುತನಕ್ಕೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದ್ದು ಒಂದು ಅಚ್ಚರಿಯ ವಿಷಯವೇ ಸೈ! ಇದಕ್ಕಾಗಿ ದರ್ಶನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ದಿನವೂ ಬೆಂಗಳೂರಿನಿಂದ ಮೈಸೂರಿಗೆ ಟ್ರೈನ್’ನಲ್ಲಿ ಹೋಗುತ್ತಿದ್ದ ದರ್ಶನ್ ಅಲ್ಲಿ ಕಂಡ ಕುರುಡನೊಬ್ಬನ ಸ್ನೇಹ ಬೆಳೆಸಿ ಕಣ್ಣ ಗುಡ್ಡೆಯನ್ನು ರೆಪ್ಪೆಯ ಒಳಗೆ ಮೇಲೆ ಮಾಡುವುದನ್ನು ಕಲಿತರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಮನೆಗೆ ಹೋದ ಮೇಲೂ ಇದನ್ನು ಪ್ರಾಕ್ಟೀಸ್ ಮಾಡಲು ತಿಂಗಳುಗಟ್ಟಲೆ ಶ್ರಮಿಸಿದರು. ಪರಿಣಾಮವಾಗಿ ಕಣ್ಣ ಗುಡ್ಡೆಗೆ ಒತ್ತಡ ಬಿದ್ದು ಕುರುಡರಾಗುವ ಮಟ್ಟಕ್ಕೆ ಹೋದರು. ಕೊನೆಗೆ ವೈದ್ಯರ ಸಕಾಲಿಕ ಅಡ್ವೈಸ್’ನಿಂದಾಗಿ ದರ್ಶನ್ ಕುರುಡುತನದಿಂದ ಪಾರಾದರು.
ಇಂಥಾ ಅದ್ಭುತವಾದ ಅನುಭವ ಹೊಂದಿರುವ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಫೆಬ್ರವರಿ 14ರಂದು ಮರು ಬಿಡುಗಡೆಯಾಗುತ್ತಿದೆ. ಅಂದು ದರ್ಶನ ಜನ್ಮದಿನವೂ ಹೌದು. ದುರಂತವೆಂದರೆ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಷ್ಟೇನೂ ಕಮಾಯಿ ಮಾಡಲಿಲ್ಲ. ಹತಾಶರಾದ ದರ್ಶನ್ ಮುಂದೆ ಅಂಥಾ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಈಗಲೂ ಅಷ್ಟೇ, ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಒಪ್ಪುವ ಸಿನಿಮಾಗಳ ಬಗ್ಗೆ ಮಾತ್ರ ದರ್ಶನ್ ಗಮನ…
- ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು
