ಆಕೃತಿಕನ್ನಡದ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣಕಾರ್ತಿ, ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಜನ್ಮದಿನದ ಅಂಗವಾಗಿ ಅವರ ಆತ್ಮೀಯ ಗೆಳತಿ ಪಾರ್ವತಿ ಕಾಮತ್ ಅವರು ಕವನದ ಮೂಲಕ ಶುಭಕೋರಿದ್ದಾರೆ, ತಪ್ಪದೆ ಓದಿ…

ಚಣದೊಳಗೆ ಪದ ಹೊಸೆದು
ಮನದಾಳದ ಮಾತುಗಳ
ಭಾವಗಳ ಹೂರಣದಲ್ಲಿ
ಹದಗೊಳಿಸಿ ಹೊಮ್ಮಿಸುವವಳಿಗೆ
ನನ್ನ ಭಾವದರಮನೆಗೆ
ಕವನದ ತೋರಣ ಕಟ್ಟಿ
ಹಸೆಯ ಹಾಡಿನ ಸಾಲ
ಹಾಡಿ ಹರಸಿದವಳಿಗೆ
ಕಷ್ಟಗಳ ದಾವಾಗ್ನಿಯಲಿ
ಕರಗದೇ ಅಳುಕದೇ
ಪುಟವಾಗಿ ಮಿಂದು
ಅಪರಂಜಿ ಚಿನ್ನವಾದವಳಿಗೆ
ಜಗತ್ತೆಲ್ಲವೂ ತನ್ನದೇ ಎಂದು
ಸರ್ವರನು ಪರಿಗಣಿಸುತ
ತನ್ನ ಪ್ರೀತಿಯ ಧಾರೆಯ
ಅನವರತ ಹರಿಸುವವಳಿಗೆ
ನನ್ನೆದೆಯ ತುಡಿತ ಮಿಡಿತ
ಗಳನರ್ಥೈಸಿ ತನ್ನ ಸಾಂತ್ವನದ
ನುಡಿಗಳಿಂದ ಸಂತೈಸಿ
ತೋಳನೇ ಆಸರೆಯಾಗಿಸಿದವಳಿಗೆ
ಅಪಾರ ನುಡಿಸಂಪತ್ತಿನೊಡತಿಗೆ
ಮನದಾಳದ ಆಶಯದ ನುಡಿ
ಜನ್ಮ ದಿನದಂದು,
ನೂರ್ಕಾಲ ಬಾಳು ನೀ
ಕವನ ಹೊಸೆಯುತ್ತ
ಜಗದ ಜನರ ಮನ
ಮುದಗೊಳಿಸುತ್ತ….
ಇದೇ ನನ್ನ ಅರಕೆ
ಇದೇ ನನ್ನ ಹರಕೆ…
- ಪಾರ್ವತಿ ಕಾಮತ್
