“ನಾನೊಬ್ಬ ಮೂರ್ಖ” ಶಾಲೆಯಲ್ಲಿ ಸ್ನೇಹಿತನ ಬೆನ್ನಿಗೆ ತಮಾಷೆಗೆಂದು ಅಂಟಿಸಿದ ಚೀಟಿಗೆ ಗುರುಗಳು ನೀಡಿದ ಉತ್ತರ ಹೀಗಿತ್ತು . ಮುಂದೆ ಓದಿ…
ಆಗತಾನೆ ಆ ತರಗತಿಯ ಮಕ್ಕಳು ಹಿರಿಯ ಪ್ರಾಥಮಿಕ ತರಗತಿಯಲ್ಲಿ ಅಂದರೆ ಏಳನೆಯ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರೌಢಶಾಲೆ ಪ್ರವೇಶಿಸಿದ್ದರು. ಅದು ಎಂಟನೆಯ ತರಗತಿಯಲ್ಲಿ ಅವರ ಮೊದಲನೇ ದಿನ.
ಪ್ರೌಢಶಾಲೆ ಎಂದರೆ ವಿದ್ಯಾರ್ಥಿಜೀವನದ ಒಂದು ಮಹತ್ತರವಾದ ಘಟ್ಟ ಎಂದು ತಿಳಿದಿದ್ದ ಆ ಮಕ್ಕಳು ಏನೋ ಸಾಧಿಸಿದ್ದೇವೆ ಎಂಬ ಹುರುಪಿನಲ್ಲಿದ್ದರು. ಅಂದು ತರಗತಿಗೆ ಬೇರೆ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಎಂಟನೆಯ ತರಗತಿಗೆ ಈ ಶಾಲೆಗೆ ಸೇರಿದ ಹೊಸ ವಿದ್ಯಾರ್ಥಿಯೊಬ್ಬ ಬಂದಿದ್ದ. ಅವನನ್ನು ನೋಡಿ ಅದೇ ಶಾಲೆಯಲ್ಲಿ ಓದಿದ ಮಿಕ್ಕೆಲ್ಲಾ ವಿದ್ಯಾರ್ಥಿಗಳಿಗೆ ಅವನನ್ನು ಗೋಳಾಡಿಸುವ ಮನಸ್ಸಾಯಿತು.
ಎರಡನೆಯ ಬೆಂಚಿನಲ್ಲಿ ತಾನಾಯಿತು, ತನ್ನ ಪಾಡಾಯಿತು ಎಂಬಂತೆ ಗಂಭೀರವಾಗಿ ಕುಳಿತಿದ್ದ ಆ ಹುಡುಗನ ಬೆನ್ನಿಗೆ ಅವನಿಗೆ ತಿಳಿಯದಂತೆ “ನಾನೊಬ್ಬ ಮೂರ್ಖ” ಎಂದು ಬರೆದಿರುವ ಹಾಳೆಯನ್ನು ಅಂಟಿಸುತ್ತಾರೆ ಆ ಹಳೆಯ ವಿದ್ಯಾರ್ಥಿಗಳು. ದುರದೃಷ್ಟವಶಾತ್ ಹಾಳೆ ಅಂಟಿಸಿರುವುದು ಆ ಹೊಸ ಹುಡುಗನ ಗಮನಕ್ಕೆ ಬರುವುದೇ ಇಲ್ಲ. ಈ ವಿಷಯವನ್ನು ಯಾರೂ ಅವನಿಗೆ ತಿಳಿಸಕೂಡದು ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡಿರುತ್ತಾರೆ.

ಫೋಟೋ ಕೃಪೆ : Scoonews (ಸಾಂದರ್ಭಿಕ ಚಿತ್ರ)
ಸುಮಾರು ಎರಡು ಗಂಟೆಗಳ ಕಾಲ ಆ ಹುಡುಗನನ್ನು ನೋಡಿ, ಅವನ ಬೆನ್ನಿಗಿದ್ದ ಹಾಳೆಯನ್ನು ನೋಡಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಆದರೆ ಅವನಿಗೆ ಮಾತ್ರ ಆ ನಗುವಿನ ಹಿಂದಿನ ಕಾರಣ ತಿಳಿಯುವುದಿಲ್ಲ.
ಅಂದು ಮಧ್ಯಾಹ್ನ ಗಣಿತದ ತರಗತಿ ಇತ್ತು. ಗಣಿತದ ಮೇಷ್ಟ್ರು ಕ್ಲಾಸಿಗೆ ಬಂದು, ಹಾಜರಾತಿ ಹಾಕಿದ ನಂತರ ಕೊಂಚ ಕ್ಲಿಷ್ಟ ಎನ್ನುವಂತಹ ಒಂದು ಲೆಕ್ಕವನ್ನು ಬೋರ್ಡಿನ ಮೇಲೆ ಬರೆದು, ನಿಮ್ಮಲ್ಲಿ ಯಾರಾದರೂ ಈ ಲೆಕ್ಕವನ್ನು ಬಿಡಿಸಬಲ್ಲಿರಾ? ಎಂದು ಕೇಳುತ್ತಾರೆ. ಬೆನ್ನಿಗೆ ಚೀಟಿ ಅಂಟಿಸಿಕೊಂಡಿದ್ದ ಆ ಹುಡುಗನ ಹೊರತಾಗಿ ಆ ಲೆಕ್ಕವನ್ನು ಬಿಡಿಸಲು ಯಾರೂ ಸಿದ್ಧರಿರಲಿಲ್ಲ.
ಎಲ್ಲರೂ ಆ ಹುಡುಗನನ್ನು ನೋಡಿ ನಗುತ್ತಿದ್ದರೂ, ಅದರ ನಡುವೆಯೇ ಆ ಹುಡುಗ ಬೋರ್ಡಿನ ಬಳಿ ಹೋಗಿ ಲೆಕ್ಕವನ್ನು ಸರಿಯಾಗಿ ಬಿಡಿಸಿದ. ಆ ಹುಡುಗನನ್ನು ಪ್ರಶಂಸಿಸುವುದಕ್ಕಾಗಿ ಎಲ್ಲರೂ ಕೈಲೂ ಚಪ್ಪಾಳೆ ತಟ್ಟಿಸುತ್ತಾರೆ ಮೇಷ್ಟ್ರು.
ಲೆಕ್ಕ ಬಿಡಿಸಲು ಬಂದ ಆ ಹೊಸ ಹುಡುಗನ ಬೆನ್ನಿಗಂಟಿಸಿದ್ದ ಚೀಟಿಯನ್ನು ನೋಡಿ ಮೇಷ್ಟರು ಹೇಳಿದರು, “ನಿನಗೆ ಗೊತ್ತಿಲ್ಲದೆ ಯಾರೋ ನಿನ್ನ ಬೆನ್ನಿಗೆ ಈ ಚೀಟಿಯನ್ನು ಅಂಟಿಸಿದ್ದಾರೆ. ಮತ್ತು ಎಲ್ಲಾ ಹುಡುಗರು ಅದನ್ನು ನಿನಗೆ ತಿಳಿಸದೆ ರಹಸ್ಯವಾಗಿ ಇರಿಸಿದ್ದಾರೆ.”
ಮೇಷ್ಟ್ರು ಎಲ್ಲಾ ಹುಡುಗರ ಕಡೆಗೆ ತಿರುಗಿ ನಿಮ್ಮೆಲ್ಲರಿಗೂ ಈಗ ಶಿಕ್ಷೆ ಕೊಡಬೇಕು ಅನ್ನಿಸುತ್ತಿದೆ. ಆದರೆ ಅದಕ್ಕಿಂತ ಮುಂಚೆ ನಾನು ನಿಮಗೆಲ್ಲಾ ಎರಡು ವಿಷಯಗಳನ್ನು ಹೇಳಬಯಸುತ್ತೇನೆ, ಗಮನವಿಟ್ಟು ಕೇಳಿಸಿಕೊಳ್ಳಿ.
ಮೊದಲನೆಯದಾಗಿ, ನಮ್ಮೆಲ್ಲರಿಗೂ ಜೀವನದ ಪ್ರತಿ ಹಂತದಲ್ಲೂ, ಯಾರಾದರೂ ಒಬ್ಬರು ಹೀಗೆ ನಮ್ಮ ಬೆನ್ನ ಹಿಂದೆ ನಿಂತು ನಮಗೆ ಗೊತ್ತಾಗದಂತೆ ಒಂದು ಕೆಟ್ಟದಾಗಿ ಬರೆದ ಚೀಟಿಯನ್ನು ಅಂಟಿಸುತ್ತಲೇ ಹೋಗುತ್ತಾರೆ. ಈ ಹುಡುಗನಿಗೆ ಈ ಚೀಟಿಯ ಬಗ್ಗೆ ಮುಂಚೆಯೇ ತಿಳಿದಿದ್ದರೆ ಅವನು ಲೆಕ್ಕ ಬಿಡಿಸಲು ಬೋರ್ಡಿನೆಡೆಗೆ ಬರುತ್ತಲೇ ಇರಲಿಲ್ಲ. ಅದರ ಬಗ್ಗೆ ಅವನಿಗೆ ತಿಳಿಯದೇ ಇದ್ದದ್ದರಿಂದಲೇ ಅವನು ಬಂದು ನಿರ್ಭಯವಾಗಿ ಲೆಕ್ಕ ಮಾಡಿದ.
ನಮ್ಮ ನಮ್ಮ ಜೀವನದಲ್ಲಿ ನಾವು ಮಾಡಬೇಕಾದ್ದು ಕೂಡ ಇದನ್ನೇ. ನಮ್ಮ ಬೆನ್ನಿಗೆ ಯಾರು ಏನೇ ಬರೆದು ಅಂಟಿಸಿದರೂ ಅದರ ಕಡೆ ಗಮನ ಕೊಡದೆ ನಮ್ಮ ಪ್ರಗತಿಯತ್ತ ನಾವು ಗಮನವಿಟ್ಟು ಮುಂದೆ ಸಾಗುತ್ತಿರಬೇಕು.
ಎರಡನೆಯದು ಏನೆಂದರೆ, ನಿಮ್ಮಲ್ಲಿ ಇಷ್ಟೊಂದು ಜನ ಸ್ನೇಹಿತರಿದ್ದೀರಿ. ಆದರೆ ಆ ಹುಡುಗನನ್ನು, ಅವನ ಬೆನ್ನ ಮೇಲಿರುವ ಹಾಳೆಯ ಬಗ್ಗೆ ಎಚ್ಚರಿಸಲು ಇಲ್ಲಿ ಯಾರೊಬ್ಬರಿಗೂ ಮನಸ್ಸಿರಲಿಲ್ಲ.
ನಮಗೆ ಎಷ್ಟು ಜನ ಸ್ನೇಹಿತರಿದ್ದರೆ ಏನು ತಾನೇ ಲಾಭ?
ಸ್ನೇಹದ ಮೂಲದ್ರವ್ಯ ನಿಷ್ಠೆ ಎನ್ನುವುದೇ ಇಲ್ಲದಿದ್ದ ಮೇಲೆ. ನಮ್ಮೆಡೆಗೆ ಸ್ನೇಹ ನಿಷ್ಠೆ ಇಲ್ಲದೆ, ನಮ್ಮ ಪ್ರಗತಿಯನ್ನು ಕಂಡು ಕರುಬುವ ಎಷ್ಟು ಸ್ನೇಹಿತರಿದ್ದರೆ ಏನು ಫಲ?
ನೀವು ಅಂಟಿಸುವ ಒಂದು ಸಣ್ಣ ಚೀಟಿ ಆ ವ್ಯಕ್ತಿಯ ಪಾಲಿಗೆ, ಅವನ ಜೀವನಕ್ಕೆ ತುಂಬಾ ಮಹತ್ವ ಆಗಬಹುದು, ತುಂಬಾ ಮಹತ್ವವಾದ ಅಪಾಯವನ್ನು ಕೂಡ ತರಬಲ್ಲದು. ಕೈಲಾದರೆ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡೋಣ, ಕೈಲಾಗದಿದ್ದರೆ ಸುಮ್ಮನೆ ಕೂಡೋಣ.
ಎಂತಹ ಅದ್ಭುತವಾದ ನೀತಿಪಾಠವಲ್ಲವೇ?
ನೀವೇನಂತೀರಿ?
ಮೂಲ ಲೇಖಕರು ತಿಳಿದಿಲ್ಲ.
- ಆರ್. ಪಿ. ರಘೋತ್ತಮ (ಕನ್ನಡಕ್ಕೆ ಭಾಷಾಂತರಿಸಿದ ಲೇಖಕರು)
