ಮಗ ಓದಲಿ ಅಂತ ಫಾರೆನ್ ಕಳಸಿದ ಅಮ್ಮನಿಗೆ ಶಾಕ್ ಕಾದಿತ್ತು. ಮಗ ವಿಡಿಯೋ ಕಾಲ್ ಮಾಡಿ ಮಗನನ್ನು ತೋರಿಸಲು ಕಾತುರದಿಂದ ಕೂತಿದ್ದ. ಅಮ್ಮನಿಗೆ ಮಗ ಹೇಳದೆ ಮದುವೆಯಾದ ಎನ್ನುವ ದುಃಖ ಉಮ್ಮಳಿಸಿ ಬಂತು, ಮುಂದೇನಾಯಿತು ಹಾಸ್ಯ ಕತೆಗಾರ್ತಿ ಸುಮ ಉಮೇಶ್ ಅವರ ಕತೆಯನ್ನು ತಪ್ಪದೆ ಓದಿ…
ಇದೇನಿದು ಶೀರ್ಷಿಕೆ. ಸುಮ ಮಗನಿಗೆ ಯಾವಾಗ ಮದುವೆ ಆಯ್ತು..?? ಮಗನಿಗೆ ಮದುವೆ ಆದ ವಿಷಯ ನಮಗೆಲ್ಲ ತಿಳಿಸಲೇ ಇಲ್ಲ ಈ ಸುಮ… ಅಂತ ನೀವೆಲ್ಲ ಬೇಜಾರಾಗಿರುತ್ತೀರಾ ಅಂತ ಗೊತ್ತು. ಕ್ಷಮಿಸಿ… ವಿಷಯ ಹೇಳ್ತೀನಿ. ಮುಂದೆ ಓದಿ.
ಮಗನಿಗೆ ಮದುವೆ ವಯಸ್ಸೇನೋ ಆಗಿದೆ. ಹಾಗಾಗಿ ನಾನು, ನಮ್ ಮಾವ, ಅತ್ತೆ, ಎಲ್ಲರೂ ಮದುವೆಗೆ ಒಪ್ಪಿಕೊ ಮಗನೇ, ವಯಸ್ಸು ಮೀರ್ತಾ ಇದೆ ಅಂತ ಸದಾ ದುಂಬಾಲು ಬೀಳ್ತಾನೆ ಇದ್ವಿ. ಯಜಮಾನ್ರು ಈ ಸುದ್ದಿಗೆ ಅಷ್ಟು ಬರಲ್ಲ. ನಾನು ಅನುಭವಿಸ್ತಾ ಇರೋದೇ ಸಾಕು. ಪಾಪ, ಮುದ್ದು ಮಗ ಇನ್ನೊಂದಿಷ್ಟು ವರ್ಷ ಸುಖವಾಗಿ ಇರಲಿ ಅಂತ ಬಯಸೋ ಹೃದಯವಂತ ಅಪ್ಪ. ಹೀಗೆಲ್ಲ ಇವರು ಹೇಳಿದಾಗ ನಂಗ ಯಾಕೋ ಅರ್ಥವೇ ಆಗಲ್ಲ ಇವರ ಮಾತು. ನಿಮಗೇನಾದರೂ ಅರ್ಥವಾಯ್ತಾ…??
ಸರಿ ಸರಿ … ವಿಷಯಕ್ಕೆ ಬರ್ತೀನಿ. ಹೀಗೆ ದುಂಬಾಲು ಬೀಳ್ತಾ ಇದ್ವಾ. ಅವನು ನಂಗ್ ಈಗಲೇ ಮದುವೆ ಬೇಡಾ, ಹಾಗೆ ಹೀಗೆ ಅಂತ ನಮ್ಮ ಮಾತು ತಳ್ಳಿ ಹಾಕ್ತಾ ಇದ್ದ. ಜಾಸ್ತಿ ಬಲವಂತ ಮಾಡಿದ್ರೆ, ಜಗಳಗಂಟಿ ಸಿಕ್ಕಿದ್ರೆ ಏನಮ್ಮ ಮಾಡೋದು, ಡ್ಯಾಡಿ ಥರ ಸಹಿಸಿಕೊಂಡು ಇರಲು ನಂಗಾಗಲ್ಲ, ಅದಕ್ಕೆ ಮದುವೆಯೇ ಬೇಡ ಅಂತಾನೆ. ಅಯ್ಯೋ… ಈಗಲೂ ನಂಗಂತೂ ಇವನ ಮಾತು ಅರ್ಥವೇ ಆಗಲಿಲ್ಲ. ನಿಮಗೇನಾದರೂ ಅರ್ಥವಾಯ್ತಾ…???
ಈ ಥರ ಬೇಡ ಬೇಡ ಅಂತಿದ್ದವನು ಒಂದಿನ ವಿಡಿಯೋ ಕಾಲ್ ಮಾಡಿದಾಗ “ಅಮ್ಮ, ಬೇಗ ಸೊಸೆ ಬೇಕು, ಮೊಮ್ಮಕ್ಕಳು ಬೇಕು ಅಂತ ಯಾವಾಗಲು ಕೇಳ್ತಾ ಇದ್ಯಲ್ಲ, ನಿನಗೊಂದು surprise ಇದೆ ಅಂದ. ಎಲಾ ಇವನ, ಅಪ್ಪ ಅಮ್ಮ, ಗಟ್ಟಿಯಾಗಿ ಗುಂಡುಕಲ್ಲು ಥರ ಇದ್ದೇವೆ. ಇಂಥಾ ಸರ್ಪ್ರೈಸ್ ಯಾವಳಿಗೆ ಬೇಕು ಅಂತ ನನಗೆ ಕೋಪ ಕುದಿಯಲು ಶುರು ಆಯ್ತು. ಬಿಪಿ ತಾರಕಕೇರಿತು. ನೋಡ್ರಿ, ನಂಗೋತಿತ್ತು. ಒಂದಲ್ಲ ಒಂದ ದಿನ ನಿಮ್ಮಗ ಇಂಥಾ ಕೆಲಸ ಮಾಡ್ತಾನೆ, surprise ಅಂತೆ.. ನಮಗೆ ಹೇಳದೆ ಕೇಳದೆ, ಅದು ಯಾವ ತಲೆ ಮಾಸಿದೋಳನ್ನ ಕಟ್ಟಿಕೊಂಡ್ನೋ, ಇರೋ ಒಬ್ಬ ಮಗನ್ನ ಅಷ್ಟು ದೂರ ಕಳಿಸಬೇಡಿ ಅಂದ್ರೆ ಹೋಗಲಿ ಬಿಡು, ಅರಳುತ್ತಿರುವ ಪ್ರತಿಭೆಯನ್ನು ಒಂದೇ ಕಡೆ ಹಿಡಿದು ಇಡಬಾರದು ಅಂದ್ರಿ. ಈಗ ನೋಡಿ..ನಿಮ್ ಮಗನ ಪ್ರತಿಭೆ. ಉಪ್ಪಿಟ್ಟು ಕೇಸರಿಬಾತ್ ತಿನ್ನಬೇಕು ಅಂತ ನನಗೆಷ್ಟೆಲ್ಲ ಆಸೆ ಇತ್ತು. ನಮ್ ಹುಡುಗಿಗೆ ನಿಮ್ ಹುಡುಗ ಒಪ್ಪಿಗೆ ಅಂತೆ ನಿಮ್ ಅಭಿಪ್ರಾಯ ತಿಳಿಸಿ ಅಂತ ಹುಡುಗಿ ಕಡೆಯವರು ಹೇಳಿದಾಗ ನಾನು ಮನೆಗೆ ಹೋಗಿ ಒಂದೆರಡು ದಿನದಲ್ಲಿ ತಿಳಿಸುತ್ತೇವೆ ಅಂತ ಸಕತ್ attitude ನಲ್ಲಿ ಹೇಳೋ ಅವಕಾಶ ನಿಮ್ ಮಗ ಕಸಿದುಕೊಂಡು ಬಿಟ್ಟ. first impression is best impression ಅನ್ನುತ್ತಾರೆ. ಸೊಸೆ ನೋಡಲು ಹೋದಾಗ ತುಂಬ ಸ್ಟೈಲಿಶ್ ಆಗಿ ನಾನು ಅಲಂಕಾರ ಮಾಡಿಕೊಂಡು ಅವಳ ಮುಂದೆ ನಾನು ಆಧುನಿಕ ಮಹಿಳೆ, ತುಂಬ ಬ್ರಾಡ್ ಮೈಂಡೆಡ್ಡು, ಎಜುಕೇಟೆಡ್ಡು, ಕಲ್ಚರ್ಡು ಅಂತ buildup ಕೊಡೋದನ್ನು ತಪ್ಪಿಸಬಿಟ್ಟ ನಿಮ್ಮಗ. ಶಿಫಾನ್ ಸೀರೆ ಉಟ್ಟು, ಅದಕ್ಕೆ ಹೊಂದುವ accessories ಇಂತಿಂಥದೆ ಹಾಕೋಬೇಕು ಅಂತ ಅಂದುಕೊಂಡಿದ್ದ ನನ್ನ ದೂರಾಲೋಚನೆ ಎಲ್ಲ ಮಣ್ಣು ಪಾಲು ಮಾಡಿದ. ಮಗನಿಗಿಂತ ತಾಯಿ ಎಷ್ಟು ಒಳ್ಳೆಯವರು ಅಂತ ಅವಳ ಕೈಲಿ ಹೊಗಳಿಸಿಕೊಳ್ಳುವ ಭಾಗ್ಯ ಕಿತ್ತುಕೊಂಡ ನಿಮ್ಮಗ…
ಹೀಗೆ ನನ್ ಆಕ್ರಂದನ ಮುಗಿಲು ಮುಟ್ಟಿತ್ತು. ಆ ಕಡೆ ಮಗನ ವಿಡಿಯೋ ಕಾಲ್ ಕಟ್ ಆಗಿ ತುಂಬ ಹೊತ್ತು ಆಗಿತ್ತು. ಲೇ ಲೇ… ಅತ್ತೆ ಮಗಳೇ, ಅವನೇನೋ surprise ಅಂದ್ರೆ, ನೀನ್ ಇಷ್ಟೆಲ್ಲ ಊಹೆ ಮಾಡಿಕೊಂಡು ಬಡಬಡಿಸ್ತಾ ಇದ್ದೀಯಲ್ಲ, ನೀನ್ ಹೀಗೆಲ್ಲ ಆಡೋದಕ್ಕೇ ಅವನು ಕಾಲ್ ಕಟ್ ಮಾಡಿದ್ದು ಅಂತ ಮೂಗು ಮುರಿದರು ಪತಿರಾಯರು.
ನಾನು ಕಣ್ಣು, ಮೂಗು ಒರೆಸಿಕೊಳ್ಳುತ್ತಾ ಮತ್ತೆ ಅವನಿಗೆ ಕಾಲ್ಮಾಡಿದೆ. ಸೈಲೆಂಟ್ ಆಗಿದ್ದ.
‘ನಾನು ಗಂಭೀರಳಾಗಿ ಏನೋ ಅದು ಸರ್ಪ್ರೈಸು’ ಅಂದೆ.
‘ಅಮ್ಮ, ನಿಂಗೆ ಮೊಮ್ಮಗನ್ನ ತೋರಿಸುತ್ತೇನೆ’ ಅಂದ.
‘ಅಯ್ಯೋ ಅಯ್ಯೋ, ಕೇಳಿದ್ರ ಕೇಳಿದ್ರ… ಮದುವೆ ಆಗಿ ಮೂರು ವರ್ಷವೇ ಆಗಿರಬೇಕು..ಮೊಮ್ಮಗ ಅಂತಾ ಇದಾನಲ್ರಿ..ಇವನ ಪಾಲಿಗೆ ನಾವೇನು ಸತ್ತೋಗಿದೀವಾ’..
ಅಮ್ಮ… ಅಮ್ಮ… ಇಲ್ನೋಡು. ರೂಬಿಕ್ಸ್, ಸೀ.. ಸೀ ಯುವರ್ ಅಜ್ಜಿ ಅಂದಾಗ ಬಾಲ ಅಲ್ಲಾಡಿಸುತ್ತಾ, ಮೊಬೈಲ್ ಕಡೆ ಮಿಕ ಮಿಕ ನೋಡ್ತಾ ಇತ್ತು, ಯಾವ್ದೋ ಒಳ್ಳೆ ಜಾತಿಯ ನಾಯಿ. ರೂಬಿಕ್ಸ್.
‘ನಾನು ಈ ರೂಬಿಕ್ಸ್ ಮಗು ಥರ ಸಾಕ್ತಾ ಇದ್ದೀನಿ, ನಂಗ್ ಮಗು ಅಂದ ಮೇಲೆ ನೀನು ಇದಕ್ಕೆ ಅಜ್ಜಿ ತಾನೇ. ಸೊಸೆ ಮೊಮ್ಮಕ್ಕಳು ಅಂತ ಸದಾ ಹೇಳ್ತಾ ಇರ್ತೀಯಲ್ಲ. ನೋಡ್ಕೋ ಮೊಮ್ಮಗನ್ನ. ಸೊಸೆನ್ನ ಮಾತ್ರ ಕೇಳಬೇಡ. ರೂಬಿಕ್ಸ್… ಅಜ್ಜಿ ನೋಡು ಪುಟ್ಟ. ಹಾಯ್ ಹೇಳು ಅಜ್ಜಿಗೆ. ಅಮ್ಮ ಅಮ್ಮ, ರೂಬಿಕ್ಸ್ ಗೆ ಥೇಟ್ ನಿನ್ನದೇ ಹೋಲಿಕೆ ಬಂದಿದೆ. ಎಷ್ಟು ಚೆನ್ನಾಗಿ ಬೌ ಬೌ ಅಂತಾನೆ ಗೊತ್ತಾ, ಕೇಳಿಸಿಕೋ ಚೂರು’ …
‘ನನ್ನದೇ ಹೋಲಿಕೆ ಅಂತೆ..ನಿಮಗೇನಾದರೂ ಅರ್ಥವಾಯ್ತಾ’ ???
ನಾನು ಅಜ್ಜಿ ಆದೆ
- ಸುಮ ಉಮೇಶ್
