ಮೊಬೈಲ್ ನಿಂದ ಮಕ್ಕಳನ್ನು ದೂರ ಇಡುವುದು ಹೇಗೆ?

ಮಕ್ಕಳು ಮೊಬೈಲ್ ನಿಂದ ಓದಿನಲ್ಲಿ, ಆಟದಲ್ಲಿನ ಆಸಕ್ತಿ ಕಮ್ಮಿಯಾಗುತ್ತಿದೆ. ಇದಕ್ಕೆ ಕಾರಣವೇನು? ನಿವೃತ್ತ ಕೆಪಿಸಿಎಲ್ ಅಧಿಕಾರಿ ದೇವರಾಜ ಚಾರ್ ಅವರು ಓದುಗರೊಂದಿಗೆ ಚರ್ಚಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಮಕ್ಕಳನ್ನು ಟಿವಿ, ಮೊಬೈಲಿನಿಂದ ದೂರ ಇಡಲು ಏನಾದರೂ ಸಲಹೆ ಇದೆಯಾ ಅಂತ ಸ್ನೇಹಿತರೊಬ್ಬರು ಕೇಳಿದರು. ಕಾರಣ ಅದೇ ಒಂದು ಗೀಳಾಗಿ, ಮಕ್ಕಳು ಓದಿನಲ್ಲಿ ಹಿಂದೆ ಉಳಿಯುತ್ತಾರೆ. ಈ ರೀತಿಯ ಸಲಹೆಗಳನ್ನು ಸಾಕಷ್ಟು ಚಿಂತಕರು, ಡಾಕ್ಟರ್ ಗಳು ತಿಳಿ ಹೇಳಿದ್ದಾರೆ.

ಮಕ್ಕಳು ಟಿವಿ ಅಥವಾ ಮೊಬೈಲ್ ನೋಡುವುದನ್ನು ತಾಯಿಯಂದಿರೇ ಕಲಿಸಿರುತ್ತಾರೆ. ಹೇಗಾದರೂ ಊಟ ತಿಂಡಿ ತಿಂದುಕೊಳ್ಳಲಿ ಅನ್ನುವ ಸದುದ್ದೇಶದಿಂದ ಟಿವಿ ಅಥವಾ ಮೊಬೈಲ್ ಹಾಕಿಕೊಡುತ್ತಾರೆ. ಇಲ್ಲದಿದ್ದರೆ ಮಕ್ಕಳಿಗೆ ಊಟ ಮಾಡಿಸಲು ಸಾಕಷ್ಟು ಸಮಯ ವ್ಯಯವಾಗುತ್ತದೆ.

ಕೆಲವು ತಾಯಿಯಂದಿರು ಮಕ್ಕಳಿಗೆ ಊಟ ತಿನ್ನಲು ಕೊಟ್ಟು, ಮೊಬೈಲ್ ಸಹ ಕೊಟ್ಟಿರುತ್ತಾರೆ. ತಾವು ಮೊಬೈಲ್ ನೋಡುವುದರಲ್ಲಿ ನಿರತರಾಗಿರುತ್ತಾರೆ. ಸಾಮಾನ್ಯವಾಗಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಮೊಬೈಲ್ ನೋಡುವುದರಲ್ಲಿ ನಿರತರಾಗಿರುತ್ತಾರೆ. ಈ ಕಾರಣದಿಂದ ಮಕ್ಕಳು ಸಹ ಮೊಬೈಲ್ ನೋಡಿಕೊಂಡು ಊಟ ತಿಂಡಿ ಮಾಡುತ್ತಾರೆ.

ಬೇಗ ಬೇಗ ಊಟ ಮುಗಿಸಬೇಕು ಎಂದು ಅಮ್ಮ ತಾಕೀತು ಮಾಡಿ ಮೊಬೈಲ್ ಅನ್ನು ಕೊಟ್ಟಿರುತ್ತಾರೆ. 30 ನಿಮಿಷಗಳಾದರೂ ಕೊಟ್ಟ ಊಟದಲ್ಲಿ ಕಾಲು ಭಾಗ ಖಾಲಿಯಾಗಿರುತ್ತದೆ. ಎಲ್ಲೋ ಇದ್ದ ಅಮ್ಮ ನೋಡಿ ರೇಗುತ್ತಾರೆ. ಇನ್ನು ಹತ್ತು ನಿಮಿಷ ಅಷ್ಟೇ. ಅಷ್ಟರಲ್ಲಿ ಊಟ ಮುಗಿದಿರಬೇಕು ಎಂದು ಕಟ್ಟು ನಿಟ್ಟಾಗಿ ಹೇಳುತ್ತಾರೆ. ಆದರೂ ಊಟ ಮುಗಿದಿರುವುದಿಲ್ಲ.

ತಾಯಿ ಸಿಟ್ಟಿನಿಂದ ಮೊಬೈಲ್ ಕಿತ್ತುಕೊಳ್ಳುತ್ತಾರೆ. ಊಟವನ್ನು ತಾವೇ ತಿನ್ನಿಸುತ್ತಾರೆ. ಇದು ಪ್ರತಿದಿನ ಇದ್ದದ್ದೇ. ಈ ರೀತಿ ತಾಯಿ ಮಕ್ಕಳಿಗೆ ಸಂಘರ್ಷ ಇರುತ್ತೆ.ಈ ರೀತಿ ಅಭ್ಯಾಸ ಇದ್ದ ಮಕ್ಕಳಿಗೆ ತಾವು ಏನು ತಿನ್ನುತ್ತಿದ್ದೇವೆ ಅನ್ನುವುದೇ ಗೊತ್ತಾಗುವುದಿಲ್ಲ.

ರುಚಿ, ಸ್ವಾದ, ವಾಸನೆ ಅದರ ಹೆಸರು ಏನು ಗೊತ್ತಾಗುವುದಿಲ್ಲ. ಈ ರೀತಿಯ ಸನ್ನಿವೇಶ ಕುರಿತು ಒಬ್ಬ ಕಲಾವಿದರು ಒಂದು ಪ್ರಸಂಗ ಹೇಳಿದ್ದು ಜ್ಞಾಪಕಕ್ಕೆ ಬರುತ್ತೆ. ಅದು ಹೀಗಿದೆ : ತಿಂಡಿ ತಿನ್ನುವ ಸಮಯದಲ್ಲಿ ಮಗುವಿಗೆ ಅಮ್ಮ ತಿಂಡಿ ಕೊಟ್ಟು ಟಿವಿ ಹಾಕಿ ಕೊಟ್ಟಿರುತ್ತಾರೆ. ಗಮನವೆಲ್ಲ ಟಿವಿಯಲ್ಲಿ ಬರುತ್ತಿರುವ ಕಾರ್ಯಕ್ರಮದ ಮೇಲಿರುತ್ತದೆ.

ಕಾರ್ಯಕ್ರಮದ ಹೆಸರು: “ಆಹಾ ಎಂಥಾ ರುಚಿ “ಎನ್ನುವ ಅಡಿಗೆ ಕಾರ್ಯಕ್ರಮ. ಆ ತಿಂಡಿಯನ್ನು ಮಾಡಲು ಒಬ್ಬ ಹೆಂಗಸರು ಬಂದಿರುತ್ತಾರೆ. ಅವರ ಜೊತೆ ಮಾತುಕತೆ ನಡೆಸಲು ಒಬ್ಬ ನಿರೂಪಕಿ ಇರುತ್ತಾರೆ. ನಿರೂಪಕಿ ಕೇಳುತ್ತಾರೆ ‘ಏನ್ ತಿಂಡಿ ಮಾಡ್ತೀರಾ ಮೇಡಂ  ಅಂತ ಮಾತು ಪ್ರಾರಂಭವಾಗುತ್ತದೆ. ನೀವೇ ನೋಡ್ತಿರಲ್ಲ ಅದು ಒಂದು ಸ್ವಾದಿಷ್ಟ ತಿಂಡಿ. ಹೆಚ್ಚಾಗಿ ಉಪ್ಪಿಟ್ಟಿನ ಜೊತೆ ತಿನ್ನುತ್ತಾರೆ. ಇವೆರಡರ ಕಾಂಬಿನೇಷನ್ ಚೆನ್ನಾಗಿರುತ್ತೆ’ ಅಂತ ಹೇಳಿ ಮುಂದುವರೆಯುತ್ತಾರೆ.

ನಿರೂಪಕಿ ಏನ್ ಏನ್ ಬೇಕಾಗುತ್ತೆ ಅಂತ ಕೇಳಿದಾಗ ಅವರು ರವೆ, ಸಕ್ಕರೆ, ಕೇಸರಿ, ಏಲಕ್ಕಿ, ತುಪ್ಪ, ದ್ರಾಕ್ಷಿ, ಗೋಡಂಬಿ ಎಲ್ಲವನ್ನು ಒಂದು ಕಡೆ ತೆಗೆದಿಟ್ಟು ಇಷ್ಟು ಬೇಕಾಗುತ್ತೆ ಅಂತ ಹೇಳುತ್ತಾರೆ. ಇಬ್ಬರೂ ಮಾತನಾಡುತ್ತಾ ಎಲ್ಲಾ ಪದಾರ್ಥಗಳನ್ನು ಬಳಸಿ ಒಂದು ಸಿಹಿ ತಿಂಡಿ ರೆಡಿ ಮಾಡುತ್ತಾರೆ. ನೋಡಲಿಕ್ಕೆ ಚೆನ್ನಾಗಿರುತ್ತದೆ. ನಿರೂಪಕಿ ರುಚಿ ನೋಡಿ ಎಷ್ಟು ಚೆನ್ನಾಗಿದೆ ಅಂತ ಹೇಳುತ್ತಾರೆ.

ಮಗು ಸಹ ಟಿವಿಯಲ್ಲಿ ಬರುತ್ತಿದ್ದ ಅಡಿಗೆ ಕಾರ್ಯಕ್ರಮ ನೋಡಿ, ಅವರು ಮಾಡಿದ ತಿಂಡಿಯನ್ನು ನೋಡಿ ಎಷ್ಟು ಚೆನ್ನಾಗಿದೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತದೆ. ಮಗು ತನ್ನ ಅಮ್ಮನನ್ನು ಕರೆದು ಅಮ್ಮ ಅಮ್ಮ ಟಿವಿಲಿ ಒಂದು ತಿಂಡಿ ಮಾಡುತ್ತಿದ್ದಾರೆ.ನೋಡಮ್ಮ ಅದು ಎಷ್ಟು ಚೆನ್ನಾಗಿದೆ. ನನಗೂ ಮಾಡಿಕೊಡಮ್ಮ ಅಂತ ದುಂಬಾಲು ಬೀಳುತ್ತೆ. ತಾಯಿ ಟಿವಿಯಲ್ಲಿ ಬರುತ್ತಿದ್ದ ತಿಂಡಿಯನ್ನು ನೋಡಿ ಗಾಬರಿಗೊಳ್ಳುತ್ತಾರೆ. ಮಗನಿಗೆ ಕೊಟ್ಟಿರುವ ತಿಂಡಿ ಟಿವಿಯಲ್ಲಿ ತೋರಿಸುತ್ತಿರುವ ತಿಂಡಿ ಎರಡು ಒಂದೇ ಅದೇ ಕೇಸರಿಬಾತು.

ಅಮ್ಮ ಸಿಟ್ಟಿನಿಂದ ನೀ ತಿಂತಿರುವುದು ಅದೇ ತಿಂಡಿ ಕಣೋ, ಅಷ್ಟು ಗೊತ್ತಾಗಲಿಲ್ಲವ ಅಂತ ಸಿಡಿ ಮಿಡಿಗೂಳ್ಳುತ್ತಾರೆ. ಆದ್ದರಿಂದ ಮಕ್ಕಳಿಗೆ ತಿಳಿಸಿ ಹೇಳಬೇಕು ನೀನು ಟಿವಿ ನೋಡುತ್ತಾ ತಿಂಡಿ ತಿಂದರೆ ನಾಲಿಗೆಗೆ ಗೊತ್ತಾಗುವುದಿಲ್ಲ. ಅದರ ಸವಿಯನ್ನು ಅನುಭವಿಸಲಾರೆ. ಇದು ಇಂಥ ತಿಂಡಿ.ಇದರಲ್ಲಿ ಈ ರೀತಿಯ ಪದಾರ್ಥಗಳನ್ನು ಹಾಕಿರುತ್ತಾರೆ ಅಂತ ತಿಳಿ ಹೇಳಬೇಕು.

ಟಿವಿ ನೋಡಿಕೊಂಡು ತಿಂಡಿ ತಿನ್ನುತ್ತಿದ್ದರೆ ಏನು ಗೊತ್ತಾಗುವುದೇ ಇಲ್ಲ. ನೀನು ತಿಂಡಿ ನೋಡಿಕೊಂಡು ತಿನ್ನುವಾಗ ನಿನಗೆ ತಿಂಡಿಯ ಸವಿರುಚಿ ತಿಳಿಯುತ್ತೆ.ಅದರ ಸವಿ ಕೆಲ ಕಾಲ ಉಳಿಯುತ್ತೆ.ಇನ್ನು ಮೇಲೆ ತಿಂಡಿ ತಿನ್ನುವಾಗ ಟಿವಿ ನೋಡಬೇಡ. ತಿಂಡಿ ತಿಂದ ಮೇಲೆ ಟಿವಿ ಹಾಕು, ಸ್ವಲ್ಪ ಹೊತ್ತು ನೋಡು ಅಂತ ಮಕ್ಕಳಿಗೆ ತಿಳಿ ಹೇಳಿದರೆ ಟಿವಿ ನೋಡುವ ಸಮಯ ಕಡಿಮೆ ಆಗಬಹುದು.

ಸುಧಾ ಮೂರ್ತಿಯವರ ಕಥೆ ಕೇಳಲು, ನೋಡಲು ಹೇಳಿರಿ. ಅದೇ ರೀತಿ ಮಹಾಭಾರತ, ರಾಮಾಯಣದ ಕಥೆಗಳನ್ನು ನೋಡಲು ತಿಳಿಸಿರಿ. ಟಿವಿ ಮೊಬೈಲ್ ನೋಡುವುದರ ಬದಲು ಒಳ್ಳೆಯ ಪುಸ್ತಕಗಳನ್ನು ಒದಲು ಹೇಳಿರಿ. ಒಳ್ಳೆಯ ಆಟಗಳನ್ನು ಆಡಿಸಿ. ಮಕ್ಕಳ ಜೊತೆ ಆಟ ಆಡಲು ಬಿಡಿ. ಪಾರ್ಕ್ ನಲ್ಲಿ ಕಾಲ ಕಳೆಯಲು ಬಿಡಿ. ಮಗುವಿನ ಜೊತೆ ವಾಕಿಂಗ್ ಮಾಡಿ.


  • ದೇವರಾಜ ಚಾರ್ –  ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading