ವಿನಾಶಕಾರಿ, ಅಮಾನವೀಯ, ಹಿಂಸಾತ್ಮಕವೂ ಅಪಾಯಕಾರಿ, ಆದಂತಹ ಮೂಢನಂಬಿಕೆಗಳನ್ನು ನಂಬಿ ಮುಂದುವರಿಸುವುದು ಎಷ್ಟರ ಮಟ್ಟಿಗೆ ಸರಿ? ಇಂಥ ಅಪಾಯಕಾರಿ ಮೌಢ್ಯಗಳನ್ನು ಮೂಟೆಕಟ್ಟಿ ಅವಶ್ಯವಾಗಿ ಎಸೆದುಬಿಡಬೇಕು. ಗೀತಾಂಜಲಿ ಎನ್ ಎಮ್ ಅವರ ಅರ್ಥಪೂರ್ಣ ಲೇಖನವನ್ನು ತಪ್ಪದೆ ಓದಿ…
- ನಾವು 22ನೇ ಶತಮಾನಕ್ಕೆ ಕಾಲಿಡುತ್ತಿದ್ದೇವೆ. ತಾಂತ್ರಿಕತೆ ದಿನದಿಂದ ದಿನಕ್ಕೆ ಅತ್ಯುನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಮಾನವ ಅನ್ಯ ಗ್ರಹಗಳನ್ನು ಸಂಪರ್ಕಿಸುತ್ತಿದ್ದಾನೆ, ಕೃತಕ ಗಾಳಿ, ಬೆಳಕಿನ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾನೆ ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರೆದಿದೆ ಎಂದರೆ ಮಾನವ ಜಗತ್ತನ್ನು ಬೆರಳಿನ ತುದಿಯಲ್ಲಿ ಕುಣಿಸುತ್ತಾ ಇಡೀ ಜಗತ್ತನ್ನೇ ಸಂಕುಚಿತಗೊಳಿಸಿ ಕುಳಿತಲ್ಲೇ ಜಗತ್ತಿನ ಮೂಲೆ ಮೂಲೆಗಳನ್ನೂ ಸಂಪರ್ಕಿಸುತ್ತಿದ್ದಾನೆ. ಇಷ್ಟೆಲ್ಲಾ ತಾಂತ್ರಿಕತೆ ಅಭಿವೃದ್ಧಿ ಹೊಂದಿದ್ದರೂ ಸ್ತ್ರೀ ಎಂಬ ಮಹೊನ್ನತ ಶಕ್ತಿ ಮೂಡನಂಬಿಕೆಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿದ್ದಾಳೆ ಎಂಬುದು ವಿಪರ್ಯಾಸ ಎನ್ನಬಹುದು.
- ವಿಜ್ಞಾನಕ್ಕೆ ವಿರುದ್ಧವಾದ ಈ ಮೂಢನಂಬಿಕೆಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ಮಹಿಳೆಯರೇ ಎನ್ನುವುದು ನಿಜಕ್ಕೂ ನೋವಿನ ಸಂಗತಿ.!ಮೂಢನಂಬಿಕೆಗಳ ರಾಡಿಯೊಳಗೆ ಪ್ರತಿ ಹೆಣ್ಣು ಯಾತನೆ ಅನುಭವಿಸುತ್ತಿದ್ದಾಳೆ. ನಂಬಿಕೆಗಳು ಇರಬೇಕು ಕೆಲವೊಂದು ನಂಬಿಕೆಗಳು ಮನಸ್ಸಿಗೆ ನೆಮ್ಮದಿ ಶಾಂತಿ,ಧೈರ್ಯ,ಸಾಂತ್ವನ, ಸಮಾಧಾನ ವಿಶ್ವಾಸವನ್ನು ಮೂಡಿಸುತ್ತವೆ. ಹಾಗೂ ಸಂಸ್ಕಾರವನ್ನು ಕಲಿಸುತ್ತವೆ ಆದರೆ ಅದೇ ರೀತಿ ಕುರುಡು ನಂಬಿಕೆಗಳು ಅಷ್ಟೇ ಅಪಾಯಕಾರಿಯಾಗಿ ದುಷ್ಪರಿಣಾಮ ಬೀರುತ್ತಿವೆ ಎಂಬುದು ಅಷ್ಟೇ ಸತ್ಯ.
- ವಿನಾಶಕಾರಿ, ಅಮಾನವೀಯ,ಹಿಂಸಾತ್ಮಕವೂ ಅಪಾಯಕಾರಿ, ಆದಂತಹ ಮೂಢನಂಬಿಕೆಗಳನ್ನು ನಂಬಿ ಮುಂದುವರಿಸುವುದು ಎಷ್ಟರ ಮಟ್ಟಿಗೆ ಸರಿ? ಇಂಥ ಅಪಾಯಕಾರಿ ಮೌಢ್ಯಗಳನ್ನು ಮೂಟೆಕಟ್ಟಿ ಅವಶ್ಯವಾಗಿ ಎಸೆದುಬಿಡಬೇಕು. ಇಂದು ಮಹಿಳೆಯರು ಎಷ್ಟೇ ಉನ್ನತ ಮಟ್ಟದ ಉತ್ತಮ ಶಿಕ್ಷಣ ಹೊಂದಿದ್ದರೂ ಪ್ರತಿ ಹೆಣ್ಣು ಒಂದಲ್ಲಾ ಒಂದು ಮೂಢನಂಬಿಕೆಗೆ ತುತ್ತಾಗುತ್ತಿರುವುದು ದುರಂತವೇ ಸರಿ. ಅಲ್ಲದೇ ಇವತ್ತಿನ ನಮ್ಮ ಶೈಕ್ಷಣಿಕ ವ್ಯವಸ್ಥೆ ಕೂಡ ಹಾಗೇ ಇದೆ ಸಂಬಳ ಪಡೆಯಲು ತಯಾರು ಮಾಡುವ ಕಾರ್ಖಾನೆಯಂತಿವೆಯೇ ವಿನಾಃ ವೈಜ್ಞಾನಿಕ ಮನೋಭಾವನೆಯನ್ನು ಯುಜನತೆಯ ಮನದಲ್ಲಿ ಬಿತ್ತುವಲ್ಲಿ ಸೋಲುತ್ತಿವೆ ಎನ್ನುವುದು ಸತ್ಯ. ಅದರಲ್ಲೂ ಹೆಣ್ಣಮಕ್ಕಳು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡುವ ಬದಲು ಎಲ್ಲವನ್ನೂ ಅನುಸರಿಸುತ್ತಾ ಸುಲಭವಾಗಿ ಒಪ್ಪಿಕೊಳ್ಳುತ್ತಿರುವ ಅವಳ ಮನೋಭಾವವೇ ಅವಳನ್ನು ಸುಲಭವಾಗಿ ಮೂಢನಂಬಿಕೆ ಎಂಬ ರಾಡಿಗೆ ತಳ್ಳಲು ಅವಕಾಶವನ್ನು ಮಾಡಿಕೊಡುತ್ತಿರುವುದು ಸುಳ್ಳಲ್ಲ, ಇದಕ್ಕೆ ಸಾಕ್ಷಿ ಎಂಬಂತೆ ಬಾಲ್ಯವಿವಾಹ, ಹೆಣ್ಣುಭ್ರೂಣ ಹತ್ಯೆ ಮುಟ್ಟಿನ ಕಾರಣದಿಂದ ಅವಳನ್ನು ಕೀಳಾಗಿ ನೆಡೆಸಿಕೊಳ್ಳುತ್ತಿರುವ ರೀತಿ, ವರದಕ್ಷಿಣೆ, ಧರ್ಮದ ಹೆಸರಿನಲ್ಲಿ ಅವಳ ಮೇಲೆ ಹೇರುತ್ತಿರುವ ನಿರ್ಬಂಧಗಳು ಸೇರಿ ಸಾಕಷ್ಟು ಮೂಢನಂಬಿಕೆಗಳು ಹೆಣ್ಣಿನ ಬದುಕನ್ನು ಹೈರಾಣ ವಾಗಿಸುತ್ತಿವೆ. ಶಿಕ್ಷಣ ಮತ್ತು ಕೌಟುಂಬಿಕ ವಾತವರಣಗಳು ಮಹಿಳೆಯನ್ನು ಬೌದ್ಧಿಕವಾಗಿ ಸಬಲಳನ್ನಾಗಿಸಿ ಸ್ವಂತ ವ್ಯಕ್ತಿತ್ವ, ಸ್ವಾಭಿಮಾನ ವೈಚಾರಿಕ ಆಲೋಚನೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇರಬೇಕೆ ಹೊರತು ಸಾಮಾಜಿಕ ವ್ಯವಸ್ಥೆಗಳ ಕೆಟ್ಟ ಕಟ್ಟು ಪಾಡುಗಳಿಗೆ ಪುರುಷ ಪ್ರಧಾನ ವ್ಯವಸ್ಥೆಯ ನಂಬಿಕೆಗಳಿಗೆ ಬಲಿಪಶುವಾಗುವ ನಿಟ್ಟಿನಲ್ಲಿ ಇರಬಾರದು.
- ಮೂಢನಂಬಿಕೆಗಳು ಇಂದು ಹೆಮ್ಮರವಾಗಿ ಬೆಳೆದು ನಿಲ್ಲಲು ಕಾರಣ ಅಜ್ಞಾನವೆಂದು ಹೇಳಬಹುದು. ಅಜ್ಞಾನವೇ ಮೂಢನಂಬಿಕೆಗಳ ಬೇರು! ಒಂದೆಡೆ ಅಜ್ಞಾನದಿಂದ ಮೂಢನಂಬಿಕೆ ಅಂಧಶ್ರದ್ಧೆಗಳು ಬೆಳೆಯುತ್ತಿದ್ದರೆ ಮತ್ತೊಂದೆಡೆ ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ದಿನದಿಂದ ದಿನಕ್ಕೆ ಈ ಮೂಢನಂಬಿಕೆಗಳು ಇನ್ನೂ ಜೀವಂತವಾಗಿ ಉಳಿಯುತ್ತಿವೆ. ನಗರ ಪ್ರದೇಶದ ಮಹಿಳೆಯರಿಗಿಂತ ಗ್ರಾಮೀಣ ಮಹಿಳೆಯರಲ್ಲಿ ಈ ಮೂಢನಂಬಿಕೆಗಳ ಆಚರಣೆ ಹೆಚ್ಚೇ ಎಂದು ಹೇಳಬಹುದು. ಕಾಲ ಎಷ್ಟೇ ಮುಂದುವರೆದಿದ್ದರೂ ಮಹಿಳೆಯರು ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ ಎನ್ನಬಹುದು ,ಪ್ರಪಂಚದ ಆಗುಹೋಗುಗಳ ಸಮಾಜದ ಪರಿವರ್ತನೆಯ ರೀತಿ ನೀತಿಗಳನ್ನು ಅರಿಯುವ ಬದಲು ಸ್ತ್ರೀಯರು ತಮ್ಮ ಬಿಡುವಿನ ವೇಳೆಯನ್ನು ಕೇವಲ ಟಿ ವಿ ಯಲ್ಲಿ ಬರುವ ಧಾರಾವಾಹಿಗಳು ಚಲನಚಿತ್ರಗಳನ್ನು ನೋಡುತ್ತಾ ಆತಂಕಕಾರಿ ಬೆಳವಣಿಗೆ, ಟಿ ವಿ, ರೇಡಿಯೋಗಳಲ್ಲಿನ ವಾರ್ತಪ್ರಸಾರ ಕೇಳುವವರು ಪತ್ರಿಕೆಗಳನ್ನು ಓದುವ ಹವ್ಯಾಸ ಇರುವವರು ಕಡಿಮೆಯೇ ಎನ್ನಬಹುದು. ಇಂದು ,ಬಹುತೇಕ ಧಾರವಾಹಿಗಳು ಮೂಢನಂಬಿಕೆಗಳ ಹಂದರವಾಗಿವೆ, ಇದು ಸಾಲದೆಂಬತೆ ಜೋತಿಷ್ಯ ಶಾಸ್ತ್ರದಲ್ಲಿನ ಕೆಲವೊಂದಿಷ್ಟು ಕುರುಡು ಆಚರಣೆಗಳ ಪದ್ದತಿಗಳನ್ನು ಟಿವಿ ಯಲ್ಲಿ ಬಿತ್ತುತ್ತಿರುವುದು ಸರ್ವೇಸಾಮಾನ್ಯವಾಗಿದೆ ಇದೂ ಕೂಡ ಮೂಢನಂಬಿಕೆಗಳು ಜೀವಂತವಾಗಿರಲು ಒಂದು ಕಾರಣವಾಗಿದೆ.
- ಇಂದು ಹೆಣ್ಣುಮಕ್ಕಳು ಮನೆಯ ನಿರ್ವಹಣೆಯ ಜೊತೆ ಸಮಾಜದ ಎಲ್ಲಾ ಕ್ಷೇತ್ರದಲ್ಲೂ, ಎಲ್ಲಾ ಸ್ಥರದಲ್ಲೂ ದುಡಿಯುತ್ತಿದ್ದರೂ ವರದಕ್ಷಣೆ ಎಂಬ ಮಾಹಾ ಪಿಡುಗಿಗೆ, ಬಾಲ್ಯ ವಿವಾಹಕ್ಕೆ ಸಾವಿರಾರು ಹೆಣ್ಣುಮಕ್ಕಳು ಬಲಿಯಾಗುತ್ತಿರುವುದು, ದುರಂತ.ಇನ್ನೂ ಹೆಣ್ಣುಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಗಳು. ಮುಟ್ಟಿನ ಸಮಯದಲ್ಲಂತೂ ಹೆಣ್ಣನ್ನು ನೆಡೆಸಿಕೊಳ್ಳುವ ರೀತಿ ಬಹಳ ನೋವಾಗುವಂಥದ್ದು ಮುಟ್ಟಾದ ಸ್ತ್ರೀಯರು ಅಶುದ್ದರು ಅಪಶಕುನ, ಎಂಬಲ್ಲಾ ಮೂಢನಂಬಿಕೆಗಳು ನಿಜಕ್ಕೂ ಅಜ್ಞಾನದ ಪರಮಾವಧಿ ಎನ್ನಬಹುದು.
ಇಂತಹ ಕುರುಡು ನಂಬಿಕೆಗಳು ಪ್ರತೀ ಮಹಿಳೆಗೆ ತುಂಬಾ ನೋವನ್ನುಂಟು ಮಾಡುತ್ತವೆ, ಹುಟ್ಟು ,ಸೃಷ್ಟಿ ಬದುಕು ಬೆಳವಣಿಗೆ ಎಲ್ಲವೂ ಮುಟ್ಟಿನಿಂದಲೇ ಎಂಬ ಸಾಮಾನ್ಯ ಜ್ಞಾನ ಈ ಸಮಾಜಕ್ಕೆ ಇದ್ದಿದ್ದರೆ ಇಂಥ ಶೋಷಿತ ಮೂಢನಂಬಿಕೆಗಳು ಇನ್ನೂ ಜೀವಂತವಾಗಿ ಇರುತ್ತಿರಲಿಲ್ಲ.
- ಗೀತಾಂಜಲಿ ಎನ್ ಎಮ್ – ಕೊಡಗು
