ಎಳ್ಳುಂಡಿ ತಿನ್ನುತ್ತಿದ್ದ ಪರಿಕ್ರಮದಲ್ಲಿದ್ದ ಅಜ್ಜನೊಬ್ಬ ಹೀಗಂದ… ” “ದೇವರ ತರ ಬಂದು ಎಳ್ಳುಂಡಿ ಕೊಟ್ಟಿಯಪ್ಪಾ.!! ಬೆಳಿಗ್ಗೆಯಿಂದ ಎಳ್ಳುಂಡಿ ತಿನ್ನುವ ಆಸೆಯಾಗಿತ್ತು. ಮನಸಲ್ಲಿ ತಾಯಿಗೆ ಬೇಡಿಕೆಯೊಡ್ಡಿದ್ದೆ ತುಂಬಾ ಬೇಗನೆ ನಾನು ಕೇಳಿದ್ದು.. ನಿಮ್ಮ ಮೂಲಕ ಕೊಟ್ಟಳು ತಾಯಿ” ಎಂದವನೇ.. ನರ್ಮದೇ ಹರ್..ಹರ್!! ಎಂದ ಖುಷಿಯಿಂದ.ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಬೆಳಿಗ್ಗೆ 4:30 ಕ್ಕೆ ಎದ್ದಾಗ ಸಿಕ್ಕಾಪಟ್ಟೆ ಚಳಿ ಇತ್ತು ಆವಾಗ ತಾಪಮಾನ 8 ಡಿಗ್ರಿ. ಅಬ್ಬಾ ಮೈ ಮರಗಟ್ಟಿಸುವ ಚಳಿ. ಆಶ್ರಮದ ಹೊರಭಾಗದಲ್ಲಿನ ನೀರು ಬೆಚ್ಚಗಿದ್ದವು..ಆ ಚಳಿಯಲ್ಲಿಯೇ ಸ್ನಾನ ಮಾಡಿ, ಹಾಸಿಗೆಗೆ ಓಡಿ ಬಂದು ಪೂಜೆಗೆ ಕೂತಾಗ ಮೈ ನಡಗುತ್ತಾ.. ಹಲ್ಲು ಕಟ..ಕಟ.. ಎನ್ನುತ್ತಿದ್ದವು.
7 ಗಂಟೆಗೆ…….
ಬೆಚ್ಚಗಿನ ಚಹಾ ಕುಡಿದು ಪ್ರಯಾಣ ಶುರು ಮಾಡಿದೆ.. 5 ಕಿ.ಮೀ ಹೋಗವುದರೊಳಗೆ ಕೈ ಬೆರಳು, ಕಾಲು ಬೆರಳುಗಳು ಜೋಮುಗಟ್ಟಿದವು. ಆಗಲೇ ಕೆಲವು ಪರಿಕ್ರಮ ಹೊರಟವರು ಬೆಂಕಿ ಕಾಯಿಸುತ್ತಿದ್ದರು..ತಕ್ಷಣವೆ ನಂದಿಯನ್ನು ರಸ್ತೆಬದಿಗೆ ನಿಲ್ಲಿಸಿ ಬೆಂಕಿಯಲ್ಲಿ ಕೈ ಆಡಿಸಿದಾಗಲೆ.. ಬೆರಳುಗಳಿಗೆ ಜೀವ ಬಂದಂತಾಯಿತು. ಆಹಾ…!!

ಮೊದಲೆಲ್ಲಾ ಟಿವಿಯಲ್ಲಿ, ಪ್ರವಾಸದಲ್ಲಿದ್ದಾಗ ಉತ್ತರ ಭಾರತೀಯರು ಬೆಂಕಿ ಕಾಯಿಸುತ್ತಿದ್ದದ್ದು ನೋಡುತ್ತಿದ್ದೆ. ಇಂದು ನಾನು…..ಒಂದಿಷ್ಟು ಹೊತ್ತು ಬೆಂಕಿ ಕಾಯಿಸಿಕೊಂಡು, ಸೂರ್ಯ ಶಾಖ ತಗಲುತ್ತಿದ್ದಂತೆ.. ಮುಂದೆ ಹೊರಟೆ.
“ಭಕತರಾ” ಎಂಬ ಊರೊಳಗೆ ಬರುತ್ತಿದ್ದಂತೆ ಒಬ್ಬರು ನನ್ನ ಅಡ್ಡಗಟ್ಟಿ, ಕುಶಲೋಪರಿ ವಿಚಾರಿಸಿ. ಉಪಾಹಾರಕ್ಕೆ ಮನೆಗೆ ಕರೆದುಕೊಂಡು ಹೋದರು. ಅವರ ಮನೆಯಲ್ಲಿ ಅವಲಕ್ಕಿ, ಜಿಲೇಬಿ ಕೊಟ್ಟು, ಜೊತೆಗೆ ತೆಗೆದುಕೊಂಡು ಹೋಗಲು ಎಳ್ಳುಂಡಿ, ಒಂದಿಷ್ಟು ಹಣ್ಣು ಕೊಟ್ಟರು. ಅವರ ಪ್ರೀತಿ, ಮಮತೆ ಜೊತೆ ನರ್ಮದಾ ತಾಯಿಯ ಮೇಲಿನ ಶ್ರದ್ಧೆ ಅಪಾರವಾದದ್ದು.
ಸತ್ಕಾರ ಸಂಸ್ಕೃತಿ ನಮ್ಮ ಭಾರತದ ವಿಶೇಷ.

ಆ ಭಕ್ತ ವೃಂದಕ್ಕೆ ನಮಸ್ಕರಿಸಿ. ನನ್ನ ಮೇಲೆ ಒಂದಿಷ್ಟು ಋಣ ಹೊತ್ತುಕೊಂಡು “ಬರೇಲಿ”ಗೆ ಹೊರಟೆ. ದಾರಿಯ ಮಧ್ಯದಲ್ಲಿ ಬಿಸಿಲು ಲೆಕ್ಕಿಸದೆ ನಡೆದು ಹೋಗುತ್ತಿದ್ದ ಪರಿಕ್ರಮ ವಾಸಿಗಳು ಕಂಡರು, ನನ್ನಲ್ಲಿದ್ದ ಎಳ್ಳುಂಡಿ ಕೊಟ್ಟೆ ಅವರ ಜೊತೆ ಮರದ ನೆರಳಲ್ಲಿ ಕೂತು ಹರಟಿದೆ. ಪ್ರತಿಯೊಬ್ಬರ ಅನುಭವ ದಿವ್ಯವಾದದ್ದು.
ಎಳ್ಳುಂಡಿ ತಿನ್ನುತ್ತಿದ್ದ ಪರಿಕ್ರಮದಲ್ಲಿದ್ದ ಅಜ್ಜನೊಬ್ಬ ಹೀಗಂದ… ” “ದೇವರ ತರ ಬಂದು ಎಳ್ಳುಂಡಿ ಕೊಟ್ಟಿಯಪ್ಪಾ.!! ಬೆಳಿಗ್ಗೆಯಿಂದ ಎಳ್ಳುಂಡಿ ತಿನ್ನುವ ಆಸೆಯಾಗಿತ್ತು. ಮನಸಲ್ಲಿ ತಾಯಿಗೆ ಬೇಡಿಕೆಯೊಡ್ಡಿದ್ದೆ ತುಂಬಾ ಬೇಗನೆ ನಾನು ಕೇಳಿದ್ದು.. ನಿಮ್ಮ ಮೂಲಕ ಕೊಟ್ಟಳು ತಾಯಿ” ಎಂದವನೇ.. ನರ್ಮದೇ ಹರ್..ಹರ್!! ಎಂದ ಖುಷಿಯಿಂದ.
ಜಗತ್ತು ವಿಚಿತ್ರ ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ.. ಅಚ್ಚರಿಯಿಂದ ಅನುಭವಿಸಬೇಕಷ್ಟೆ.. ಧನ್ಯೋಸ್ಮಿ ಬರೇಲಿಯ ಹೈವೇ ಮೂಲಕ “ಛಿಂದ” ಊರಿಗೆ ಬಂದೆ. ಇಲ್ಲಿ ಆಂಜನೇಯನ ಸಿದ್ದಿಕ್ಷೇತ್ರವಿದೆ… “ಛಿಂದಧಾಮ” ಎಂದು ಹೆಸರು.

ಸಿದ್ಧಿ ಕರುಣಿಸುವ ಆಂಜನೇಯನ ಮೂರ್ತಿ ಇರುವ ಭವ್ಯ ಮಂದಿರವಿದು. ಆಂಜನೇಯನಿಗೆ ವಂದಿಸಿ. “ಫೋಟೋ ತೆಗಯಬಹುದೆ?” ಎಂದು ಅರ್ಚಕರನ್ನು ಕೇಳಿದೆ. ಅವರು ಆಚೀಚೆ ನೋಡಿ “ಬೇಗನೆ ತಗೊಳ್ಳಿ… ಇಲ್ಲಿ ಯಾರಿಗೂ ಫೋಟೋ ತೆಗೆಯಲು ಅವಕಾಶವಿಲ್ಲ, ನೀವು ಪರಿಕ್ರಮದಲ್ಲಿದ್ದೀರಾ.. ಇಲ್ಲ ಎನ್ನಲಾಗುವುದಿಲ್ಲ” ಎಂದ. ತಾಯಿ ನರ್ಮದೆಯ ಕೃಪೆ ಅಪಾರವಾದದ್ದು.
ಅಲ್ಲಿಂದ “ಖರಗೋನ್” ಎಂಬ ಊರಿಗೆ ಬಂದೆ. ಖರಗೋನ್ ಜಿಲ್ಲಾ ಕೇಂದ್ರವೂ ಹೌದು. “ಕುಂದಾ” ನದಿಯ ದಡದಲ್ಲಿನ ಊರು. ಪುರಾತನ ನವಗ್ರಹ ದೇವಸ್ಥಾನಕ್ಕೆ ಪ್ರಸಿದ್ಧ ನಗರವಿದು. ಮಧ್ಯಪ್ರದೇಶದ ಎರಡನೇಯ “ಸ್ವಚ್ಚ ನಗರ”. ಖರಗೋನ್’ನಲ್ಲಿ ಯಾವುದೇ ಆಶ್ರಮಗಳಿಲ್ಲ ಆದ್ದರಿಂದ ಅಂಬಾ ಭವಾನಿ ಮಂದಿರಕ್ಕೆ ಬಂದೆ. ಕೆಲವು ಪರಿಕ್ರಮವಾಸಿಗಳು ಮೊದಲೆ ಬಂದು ಇದ್ದರು. ಅಡುಗೆ ನಾವೇ ಮಾಡಿಕೊಳ್ಳಬೇಕಿತ್ತು.. ಅಲ್ಲಿದ್ದವರ ಜೊತೆಗೂಡಿ “ಬದನೆಕಾಯಿ ಪಲ್ಯ”, ಗೋದಿ ರೊಟ್ಟಿ ಮಾಡಿದ್ದಾಯಿತು. ಮೊದಲು ತಾಯಿ ನರ್ಮದೆಯ ಪೂಜೆ ಮಾಡಿ, ನಂತರ ಊಟ ಮಾಡಿದೆವು.

ಇವಾಗ ತಾಪಮಾನ 12 ಡಿಗ್ರಿ ಇದೆ. ರಾತ್ರಿ ಭಯಂಕರ ಕುಸಿಯುತ್ತೆ. ನಾನು ಸ್ಲೀಪಿಂಗ್ ಬ್ಯಾಗನಲ್ಲಿ ಹುದುಗುವ ಸಮಯ.
ರಣ ಚಳಿಯ ಪ್ರಭಾವದಿಂದ ಬೆಳಿಗ್ಗೆ 3 ಕ್ಕೆ ಎಚ್ಚರವಾಯಿತು ಮತ್ತೆ ಮಲಗಿದೆ ಮತ್ತೆ ಎಚ್ಚರವಾಯಿತು.. ಮತ್ತೆ ಮಲಗಿದೆ… ಹೀಗಿತ್ತು ಚಳಿಯ ಆರ್ಭಟ.
ದೇವಸ್ಥಾನದ ಪಕ್ಕ ಒಂದಿಷ್ಟು ಕಟ್ಟಿಗೆ ಕೂಡಿ ಹಾಕಿ ಬೆಂಕಿ ಕಾಯಿಸಿಕೊಂಡು. ಮುಖ ತೊಳೆಯಲು ಹೋದಾಗ… ನೀರಲ್ಲಿ ಕೈ ಹಾಕಿದ ತಕ್ಷಣ ಬೆರಳು ಜೋಮು ಹಿಡಿದವು. ಅಬ್ಬಬ್ಬಾ ಕೊರೆಯುವ ತಣ್ಣನೆಯ ನೀರು. ಸ್ನಾನ ಮಾಡಲು ಆಗುವುದಿಲ್ಲ ಅನಿಸಿತು.
ಸ್ನಾನ ಮಾಡದೆ.. ಲಗೇಜುಗಳನ್ನೆಲ್ಲಾ ನಂದಿಯ ಹೆಗಲಿಗೇರಿಸಿ.. ತಾಯಿ ನರ್ಮದೆಯ ತಟದ ಕಡೆ ಹೊರಟೆ ಅದು “ಬೋರಾಸ್ ಘಾಟ್”ಗೆ. ಸುಮಾರು 16 ಕಿ.ಮೀ ದೂರದವರೆಗೆ ನಂದಿಯನ್ನು ಓಡಿಸಿದಾಗ.. ಬೋರಾಸ್ ಘಾಟ್ ಸಿಕ್ಕಿತು.

ಘಾಟ್ ತುಂಬಾ ಕಿಕ್ಕಿರಿದ ಜನಸಾಗರ. ಇಂದು ಹುಣ್ಣಿಮೆಯಾದ್ದರಿಂದ ಜನಸ್ತೋಮ ನೆರದಿತ್ತು. ಎಲ್ಲರೂ ಸ್ನಾನ ಮಾಡಿ ಪೂಜೆ ಮಾಡುವವರೆ. ದೀಡ ನಮಸ್ಕಾರ(ದಂಡವತ್) ಹಾಕುತ್ತಾ ತಮ್ಮ ಮನೆಯಿಂದ ನದಿಯ ತನಕ ಬರುತ್ತಿದ್ದ ಕೆಲವರು, ಪೂಜೆ ಮುಗಿಸಿ ನದಿಯಲ್ಲಿ “ತೆಂಗಿನಕಾಯಿ” ಹರಿದು ಬಿಡುತ್ತಿದ್ದ ಇನ್ನೂ ಕೆಲವರು, ನದಿಯಲ್ಲಿ ತೇಲಾಡಿ ಆ ತೆಂಗಿನ ಕಾಯಿ ಹಿಡಿಯುವವರು, ಭಿಕ್ಷೇ ಬೇಡುವವರು, ನರ್ಮದಾ ಪರಿಕ್ರಮ ಮಾಡುವವರು.. ಅಂಡಲೆಯುವ ಗೋವುಗಳು.. ಹೀಗೆ ಎಲ್ಲರೂ ನೆರೆದಿದ್ದರು. ಜಾತ್ರೆಯಂತ ಸನ್ನಿವೇಶ.
ಪ್ರತಿ ಹುಣ್ಣಿಮೆ, ಇನ್ನಿತರ ಪ್ರಮುಖ ದಿನಗಳಲ್ಲಿ ಪುಣ್ಯ ಸ್ನಾನಕ್ಕೆ ಜನ ಎಲ್ಲಾ ಘಾಟ್’ಗಳಿಗೆ ಬರುತ್ತಾರೆ.

“ಬೋರಾಸ್ ಘಾಟ್” ತಲುಪಿ, ಅಲ್ಲಿಯೇ ಸ್ನಾನ ಮುಗಿಸಿ.. ಪೂಜೆ ಮುಗಿಸಿಕೊಂಡೆ. ಸಮಯ 12 ಕ್ಕೆ ಹತ್ತಿರವಿತ್ತು. ನದಿಯ ಕಡೆಯಿಂದ ಮತ್ತೊಂದು ಊರಿನತ್ತ ಹೊರಟವನನ್ನು ಆಶ್ರಮದ ಸಂತರೊಬ್ಬರು ಊಟಕ್ಕೆ ಬರುವಂತೆ ಕರೆದರು. ಹುಣ್ಣಿಮೆಯ ವಿಶೇಷ ಊಟ ನನಗಾಗಿ ಕಾದಿತ್ತು.
ಮಧ್ಯಾಹ್ನದ ಊಟ ಮುಗಿಸಿ.. “ಅನಘೋರ” ಊರಿನತ್ತ ಹೊರಟೆ. ಮಧ್ಯದಲ್ಲೇ ಇಬ್ಬರು ಚಹಾ ಕುಡಿಯಲು ಕರೆದರು. ವಿನಯದಿಂದ ಬೇಡ ಎಂದು ಕೈ ಮುಗಿದೆ. ಇಲ್ಲಿ ಹಾಗೆಯೇ ಪರಿಕ್ರಮ ಹೊರಟವರಿಗೆ ಚಹಾ ಆದರೂ ಕೊಡಬೇಕು ಎಂಬುದು ಇಲ್ಲಿನ ಸಂಸ್ಕೃತಿ.

ಅನಘೋರ ಊರು ಚಿಕ್ಕ ಹಳ್ಳಿಯಾದರೂ.. ಸುತ್ತಲೂ ಕಡಿದಾದ ಬೆಟ್ಟ ಹೊಂದಿದೆ. ನೋಡಲು ಮೋಹಕ ದೃಶ್ಯ ಮನಸ್ಸಿಗೆ ಹಿತವೆನಿಸುತ್ತದೆ. ಆ ಊರಿನಿಂದ “ಪತಾಯಿ ಘಾಟ್”ಗೆ ಹೋಗಿ ನರ್ಮದಾ ನದಿಯ ದಡ ಹಿಡಿದುಕೊಂಡು ಹೊರಟೆ. ಮುಂದೆ ಹೋಗಲು ರಸ್ತೆಯಿಲ್ಲ. ಪಾದಯಾತ್ರೆ ಮಾರ್ಗವಿದೆ ಆದರೆ ಜನರು ಅಲ್ಲಿಯು ಬೆಳೆ ಬೆಳೆಯುತ್ತಿದ್ದಾರೆ, ಕಡಲೆ ಬೆಳೆ ಹುಲುಸಾಗಿ ಮೈದುಂಬಿ ಬೆಳೆದು ನಿಂತಿತ್ತು. ಹೊಲದವರೆ ನಡುವಿನಿಂದ ಹೋಗಿ ನಡೆಯುತ್ತೆ ಎಂದರು, ಕಷ್ಟ ಪಟ್ಟು ಬೆಳೆದ ಬೆಳೆ ಹಾಳಾಗುತ್ತೆ ಅಂತ, ವಾಪಸ್ಸು ಹೊರಟು.. ಸ್ವಲ್ಪ ದೂರವಾದರೂ ಮುಖ್ಯ ರಸ್ತೆಯ ಕಡೆ ಹೊರಟೆ. ಮುಖ್ಯ ರಸ್ತೆಯಿಂದ ಮುಂದಿನ ಘಾಟ್’ಗೆ ಹೋಗಲು.
ಹಳ್ಳಿಯ ರಸ್ತೆಯಲ್ಲಿ ನಂದಿಯನ್ನು ಓಡಿಸುತ್ತಿದ್ದೆ. ಒಂದು ಟೆಂಟು ಹಾಕಿಕೊಂಡು ಊರಿನ ಕೆಲ ಹಿರಿಯರು ಕೂತಿದ್ದರು. ಅವರ ಉದ್ದೇಶ ಪರಿಕ್ರಮ ಹೊರಟವರಿಗೆ ಊಟ, ನೀರು, ಚಹಾ ಕೊಡುವುದು.. ಮತ್ತು ಅವರ ವಿಶ್ರಾಂತಿಗಾಗಿ ಜಾಗ ನೀಡುವುದು.

ಆ ಊರಿನ ಹಿರಿಯರು ನನ್ನ ನಂದಿಗೆ ತಡೆ ಹಾಕಿ.. ಚಹಾ ಕುಡಿದು ಹೋಗುವಂತೆ ಕೇಳಿಕೊಂಡರು. ಅವರ ಮಾತಿಗೆ ಮರುಮಾತಾಡದೆ ಕೂತೆ, ಅವರು ಚಹಾ ಆವಾಗಲೇ ತಯಾರಿಸಿ ಕೊಟ್ಟರು.
ವಯಸ್ಸಾದವರು ರಾಜಕೀಯ ಪಕ್ಷ ಅಂತಲೋ.. ಊರಿನ ಉಸಾಬರಿಯನ್ನೋ.. ಸಂಸಾರದ ತಾಪತ್ರಯನೋ…ಊರಿನ ಕಟ್ಟೆಯ ಮೇಲೆ ಬಾಯಿಚಟಕ್ಕೆ ಮಾತಿಗಿಳಿಯದೆ… ಸೇವೆಗೆ ನಿಂತವರಿವರು. ನಿಷ್ಕಲ್ಮಶ ಆತ್ಮಗಳು.
ಮುಂದಿನ ದಾರಿಯ ಬಗ್ಗೆ ವಿವರವಾಗಿ ತಿಳಿಸಿ, ಹೀಗೆ ಹೋಗಿ ಅಂತಾ ಹೇಳಿದರು.. ಚಹಾ ಕುಡಿದವನೆ., ಆ ಹಿರಿ ಜೀವಗಳಿಗೆ ವಂದಿಸಿ “ಹೈವೇ” NH 12 ಮೂಲಕ ಹೊರಟೆ. ರಾಮಸೇನ ಜಿಲ್ಲೆಯ “ದೇವರಿ” ಎನ್ನುವ ಊರಿನ “ಜಾನಕಿರಾಮ ಮಂದಿರಕ್ಕೆ” ಬಂದೆ. ಆಗಲೇ ಸೂರ್ಯ ತನ್ನ ಕಿರಣಗಳನ್ನು ಮಂಕಾಗಿಸಿಕೊಂಡು ಮನೆಕಡೆ ಹೊರಟಿದ್ದೆ.

ಮಂದಿರದ ಪ್ರಾಂಗಣ ವಿಶಾಲವಾಗಿದೆ. ಇಲ್ಲಿನ ಜಾನಕಿ ರಾಮ ಪ್ರತಿಮೆಗಳು ಮತ್ತು ಆಂಜನೇಯನ ಪ್ರತಿಮೆ ಸುಂದರವಾಗಿವೆ. ಆದರೆ ಬಹು ಆಕರ್ಷಿತವಾಗಿದ್ದು “ದುರ್ಗಾದೇವಿ”ಯ ಮೂರ್ತಿ. ಆಹಾ !! ಬಹುಸುಂದರ.
ಅಲ್ಲಿನ ಅರ್ಚಕರು ಮಲಗಲು ರಂಗಮಂದಿರದಂತ ಸ್ಥಳ ಕೊಟ್ಟರು, ಆವಾಗಲೇ ಕೆಲವು ಪರಿಕ್ರಮವಾಸಿಗಳು ಅಲ್ಲಿದ್ದರು .ಇಲ್ಲಿ ಊಟದ ವ್ಯವಸ್ಥೆಯಿಲ್ಲಾ.. ಅಡುಗೆ ಮಾಡುವ ಬಗ್ಗೆ ನಾವೆಲ್ಲಾ ಚರ್ಚೆ ಮಾಡುತ್ತಿದ್ದಾಗ ಅಷ್ಟರಲ್ಲಿ ಒಬ್ಬ ಮಹಾತ್ಮನಂತ ವ್ಯಕ್ತಿ ಬಂದವನೆ.
“ನಿಮಗೆಲ್ಲಾ ಊಟ ತರುವೆ.. ಅಡುಗೆ ಮಾಡಿಕೊಳ್ಳಬೇಡಿ ಎಂದರು.

ಸ್ವಲ್ಪ ಹೊತ್ತಿನಲ್ಲೇ ಬಿಸಿ ಬಿಸಿ ರೊಟ್ಟಿ, ಅನ್ನ , ಸಾರು, ಪಲ್ಯ, ಉಪ್ಪಿನಕಾಯಿ ತಂದು ಊಟಕ್ಕೆ ಕೊಟ್ಟರು.
ಇವರು ವಯಸ್ಸಾದ ಹಿರಿಯರು, ಜನಸೇವೆ ಮಾಡುತ್ತಿರುವ ಪುಣ್ಯ ಜೀವ. ಈ ದೇವಸ್ಥಾನ ಸ್ವಚ್ಚ ಮಾಡುವ ಕಾಯಕದಲ್ಲಿರುವ ಕರುಣಾ ಮೂರ್ತಿ. ಈ ಹಿರಿಯರು ವಿರಳ. ಚಳಿ ಮತ್ತೆ ಯಾಕೋ ಮುನಿಸಿಕೊಳ್ಳುತ್ತಿದೆ.
ಮುಂದಿನ ಪಯಣ ನಾಳೆಗೆ…
ನರ್ಮದೆ ಹರ್
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೯)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೦)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.
