ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೧)

ಮಂಡಲಾ ಜಿಲ್ಲೆಯ ಘುಘುವಾ ಪ್ರದೇಶದ ಸುತ್ತಮುತ್ತ ದೊರೆತ ಹಲವು ಮರಗಳ, ಬೇರುಗಳು, ಬೀಜಗಳ ಪಳೆಯುಳಿಕೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ 65 ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಜೀವಿಗಳು ಇದ್ದವು ಎಂದು ಸಾಬೀತುಪಡಿಸಿದ್ದಾರೆ. ‘ಡೈನೋಸಾರ್’ಗಳು ಇಲ್ಲಿ ಇದ್ದವು ಎಂಬುದಕ್ಕೆ ಪುರಾವೆಯಾಗಿ “ಡೈನೋಸಾರ್ ಮೊಟ್ಟೆ” ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಬೆಳಿಗ್ಗೆ 5: 30 ಕ್ಕೆ ತಾಯಿ ನರ್ಮದಾ ನದಿಯಲ್ಲಿ ಮುಳುಗಿ ಹಾಕಿ (ಸ್ನಾನಕ್ಕೆ ಸೋಪ್ ಬಳಸುವಂತಿಲ್ಲ) ಸ್ನಾನ ಮುಗಿಸಿ, ಮುಂದೆ ಹೊರಡಲು ತಯಾರಾದೆ‌. ದೇವಸ್ಥಾನದವರು ಚಹಾ ತಂದು ಕೊಟ್ಟು, ಮುಂದೆ ಹೋಗುವ ಮಾರ್ಗ ತಿಳಿಸಿದರು.

ಹೊರಟಾಗ ಸಮಯ 7 ಗಂಟೆಯಾದರೂ, ಇಬ್ಬನಿ ದಟ್ಟವಾಗಿ ಹರಡಿತ್ತು. ನಿಧಾನವಾಗಿ ನಡೆದು, ಸೂರ್ಯ ಕಾಣಿಸಿದ ನಂತರ ಮುಂದೆ ಹೊರಟೆ. ನದಿಯ ಉದ್ಭವ ಸ್ಥಾನವಾದ “ಅಮರಕಂಟಕ್”ನತ್ತ ಪ್ರಯಾಣ ಬೆಳೆಸಿದೆ. ಇನ್ನೂ 250 ಕಿ. ಮೀ ಕ್ರಮಿಸಬೇಕು‌‌. ಜಬಲ್ಪುರದ ಮುಂದೆ 30 ಕಿ. ಮೀ ನಂತರ ಸಿಗುವ ದಟ್ಟವಾದ ಕಾಡು ದಾಟುವ ಸಾಹಸ‌. ಕಾಡಿನತ್ತ ಹೊರಟೆ.

ಮಧ್ಯಾಹ್ನವಾಗಿದ್ದರಿಂದ ಹಸಿವಾಗಿತ್ತು, ನಡುವೆ ಯಾವ ಊರು, ಹೋಟೆಲ್, ಆಶ್ರಮಗಳಿಲ್ಲ. ಧಗ ಧಗ ಉರಿಯುತ್ತಿದ್ದ ಬಿಸಿಲಿನಲ್ಲಿ ಊಟದ ತಲಾಶ್’ನಲ್ಲಿ ಜೊತೆಗಿದ್ದ ಬಿಸ್ಕಿಟ್ ತಿಂದು ನೀರು ಕುಡಿದೆ. ಒಂದು ಮರದ ನೆರಳಿಗೆ ಕೂತೆ‌.

ಅಚಾನಕ್ಕಾಗಿ ಒಂದು ಕಾರು ಬಂದು ನನಗಿಂತ ಮುಂದೆ ಹೋಗಿ ನಿಂತಿತು. ಕಾರಿನಿಂದ ಇಳಿದ ವ್ಯಕ್ತಿಯೊಬ್ಬರು ಊಟವನ್ನು ಕೊಟ್ಟು, ವಿಚಾರಿಸಿಕೊಂಡು ಹೊರಟುಹೋದರು.
ಆಧ್ಯಾತ್ಮ ಜೀವಿಗಳಾದ ಶ್ರೀ ನಿರಜ ಎಂಬುವವರ ಸೇವೆಯಿದು. ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ, ರುಚಿಯಾದ ಊಟ ನೀಡಿದರು. ಇಂತವರೆ ಅಲ್ಲವೆ ದೇವರು ಅಂದರೆ.
“ರೇವಾ ರೋಟಿ ಯೋಜನಾ” ಅಂತ ಹೆಸರಿಟ್ಟು ಅನ್ನದಾನ ಮಾಡುತ್ತಿದ್ದಾರೆ.

This slideshow requires JavaScript.

ಊಟ ಮಾಡಿ, ನೆರಳಿಗೆ ಕೂತೆದ್ದು ಮುಂದೆ ಹೊರಟೆ. ಕಾಡಿನ ಮಧ್ಯದಲ್ಲಿ ದಾರಿ ಕೊರೆದು, ಟಾರ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆ ನಿರ್ಜನ ಪ್ರದೇಶದಂತೆ ಭಾಸವಾಗುತ್ತೆ.
ಒಮ್ಮೊಮ್ಮೆ ಯಾವಾಗಲೊ ಹಾದು ಹೋಗುವ ವಾಹನಗಳು. ರಸ್ತೆಯ ಅಕ್ಕಪಕ್ಕ ಅಳಿವಿನಂಚಿನಲ್ಲಿರುವ ಕಾಡು.

ರಸ್ತೆ ಏರುತ್ತಿದ್ದಂತೆ, ಮತ್ತೊಂದು ಏರು, ಮಗದೊಂದು ಏರು. ಸೈಕಲ್ ಬ್ರೇಕ್ ಸರಿಯಿಲ್ಲದಿದ್ದರೆ ಪ್ರಪಾತಕ್ಕೆ ಉರುಳಿ ಹೋಗುತ್ತೆ. ಕಾಡಿನ ಮಧ್ಯ ಅಲ್ಲಲ್ಲಿ ಬುಡಕಟ್ಟು ಜನರು ವಾಸಿಸುವ ಚಿಕ್ಕ ಚಿಕ್ಕ ಹಳ್ಳಿಗಳು. 10 ವರ್ಷದ ಹಿಂದೆ ಈ ಜಾಗಗಳಲ್ಲಿ ಪರಿಕ್ರಮವಾಸಿಗಳನ್ನು ಬುಡಕಟ್ಟು ಜನ ಲೂಟಿ ಮಾಡುತ್ತಿದ್ದರಂತೆ. ಇವಾಗಿನ ಪರಿಸ್ಥಿತಿ ಹಾಗಿಲ್ಲ ಅವರೂ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.

ಬೃಹತ್ ಬೆಟ್ಟ ಏರಿ ಹೋದ ರಸ್ತೆ, ಆ ಬೆಟ್ಟವನ್ನು ನಂದಿಯನ್ನು ತಳ್ಳಿಕೊಂಡು ಹತ್ತಬೇಕು ಅದು 4 ಕಿ.ಮೀ ಉದ್ದ. ಅಬ್ಬಬ್ಬೋ…!!! ಮೈ ಹಣ್ಣು ಹಣ್ಣಾಯಿತು‌. ಆ ಬೆಟ್ಟ ದಾಟಿಕೊಂಡು, ಕಡಿದಾದ ರಸ್ತೆ ಕ್ರಮಿಸಿದಾಗ ಸಿಕ್ಕ ಊರು ” ಹಾಥಿನೇರ್” ಅಲ್ಲಿಂದ ಮುಂದೆ ಸಿಕ್ಕಿದ್ದು “ಬಿಜೌಲಿ” ಎಂಬ ಹಳ್ಳಿ ಇಲ್ಲಿ ಪಾಂಡವರು ನರ್ಮದಾ ಪರಿಕ್ರಮ ಮಾಡುವಾಗ ಉಳಿದುಕೊಂಡ ದೇವಸ್ಥಾನವಿದೆ. ಅದುವೇ ಪ್ರಾಚೀನವಾದ “ದುರ್ಗಾ ಮಾತಾ ಮಂದಿರ”‌ ಪಾಂಡವರು ಪರಿಕ್ರಮ ಮಾಡಿದ ವಿಷಯವನ್ನು ಈ ಆಶ್ರಮದ ಬಾಬಾಜಿ ಹೇಳಿದರು. ಇಲ್ಲಿ ಹಲವು ವಿವಿಧ ಬಗೆಯ ಮೂರ್ತಿಗಳನ್ನು ಕಲ್ಲಿನಲ್ಲಿ ಅರಳಿಸಿದ್ದಾರೆ.

ಇಂದು ತಂಗಿದ್ದು “ಬಿಜೌಲಿ”ಯ “ದುರ್ಗಾ ಮಾತಾ ಮಂದಿರ”.

“ದುರ್ಗಾದೇವಿ ದೇವಾಲಯ”ದ ಗುರುಗಳು ಬೆಳಿಗ್ಗೆ 5 ಕ್ಕೆಲ್ಲಾ ನೀರು ಕಾಯಿಸಿ, ಸ್ನಾನಕ್ಕೆ ಎಬ್ಬಿಸಿದರು.

ಸ್ನಾನ ಮುಗಿಸಿ ಬರುವುದರೊಳಗೆ ಚಹಾ ತಯಾರಿತ್ತು. ಆವಾಗ ತಾಪಮಾನ ಕೇವಲ 8 ಡಿಗ್ರಿ. ಎಲ್ಲಾ ಲಗೇಜು ನಂದಿಗೆ ಕಟ್ಟಿ ಹೊರಡಲು ಅನುವಾಗುವಷ್ಟರಲ್ಲೆ”ಅವಲಕ್ಕಿ” ಮಾಡಿಟ್ಟಿದ್ದರು.
“ಮುಂದೆ ಕಾಡಿದೆ, ವನ್ಯಪ್ರಾಣಿಗಳು ಇವೆ. ರಸ್ತೆ ಭಯಂಕರ ಘಾಟಿ ಪ್ರದೇಶದಿಂದ ಕೂಡಿದೆ. 40 ಕಿ.ಮೀ ಒಳಗೆ ಏನೂ ಊಟಕ್ಕೆ ಸಿಗೋಲ್ಲಾ, ಬಾಲಭೋಗ ಮಾಡಿ ಹೋಗಿ” ಎಂದು ಅವಲಕ್ಕಿ ಕೊಟ್ಟರು. ಬೆಳಿಗ್ಗೆ 6:30 ಕ್ಕೆಲ್ಲಾ ಹಸಿವು ಇಲ್ಲದಿದ್ದರೂ‌ ತಿಂದೆ.

ನಾನಿಷ್ಟು ಆಶ್ರಮದಲ್ಲಿ ಇದ್ದು ಬಂದಿರುವೆ, ತಾವೇ ಖುದ್ದು ಮಮತೆಯಿಂದ ಬಿಸಿನೀರು, ಚಹಾ, ಬಾಲಭೋಗ ಮಾಡಿಕೊಟ್ಟ ಗುರುಗಳನ್ನು ನೋಡಲಿಲ್ಲ. ಆದರೆ ಎಲ್ಲರೂ ಸೇವೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವವರೆ‌. ಅವರಿಗೆ ಅವರೇ ಸಾಟಿ.

ಮುಂದೆ ಹೊರಡುವ ಮುನ್ನ ಆ ಗುರುಗಳ ಪಾದಕ್ಕೆರಗಿ ಮುಂದೆ ಹೊರಟೆ. ಆ ಗುರುಗಳು ಹೇಳಿದಂತೆ…

This slideshow requires JavaScript.

ನಿನ್ನೆಯಂತೆ ಮುಂದುವರೆದ ರಸ್ತೆ, ಕಾಡು, ಘಾಟು. ಎಲ್ಲಿಯೂ ಗುಳಿ ಬೀಳದ ರಸ್ತೆ… ಸುತ್ತಲೂ ಅರೆಬರೆ ಬೋಳಾದ ಕಾಡು, ಅಲ್ಲಲ್ಲಿ ಕುರಿ, ದನ ಮೇಯಿಸುವ ದನಗಾಹಿಗಳು, ಚಿಕ್ಕ ಚಿಕ್ಕ ಹಳ್ಳಿಗಳು, ಎತ್ತರೆತ್ತರ ಪೇರಿಸಿಟ್ಟಂತೆ ಕಾಣುವ ಬೆಟ್ಟಗಳು, ಅಂಕುಡೊಂಕಾದ ಏರು, ಪ್ರಪಾತದಂತ ಇಳಿವು ರಸ್ತೆಗಳು, ಎದೆಯುಸಿರು ಬಿಗಿ ಹಿಡಿದು ಏರುಬೇಕಾದ ಘಾಟ್’ಗಳು, ಸೈಕಲ್ ತುಳಿಯುತ್ತಿದ್ದರೆ ಎದೆಗೆ ಕೈ ಹಾಕಿ ಹಿಂದೂಡುವ ಗಾಳಿ.

ಎಲ್ಲವನ್ನೂ ದಾಟಿ.. ನಂದಿಯನ್ನು ಓಡಿಸುವುದು ಒಂದು ಚಾಲೇಂಜ್ ನನಗೆ. ದಾರಿಯ ಮಧ್ಯದಲ್ಲಿ “ಘುಘುವಾ”. ಎನ್ನುವ ಹಳ್ಳಿ ಸಿಗುವ ಮೊದಲೆ

“ರಾಷ್ಟ್ರೀಯ ಪಳೆಯುಳಿಕೆ ಉದ್ಯಾನವನ” ಸಿಕ್ಕಿತು.

“ಮಧ್ಯಪ್ರದೇಶದ ಟೂರಿಸಂ ಇಲಾಖೆ”ಗೆ ಒಳಪಟ್ಟರೂ ಬರುವವರು ಬೆರಳೆಣಿಕೆಯಷ್ಟು.

ನಾನು ಅಲ್ಲಿಗೆ ಹೋಗಿ ಅಲ್ಲಿನ ಮುಖ್ಯಸ್ಥರಿಗೆ ನನ್ನ ಪರಿಚಯ ಹೇಳಿಕೊಂಡು, ನಾನು ಒಳಗೆ ಹೋಗಬಹುದೆ ಎಂದೆ. ಟಿಕೇಟ್ ಇಲ್ಲದೆ ಒಳಗೆ ಹೋಗಲು ಖುದ್ದು ಅನುವು ಮಾಡಿಕೊಟ್ಟು. ಪಳಯುಳಿಕೆಗಳ ಬಗ್ಗೆ ತಿಳಿಸಿಕೊಟ್ಟರು.

 

ಮಂಡಲಾ ಜಿಲ್ಲೆಯ ಘುಘುವಾ ಪ್ರದೇಶದ ಸುತ್ತಮುತ್ತ ದೊರೆತ ಹಲವು ಮರಗಳ , ಬೇರುಗಳು, ಬೀಜಗಳ ಪಳೆಯುಳಿಕೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ 65 ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಜೀವಿಗಳು ಇದ್ದವು ಎಂದು ಸಾಬೀತುಪಡಿಸಿದ್ದಾರೆ.

ಮರಗಳು, ಬೀಜಗಳು, ಮರದ ತೊಗಟೆ ಮೊದಲು ಹೇಗಿದ್ದವು, ಇವಾಗ ವಿಕಾಸಗೊಂಡು ಹೇಗಾಗಿವೆ ಎಂಬುದನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಇದು ಅಧ್ಯಯನ ಮಾಡುವವರಿಗೆ, ಕುತೂಹಲಿಗಳಿಗೆ ಮೆಚ್ಚಿನ ತಾಣ.

ಡೈನೋಸಾರ್’ಗಳು ಇಲ್ಲಿ ಇದ್ದವು ಎಂಬುದಕ್ಕೆ ಪುರಾವೆಯಾಗಿ “ಡೈನೋಸಾರ್ ಮೊಟ್ಟೆ” ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಎಲ್ಲವನ್ನೂ ನೋಡಿ…. ಅಲ್ಲಿಂದ ಮುಂದೆ ಹೊರಟೆ.
ಗುರುಗಳು ಹೇಳಿದಂತೆ 38 ಕಿ.ಮೀ ವರೆಗೂ ಯಾವ ರೀತಿಯ ಆಹಾರದ ಸೌಕರ್ಯ ಇಲ್ಲದ ಸ್ಥಳವಿದು.

ನಂದಿಯನ್ನು ತಳ್ಳಿಕೊಂಡು, ಓಡಿಸಿಕೊಂಡು, ಅಲ್ಲಲ್ಲಿ ನಿಲ್ಲಿಸಿಕೊಂಡು ಹೊರಟೆ.

“ಸಿಲಗಿ” ನದಿ ನರ್ಮದೆಯನ್ನು ಸೇರಲು ಓಡೋಡಿ ಹೋಗುತ್ತಿತ್ತು, ಅದರ ಮಗ್ಗಲು ಇದ್ದ ಊರಿನ ಜನ ಸೇರಿ “ಊಟದ ವ್ಯವಸ್ಥೆ”ಮಾಡಿದ್ದರು.

ಮಧ್ಯಾಹ್ನದ ಭೋಜನ ಅಲ್ಲಿಯೇ ಆಯಿತು. ಇಲ್ಲಿ ಕೊಡುಗೈ ದಾನಿಗಳಿಗೆ ಬರವಿಲ್ಲ.

“ನರ್ಮದಾ ಖಂಡದಲ್ಲಿ ಅನ್ನ ಮತ್ತು ಮುಳ್ಳುಗಳಿಗೆ ಕೊರತೆ ಇಲ್ಲಾ” ಎಂಬ ಮಾತಿದೆ. ಇದು ನಿಜವೂ ಹೌದು.

ಮತ್ತದೇ ದಾರಿಯನ್ನು ಸವೆಸಿ. ಸುಮಾರು 70 ಕಿ.ಮಿ ಕ್ರಮಿಸಿ ಡಿಂಡೋರಿ” ಜಿಲ್ಲೆಯ “ಶಹಪುರ’ ಎಂಬ ಊರಿಗೆ ಬಂದೆ.

ಇಲ್ಲಿ ಆಶ್ರಮಗಳಿಲ್ಲ. ಈ ಊರಿನ ಒಂದು ಕುಟುಂಬ ಪರಿಕ್ರಮವಾಸಿಗಳು ಉಳಿದುಕೊಳ್ಳಲು 3 ರೂಮು ಕೊಡುತ್ತಾರೆ. ಊಟದ ವ್ಯವಸ್ಥೆ ನಾವೆ ಮಾಡಿಕೊಳ್ಳಬೇಕು.
ಇಂದಿನ ತಂಗುದಾಣ ‘ಶಹಪುರ”

ಮುಂದಿನ ಪಯಣ ನಾಳೆಗೆ.

ನರ್ಮದೆ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW