‘ಮೌನ ಮಂತ್ರ’ ಕವನ – ಪದ್ಯಾಣ ಗೋವಿಂದ ಭಟ್

ಚಿತ್ತದ ಧ್ಯಾನಕ್ಕೆ ಮಾತು ಮೌನವಾಯಿತು, ಬೀಜ ಮಂತ್ರವಾಯಿತು…ಕವಿ ಪದ್ಯಾಣ ಗೋವಿಂದ ಭಟ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ….

ಮಣ್ಣಿನೊಳಗಣ ಮೌನ
ಘ್ರಾಣಕ್ಕೆ ಪ್ರಾಣವಾಗಿ
ಸುಖಕ್ಕಾಗಿ ಕಣ
ಕಣದಲ್ಲಿ ಅರಳುತ್ತ-
ಕೆರಳುತ್ತ, ಹೊರಳಿ
ಘಮಘಮಿಸಿ
ಗಂಧವಾಯಿತು.

*
ನೀರೊಳಗಣ ಮೌನ
ತೆರೆದಲೆಗಳಲಿ ತೇಲುತ್ತ
ತೇಲುತ್ತ ದಡದ ಮರಳ ಚುಂ
ಬನದ ಪುಳಕದಲಿ
ರಸವಾಯಿತು.

*
ಬೆಂಕಿಯೊಳಗಣ ಮೌನ
ಪಾಪಿಯಂತೆ ಉರಿದುರಿದು
ಬೇಯುತ್ತ ಪವಿತ್ರವಾಗಿ
ಬೂದಿ ರಾಶಿಯಲಿ
ಬೆಳಕಾಗಿ ಹೊಳೆಯಲು
ಬಿಸಿಯಾಯಿತು.

*
ಗಾಳಿಯೊಳಗಣ ಮೌನ
ಉಸಿರಾಗಿ ಹಸಿರಾಗಲು
ಜಡ-ಜಂಗಮರ ನಡುವೆ
ಮೂಗಾಯಿತು.ಎದೆಯ
ಗೂಡಾಯಿತು.
ರೂಪವಿಲ್ಲದ ಸ್ಪರ್ಶವಾಯಿತು.

*
ಆಕಾಶದೊಳಗಣ ಮೌನ
ಓಂಕಾರದ ಸ್ವರವಾಗಲು
ಪುಣ್ಯಪದವಾಗಿ-ಶಬ್ದಕ್ಕೆ
ಮೈಯೊಡ್ಡಿ,ಕರ್ಣ
ಕುಹರದ ಸುಳಿ
ಗಳಲ್ಲಿ ಸುಳಿದಿಳಿದು
ನಿರಾಕಾರವಾಯಿತು.

*
ಅಕ್ಷರಗಳೊಗಣ ಮೌನ
ಪದ ಸಂಕೇತಕ್ಕೆ
ಬಳಪ-ಕಾಗದಗಳಲ್ಲಿ
ತಿದ್ದಿ ತೀಡುತ್ತ ಗೆರಗಳ
ಚಿತ್ತಾಗಿ,ಚಿತ್ರವಾಯಿತು.

*
ಮೌನದೊಳಗಣ ಮೌನ
ಅರಿವಾಗಲು ಹವಣಿಸುತ
ನಾಲಿಗೆಯ ಬೇಲಿಯಲಿ
ಸಿಕ್ಕುಸಿಕ್ಕಾಗಿ ಹೊಕ್ಕುಳಲಿ
ಸ್ವರವಾಯಿತು.

*
ಮಾತೊಳಗಣ ಮೌನ
ಶಬ್ದದ ಜಾಡಿನಲ್ಲಿ
ತೆವಳುತ್ತ-ಕಿವಿಯ ತಿರುವುಗಳ
ಸುಳಿ ಸುಳಿದು
ಬಳಲಿ ಸುಮ್ಮನಿದೆ.

*
ಬೀಜದೊಳಗಣ ಮೌನ
ಚಿಗುರ ಕಣ್ಣ
ಪಿಳಿ ಪಿಳಿ ಬಿಟ್ಟು
ಆಗಸದ ಅಗಲವನಳೆಯಿತು.

*
ದೇವನೊಳಗಣ ಮೌನ
ಆಕಾರ ಕಾಣಲು-ಕಣ್ಣಾಗಲು
ಬೆಳಕ ಬೀಜಕ್ಕೆ ಬೇರಾಗಿ
ನೆಲದೊಳಗಿಳಿದು
ಬೇಯುತ್ತ,ನೀರ ಹುಡುಕುತ್ತ
ಉಸಿರಾಡಿ,ಹಸುರಾಗಿ
ಓಂಕಾರವಾಯಿತು.

*
ಚಿತ್ತದ ಧ್ಯಾನಕ್ಕೆ
ಮಾತು ಮೌನವಾಯಿತು.
ಬೀಜ ಮಂತ್ರವಾಯಿತು.


  • ಪದ್ಯಾಣ ಗೋವಿಂದ ಭಟ್ (ಪದ್ಯಾಣ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading