ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨೭)

ಗುರುವಿಗೆ ಶರಣಾಗುವ ತನಕ ದೊರೆಯದು ಮುಕ್ತಿ ಎಂಬ ಪದ ನೆನಪಾಯಿತು. ಬೆಳಿಗ್ಗೆ 4 ಕ್ಕೆ ಎದ್ದು ಸ್ನಾನ.. ಪೂಜೆ ಮುಗಿಸಿದೆ. ಸನ್ಯಾಸಿ ಚಹಾ ತಯಾರಿಸುತ್ತಿದ್ದರು. ನಾನು ಇನ್ನೇನು ಹೊರಡಬೇಕು ಎಂಬಷ್ಟರಲ್ಲಿ ಚಹಾ ಕುಡಿಯಲು ಕೊಟ್ಟರು. ವಂದಿಸಿ ಹೊರಟೆ. ನರ್ಮದಾ ಖಂಡದ ಜನರ ಪರೋಪಕಾರ, ಆದರ.. ಆತಿಥ್ಯಗಳ ಋಣ ಸಾಕಷ್ಟಿದೆ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

“ಕಾಂಕರಿಯಾ” ಊರಿನ ಮನೆಯಲ್ಲಿ ಬೆಳಿಗ್ಗೆ 5 ಕ್ಕೆ ಎದ್ದವನೆ.. ಸ್ನಾನಕ್ಕೆ ಹೋದೆ. ನಾನು ಮರಳಿ ಬರುವುದರೊಳಗೆ ಮನೆಯವರು ಎದ್ದಿದ್ದರು. ಹಬೆಯಾಡುವ ಚಹಾ ಸಹ ಸಿದ್ಧವಾಗಿತ್ತು.
ಚಹಾ ಕುಡಿದು.. ಆತಿಥ್ಯ ಮಾಡಿದ ಮನೆಯವರಿಗೆ ಕೈ ಮುಗಿದು ಧನ್ಯವಾದಗಳನ್ನು ತಿಳಿಸಿ.. ಮುಂದೆ ಹೊರಟೆ‌.

“ಖಂಡ್ವಾ” ಕಡೆ ಹೋಗುವ ಹೆದ್ದಾರಿಯಲ್ಲಿ ಸಾಗಿತು ಪ್ರಯಾಣ. ನಂದಿ ರಸ್ತೆಯಲ್ಲಿ ಭರ್ಜರಿಯಾಗಿ ಓಡುತ್ತಿದ್ದ, ಆದರೆ ಲಾರಿಗಳು ಮೈ ಮೇಲೆ ಎಗರಿ ಬಂದ ಹಾಗೆ ಆಗುತ್ತಿದ್ದವು, ಆವಾಗ ಅನಿವಾರ್ಯವಾಗಿ ರಸ್ತೆ ಬಿಟ್ಟು ಕೆಳಗೆ ಇಳಿಯುತ್ತಿದ್ದೆ. ನಂದಿಗೂ ಧಣಿವಾಗುತ್ತಿತ್ತು.

ರಾತ್ರಿಯೆಲ್ಲಾ ನಿದ್ದೆ ಮಾಡದೆ ಬೃಹತ್ ವಾಹನಗಳನ್ನು ಓಡಿಸುವ ಚಾಲಕರಿಂದ ಅದ್ಯಾವಾಗ ಅಪಘಾತ ಸಂಭವಿಸುವುದೋ ಹೇಳಲಾಗದು‌. ಆ ಭಯದಿಂದಲೆ ರಸ್ತೆ ಬಿಟ್ಟು ಇಳಿದುಬಿಡುತ್ತಿದ್ದೆ. ರಸ್ತೆಯನ್ನೆ ದಿಟ್ಟಿಸಿ ನೋಡುತ್ತಾ‌ ವಾಹನ ಚಲಾಯಿಸುವ ಚಾಲಕರು, ಕೆಲವು ಗಂಟೆಗಳ ನಂತರ ತಮಗೆ ಗೊತ್ತಿಲ್ಲದಂತೆ ಸಂಮ್ಮೋಹನಕ್ಕೆ ಒಳಗಾಗಿ, ಸಧ್ಯದ ಪರಿಸ್ಥಿತಿ ಮರೆತು ಅಪಘಾತ ಸಂಭವಿಸುವ ಪ್ರಮಾಣ ಹೆಚ್ಚು… ಇದನ್ನೆ “ಹೈವೇ ಹಿಪ್ನೋಸಿಸ್” ಅಥವಾ “White line fever”ಎನ್ನುವರು.

ರಾತ್ರಿ ಸಮಯ ಕತ್ತಲು… ಯಾವುದೇ ಟ್ರಾಫಿಕ್ ಲೈಟ್’ಗಳಿರುವುದಿಲ್ಲ, ಹೊರಗೆ ಲಕ್ಷ್ಯ ಹೋಗಲು ಯಾವುದೇ ಸಂಚಾರವಿರುವುದಿಲ್ಲ.. ಹೀಗಾಗಿ ಒಂದೇ ಸ್ಥಿತಿಯನ್ನು ಗಮನಿಸುತ್ತಾ ಚಾಲಕ “ಸಮ್ಮೋಹನ”ಕ್ಕೆ ಒಳಗಾಗುವ ಸಂಭವ ಹೆಚ್ಚು. ಆದ್ದರಿಂದಲೆ ಬೆಳಿಗ್ಗೆ ಹೈವೇಯಲ್ಲಿ ಚಲಿಸುವಾಗ ಎಚ್ಚರವಾಗಿರುವುದು ಉತ್ತಮ. ಹೈವೇಯಲ್ಲಿ 45 ಕಿ.ಮೀ ಚಲಿಸಿ.. ಕಾಡಿನ ಮಧ್ಯದಲ್ಲಿ ಹಾದು ಹೋದ ರಸ್ತೆಗಿಳಿದೆ.

ತೀರಾ ಏರಿಳಿತಗಳಲ್ಲದ ರಸ್ತೆಯಿದು. ಸುತ್ತನೆಯ ಹಸಿರು ವಾತಾವರಣ, ತಂಪನೆಯ ನೆರಳು, ಕಾಡಿನ ಒಡನಾಟದ ಹಾದಿ, ತಿರುವುಗಳು ಚೆಂದ. ಅಪರೂಪದ ಸಮಯವಿದು.
ಕಾಡು ಹಾದಿ ಮುಗಿದು.. ರಸ್ತೆಯ ಮೂಲಕ ಸಂಚಾರ ಸಾಗಿತು. ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳಿಂದ ಇಷ್ಟೆಲ್ಲಾ ಸುತ್ತು ಬಳಸಿ ಬರಬೇಕು. ಮುಂದೆ ಸಿಕ್ಕಿದ್ದು ಬೃಹತ್ ಇಂದಿರಾ ಸಾಗರ ಡ್ಯಾಂ (ಪುನಾಸಾ ಡ್ಯಾಮ್), ಇದು ದೇಶದ ದೊಡ್ಡ ಅಣೆಕಟ್ಟು. 1984 ರಲ್ಲಿ ಅಂದಿನ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡಿದ ಡ್ಯಾಮ್ ಇದು. ಕಣ್ಣಾಡಿಸಿದಷ್ಟು ಕಾಣುವ ದೊಡ್ಡ ಜಲಾಶಯ. ಬೃಹತ್ ಜಾಲ ಸಾಗರ. ನೋಡಲು ಎರಡು ಕಣ್ಣು ಸಾಲದು. ಒಂದಿಷ್ಟು ಹೊತ್ತು ಕಣ್ಣರಳಿಸಿ ಅಲ್ಲಿನ ಸೊಬಗನ್ನು ಅಚ್ಚರಿಯಿಂದ ನೋಡುತ್ತಿದ್ದೆ‌. ಉದ್ದನೆಯ ಬ್ರಿಡ್ಜ್ ನೋಡಿದಷ್ಟು ಉದ್ದವೆನಿಸುತ್ತಿತ್ತು. ದೋಣಿಗಳು ಡ್ಯಾಮ್ ನೀರಿನಲ್ಲಿ ತೇಲುತ್ತಿದ್ದವು… ದಂಡೆಗೆ ಒಣಗಿ ನಿಂತ ಮರವೊಂದು ಕೊನೆಗೆ ಅಚ್ಚರಿಯನ್ನುಂಟು ಮಾಡಿತು. ನೀರಿದ್ದರೆ ಮರ‌…ಅದು ಹೆಚ್ಚಾದರೆ ವಿನಾಶ ಎಂಬ ಪಾಠ ಹೇಳಿದಂತಿತ್ತು.

“ಅತೀ ಆದರೆ ಅಮೃತವು ವಿಷ” ಎಂಬ ಮಾತು ಅಕ್ಷರಶಃ ಸತ್ಯ. ಮತ್ತೆ ಸಿಕ್ಕಿದ್ದು ನುಣುಪು ರಸ್ತೆಯ ಕಾಡು ಹಾದಿ. ಮತ್ತೆ ಚಂದನೆಯ ಓಟ. ನಂದಿಯ ಖುಷಿಗಂತೂ ಪಾರವೆ ಇರಲಿಲ್ಲ. ಅಂತೂ ಸಾಯಂಕಾಲದ ಹೊತ್ತಿಗೆ ಬಂದದ್ದು ಖಾಂಡ್ವಾ ಜಿಲ್ಲೆಯ “ಕೆನೂದ” ಎಂಬ ಹಳ್ಳಿಗೆ, ಇಲ್ಲಿನ ಶ್ರೀ ನರಸಿಂಹ ಭಗವಾನ್ ಧಾಮ ಆಶ್ರಮಕ್ಕೆ. ಇಲ್ಲಿನ ಸನ್ಯಾಸಿ.. ನಮ್ಮ ಕರ್ನಾಟಕದ ಕಲಬುರ್ಗಿಯ “ಗಾಣಗಾಪುರದಲ್ಲಿನ ಸಂಗಮ ಸ್ಥಳದಲ್ಲಿ “ನರ್ಮದಾ ಭೀಮಾಶಂಕರ ಅನ್ನಕ್ಷೇತ್ರ” ನಡೆಸುತ್ತಿದ್ದಾರಂತೆ.‌

“ಕೆನೂದ”ನ “ನರಸಿಂಹ ಭಗವಾನ್ ಧಾಮ ಆಶ್ರಮದ” ಸನ್ಯಾಸಿ ನಿನ್ನೇ ರಾತ್ರಿ ಕಟ್ಟಿಗೆಯ ಪಾತ್ರೆಯಲ್ಲಿ ಊಟ ಮಾಡುತ್ತಿದ್ದರು‌. ಇದೇಕೆ ಹೀಗೆ ಎಂದರೆ ಅದು ಅವರ ಗುರುವಿನ ಆಜ್ಞೆಯಂತೆ. ಗುರುವಿಗೆ ಶರಣಾಗುವ ತನಕ ದೊರೆಯದು ಮುಕ್ತಿ ಎಂಬ ಪದ ನೆನಪಾಯಿತು. ಬೆಳಿಗ್ಗೆ 4 ಕ್ಕೆ ಎದ್ದು ಸ್ನಾನ.. ಪೂಜೆ ಮುಗಿಸಿದೆ. ಸನ್ಯಾಸಿ ಚಹಾ ತಯಾರಿಸುತ್ತಿದ್ದರು. ನಾನು ಇನ್ನೇನು ಹೊರಡಬೇಕು ಎಂಬಷ್ಟರಲ್ಲಿ ಚಹಾ ಕುಡಿಯಲು ಕೊಟ್ಟರು. ವಂದಿಸಿ ಹೊರಟೆ.

ಇಂದಿನ ನಂದಿಯ ಓಟ.. ಕೊನೆಯ ದಿನದ ಆಟ. ಕೇವಲ 58 ಕಿ.ಮೀ ಪ್ರಯಾಣ ಮಾತ್ರ ಬಾಕಿ ಇತ್ತು.

“ಓಂಕಾರೇಶ್ವರ”ದತ್ತ ಪಯಣ….

ಕೆನೂದ’ನಿಂದ “ಸನಾವದ” ಕಡೆಗೆ ಓಡುವ ರಸ್ತೆ ಮೂಲಕ ಸಂಚಾರ ಮುಂದುವರೆಸಿದೆ. ರಸ್ತೆ ಮಾತ್ರ ಎಳ್ಳಷ್ಟು ತಗ್ಗುದಿಬ್ಬಗಳಿಲ್ಲದ ಹಾವಿನ ಮೈಯಂತ ರಸ್ತೆ‌.. ನಂದಿ ಓಟಕ್ಕೆ ಸಾಟಿಯಿರಲಿಲ್ಲ. ದಾರಿಯಲ್ಲಿ “ಹಾಥಿ ಬಾಬಾ ಆಶ್ರಮ” ಎಂದು ನೋಡಿದವನೆ. ರಸ್ತೆ ಬಿಟ್ಟು ಮಣ್ಣಿನ ರೋಡಿಗೆ ನಂದಿಯನ್ನು ಇಳಿಸಿದೆ. ಇದು ತೆಗ್ಗು ದಿಬ್ಬಗಳಿಂದ ಕೂಡಿದ ಕಾಲುದಾರಿ. ಮುಳ್ಳುಗಳು ಹೇರಳವಾಗಿದ್ದವು. ಕಾಲುದಾರಿಯ ಪಕ್ಕವೆ “ಜಲಾನಯನ ಕಾಲುವೆ” ಹರಿದು ಹೋಗುತ್ತಿತ್ತು. ಸುತ್ತಲೂ ಹೊಲಗಳು, ಚಿಕ್ಕ ಪುಟ್ಟ ದಿಬ್ಬಗಳು, ಪಕ್ಕಕ್ಕೆ ಕಾಲುವೆ.. ಕಣ್ಣಿಗೆ ಹಬ್ಬ ಉಂಟು ಮಾಡುವ ರಸ್ತೆಯಿದು.

ಈ ರಸ್ತೆ, ಪ್ರಕೃತಿಯ ಮೋಹಕ್ಕೆ ಬಿದ್ದು.. ಕಾಲುದಾರಿ ಬಳಸಿ ನೇರವಾಗಿ ಬಂದು “ಹಾಥಿ ಬಾಬಾ ಆಶ್ರಮ”ದ ದಾರಿಯನ್ನು ತಪ್ಪಿಬಿಟ್ಟೆ. ಸುತ್ತಲೂ ಯಾವುದೇ ಮಾರ್ಗದರ್ಶಿ ಬೋರ್ಡುಗಳಿರಲಿಲ್ಲ.. ಕೇಳೋಣವೆಂದರೆ ಜನರ ಸುಳಿವಿರಲಿಲ್ಲ. ಕೊನೆಗೆ ಸೇರಿದ್ದು “ಖಗವಾಡಾ” ಎಂಬ ಹಳ್ಳಿಗೆ ಅಲ್ಲಿಂದ “ಅಂಜರೂದ್” ಎಂಬ ಊರಿನ ಮೂಲಕ ಹೊಕ್ಕಿದ್ದು “ಓಂಕಾರೇಶ್ವರ ರಸ್ತೆಗೆ” ಸುತ್ತಲೂ ಕಾಡು ಹೊಂದಿದ ರಸ್ತೆಯಿದು.

ಮೊದಲಿಗೆ ಸಿಕ್ಕಿದ್ದು “ಕೋಟಿ”(ಶಿವಕೋಟಿ) ಎಂಬ ಊರು ಸಿಕ್ಕಿತು, ಅಲ್ಲಿನ “ಏಕ್ ರೋಟಿ ಬಾಬಾ ಆಶ್ರಮ”ದಲ್ಲಿ ಚಹಾ ಕುಡಿದು, “ಓಂಕಾರೇಶ್ವರಕ್ಕೆ ಬಂದೆ. ಓಂಕಾರೇಶ್ವರೊಳಗೆ ಬರುತ್ತಿದ್ದಂತೆ.. ನಾನು ಡಿಸೆಂಬರ್ 19, 2023 ರಂದು ಪರಿಕ್ರಮ ಶುರು ಮಾಡಿದ ದಿನದ ಘಟನೆಗಳು ನೆನಪಾದವು‌. 53 ದಿನಗಳ ಹಿಂದಿನ ನೆನಪುಗಳು ಮರುಕಳಿಸುತ್ತಿದ್ದವು.
ಮೊದಲ ದಿನದ ಸುಪ್ತ ಭಯಗಳು, ಮನದೊಳಗಿದ್ದ ಹಲವು ಸಂಶಯಗಳು ನೆನಪಾಗಿ.. ನಗು ತೇಲಿ ಹೋಯಿತು.

ಇಂದು ಮನಸ್ಸು ಹಗುರ ಹಗುರ‌… ತಾಯಿ ನರ್ಮದೆಯ ಕೃಪೆಯಿಂದ ಯಾವುದೇ ಎಳ್ಳಷ್ಟು ತೊಂದರೆ, ಅನಾರೋಗ್ಯ ಕಾಡದೆ ಪರಿಕ್ರಮ ಸಂಪೂರ್ಣವಾಯಿತು. ಇನ್ನೂ ಒಂದಿಷ್ಟು ಹೇಳುವುದಿದೆ.. ನಾಳೆ ಬರೆಯುವೆ. ತಾಯಿ ನರ್ಮದೆಯ ತಟವನ್ನು ಬಿಟ್ಟು ನಡೆಯುವ ಸಮಯ ಬಂತೇ ಅಂತ ಮನಸ್ಸು ಹಳಾಹಳಾಯಾಗುತ್ತಿದೆ.
ನಾಳೆ ಕೊನೆಯ ಲೇಖನ ನಿರೀಕ್ಷಿಸಬಹುದು.

ಓಂಕಾರೇಶ್ವರದ “ಗಜಾನನ ಆಶ್ರಮ”ದಲ್ಲಿ ತಂಗಿರುವೆ.

ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW