ರಸ್ತೆಯ ಮೇಲೆ “ನರ್ಮದಾ ಪರಿಕ್ರಮ” ಹೋಗುವವರನ್ನ ಭೇಟಿಯಾಗಿ “ನರ್ಮದೇ ಹರ್” ಎಂದು ಹೇಳಲು.. ಬೆಟ್ಟದಿಂದ ಓಡೋಡಿ ಬರುವ ಮಕ್ಕಳು. ಕೆಲವು ಪ್ರದೇಶಗಳಂತೂ ನಿರ್ಜನ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ಕಪಿಲೇಶ್ವರ ಮಹಾದೇವ ಆಶ್ರಮದಿಂದ ನೇರವಾಗಿ ಬಂದಿದ್ದು “ಪಲ್ಸುದ್” ಎಂಬ ಊರಿಗೆ. ರಸ್ತೆ ತುಂಬಾ ಏರು…. ದಿಗ್ಗನೆ ಎದುರಾಗುವ ತಿರುವುಗಳು. ದೂರದೂರದವರೆಗೆ ಜನರ ಓಡಾಟವಿಲ್ಲದ ನಿರ್ಜನ ಕಾಡು ಪ್ರದೇಶ. ಬೃಹತ್ ಗುಡ್ಡ ಏರಿ ಇಳಿಯುವ.. ಏದುಸಿರು ಬಿಡುವ ಸಾಹಸ. ಮೈ ನುಗ್ಗೆಬ್ಬಿಸುವ ರಸ್ತೆ, ಕಾಡಿನ ನಿರ್ಜನ ಪ್ರದೇಶ.
ಅಲ್ಲಲ್ಲಿ “ಬುಡಕಟ್ಟು ಜನಾಂಗ”ಗಳು ವಾಸಿಸುವ ಊರುಗಳು. ಇಲ್ಲಿಂದ “ಶೂಲಪಾಣಿ ಕಾಡು- ಬೆಟ್ಟಗಳನ್ನು ಪ್ರವೇಶಿಸಿದೆ. ಇವಾಗ ಇರುವ ಸ್ಥಳ… ಪಲ್ಸುದ್’ನ ರಾಮ ಮಂದಿರ.
ಫಲ್ಸುದ್’ನ ರಾಮ ಮಂದಿರದ ಆವರಣದಲ್ಲಿ ಒಬ್ಬನೇ ಮಲಗಿದ್ದೆ. ಅದು ಗುಡ್ಡದ ಮೇಲಿನ ಪ್ರದೇಶ, ನಿಶ್ಚಲ ಆಕಾಶ.

ಬೆಳಗಿನ ಚಳಿ ಗಾಳಿಗೆ ಎಚ್ಚರವಾದಾಗ ಸಮಯ 5 ಗಂಟೆ.. ಮತ್ತೆ ಸ್ಲೀಪಿಂಗ್ ಬ್ಯಾಗಿನಲ್ಲಿ ಆಮೆಯ ತರ ಹುದುಗಿಕೊಂಡೆ… ಎಚ್ಚರವಾದಾಗ ಸಮಯ 6:30. 8:30 ಕ್ಕೆಲ್ಲಾ ನನ್ನ ಲಗೇಜು ನಂದಿಯ ಹೆಗಲಿಗೆ ಕಟ್ಟಿ ತುಳಯಲಾರಂಭಿಸಿದೆ. ಸ್ವಲ್ಪ ದೂರ ಸಮತಟ್ಟಾಗಿ ಸಾಗಿದೆ ರಸ್ತೆಗೆ ಮತ್ತೊಂದು ಅಜಾನುಬಾಹು ಬೆಟ್ಟ ಚಡ್ಡು ಹೊಡೆದು ನಿಂತಿತ್ತು.
ಆ ಬೆಟ್ಟದ ಬೈತಲೆ ಕೊರೆದು ಟಾರು ಸುರುವಿ ರಸ್ತೆ ಮಾಡಿದ್ದಾರೆ ಆದರೂ ಏರುವುದು ಇದ್ದದ್ದೆ. ಅಬ್ಬಬ್ಬಾ..!! ಆ ಎತ್ತರದ ಘಾಟಿ ಪ್ರದೇಶಗಳು ಸುತ್ತಲೂ ಒಂದಕ್ಕೊಂದು ಚಡ್ಡು ಹೊಡೆದು ನಿಂತ ಗುಡ್ಡಗಳೆ. ಅವುಗಳ ಮೇಲೆ ಕುರುಚಲು ಕಾಡು. ಅಲ್ಲಲ್ಲಿ ಕಾಣ ಸಿಗುವ ಬುಡಕಟ್ಟು ಜನಾಂಗದವರ ಮನೆಗಳು.
ರಸ್ತೆಯ ಮೇಲೆ “ನರ್ಮದಾ ಪರಿಕ್ರಮ” ಹೋಗುವವರನ್ನ ಭೇಟಿಯಾಗಿ “ನರ್ಮದೇ ಹರ್” ಎಂದು ಹೇಳಲು.. ಬೆಟ್ಟದಿಂದ ಓಡೋಡಿ ಬರುವ ಮಕ್ಕಳು. ಕೆಲವು ಪ್ರದೇಶಗಳಂತೂ ನಿರ್ಜನ.

ಈ ಎಲ್ಲಾ ಬೆಟ್ಟಗಳನ್ನು ಏರಿ.. ಇವುಗಳ ನೆತ್ತಿಯ ಮೇಲೆ.. ನಂದಿ ಓಡಿಸುವುದು ರಮಣೀಯ. ಸಮಯ ಹೋಗುವುದೇ ತಿಳಿಯುವುದಿಲ್ಲ. ಎಲ್ಲಾದರೂ ಆಕಳು, ಕುರಿ, ಕೋಳಿ ಕಂಡರೆ ಹತ್ತಿರದಲ್ಲಿಯೇ ಊರು ಇದೆ… ಯಾರೋ ದನಗಾಹಿ ಇದ್ದಾರೆ ಅಂತ ಹುಡುಕುತ್ತಿದ್ದೆ. ಸಿಕ್ಕರೆ ಒಂದಿಷ್ಟು ಮಾತು, ನಗು..ಕೊನೆಗೆ ಜೊತೆಜೊತೆಗೆ ಒಂದಿಷ್ಟು ತಿನಿಸು. ಅವರ ಜೀವನ ಶೈಲಿಯೇ ವಿಚಿತ್ರ.
ಬುಡಕಟ್ಟು ಹೆಣ್ಣುಮಕ್ಕಳು ದೂರದಿಂದ ನೀರು ಹೊತ್ತು ತರುವುದು.. ಕಟ್ಟಿಗೆ ಹೊತ್ತು ತರುವುದು.. ದನ ಕಾಯುವವರು.. ಕುರಿ ಕಾಯುವವರು.. ಇವರೇ ಈ ಬೆಟ್ಟಗುಡ್ಡಗಳ ಜೀವಿಗಳು.
ಇನ್ನೂ ಶೂಲಪಾಣಿಯ ಕಾಡು ದಟ್ಟವಾಗಿಲ್ಲ. ಕಾಡು ಪ್ರಾಣಿಗಳ ಸುಳಿವಿಲ್ಲ. ಇದೆ ಕಾಡು ಮತ್ತೊಂದು ಭಾಗದವರೆಗೆ ಮೈ ಚಾಚಿಕೊಂಡಿದೆ. ಮತ್ತೊಮ್ಮೆ ನಾನು ಪಾರು ಮಾಡುವೆ.
ಈ ಬೃಹತ್ ಬೆಟ್ಟಗಳನ್ನು ಕೊರೆದುಕೊಂಡು ತಾಯಿ ನರ್ಮದೆ ಹರಿದು ಹೋಗಿದ್ದಾಳೆ.
ಇವಾಗ ಉಳಿದುಕೊಂಡಿರುವ ಸ್ಥಳ..

“ಮೇಂದ್ರಾಣಾ”ದ ರಾಧಾಕೃಷ್ಣ ಧಾಮ.
ನಿನ್ನೇ ತಂಗಿದ್ದ ಮೇಂದ್ರಾಣಿ”ಯ “ರಾಧಾಕೃಷ್ಣ ಧಾಮ ಆಶ್ರಮ” ಶಾಂತವಾದ ಸ್ಥಳ. ಊಟೋಪಚಾರ ಅಚ್ಚುಕಟ್ಟಾಗಿತ್ತು. ಬೆಳಿಗ್ಗೆ 6 ಕ್ಕೆ ಎದ್ದು ನಲ್ಲಿಯ ಕೆಳಗೆ ಕೈ ಹಾಕಿದರೆ.. ನೀರು ತಣ್ಣಗೆ ಕೊರೆಯುತ್ತಿದ್ದವು, ಬೆರಳೆಲ್ಲ ಮರಗಟ್ಟಿದವು, ಅರ್ಧಂಬರ್ಧ ಮುಖ ತೊಳೆದು ರೂಮಿನತ್ತ ಓಡಿದೆ.. ಅಬ್ಬಾ..!! ಮೈ ಕೊರೆಯುವ ಚಳಿ.
ಆಶ್ರಮದಲ್ಲಿ ಬಿಸಿ ಹಬೆಯಾಡುವ ಚಹಾ ಕೊಟ್ಟಾಗಲೇ ಬೆರಳುಗಳು ಸಹಜ ಸ್ಥಿತಿಗೆ ಮರಳಿದ್ದು.
ಆಶ್ರಮದಿಂದ…
8:30 ಕ್ಕೆ ನಂದಿಯನ್ನೇರಿ ತುಳಿಯತೊಡಗಿದೆ.. ಹತ್ತು ಕಿ. ಮೀಟರ್ ಓಡಿದ ನಂದಿ “ಅಧಿಕೃತವಾಗಿ #ಮಹಾರಾಷ್ಟ್ರ ರಾಜ್ಯಕ್ಕೆ ನುಗ್ಗಿದ.

ನಂದೂರಬಾರ್ ಜಿಲ್ಲೆಯ “ಶಹಾದಾ” ಎಂಬ ಊರಿಗೆ ಬಂದೆ..
ಇದ್ದಕಿದ್ದಂತೆ ಬದಲಾದ ಜನಜೀವನ.. ಭಾಷೆ, ವೇಷಭೂಷಣ..
ಕಚ್ಚೆ ಹಾಕಿ ಬಿರುಸಿನಿಂದ ಸಾಗುವ ಹೆಂಗಳೆಯರು, ಕಚ್ಚೆ, ಬಿಳಿ ಟೋಪಿ ಹಾಕಿಕೊಂಡು ಅಡಿಕೆ ಎಲೆ ಜಗಿದು ಉಗುಳುವ ಅಜ್ಜಂದಿರು, ಮರಾಠಿ ಅಕ್ಷರ ಹೊತ್ತ ಬೋರ್ಡುಗಳು..
ಗಡಿನಾಡಾದರೂ.. ಮರಾಠಿ ಪ್ರತಿಧ್ವನಿಸುತ್ತಿತ್ತು…
ರಸ್ತೆಯುದ್ದಕ್ಕೂ ಹಾರಾಡುವ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಹೊತ್ತ ಭಗವಾ ಧ್ವಜಗಳು…
ಧೂಳು ಉಗುಳುವ ರಸ್ತೆಗಳು..

ನಡಗುತ್ತಾ ಓಡುವ ಲಡಕಾಸಿ ಕೆಂಪು ಬಸ್ಸುಗಳು…
ಗೋದಿ, ಬಾಳೆ, ಪಪ್ಪಾಯಿ, ಹತ್ತಿ, ಚೆಂಡು ಹೂ ಹೊತ್ತ ಹೊಲಗಳು.
ರಸ್ತೆಯ ತುಂಬಾ ಟಾರು ಹೆಕ್ಕಿ ತಿಂದು ತೆಗ್ಗು ಗುಂಡಿಗಳಾಗಿವೆ…
ಮೈ ಉರಿಯುವ ಬಿಸಿಲು.. ಮೈ ಹಿಂಡಿದಂತೆ ಸುರಿಯುವ ಬೆವರು, ತೊಪ್ಪನೆ ತೊಯ್ದ ಬಟ್ಟೆಗಳು, ನೀರು ಕುಡಿದಷ್ಟು ಹೆಚ್ಚಾಗುವ ತೀರದ ದಾಹ…..
ಅಲ್ಲಲ್ಲಿ ನೆರಳು ಕೊಡಲು ಹಸಿರು ಹೊದ್ದು ನಿಂತಿರುವ “ಜಾಲಿ ಮರ”ಗಳು.
ಇವೆಲ್ಲವುಗಳನ್ನು ಪಾರು ಮಾಡಿ..

ನಂದೂರಬಾರ್ ಜಿಲ್ಲೆಯ “ಪ್ರಕಾಶಾ” ಎಂಬ ಊರಿಗೆ ಬಂದೆ
“ಸೌ ಬಾರ್ ಕಾಶಿ… ಏಕ್ ಬಾರ್ ಪ್ರಕಾಶಿ….” ಎನ್ನುವ ಮಾತು ಚಾಲ್ತಿಯಲ್ಲಿದೆ….. ಉತ್ತರದಲ್ಲಿ ಕಾಶಿಯಾದರೆ.. ದಕ್ಷಿಣದಲ್ಲಿ ಪ್ರಕಾಶಿ ಎಂಬ ಮಾತು ಪ್ರಸಿದ್ದವಾಗಿದೆ..
ಇದು “ತ್ರಿವೇಣಿ ಸಂಗಮ” ಕ್ಷೇತ್ರವಾಗಿದ್ದು..
ತಾಪಿ ನದಿಗೆ.. ಗೋಮತಿ ನದಿ ಸೇರುವ ಸಂಗಮ ಸ್ಥಳ. ಇಲ್ಲಿ ಕೇದಾರೇಶ್ವರ, ಸಂಗಮೇಶ್ವರ, ಕಾಶೀ ವಿಶ್ವನಾಥ ದೇವಸ್ಥಾನಗಳು ಪ್ರಮುಖವಾದವು..
ಊರು ತುಂಬಾ 108 ಪ್ರಾಚೀನ ಶಿವನ ದೇವಾಲಯಗಳಿವೆಯಂತೆ.
ಇದು ತೀರ್ಥಸ್ದಾನವಾಗಿದೆ..
“ತಾಪಿ” ನದಿಯ ದಡದ ಮೇಲಿರುವ ಕೇದಾರೇಶ್ವರ ದೇವಸ್ಥಾನ ಪಕ್ಕದ “ಧರ್ಮಶಾಲೆ”ಯಲ್ಲಿ ಇಂದಿನ ವಸತಿ.
ನರ್ಮದೇ ಹ
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ಪ್ರಕಾಶ ಬಾರ್ಕಿ
