ಕೆ. ಪಿ. ಮಹದೇವಿಯವರ “ಆರಂಬ” ಕವಿತೆಗಳು!

ಕೆ. ಪಿ. ಮಹದೇವಿಯವರ ‘ಆರಂಬ’ ಕವಿತೆಗಳ ಕುರಿತು ಖ್ಯಾತ ಕತೆಗಾರ ಕೇಶವ ಹಂದ್ರಾಳ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಆರಂಬ
ಲೇಖಕಿ : ಕೆ. ಪಿ. ಮಹದೇವಿ
ಪ್ರಕಾರ : ಕವಿತೆಗಳು

ಅಭಿಲಿಪ್ಸ ಪಂಡಳ ಹರಹರ ಶಂಬು ಮತ್ತು ಕೆ. ಪಿ. ಮಹದೇವಿಯವರ “ಆರಂಬ ” ಕವಿತೆಗಳು!

ನಿನ್ನೆ ಅಂದರೆ ಸೋಮವಾರ ಸ್ನೇಹಿತರ ಜೊತೆಯಲ್ಲಿ ನಂದಿಗೆ ಹೋಗಿದ್ದೆ. ನನ್ನ ತಾಯಿಯ ತವರು ನಂದಿಗೆ ಹತ್ತಿರದ ಗ್ರಾಮವಾಗಿದ್ದರೂ ಅಲ್ಲಿನ ಪುರಾತನವಾದ ಭೋಗ ನಂದೀಶ್ವರ ದೇವಾಲಯಕ್ಕೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ದೇವಾಲಯದ ವಾಸ್ತುಶಿಲ್ಪ ಬೆರಗುಗೊಳಿಸುವಂಥದ್ದು. ಹಾಗೆಯೇ ಹತ್ತಿರದ ಮುದ್ದೇನಳ್ಳಿಗೆ ಹೋಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸಮಾಧಿ ಮತ್ತು ಮ್ಯೂಸಿಯಮ್ ಗಳನ್ನೂ ಕಣ್ತುಂಬಿಸಿಕೊಂಡು ಬಂದಿದ್ದೆ. ಇಂದು ಅದೇ ಗುಂಗಿನಲ್ಲಿರುವಾಗ ನಮ್ಮ ಕ್ರಾಂತಿಯ ಮೊಬೈಲ್ ಫೋನ್ ನಲ್ಲಿ ಹೆಣ್ಣು ಮಗಳೊಬ್ಬಳ ಧ್ವನಿಯಲ್ಲಿ ” ಹರಹರ ಶಂಬು ‘ ಎಂಬ ಹಾಡು ಕೇಳಿ ಭಾವಪರವಶನಾಗಿ ಇಸಿದುಕೊಂಡು ನೋಡಿದ್ದೆ. ಅಭಿಲಿಪ್ಸ ಪಂಡ ಎನ್ನುವ ಹದಿನೆಂಟು ವರ್ಷದ ಒರಿಸ್ಸ ಮೂಲದ ಹೆಣ್ಣುಮಗಳು ಎಸ್ಟು ಭಾವಪರವಶಳಾಗಿ ಹಾಡಿದ್ದಾಳೆಂದರೆ … ಶಿವನೆ!

ಅಷ್ಟರಲ್ಲಿ ಪೋಸ್ಟ್ ಒಂದು ಬಂದಿತ್ತು. ಅರಸಿಕೆರೆಯಿಂದ ಕೆ. ಪಿ. ಮಹದೇವಿಯವರು ತಮ್ಮ ಆರಂಬ ಕವನ ಸಂಕಲನವನ್ನು ಕಳುಹಿಸಿದ್ದರು. ಅವರ ಅನೇಕ ಕವಿತೆಗಳನ್ನು ಈಗಾಗಲೇ ನಾನು ಫೇಸ್ಬುಕ್ನಲ್ಲಿ ಓದಿದ್ದೆ. ಆರಂಬ ಕವಿತೆಗಳ ಸಂಕಲನ ಮೂಡಿ ಬಂದಿರುವ ಸೊಗಸುಗಾರಿಕೆಗೆ ಬೆರಗಾದೆ. ಗೆಳೆಯ ರಾಘವೇಂದ್ರ ಪಾಟೀಲರ ಘನತರವಾದ ಮುನ್ನುಡಿ ಕವಿಯಿತ್ರಿ ಮತ್ತು ಕವಿತೆಗಳೆರಡರ ಗುಣವನ್ನು ಢಾಳಾಗಿಯೇ ಅನಾವರಣಗೊಳಿಸಿದೆ. ಮತ್ತು ಕವಿಯಿತ್ರಿ ಮತ್ತು ಕವಿತೆಗಳೆರಡೂ ಅವರ ಮುನ್ನುಡಿಯ ಆಳವಾದ ಸೊಬಗಿನ ಅನಾವರಣಕ್ಕೆ ಅರ್ಹರಾಗಿದ್ದಾರೆ ಕೂಡ. ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನನ್ನ ಸಾಹಿತ್ಯದ ಒಳನೋಟಗಳು ಸಾಹಿತ್ಯ ವಿದ್ಯಾರ್ಥಿಗಳ ಒಳನೋಟಗಳಿಗಿಂತಲೂ ಭಿನ್ನವಾಗಿರುತ್ತದೆ ಎಂಬ ಸಂಗತಿ ಪ್ರಕಟಗೊಂಡಿರುವ ಸತ್ಯವೇ ಸರಿ. ಮಹದೇವಿಯವರು ಕವಿತೆಗಳು ಇಂಥ ಒಳನೋಟಗಳ ಆಳವಾದ ಬೇರುಗಳ ಚಿಗುರುಗಳೇ ಆಗಿವೆ.

ಮಹದೇವಿಯವರ ತಮ್ಮ ಪುಸ್ತಕ ಅರ್ಪಣೆಯಲ್ಲಿಯೇ ಅವರ ಕವಿತೆಗಳ ಆಶಯಗಳ ಅನನ್ಯತೆಯ ಚೆಲುವು ಅರಳಿ ನಿಂತಿದೆ.” ಬದುಕ ನೆಲವನ್ನು ನಂದನ ಗೊಳಿಸಿಸಿಕೊಳ್ಳಲು ನಿಷ್ಠ ಪ್ರಾಮಾಣಿಕತೆಗಳ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗುತ್ತಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ” ಮಹದೇವಿಯವರು ತಮ್ಮ ಈ ಕವಿತೆಗಳ ಸಂಕಲನವನ್ನು ಅರ್ಪಿಸಿದ್ದಾರೆ. ಬರೆಯಲೇಬೇಕೆಂಬ ಹಠದಿಂದ ಬರೆದಿರುವ ಗುಣ ಇಲ್ಲಿನ ಯಾವ ಕವಿತೆಗಳಲ್ಲೂ ಕಾಣುವುದಿಲ್ಲ. ಹಾಗಾಗಿಯೇ ಅವರ ಅಂತರಂಗದ ತವಕ-ತಲ್ಲಣಗಳು, ಆಲಾಪನೆಗಳು ಕಮ್ಮನೆಯ ಕವಿತೆಗಳಾಗಿ ಅರಳಿವೆ. ಇಂದಿನ ಸಾಹಿತ್ಯ ಸಂದರ್ಭದಲ್ಲಿ ಮೆರೆಯುತ್ತಿರುವ ನಾಟಕೀಯತೆ, ಶ್ರೇಷ್ಠತೆಯ ವ್ಯಸನ, ಹಪಹಪಿಕೆ, ಡುಯಲ್ ಪೊಯಿಟಿಕ್ ಕಾನ್ಫಿರೆಸಿ ಮುಂತಾದ ಋಣಾತ್ಮಕ ಗುಣಗಳು ಇವರ ಕವಿತೆಗಳ ಆಜುಬಾಜಿಗೂ ಇಣುಕಿಲ್ಲ. ಮಹದೇವಿಯವರು ತಮ್ಮ ಕವಿತೆಗಳಲ್ಲಿ ಬದುಕನ್ನು ಕಲಾತ್ಮಕವಾಗಿ ಬೆತ್ತಲೆಗೊಳಿಸುತ್ತಾರೆ. ಬೆತ್ತಲಾಗದೆ ಬಯಲು ದಕ್ಕುವುದೆಂತಯ್ಯ ? ಮಹದೇವಿಯವರ ಲೇಖನಿಯಿಂದ ಮತ್ತಷ್ಟು ಗಟ್ಟಿಯಾದ ಕವಿತೆಗಳು ಅರಳಲಿ. ಅಭಿಲಿಪ್ಸ ಪಂಡಳ ಸಂಗೀತ ತರಂಗಗಳು ಮಹದೇವಿಯವರ ಕವಿತೆಗಳು ಒಂದರೊಳಗೊಂದು ಅನುಸಂಧಾನವಾಗಿ…


  • ಕೇಶವ ಹಂದ್ರಾಳ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading