‘ಸಂತಾನ ಭಿಕ್ಷೆ’ ಪುಸ್ತಕ ಪರಿಚಯ

ಭಾರತೀಸುತ ಇದು ಶಾನಭಾಗ ರಾಮಯ್ಯ ನಾರಾಯಣರಾವ್ (ಮೇ ೧೫, ೧೯೧೫ – ಏಪ್ರಿಲ್ ೪ ೧೯೭೬) ಇವರ ಕಾವ್ಯನಾಮ. ಭಾರತೀಸುತರು ಕನ್ನಡದ ಪ್ರಸಿದ್ಧ ಕಾದಂಬರಿಕಾರರೆನಿಸಿದ್ದಾರೆ. ಅವರ ‘ಸಂತಾನ ಭಿಕ್ಷೆ ‘ ಪುಸ್ತಕದ ಕುರಿತು ವೀಣಾ ನಾಯಕ್ ಅವರು ಪುಸ್ತಕ ಪರಿಚಯ ಮಾಡಿದ್ದಾರೆ ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು: ಸಂತಾನ ಭಿಕ್ಷೆ
ಲೇಖಕರು. : ಭಾರತೀಸುತ
ಪ್ರಕಾಶಕರು: ಸೌಮ್ಯ ಎಂ. ಬೆಂಗಳೂರು.

ಮಕ್ಕಳಿಗಾಗಿ ಹಂಬಲಿಸುವ ಆರೋಗ್ಯವಂತ, ವಿವಾಹಿತ ಹೆಣ್ಣಿನ ಮಾನಸಿಕ ಕ್ಲೇಶವನ್ನು ಪ್ರತಿಬಿಂಬಿಸುವ ಕಥೆ ಈ ಕಾದಂಬರಿಯಲ್ಲಿದೆ. ಹೆಣ್ಣಿನ ಹೃದಯದ ಸೂಕ್ಷ್ಮವಾದ ಈ ತುಡಿತವನ್ನು ಭಾರತೀಸುತರು ಬಹಳ ನಾಜೂಕಾಗಿ ಈ ಕಥೆಗೆ ಬಳಸಿಕೊಂಡಿದ್ದಾರೆ.

ನೀರಜ, ಎರಡನೆಯ ಹೆಂಡತಿಯಾಗಿ ಗಣಪತಿರಾಯರನ್ನು ಮದುವೆಯಾಗಿ ಆರು ವರ್ಷಗಳು ಸಂದಿವೆ. ಮೊದಲ ಪತ್ನಿ ಒಂದು ಮಗುವನ್ನು ಹೆತ್ತು, ಆರು ತಿಂಗಳ ಕಾಲ ಯಾವುದೋ ರೋಗದಿಂದ ಬಳಲಿ, ಸರಿಯಾದ ಚಿಕಿತ್ಸೆ ದೊರಕದೆ ಅಸುನೀಗಿರುತ್ತಾಳೆ. ಹುಟ್ಟಿದ ಆ ಮಗುವೂ ಮೂರು ದಿನಗಳ ಆಯುಷ್ಯ ಮುಗಿಸಿ ಕಣ್ಣು ಮುಚ್ಚಿತ್ತು. ಬಹಳ ವರ್ಷಗಳವರೆಗೆ ಮರುಮದುವೆ ಯಾಗಲು ಒಪ್ಪದ ಗಣಪತಿರಾಯರು, ಗೆಳೆಯನ ಮಗಳ ಮದುವೆಗೆ ಹೋದಾಗ ಅಲ್ಲಿ ಓಡಾಡಿಕೊಂಡಿದ್ದ ನೀರಜಳನ್ನು ನೋಡಿ ಮೋಹಗೊಂಡಿದ್ದರು.

ಗೆಳೆಯನ ಮಧ್ಯಸ್ಥಿಕೆಯಿಂದ ಬಡ ಪುರೋಹಿತರಾದ ರಂಗಣ್ಣನವರನ್ನು ಭೇಟಿಮಾಡಿ, ಅವರ ಮಗಳು ನೀರಜಳನ್ನು ಮದುವೆಯಾಗುವ ಪ್ರಸ್ತಾಪ ಇಡುತ್ತಾರೆ. ಕಡು ಬಡವರೂ, ನಾಲ್ಕು ಹೆಣ್ಣು ಮಕ್ಕಳ ತಂದೆಯೂ ಆದ ರಂಗಣ್ಣ ಅಸಹಾಯಕರಾಗಿ ಸ್ವಲ್ಪ ಹೆಚ್ಚು ಅನಿಸುವಷ್ಟು ವಯಸ್ಸಾದ ವಿಧುರ ಗಣಪತಿರಾಯರಿಗೆ ನೀರಜಳನ್ನು ಕೊಟ್ಟು ಮದುವೆ ಮಾಡಿ ಮೈಸೂರಿಗೆ ಕಳಿಸುತ್ತಾರೆ. ಗಂಡನ ಮನೆಗೆ ಮಗಳನ್ನು ಕಳುಹಿಸುವಾಗ, ದೈವಭಕ್ತರಾದ ರಂಗಣ್ಣನವರು ನೀರಜಳಿಗೆ ಸದಾ ದೇವಿಯ ಪೂಜೆ ಆರಾಧನೆ ಮಾಡುತ್ತ ಇರಲು ಹೇಳುತ್ತಾರೆ. ಅವಳ ಜಾತಕದಲ್ಲಿ ಕಂಡುಬಂದ ಒಂದು ಸಣ್ಣ ದೋಷ ಅವರನ್ನು ಆತಂಕಪಡಿಸಿದ್ದರಿಂದ ಪರಿಹಾರಾರ್ಥವಾಗಿ ಈ ಸೂಚನೆ ನೀಡಿರುತ್ತಾರೆ.

ಪ್ರೀತಿಸುವ ಗಂಡ ಮತ್ತು ಅತ್ತೆಯೊಂದಿಗೆ ಹೊಂದಿ ಕೊಂಡು ಸುಖವಾಗಿದ್ದ ನೀರಜಳಿಗೆ ಮಕ್ಕಳಾಗಲಿಲ್ಲ ವೆಂಬ ಕೊರಗು ಶುರುವಾಗುತ್ತದೆ. ಈ ಬಗ್ಗೆ ಗಂಡ ನಿರ್ಲಿಪ್ತನಾಗಿರುವುದನ್ನು ಕಂಡು, ಗೆಳತಿಯೊಂದಿಗೆ ಡಾಕ್ಟರ್ ಬಳಿ ಹೋಗಿ ಪರೀಕ್ಷಿಸಿಕೊಳ್ಳುತ್ತಾಳೆ. ತನ್ನಲ್ಲಿ ಯಾವ ದೋಷವೂ ಇಲ್ಲವೆಂದು ತಿಳಿದು ಸಮಾಧಾನ ಪಡುತ್ತಾಳೆ. ಡಾಕ್ಟರ್ ಸಲಹೆಯಂತೆ ಗಂಡನನ್ನೂ ಪರೀಕ್ಷೆಗಾಗಿ ಕಳಿಸಲು ಪ್ರಯತ್ನ ಮಾಡುತ್ತಾಳೆ.

“ಡಾಕ್ಟರ್ ಬಳಿ ಹೋಗಿ ಬಂದೆ, ಯಾವ ದೋಷವೂ ನನ್ನಲ್ಲಿ ಇಲ್ಲ” ಎಂದು ಹೇಳಿದ ಗಂಡನನ್ನು ನಂಬಿ ನೀರಜ ದೇವರ ಪೂಜೆ, ವ್ರತ ನಿಯಮಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾಳೆ. ಆರು ವರ್ಷಗಳ ಕಾಲ ಎಲ್ಲರಿಂದ ‘ಬಂಜೆ’ ಆನಿಸಿಕೊಂಡು ಕುಗ್ಗಿ ಹೋಗುತ್ತಾಳೆ. ನೆರೆಹೊರೆ ಯವರು ಹಾಗೂ ತವರಿನವರು ನೀರಜಳಿಗೆ ಅವರ ಮಕ್ಕಳನ್ನು ಮುಟ್ಟಲೂ ಬಿಡದ ರೀತಿ ಮತ್ತು ಆಡುವ ಚುಚ್ಚು ಮಾತುಗಳನ್ನು ಸಹಿಸಲಾಗದೆ ರೋಷಗೊಳ್ಳು ತ್ತಾಳೆ.

ನೀರಜ ತನ್ನ ಅತ್ತೆಗೆ ಕುಮಾರವ್ಯಾಸನ ಭಾರತವನ್ನು ಪ್ರತಿದಿನ ಓದಿ ಹೇಳುತ್ತಾಳೆ. ವಿಚಿತ್ರವೀರ್ಯನ ವಿಧವೆ ಪತ್ನಿಯರಾದ ಅಂಬಿಕಾ ಮತ್ತು ಅಂಬಾಲಿಕಾಗೆ ಮಕ್ಕಳಾಗುವಂತೆ ನಿಯೋಗ ಪದ್ಧತಿಯನ್ನು ಬಳಸಿದ ಪ್ರಸಂಗ ಬಂದಾಗ ತನಗೂ ಹಾಗಾದರೂ ಒಂದು ಮಗುವಾಗಬಾರದೇ ಎಂಬ ಯೋಚನೆ ಮಿಂಚಿ ಮಾಯವಾಗುತ್ತದೆ. ಕೂಡಲೆ ಪಾಪ ಭೀತಿಯಿಂದ ದೇವರ ಕೋಣೆಗೆ ಹೋಗಿ ಅಳುತ್ತಾ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾಳೆ.

ಕೊರಗುವ ಪತ್ನಿಯ ಮನಸ್ಸನ್ನು ಸಮಾಧಾನ ಪಡಿಸಲು ಗಣಪತಿರಾಯರು ಭಾಗಮಂಡಲಕ್ಕೆ ಅವಳನ್ನೂ, ತನ್ನ ತಾಯಿಯನ್ನೂ ಕರೆದುಕೊಂಡು ಹೋಗುತ್ತಾರೆ. ಅವರು ಹಿಂದಿರುಗಿ ಮೈಸೂರಿಗೆ ಹೋಗುವಾಗ ರಾತ್ರಿ ಹೊತ್ತಿ ನಲ್ಲಿ, ದಾರಿಯಲ್ಲಿ ಕಾರಿನ ಸಮಸ್ಯೆ ಎದುರಾಗುತ್ತದೆ. ಹತ್ತಿರವಿದ್ದ ಎಸ್ಟೇಟಿನ ಒಡೆಯ, ರಾಧಾಕೃಷ್ಣ ತನ್ನ ಮನೆಯಲ್ಲಿ ಅವರಿಗೆ ಆಶ್ರಯ ಕೊಡುತ್ತಾನೆ. ಈ ಪರಿಚಯದಿಂದ ಮುಂದೆ ಈ ಎರಡು ಕುಟುಂಬಗಳಲ್ಲಿ ಸ್ನೇಹ ಉಂಟಾಗಿ ಅವನು ಮೈಸೂರಿಗೆ ಹೋದಾಗಲೆಲ್ಲ ಗಣಪತಿರಾಯರ ಮನೆಗೆ ಭೇಟಿ ನೀಡುವ ಪರಿಪಾಠ ಇಟ್ಟುಕೊಳ್ಳುತ್ತಾನೆ.

ಇಪ್ಪತ್ತೈದು ವರ್ಷ ವಯಸ್ಸಿನ ಸುಂದರ ಅವಿವಾಹಿತ ತರುಣ ರಾಧಾಕೃಷ್ಣ, ಸುಂದರಿ ನೀರಜಳಿಂದ ಆಕರ್ಷಿತ ನಾದರೂ ಅವಳು ‘ವಿವಾಹಿತೆ’ ಎಂಬ ಶಾಶ್ವತ ಸತ್ಯ, ಗೋಡೆಯಂತೆ ಅವನನ್ನು ತಡೆದು ಸಭ್ಯತೆಯ ಪರಿಧಿ ಮೀರಿ ಹೋಗದಂತೆ ಮಾಡುತ್ತದೆ. ಹಲವು ಬಾರಿ ನಿರ್ಭಾವುಕಳಾಗಿ ಅತಿಥಿ ಸತ್ಕಾರ ಮಾಡಿದ ನೀರಜಳ ಮನಸ್ಸು ಕ್ರಮೇಣ ಬದಲಾಗಿ ಒಂದು ಮಗುವನ್ನು ಪಡೆಯಲು ರಾಧಾಕೃಷ್ಣ ಯೋಗ್ಯನಾದ ವ್ಯಕ್ತಿ ಎಂಬ ನಿರ್ಣಯ ತೆಗೆದುಕೊಳ್ಳುವಂತಾಗುತ್ತದೆ.

ನೀರಜಳಿಗೆ ಸತೀತ್ವಕ್ಕಿಂತ ಮಾತೃತ್ವ ಹಿರಿದಾಗಿ ತೋರುತ್ತದೆ. ಮೇಲಾಗಿ ಪತಿ ಗಣಪತಿರಾಯರು ಯೌವನದಲ್ಲಿ ವಿಪರೀತ ವಿಲಾಸಪ್ರಿಯರಾಗಿದ್ದ ಕಾರಣ ಗುಪ್ತ ರೋಗಕ್ಕೆ ಬಲಿಯಾಗಿದ್ದರೆಂಬ ರಹಸ್ಯ ಅವಳಿಗೆ ತಾಯಿಯಿಂದ ತಿಳಿಯುತ್ತದೆ. ಈ ಕಾರಣದಿಂದ ಅವರು ಮಕ್ಕಳನ್ನು ಪಡೆಯುವ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಮತ್ತು ಡಾಕ್ಟರ್ ಸಲಹೆಯಂತೆ ಅವರನ್ನು ಭೇಟಿಯಾಗಲೂ ಹೋಗಿಲ್ಲ ಎಂಬ ಸತ್ಯವೂ ತಿಳಿದು ಬಂದಾಗ ನೀರಜ ಪೂರ್ಣ ನಿರಾಶೆಗೊಳ್ಳುತ್ತಾಳೆ.

ನಿರೀಕ್ಷೆಯ ದ್ವಾರಗಳೆಲ್ಲ ಮುಚ್ಚಿದಂತೆ ಅನುಭವ ವಾದಾಗ, ಸತ್ಯ ಹೇಳದೆ ಗಂಡ ಮಾಡಿದ ಮೋಸದಿಂದ ರೋಸಿಹೋದ ನೀರಜಳ ಮನಸ್ಸು ಪದೇ ಪದೇ ಅಂಬಿಕಾ ಮತ್ತು ಅಂಬಾಲಿಕೆಯರನ್ನು ಜ್ಞಾಪಿಸುತ್ತದೆ. ಒಂದು ಮಗುವನ್ನು ಹೊಂದುವ ಬಯಕೆ ನೀರಜಳಲ್ಲಿ ತೀವ್ರವಾಗಿ ಜ್ವಲಿಸುತ್ತದೆ. ರಾಧಾಕೃಷ್ಣ ಮನೆಗೆ ಬಂದಾಗಲೆಲ್ಲ ಈ ಬಯಕೆ ಮಿತಿ ಮೀರುತ್ತದೆ. ತಾನು ಬಯಸುವ ಮಾರ್ಗ ಧರ್ಮಸೂಕ್ತವಲ್ಲವೆಂಬ ವಿವೇಕ ಅವಳಲ್ಲಿ ಇರುವುದರಿಂದ ಬಯಕೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾಳೆ. ಇದರಿಂದ ಮಾನಸಿಕ ತುಮುಲ ಹೆಚ್ಚುತ್ತಾ ಹೋಗುತ್ತದೆ.

ಒಂದು ಸಂತಾನವನ್ನು ಪಡೆಯಲಿಕ್ಕಾಗಿ ಮಾತ್ರ ರಾಧಾಕೃಷ್ಣನ ಸಹಯೋಗ ಬಯಸಿದ ನೀರಜ ತನ್ನ ಆಕಾಂಕ್ಷೆಯನ್ನು ಪೂರೈಸಿಕೊಳ್ಳುವಳೇ? ಮಗುವಿನ ಹಂಬಲಕ್ಕಿಂತ ‘ಬಂಜೆ’ ಎಂಬ ಅಪವಾದದಿಂದ ಪಾರಾಗುವ ವಾಂಛೆ ಅವಳಲ್ಲಿತ್ತೇ? ಓದಿ ನೋಡಿ.

ಈಗ ಮಾರುಕಟ್ಟೆಯಲ್ಲಿ ಈ ಪುಸ್ತಕ ಲಭ್ಯವಿರುವ ಕಾರಣ ಕಥೆ ಇಲ್ಲೇ ನಿಲ್ಲಿಸುತ್ತೇನೆ.


  • ವೀಣಾ ನಾಯಕ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW