ಹಳೆಯ ಭರೂಚ್ ಮೊದಲು ಬಂದರು ಪ್ರದೇಶವಾಗಿತ್ತಂತೆ, ಇಲ್ಲಿನ ಹಳೆಯ ಮನೆಗಳನ್ನು ಸಹ ವಿಶೇಷವಾಗಿ ಸಾಗುವಾನಿ ಮರದ ಕಟ್ಟಿಗೆಯಿಂದ ಕಟ್ಟಲಾಗಿದೆ, ಗಚ್ಚಿನ ಮನೆಗಳು. ರಾಜರು ಕಟ್ಪಿಕೊಂಡ ವಿಶ್ರಾಂತಿ ಧಾಮಗಳು ಇದ್ದಂತಿವೆ. ಇದರಿಂದಲೇ ತಿಳಿಯುತ್ತೆ, ಇಲ್ಲಿ ಬದುಕಿದ್ದವರೆಲ್ಲ ಆಗರ್ಭ ಶ್ರೀಮಂತರಾಗಿದ್ದರು. ಆದರೆ ಈಗ ನಾಯಿ, ಹಂದಿ ಮತ್ತು ಭಿಕ್ಷುಕರ ವಾಸಸ್ಥಾನಗಳಿವು ಅಷ್ಟೇ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…
ನಿದ್ದೆಯಿಂದ ಎಚ್ಚರವಾದಾಗ ಸಮಯ ಬೆಳಿಗಿನ ಜಾವ 3 ಗಂಟೆ. ಇಂದು ಮೋಟಾರು ದೋಣಿಯಲ್ಲಿ ನರ್ಮದಾ ಮಾತೆ ಬಂದು ಸೇರುವ ಖಂಭಾತ್ ಕೊಲ್ಲಿಯ (ಅರಬ್ಬಿ ಸಮುದ್ರ) ಪಾರು ಮಾಡಬೇಕಿತ್ತು.
ಆ ಪ್ರಯಾಣವನ್ನು ಕಾತುರದಿಂದ ಕಾಯುತ್ತಿದ್ದ ನಾನು ನಿದ್ದೆಯಿಂದ ಮೊಬೈಲ್ ಅಲಾರಂ ಅರಚುವ ಮೊದಲೇ ಎದ್ದಿದ್ದೆ. ನಿನ್ನೇ ಸಾಯಂಕಾಲವೇ “ವಿಮಲೇಶ್ವರ” ಕ್ಕೆ ಬಂದಿಳಿದು ಮೋಟಾರು ದೋಣಿಯ ಟಿಕೇಟ್ ಕೊಂಡೆ, ಶ್ರದ್ಧಾಳುಗಳ ದಂಡಿನಲ್ಲಿ ಬೆಳಿಗ್ಗೆ 5 ಕ್ಕೆ ಬಂಗಾಳ ಕೊಲ್ಲಿಗೆ ತಲುಪಬೇಕಿತ್ತು.

ಎದ್ದವನೇ ಸ್ನಾನ, ಪೂಜೆ ಮುಗಿಸಿ, ನರ್ಮದಾ ಪರಿಕ್ರಮ ಶ್ರದ್ದಾಳು ತಂಡದೊಂದಿಗೆ ವಿಮಲೇಶ್ವರದಿಂದ 3 ಕಿ.ಮೀ ಕಾಲುದಾರಿಯಲ್ಲಿ ಸಮುದ್ರದೆಡೆಗೆ ನಡದೆ. ಮುಸುಕು ಬೆಳಕಿನಲ್ಲಿ “ನರ್ಮದೇ ಹರ್ ” ಘೋಷಣೆಯೊಂದಿಗೆ ಖಂಭಾತ್ ಕೊಲ್ಲಿಯನ್ಶು ತಲುಪಿದ್ದಾಯಿತು.
ನರ್ಮದಾ ನದಿಯ ಪ್ರದಕ್ಷಿಣೆ ಎಂದರೆ.. ಎಲ್ಲಿಯೂ ನದಿಯನ್ನು ನಾವು ದಾಟುವುದಿಲ್ಲ, ಅದರ ಸುತ್ತ ನಡೆಯಬೇಕು ಅಷ್ಟೇ. ನರ್ಮದಾ ನದಿ ಖಂಭಾತ್ ಕೊಲ್ಲಿಯ ಮೂಲಕ ಅರಬ್ಬಿ ಸಮುದ್ರ ಲೀನವಾಗುವುದುರಿಂದ, ಸಂಗಮ ಸ್ಥಳವಾದ ಸಮುದ್ರವನ್ನು ದಾಟಿ, ನದಿಯ ದಕ್ಷಿಣ ದಂಡೆಯಿಂದ, ಉತ್ತರ ದಂಡೆಗೆ ಹೋಗಿ, ಮತ್ತೆ ಪ್ರದಕ್ಷಿಣೆ ಮುಂದುವರಿಸಬೇಕು.

5:30 ಕ್ಕೆ ಮೋಟಾರು ದೋಣಿ ಕಾಯುತ್ತಿತ್ತು, ಸ್ಥಳಾವಕಾಶ ನೋಡಿಕೊಂಡು, ಒಬ್ಬೊಬ್ಬರನ್ನೇ ನಾವಿಕ ಹತ್ತಿಸುತ್ತಿದ್ದ. ನಾನು ದೋಣಿ ಹತ್ತಿ ಒಂದು ಬದಿಗೆ ಕೂತೆ. 70 ಜನ ತುಂಬಿದ ತಕ್ಷಣ ಬೋಟು ಹೊರಟು ನಿಂತಿತು.. ಜನಜಂಗುಳಿಯ “ನರ್ಮದೇ ಹರ್!!”, ಭೋಲೆನಾಥ ಜೈ.. ಘೋಷಣೆಯೊಂದಿಗೆ ಬೋಟು ಮುಂದೋಡತೊಡಗಿತು. ನೋಡ ನೋಡುತ್ತಲೇ ಬೋಟು ಸಮುದ್ರ ಮಧ್ಯಕ್ಕೆ ಓಡತೊಡಗಿದಾಗ ತಣ್ಣನೆಯ ಸುಳಿಗಾಳಿ ಮೈಗೆ ಬಡಿದು ಸಣ್ಣಗೆ ನಡುಕ. ಸಮುದ್ರದ ಅಲೆಗಳನ್ನು ಸೀಳಿ, ಬೋಟು ಮುನ್ನುಗ್ಗುವಾಗ.. ಬೋಟು ಓಲಾಡತೊಡಗಿತು.
ಜನಸಾಗರದಲ್ಲಿ ಭಜನೆ, ನರ್ಮದೆ ಹರ್ ಘೋಷಣೆ, ಹರೇ ರಾಮ್.. ಹರೇ ಕೃಷ್ಣ.. ಧ್ಯಾನ. ಮಾರ್ಧನಿಸತೊಡಗಿತು!!
ಎಲ್ಲರೂ ಶ್ರದ್ದೆಯಿಂದ ಸಮುದ್ರ ರಾಜನಿಗೆ ಕೈ ಮುಗಿಯುತ್ತಿದ್ದರು, ನರ್ಮದಾ ನದಿಯ ಸಂಗಮ ಸ್ಥಾನದಲ್ಲಂತೂ.. ಘೋಷಣೆ, ಭಜನೆಗಳು ಮುಗಿಲು ಮುಟ್ಟುವಂತಿತ್ತು. ಅದು ಭಕ್ತಿಯ ಉನ್ಮಾದ. “ಸಮುದ್ರ ದಾಟಿಸಿಬಿಡು ತಾಯಿ” ನಿನ್ನ ಕೃಪೆಯಿರಲಿ” ಎಂಬ ಪರಿಪರಿಯ ಬೇಡಿಕೆ.

ಸಮುದ್ರದಲ್ಲಿ ಸಕ್ಕರೆ, ಭತ್ತ, ಅಕ್ಕಿ, ಬೇಳೆ ಕಾಳುಗಳನ್ನು ಹನಿಕಿಸುತ್ತಿದ್ದರು. ಇದರಿಂದ ಹಲವು ಬೇಡಿಕೆಗಳು ಇಡೇರುವವಂತೆ. ಸಂಗಮ ಸ್ಥಳದಲ್ಲಿ “ತೆಂಗಿನ ಕಾಯಿ”ಯನ್ನು ಸಮುದ್ರ ದೇವರಿಗೆ ಅರ್ಪಿಸಲಾಯಿತು. ಸಣ್ಣಗೆ ಕತ್ತಲು ಸರಿದು, ಬೆಳಕು ಮೂಡತೊಡಗಿತು. ಚಳಿಗಾಳಿಯು ತೀವ್ರವಾಗಿದ್ದು, ನದಿಯ ವಿಶಾಲತೆ, ಅಲೆಗಳ ಆರ್ಭಟ ಎದೆ ನಡುಗಿಸುತ್ತದ್ದವು. ಇಲ್ಲಿರುವ ಯಾರೂ “Life saving jacket” ಧರಿಸಿರಲಿಲ್ಲ, ನರ್ಮದಾ ಮಾತೆಯ ಶ್ರದ್ಧೆಯೊಂದಿಗೆ ಸಮುದ್ರದ ಮಧ್ಯಕ್ಕೆ ನುಗ್ಗಿ ಹೋದೆವು.
ಸುಮಾರು 50 ಕಿ. ಮೀ ಉದ್ದದ ನದಿ ಸಂಗಮದ ಖಂಭಾತ್ ಕೊಲ್ಲಿಯನ್ನು ದಾಟಲು ಮೂರುವರೆ ತಾಸು ಸಮಯ ಹಿಡಿಯಿತು. ಬೆಳಕು ಹರಿಯುತ್ತಿದ್ದಂತೆ, ಬೋಟಿನಲ್ಲಿದ್ದ ಕೆಲವರು…. ಫೋಟೋ, ವಿಡಿಯೋ ತೆಗೆಯುವುದರಲ್ಲಿ ಮಗ್ನರಾದರೂ ಸಹ, ಭಜನೆ, ದೇವಿಯ ಸ್ತುತಿ ಮಾತ್ರ ಜಾರಿಯಲ್ಲಿತ್ತು.

ಕಿರ್..ಕಿರ್.. ಎನ್ನುತ್ತಾ ಬೆನ್ನಟ್ಟಿ ಬರುತ್ತಿದ್ದ, ಸೀಗಲ್ ಪಕ್ಷಿಗಳಿಗೂ.. ಜನ ಕೈ ಮುಗಿದು ಧಾನ್ಯಗಳನ್ನು ಎಸೆಯುತ್ತಿದ್ದರು.
ಒಟ್ಟಾರೆ ಇದೊಂದು ರೋಚಕ ಪ್ರಯಾಣ. ನರ್ಮದಾ ನದಿ ಸೇರುವ ಸಂಗಮ ಸ್ಥಾನ, ಅರಬ್ಬಿ ಸಮುದ್ರವನ್ನು (ಖಂಭಾತ್ ಕೊಲ್ಲಿ) ಬೋಟಿನಲ್ಲಿ ದಾಟುವ ಸಾಹಸ. ಈಗಾಗಲೇ “ನಂದಿ”ಗೆ ವಿಶೇಷ ಟಿಕೇಟ್ ತೆಗೆಸಿ, ಸಮುದ್ರ ದಾಟುವ ವ್ಯವಸ್ಥೆ ಮಾಡಿಯಾಗಿತ್ತು. ನನಗಿಂತ ಮೊದಲೇ ಆತ ತಲುಪುವ ಏರ್ಪಾಡಾಗಿತ್ತು. ನಾವಿಕನಿಗೆ ದಾನ ಎಂದು, ಬಟ್ಟೆ, ದುಡ್ಡು ಕೊಟ್ಟು, ನದಿಯ ಉತ್ತರ ದಂಡೆಗೆ, “ಭರೂಚನಿಂದ” 50 ಕಿ. ಮೀ ದೂರದ “ಮೀಠಿ ತಲಾಯಿ” ಎನ್ನುವ ಸ್ಥಳಕ್ಕೆ ಬಂದಿಳೆದೇವು.
ಇಲ್ಲಿ ಉಪಹಾರ, ಚಹಾ ವ್ಯವಸ್ಥೆ ಮಾಡಲಾಗಿತ್ತು. ಅವಲಕ್ಕಿ ತಿಂದು ಚಹಾ ಕುಡಿದು, ನಂದಿಯನ್ನು ಜೊತೆಗೆ ಕರೆದುಕೊಂಡು, ಭರೂಚನತ್ತ ಪ್ರಯಾಣ ಬೆಳೆಸಿದೆ. ಬೆಳಿಗ್ಗೆ ಬೇಗ ಎದ್ದುದರಿಂದ ನಿದ್ದೆ ಅಪೂರ್ಣವಾಗಿತ್ತು, ಬಟ್ಟೆ ತೊಳೆಯುವುದು ಬಾಕಿಯಿತ್ತು.. ಅದಕ್ಕಾಗಿಯೇ “ಮಿಠಿ ತಲಾಯಿ”ಯಿಂದ 15 ಕಿ. ಮೀ ದೂರಕ್ಕೆ ಕ್ರಮಿಸಿ, “ಸುವಾ” ಎಂಬ ಹಳ್ಳಿಯ “ಶ್ರೀ ಶಿಂಗನಾಥ ಮಹಾದೇವ ಆಶ್ರಮ”ತಲುಪಿದೆ.
ಮಧ್ಯಾಹ್ನದ ಭೋಜನ ಮುಗಿಸಿ, ಬಟ್ಟೆ ತೊಳೆದು ಹಾಕಿದೆ, ನಂದಿಯ ಸ್ನಾನವೂ ಆಯಿತು. ಬಿಸಿಲಿನ ತಾಪಕ್ಕೆ ನೆರಳಲ್ಲಿ ಹಾಗೇ ಮಲಗಿದವನಿಗೆ ನಿದ್ರೆ ಹತ್ತಿತು. ಎಚ್ಚರವಾದಾಗ ಸಾಯಂಕಾಲ.

ರಾತ್ರಿಯ ಊಟ ಮುಗಿಸಿ.. ಮಹಾದೇವ ಮಂದಿರದ ಆವರಣದಲ್ಲಿ ಮಲಗಿರುವೆ. ದೇವಸ್ಥಾನ, ಆಶ್ರಮಗಳಲ್ಲಿ ಸೇವಿಸುವ ಆಹಾರಕ್ಕೆ ವಿಶೇಷ ರುಚಿ ಇರುತ್ತೆ ಕಾರಣ ಅದು ದಾನ ಅಥವಾ ಸೇವೆ.
ಭಾರಿ ಇಬ್ಬನಿ ತುಂಬಿದ್ದ ವಾತಾವರಣ. ಸಮಯ ಬೆಳಿಗ್ಗೆ 7 ಆದರೂ ಕರಗದ ಇಬ್ಬನಿ, ಚಳಿಗೆ ಮೈ ಕಂಪಿಸುತಿತ್ತು. ನಲ್ಲಿಯಿರುವ 5 ಲೀಟರ್ ಥರ್ಮಸ್ ತುಂಬಾ ಹಬೆಯಾಡುವ ಚಹಾ ತುಂಬಿಟ್ಟಿದ್ದರು. ಗ್ಲಾಸ್ ತುಂಬಿಕೊಂಡು ಮೆಲ್ಲಗೆ ಚಹಾ ಹೀರಿದಾಗಲೆ ಚಳಿ ಕಡಿಮೆಯಾದಂತಾಯಿತು.
7:30 ಆದರೂ ಸೂರ್ಯ ಪತ್ತೆ ಇಲ್ಲ. ಆದರೂ ಇಬ್ಬನಿ ಪ್ರಮಾಣ ಕಡಿಮೆಯಾಗಿತ್ತು, ಸರಿ ನಂದಿಯ ಜೊತೆ “ಭರೂಚ್”ನತ್ತ ಹೊರಟೆ. ಹೈವೇ ಮೂಲಕ ಹೊರಟವನಿಗೆ, ಕಾರು, ಬಸ್ಸಿನಲ್ಲಿ ಹೋಗುತ್ತಿದ್ದವರು “ನರ್ಮದೇ ಹರ್!!” ಎಂಬ ಘೋಷಣೆಯೊಂದಿಗೆ ಹರಿಸುತ್ತಿದ್ದರು. ಸುಮಾರು 25 ಕಿ ಮೀ ದೂರಕ್ಕೆ ರಸ್ತೆಯ ಮೂಲಕ ಹೋದವನಿಗೆ, ನರ್ಮದಾ ಮಾತೆಯ ದಡಕ್ಕೆ ಹೋಗುವ ಹಪಾಹಪಿ ಶುರುವಾಯಿತು. ಸಮಯ 11:30 ಆಗಿತ್ತು, ಬಿಸಿಲು ಮೈ ಸುಡುವ ತನ್ನ ನಿತ್ಯ ಕಾಯಕ ಯಥಾವತ್ತಾಗಿ ಪಾಲಿಸುತ್ತಿತ್ತು. ಮುಖ್ಯ ರಸ್ತೆಯಿಂದ 3 ಕಿ. ಮೀ ಒಳಗೆ ನಂದಿಯನ್ನು ತಿರುಗಿಸಿಕೊಂಡು ಹೋದಾಗ ತಾಯಿ ನರ್ಮದೆಯ ದರ್ಶನವಾಯಿತು.
ವಿಶಾಲವಾದ ನದಿ ಹರವು, ನದಿ ನಿಂತಂತೆ ಕಂಡರೂ ಸದಾ ಲವಲವಿಕೆಯಿಂದ ಹರಿಯುವ ನರ್ಮದೆ. ಅವಳ ಲವಲವಿಕೆ ಮತ್ತು ರೌದ್ರ ನರ್ತನಕ್ಕೆ ಕಡಿವಾಣ ಹಾಕಲು ಹಲವು ಡ್ಯಾಂಗಳು ನಿರ್ಮಾಣವಾಗಿವೆ. ಆದರೂ ಸದಾ ಹಸನ್ಮುಖಿ, ನಿತ್ಯನೂತನ.
ನದಿಯ ತಟಕ್ಕೆ ಅರ್ಧ ತಾಸು ಕೂತು, ನಮಸ್ಕರಿಸಿ.. ನದಿ ದಂಡೆಯ ಕಾಲುದಾರಿಯಲ್ಲಿ ನಂದಿಯನ್ನು ಓಡಿಸತೊಡಗಿದೆ. ಅಂಕುಡೊಂಕಾದ ಕಚ್ಚಾ ರೋಡು, ಉರಿ ಬಿಸಿಲು ಒಂದೆಡೆಯಾದರೆ, ನದಿಯಿಂದ ತೇಲಿ ಬರುವ ಬಿಸಿಗಾಳಿ. ಆದರೂ ಆ ಪ್ರಯಾಣದಲ್ಲಿ ವರ್ಣಿಸಲಾಗದ ಆನಂದವಿದೆ. ಒಬ್ಬನೇ ನದಿಯ ಜೊತೆ ಮಾತಿಗಿಳಿದೆ. ಆ ಏಕಾಂತ ಸಂವಾದ ಅವರ್ಣನೀಯ. ಬರುವ ಉತ್ತರುವ ಒಮ್ಮೊಮ್ಮೆ ದಂಗಾಗಿಸುತ್ತೆ.

12 ಕಿ.ಮೀಟರ್ ದೂರದವರೆಗೂ ನಂದಿ ನದಿಯ ಪಕ್ಕವೇ ಓಡಿದ.. ಮುಂದೆ ರಸ್ತೆಯಿರಲಿಲ್ಲ.. ಕೆಸರು ತುಂಬಿದ ದಂಡೆ ಇದ್ದುದರಿಂದ… ಊರಿನ ಕಡೆ ಹೋಗುವ ಮುಳ್ಳು ಗಿಡಗಂಟಿ ನಡುವಿನ ಕಾಲುದಾರಿಯಲ್ಲಿ ತುಂಬಾ ಕಷ್ಟಪಟ್ಟು ಟಾರು ರೋಡಿಗೆ ಬಂದವನೆ, ರಸ್ತೆಯ ಮೂಲಕವೇ ಭರೂಚನತ್ತ ಹೊರಟವನಿಗೆ ಹಸಿವು ಹೆಚ್ಚಾಗತೊಡಗಿತು, ಬಿಸಿಲಿನ ತಾಪ ಸಹ ಹೆಚ್ಚು.
ಭರೂಚ ಊರಿನೊಳಗೆ ಬರುತ್ತಿದ್ದಂತೆ ಮೊದಲೇ ಸಿಗುವ ಸ್ವಯಂ ಉದ್ಭವ ಲಿಂಗ “ಕಾಮನಾಥ ಮಹಾದೇವ ಮಂದಿರ ಮತ್ತು ಅನ್ನಕ್ಷೇತ್ರ” ಕ್ಕೆ ಹೋದೆ, ಊಟ ಮತ್ತು ವಿಶ್ರಾಂತಿಯೂ ಆಯಿತು, ಇದು ಹಳೆಯ ಭರೂಚನಲ್ಲಿ ಇದೆ.
ಇಳಿ ಮಧ್ಯಾಹ್ನದ ಸಮಯಕ್ಕೆ ಹಳೆಯ ಭರೂಚ್ ನೋಡುತ್ತಾ, ಸಿಟಿಯ ಕಡೆ ಹೊರಟೆ. ಹಳೆಯ ಭರೂಚ್ ಮೊದಲು ಬಂದರು ಪ್ರದೇಶವಾಗಿತ್ತಂತೆ, ಇಲ್ಲಿನ ಹಳೆಯ ಮನೆಗಳನ್ನು ಸಹ ವಿಶೇಷವಾಗಿ ಸಾಗುವಾನಿ ಮರದ ಕಟ್ಟಿಗೆಯಿಂದ ಕಟ್ಟಲಾಗಿದೆ, ಗಚ್ಚಿನ ಮನೆಗಳು. ರಾಜರು ಕಟ್ಪಿಕೊಂಡ ವಿಶ್ರಾಂತಿ ಧಾಮಗಳು ಇದ್ದಂತಿವೆ. ಇದರಿಂದಲೇ ತಿಳಿಯುತ್ತೆ, ಇಲ್ಲಿ ಬದುಕಿದ್ದವರೆಲ್ಲ ಆಗರ್ಭ ಶ್ರೀಮಂತರಾಗಿದ್ದರು.

ಆದರೆ ಈಗ ಇಲ್ಲಿರುವುದು ಆ ಮನೆಗಳಷ್ಟೇ, ಶ್ರೀಮಂತಿಕೆ ಎಂದಿಗೂ ತೀರಿ ಹೋಗಿದೆ. ಮನೆಗಳು ಪಾಳು ಬಿದ್ದಿವೆ, ಮೂರ್ನಾಲ್ಕು ತಲೆಮಾರು ಕಂಡಂತ ಮನೆಗಳು ಅನಾಥ. ನಾಯಿ, ಹಂದಿ ಮತ್ತು ಭಿಕ್ಷುಕರ ವಾಸಸ್ಥಾನಗಳಿವು ಅಷ್ಟೇ, ಈಗಿನ ಮನೆಯ ವಾರಸುದಾರರು ವಿದೇಶಗಳಿಗೆ ಮತ್ತು ಮಹಾನಗರಗಳಿಗೆ ವಲಸೆ ಹೋಗಿದ್ದಾರೆ. ಕೆಲವರಂತೂ ಮಾರಿ ಕೈ ತೊಳೆದುಕೊಂಡಿದ್ದಾರೆ. ಯಾವುದೂ ಶಾಶ್ವತವಲ್ಲ…
ಭೃಗು ಮಹರ್ಷಿಯ ದೇವಸ್ಥಾನ ಮಾ ನರ್ಮದೆಯ ತಟದಲ್ಲಿಯೆ ಇದೆ. ಅಲ್ಲಿಯೇ ಶನಿ ಮಹಾತ್ಮನ ಮಂದಿರವೂ ಉಂಟು. ಮಂದಿರದಿಂದ ಓಣಿಯಲ್ಲಿ ಹೊರಟು, “ನೀಲಕಂಠ ಮಹಾದೇವ ಆಶ್ರಮ”ದ ಕಡೆ ಹೊರಟವನಿಗೆ. 3 ಮನೆಯವರು ಬಂದು 4 ಕೆ.ಜಿ ಅಕ್ಕಿ ಮತ್ತು ಬೇಳೆ ಕೊಟ್ಟು ನಮಸ್ಕರಿಸಿ ಹೋದರು. ಹೀಗೆ ನರ್ಮದಾ ಪ್ರದಕ್ಷಿಣೆ ಮಾಡುವವರಿಗೆ ಧಾನ್ಯ ದಾನ ಮಾಡುವುದು ಇಲ್ಲಿನ ಪದ್ಧತಿಯಂತೆ.
ಕಾರಿನಲ್ಲಿ ಬಂದಿಳಿದ ದಂಪತಿ ಹಣ್ಣು ಮತ್ತು ಬಿಳಿ ಟವೆಲ್ ಇರುವ ಚೀಲವನ್ನು ಕೈಗಿಟ್ಟು ಹೋದರು. ಅವರು ನಮಗೆ ಏನೇ ಕೊಟ್ಟರು ನರ್ಮದಾ ಮಾತೆಗೆ ಅರ್ಪಿಸಿದಂತೆ ಅವರ ಭಾವನೆ. ಅವರಿಗೆ ವಂದಿಸಿ ಆಶ್ರಮಕ್ಕೆ ಹೊರಟೆ.
“ನೀಲಕಂಠ ಮಹಾದೇವ ಆಶ್ರಮ”ಕ್ಕೆ ಹೋದವನೆ, ನನಗೆ ದಾನವಾಗಿ ಬಂದ ಅಕ್ಕಿ ಮತ್ತು ಬೇಳೆ ಕಾಳನ್ನು ಅಡುಗೆ ಮನೆಗೆ ಕೊಟ್ಟು ವಿಷಯ ತಿಳಿಸಿದೆ. ಅವರು ಅಷ್ಟೇ ಭಕ್ತಿಯಿಂದ ದಾನವಾಗಿ ಸ್ವೀಕರಿಸಿದರು. ಇಲ್ಲಿನ ಆಶ್ರಮಗಳಲ್ಲಿ ನಿತ್ಯ ದಾಸೋಹ ಇರುತ್ತೆ.
ಇವಾಗ ನದಿ ದಂಡೆಗೆ ಅಂಟಿಕೊಂಡಿರುವ ಆಶ್ರಮದಲ್ಲಿ ಮಲಗಿರುವೆ.. ಚಳಿ ಶುರುವಾಗಿದೆ. ನರ್ಮದೆ ಬೆಚ್ಚಗೆ ಹರಿಯುತ್ತಿದ್ದಾಳೆ. ನಾನು ಸ್ಲೀಪಿಂಗ್ ಬ್ಯಾಗಿನಲ್ಲಿ ಹುದುಗಿಕೊಳ್ಳುವ ಹೊತ್ತು.
ನಾಳೆಗೆ ಮುಂದಿನ ಪಯಣ.
ನರ್ಮದೇ ಹರ್
ಹಿಂದಿನ ಸಂಚಿಕೆಗಳು :
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೨)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೩)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೪)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೫)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ –೬)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೭)
- ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೮)
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ
