ಟಿ.ಪಿ. ಉಮೇಶ್ ಅವರು ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪಡೆದ ಸುಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಅಕ್ಷರದ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿದ್ದಾರೆ.
(ಇಂದಿಗೆ ಸರಿಯಾಗಿ ತಿಂಗಳಾಯಿತು ಪ್ರಶಸ್ತಿಯ ಘೋಷಣೆಯಾಗಿ. ನಂತರದ ಮಾಧ್ಯಮಗಳ ಸಂದರ್ಶನ, ವಿವಿಧ ಡಾಕ್ಯುಮೆಂಟರಿಗೆ ನೆರವು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳ ಹಾಗು ಬಂಧು ಮಿತ್ರರ ಭೇಟಿ ಅಭಿನಂದನೆ ಸ್ವೀಕಾರ, ಕಾರ್ಯಕ್ರಮಗಳಿಗೆ ಹಾಜರಿ, ಶಾಲೆಯ ಇನ್ನಿತರ ಕೆಲಸಗಳ ನಿರ್ವಹಣೆಯಲ್ಲಿ ಎಲ್ಲ ಪ್ರೋತ್ಸಾಹಕರಿಗು ಕೃತಜ್ಞತೆಗಳ ಕೊಂಚ ತಡವಾಗಿ ವ್ಯವಧಾನದಿ ಈ ಮೂಲಕ ಸಲ್ಲಿಸುತ್ತಿದ್ದೇನೆ)
ಮಕ್ಕಳೆ ನಗೆ ದೇವರು, ಮಕ್ಕಳೆಮಗೆ ದೇಶ ಮಕ್ಕಳೆ ಮಗೆ, ವಿಶ್ವ ಮಕ್ಕಳೆ ಮಗೆ ಭವಿಷ್ಯ. ಈ ಪ್ರಶಸ್ತಿ ಗೌರವ ನನ್ನ ಅಮೃತಾಪುರ ಶಾಲಾ ಮಕ್ಕಳಿಗೆ ಮತ್ತು ಪೋಷಕ ರಿಗೆ ಅರ್ಪಿಸುವೆ ಹಾಗೆಯೇ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಕೇಶವಾಪುರ ಮತ್ತು ಚಿಕ್ಕಬಳ್ಳಾರಿ ಶಾಲೆ ಮಕ್ಕಳನ್ನು ಮನಸಾ ನೆನೆಯುವೆ.

ಬಹು ವರ್ಷಗಳಿಂದ ನನ್ನ ಸಂಬಂಧಿಕರ ಬಂಧುಗಳ ಸ್ನೇಹಿತರ ಅನೇಕ ಶುಭ ಸಮಾರಂಭಗಳಿಗೆ ಹಾಜರಾಗಲು ಆಗಿಲ್ಲ. ಕೆಲವು ಗೆಳೆಯರು ನಾ ಅವರ ಸಂತೋಷ ಸಮಾರಂಭಗಳಿಗೆ ಹೋಗದ ಕಾರಣ ಮಾತನ್ನೇ ಬಿಟ್ಟಿದ್ದಾರೆ. ಬಂಧುಗಳು ಮುನಿಸಿಕೊಂಡಿದ್ದಾರೆ. ಕುಟುಂಬ ಸ್ನೇಹಿತರ ಸಮಾರಂಭಗಳಿದ್ದಾಗ ನಾನು ಶಾಲೆಯ ಕೆಲಸದಲ್ಲಿ, ಮಕ್ಕಳ ಕಲಿಕೆಯಲ್ಲಿ, ಮೀಟಿಂಗ್ ಜಾಥಾ ಎನ್ನುತ್ತಾ; ಮತ್ತೊಂದು ತರಬೇತಿ ಪಡೆಯುವಲ್ಲೋ ನೀಡುವಲ್ಲೋ ಶೈಕ್ಷಣಿಕ ಸಾಹಿತ್ಯಿಕ ಚಟುವಟಿಕೆಗಳಲ್ಲೋ, ಶಾಲೆಗೆ ಅಗತ್ಯ ಸಂಪನ್ಮೂಲಗಳ ಸಂಗ್ರಹದ ಓಡಾಟದಲ್ಲೋ ವ್ಯಸ್ತನಾಗಿರುತ್ತಿದ್ದೆ.
ಈಗ ನನ್ನ ಪರಿಶ್ರಮವ ಅರ್ಥಮಾಡಿಸಿ ನನ್ನ ಕಾರ್ಯವ ತಿಳಿಸಿ ಸಂಬಂಧಗಳ ತಿಳಿಗೊಳಿಸಿದ ಈ ಪುರಸ್ಕಾರ ಲಭಿಸಿದ ಶುಭ ಘಳಿಗೆಯಲ್ಲಿ ಈ ಪ್ರಶಸ್ತಿ ಗೌರವದಿಂದ ಅವರೇ ಪುನೀತರಾದಂತೆ ಸಂಭ್ರಮಿಸುತ್ತಿದ್ದಾರೆ.

ಅಲ್ಲದೇ ನನ್ನ ಶಾಲೆಯ ಇನ್ನಷ್ಟು ಅಭಿವೃದ್ಧಿಗೆ ಮಕ್ಕಳ ಕಲಿಕೆಯ ಸಹಾಯಕ್ಕೆ ಅನುಕೂಲಿಸಲು ಮುಂದೆ ಬಂದಿದ್ದಾರೆ. ಇದು ಸಾರ್ಥಕತೆಯ ಘಳಿಗೆ. ಅವರೆಲ್ಲರ ಆನಂದದಲ್ಲಿ ನಾ ಖುಷಿ ಪಡುತ್ತಿದ್ದೇನೆ. ಪರಿಶ್ರಮ ತ್ಯಾಗ ನಿಸ್ವಾರ್ಥವಿರದೆ ಯಾವುದೇ ಮಹತ್ತರ ಸಾಮಾಜಿಕ ಶೈಕ್ಷಣಿಕ ಬದಲಾವಣೆ ತರಲು ಸಾಧ್ಯವಿಲ್ಲ. ಶಾಲೆ ಸಮಾಜ ಸರ್ಕಾರ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಈ ಶಾಲೆಗೆ ಸಮಾಜಕ್ಕೆ ಸರ್ಕಾರಕ್ಕೆ ಯಾವ ರೀತಿ ಉತ್ತಮ ಸೇವೆ ಸಲ್ಲಿಸಿದೆ ಎಂದು ಸದಾ ಪ್ರಶ್ನಿಸಿಕೊಳ್ಳುತ್ತ ಎಚ್ಚರಿಕೆಯಿಂದ ನಡೆಯುತ್ತಿದ್ದೇನೆ.
ಸಾಧಿಸಿದ್ದು ಅಲ್ಪ, ಸಾಧಿಸಬೇಕಾಗಿರುವುದು ಅಪಾರವಾದುದು. ನಿಮ್ಮೆಲ್ಲೆರ ಶುಭ ಆಶೀರ್ವಾದ ಹಾರೈಕೆಗಳಿಗೆ ನಾ ಚಿರಋಣಿ.
ಮಕ್ಕಳ ಸುಲಲಿತ ಕಲಿಕೆಯ ನಿರ್ಮಾಣಕ್ಕೆ ಸರ್ಕಾರಿ ಶಾಲೆಗಳ ಬಲಪಡಿಸಲು ಎಲ್ಲರೂ ಕೈ ಜೋಡಿಸಿ ಸುಸಂಸ್ಕೃತ ಸುಸ್ಥಿರ ಸಮಾಜ ಸೃಷ್ಟಿಗೆ ನೆರವಾಗಿ. ನನ್ನೆಲ್ಲ ಮಾರ್ಗದರ್ಶಕರಿಗು ಶಾಲಾಭಿವೃದ್ಧಿ ಹಾಗು ಗ್ರಾಮಾಭಿವೃದ್ಧಿಗೆ ಸಹಕರಿಸುತ್ತಿರುವ ವಿವಿಧ ಸ್ಥಳೀಯ ಸಂಸ್ಥೆಗಳಿಗು ದಾನಿಗಳಿಗು ಪೋಷಕರಿಗು, ನನ್ನ ಸೃಜನಶೀಲ ಓದು ಬರಹ ಹವ್ಯಾಸ ಬೆಂಬಲಿಸುವ ಸಾಹಿತ್ಯ ಸಹೃದಯರಿಗು ಮತ್ತು ನನ್ನ ಕುಟುಂಬದವರಿಗೂ ನನ್ನ ಶ್ರೀಮತಿ ಟಿ.ಬಿ.ಅನಿತಾರವರಿಗು ಹೃದಯ ತುಂಬಿದ ಕೃತಜ್ಞತೆಗಳು.
ಜೈ ವಿದ್ಯಾರ್ಥಿ, ಜೈ ಪೋಷಕ , ಜೈ ಶಿಕ್ಷಕ….
- ಟಿ.ಪಿ. ಉಮೇಶ್