ಹಿಮಾಲಯ ಪರ್ವತಗಳ ರಾಜ ಹಿಮವಂತನ ಸುಪುತ್ರಿಯೇ ‘ಶೈಲಪುತ್ರಿ’ . ಅವಳ ವಾಸಸ್ಥಾನ ಮೂಲಾಧಾರ ಚಕ್ರದಲ್ಲಿದೆ. ಅವಳ ಬಣ್ಣ ಕಡುಗೆಂಪು. ನವರಾತ್ರಿ ನವದುರ್ಗಾ ಮಾತೆಯ ಪೂಜೆಯು ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗುತ್ತಿದ್ದು, ನವರಾತ್ರಿ ಕುರಿತು ಡಾ.ಮಲ್ಲಿಕಾರ್ಜುನ ಎಸ್.ಆಲಮೇಲ ಅವರ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
ವಂದೇ ವಾಂಛಿತಲಾಭಾಯ
ಚಂದ್ರಾರ್ಧ ಕೃತಶೇಖರಾಮ್ ।
ವೃಷಾರೂಢಾಂ ಶೂಲಾಧರಾಂ
ಶೈಲಪುತ್ರೀಂ ಯಶಸ್ವಿನೀಮ್॥
ಜಗಜ್ಜನನೀ ಆದಿಪರಾಶಕ್ತಿ ದುರ್ಗಾದೇವಿಯ ನವದುರ್ಗಾವತಾರದಿ ಮೊದಲನೆಯ ಸ್ವರೂಪವೇ ‘ಶೈಲಪುತ್ರಿ’ಯು ಹಿಮಾಲಯ ಪರ್ವತಗಳ ರಾಜ ಹಿಮವಂತನ ಸುಪುತ್ರಿಯಾಗಿ ಲೋಕ ಕಲ್ಯಾಣಕ್ಕಾಗಿ ಜನಿಸಿದ ಮಾತೆಯು. ಹಿಮವಂತ ಅರಸನ ಮಗಳಾದ ಕಾರಣದಿ ‘ ಶೈಲಪುತ್ರಿ’ ನಾಮಾಂಕಿತಳಾದಳು, ವೃಷಭ ವಾಹನೆಯಾದ ತಾಯಿಯ, ಬಲಗೈಯಲ್ಲಿ ತ್ರಿಶೂಲ, ಮತ್ತು ಎಡ ಗೈಯಲ್ಲಿ ಕಮಲ ಪುಷ್ಪವು ಸುಶೋಭಿತವಾಗಿವೆ.
ದೇವಿ -ಭಾಗವತ ಶಿವಪುರಾಣದಂತಹ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಮಾತೆ ಭಗವತಿ ತನ್ನ ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಮಗಳಾಗಿ ಜನಿಸಿದ್ದಳು. ಆಗವಳ ಹೆಸರು ಸತಿ ಎಂದಾಗಿತ್ತು, ದೇವಿಯು ಶಿವನನ್ನು ಪರಿಶುದ್ಧ ಮನದಿ ಪ್ರೀತಿಸಿ, ಬ್ರಹ್ಮಾಂಡದ ಮೊದಲ ಪ್ರೇಮ ಕಾವ್ಯ ಸೃಷ್ಠಿಸಿ, ತಂದೆಯಾದ ಪ್ರಜಾಪತಿ ದಕ್ಷನಿಗೆ ಇಷ್ಟವಿಲ್ಲದಿದ್ದರೂ ಸಾಂಬಶಿವ ಶಂಕರನನ್ನೇ ಮದುವೆಯಾಗಿದ್ದಳು. ಆದರೆ ಪ್ರಜಾಪತಿ ದಕ್ಷನು ಮುಂದೊಮ್ಮೆ ಬಹುದೊಡ್ಡ ಯಜ್ಞ ಆಯೋಜಿಸಿದ ಯಜ್ಞ ಸಮಾರಂಭದಲ್ಲಿ ಭಾಗವಹಿಸಲು ಮತ್ತು ತಮ್ಮ ಯಜ್ಞ ಭಾಗವನು ಪಡೆಯಲು ಶಿವನನ್ನು ಹೊರತು ಪಡಿಸಿ ಎಲ್ಲಾ ದೇವತೆಗಳಿಗೂ ಆಮಂತ್ರಣ ನೀಡಿದ್ದನು, ತನ್ನ ತಂದೆಯು ವಿಶಾಲ ಯಜ್ಞವು ಮಾಡುತ್ತಿರುವದು ಸತಿಗೆ ಗೊತ್ತಾದಾಗ ಅಪರಿಮಿತ ಸಂತಸವಾಗಿ ಅಲ್ಲಿಗೆ ತೆರಳಲು ಉತ್ಸಾಹಕಳಾಗಿ, ತನ್ನ ಬಯಕೆಯನ್ನು ಪತಿ ಶಿವನ ಹತ್ತಿರ ಹೇಳಿದಾಗ, ಸರ್ವಾಂತರ್ಯಾಮಿಯಾದ ಹರನು ದಕ್ಷನ ದುರುದ್ದೇಶವನ್ನು ಅರಿತಿದ್ದರಿಂದ,
“ಪ್ರಿಯ ಸತಿದೇವಿ, ನಿಮ್ಮ ತಂದೆ ಪ್ರಜಾಪತಿ ದಕ್ಷನು ಯಾವುದೋ ಕಾರಣದಿಂದ ನನ್ನ ಮೇಲೆ ಕೋಪಗೊಂಡಿರುವಂತಿದೆ, ಅದಕ್ಕೆ ಎಲ್ಲಾ ದೇವತೆಗಳನ್ನು ಆಮಂತ್ರಿಸಿ, ನಮ್ಮನ್ನು ಉದ್ದೇಶ ಪೂರ್ವಕವಾಗಿಯೇ ಕರೆದಿಲ್ಲ, ಒಂದು ಸೂಚನೆಯು ಕೊಟ್ಟಿಲ್ಲ, ಹೀಗಿರುವಾಗ ನೀನು ಅಲ್ಲಿಗೆ ಹೋಗುವದು, ಯಾವುದೇ ತರಹವಾಗಿಯೂ ಶ್ರೇಯಸ್ಕರವಲ್ಲ.”ವೆಂದು ಮಹಾದೇವ ಹೇಳಿದಾಗ ಪತಿಯ ನುಡಿಗಳು ಸತಿಗೆ ರುಚಿಸಲಿಲ್ಲ, ತವರು ಮನೆಯ ವ್ಯಾಮೋಹ, ತನ್ನ ತಂದೆಯು ಮಾಡುತ್ತಿರುವ ಯಜ್ಞವನ್ನು ನೋಡಬೇಕೆನ್ನೋ ಆಸೆಯು, ಮತ್ತಲ್ಲಿಗೆ ಹೋಗಿ ತಾಯಿ – ತಂಗಿಯರನ್ನ ಬೇಟಿಯಾಗಬೇಕೆನ್ನೋ ಉತ್ಸಾಹ ಕಡಿಮೆಯಾಗಲಿಲ್ಲ.ಸತಿ ಇಚ್ಛೆ,ಕೋರಿಕೆಗೆ ಒಲ್ಲದ ಮನಸ್ಸಿಂದಲೇ ಹರನು ಅನುಮತಿಸಿದನು.

ಸಂತಸದಿ ತವರುಮನೆಗೆ ಬಂದ ಸತಿಯನ್ನು ಪ್ರೀತಿ, ಅಕ್ಕರೆಯಿಂದ ಬರಮಾಡಿಕೊಳ್ಳುವದಿರಲಿ, ಹೆತ್ತ ತಾಯಿ ಹೊರತುಪಡಿಸಿ ಯಾರು ಸಹ ಮಾತನಾಡಿಸಲಿಲ್ಲ. ಎಲ್ಲರು ಮುಖ ತಿರುಹುತ್ತಿದ್ದರು. ತಾಯಿ ಮಾತ್ರ ಪ್ರೀತಿಯಿಂದ ಮಗಳನ್ನು ಅಪ್ಪಿಕೊಂಡು ಯೋಗಕ್ಷೇಮ ವಿಚಾರಿಸಿದಳು. ಸಹೋದರಿಯರ ಮಾತುಗಳಲ್ಲಿ ವ್ಯಂಗ್ಯ -ಹಾಸ್ಯ ಭಾವವೇ ತುಂಬಿ ತುಳುಕಿತು. ಬಂಧುಗಳ ಈ ನಡುವಳಿಕೆಯಿಂದ ಅವಳ ಮನಸ್ಸಿಗೆ ಬಹಳ ದುಃಖವಾಯಿತು. ಅಲ್ಲಿ ಎಲ್ಲೆಡೆಯು ಭಗವಾನ್ ಶಿವನ ಕುರಿತು ತಿರಸ್ಕಾರದ ಭಾವವೇ ಆವರಿಸಿಕೊಂಡಿತ್ತು. ದಕ್ಷನಂತೂ ಶಿವ – ಸತಿಯ ಕುರಿತು ಅವಮಾನಕರ ನುಡಿಗಳ ಮಳೆಯನ್ನೇ ಸುರಿಸಿದನು. ಇದರಿಂದ ಸತಿಯ ಹೃದಯವು ಕ್ಷೋಭೆಗೊಂಡು, ದುಃಖ, ಕ್ರೋಧಾಗ್ನಿಯಲ್ಲಿ ಕುದಿಯಲಾರಂಭಿಸಿತು.
“ಪತಿಯ ಮಾತನ್ನು ಕೇಳದ ಸತಿಗೆ ಹಿಂತಾ ಶಿಕ್ಷೆಯಾಗಬೇಕಾದ್ದೇ, ದೇವರ ದೇವ ಮಹಾದೇವನಾದ ಭಗವಾನ್ ಶಿವನ ಮಾತು ಪರಿಗಣಿಸದೆ, ತವರುಮನೆಯ ವ್ಯಾಮೋಹಕ್ಕೆ ಒಳಗಾಗಿ ನಾನಿಲ್ಲಿಗೆ ಬಂದು ಬಹುದೊಡ್ಡ ತಪ್ಪು ಮಾಡಿದೆ. ಅವಮಾನದ ಪರ್ವತ ಭಾರ ಹೊತ್ತುಕೊಂಡು ಪತಿಯ ಬಳಿ ತೆರಳಿ, ಅವರ ಘನತೆಗೆ ಕುಂದು ತರವಂತ ಕೆಟ್ಟಕೃತ್ಯ ಮಾಡಲಾರೆ. ನನ್ನ ತಪ್ಪಿಗೆ ಶಿಕ್ಷೇಯಾಗಲೇ ಬೇಕೆಂದುಕೊಂಡು ಅಲ್ಲಿದ್ದವರಿಗೆಲ್ಲ ತನ್ನ ಪತಿ ಶಿವನ ಘನತೆ ಕುರಿತು ಹೇಳಿ ಈ ತಪ್ಪಿಗೆ ನೀವು ಖಂಡಿತ ಶಿಕ್ಷೇ ಅನುಭವಿಸುವಿರೆಂದು ಶಾಪ ನೀಡಿ, ತನ್ನ ಯೋಗಾಗ್ನಿಯಿಂದ ಆಕೆ ತನ್ನ ದೇಹವನ್ನು ದಹಿಸಿಕೊಂಡಳು.
ವಜ್ರಪಾತದಂತ ಈ ದಾರುಣ – ದುಃಖದ ಘಟನೆಯನ್ನು ಕೇಳಿ, ಶಿವನು ಕ್ರುದ್ಧನಾಗಿ, ತನ್ನ ಅಂಶವಾದ ಭಯಂಕರ ರೂಪಿ ಕರವೀರಭದ್ರ,- ಮಹಾಕಾಳಿ ಯನ್ನು ಕಳಿಸಿ ದಕ್ಷನ ಯಜ್ಞವನ್ನು ದ್ವಂಸ ಗೊಳಿಸಿ, ದಕ್ಷನ ಶಿರಛೇದನ ಮಾಡಿಸಿದನು.
ಮುಂದಿನ ಜನ್ಮದಲ್ಲಿ ಸತಿದೇವಿಯು ಪರ್ವತ ರಾಜ ಹಿಮಾಲಯನ( ಹಿಮವಂತ ) ಮಗಳಾಗಿ ಜನಿಸಿ ಪಾರ್ವತಿ ದೇವಿಯಾದಳು. ನವದುರ್ಗೆಯ ಇತರ ಅವತಾರವು ತಾಯಿ ಪಾರ್ವತಿಯ ಅವತಾರವಾಗಿದೆ. ಅವಳು ೩೨ ವಿದ್ಯೆಗಳಾಗಿ ಅವತರಿಸಿದಳು.ಮಾತೆಯನ್ನು ಹೇಮಾವತಿ ಎಂದು ಕರೆಯಲಾಯಿತು. ಉಪನಿಷತ್ತಿನ ಒಂದು ಕಥೆಯ ಪ್ರಕಾರ, ಮಾತೆ ತನ್ನ ಹೇಮಾವತಿಯ ರೂಪದಿ , ಅವಳು ಎಲ್ಲಾ ಪ್ರಮುಖ ದೇವರುಗಳ ಗರ್ವವನ್ನು ಕಳೆದಿದ್ದಳು, ತನ್ನ ಹಿಂದಿನ ಜನ್ಮದಂತೆ, ಈ ಜನ್ಮದಲ್ಲಿಯೂ ಮಾತೆ ಶೈಲಪುತ್ರಿ (ಪಾರ್ವತಿ) ಶಿವನನ್ನು ವಿವಾಹವಾದಳು.
ಅವಳು ಮೂಲ ಚಕ್ರದ ದೇವಿ, ಎಚ್ಚರವಾದ ನಂತರ ತನ್ನ ಪ್ರಯಾಣವನ್ನು ಮೇಲಕ್ಕೆ ಪ್ರಾರಂಭಿಸುತ್ತಾಳೆ. ಹಸುವಿನ ಮೇಲೆ ಕುಳಿತು ಮೂಲಾಧಾರ ಚಕ್ರದಿಂದ ಮೊದಲ ಪ್ರಯಾಣ ಮಾಡುತ್ತಾಳೆ. ತನ್ನ ತಂದೆಯಿಂದ ಅವಳ ಪತಿಗೆ – ಜಾಗೃತಿ ಶಕ್ತಿ, ಭಗವಂತ ಶಿವನ ಹುಡುಕಾಟವನ್ನು ಪ್ರಾರಂಭಿಸುತ್ತಾಳೆ ಅಥವಾ ತನ್ನ ಶಿವನ ಕಡೆಗೆ ಚಲಿಸುತ್ತಾಳೆ. ಆದ್ದರಿಂದ ನವರಾತ್ರಿಯ ಪೂಜೆಯಲ್ಲಿ ಮೊದಲ ದಿನ ಯೋಗಿಗಳು ತಮ್ಮ ಮನಸ್ಸನ್ನು ಮೂಲಾಧಾರದಲ್ಲಿ ಕೇಂದ್ರೀಕರಿಸುತ್ತಾರೆ. ಇದು ಅವರ ಆಧ್ಯಾತ್ಮಿಕ ಶಿಸ್ತಿನ ಆರಂಭದ ಹಂತವಾಗಿದೆ. ಇಲ್ಲಿಂದ ತಮ್ಮ ಯೋಗಸಾಧನೆ ಆರಂಭಿಸಿದರು. ಶೈಲಪುತ್ರಿಯು ಮೂಲಾಧಾರ ಶಕ್ತಿಯಾಗಿದ್ದು, ಆತ್ಮದಲ್ಲಿ ಅರಿತುಕೊಳ್ಳಬೇಕು ಮತ್ತು ಯೋಗದ ಧ್ಯಾನದಲ್ಲಿ ಹೆಚ್ಚಿನ ಆಳವನ್ನು ಹುಡುಕಬೇಕು. ಇದು ಆಧ್ಯಾತ್ಮಿಕ ನಿಲುವಿನ ಬಂಡೆಯಾಗಿದೆ ಮತ್ತು ಪೂರ್ಣ ಪ್ರಕೃತಿ ದುರ್ಗೆಯ ಶೈಲಪುತ್ರಿ ಅಂಶದಿಂದ ಇಡೀ ಪ್ರಪಂಚವು ಶಕ್ತಿಯನ್ನು ಪಡೆಯುತ್ತದೆ.

ಯೋಗದ ದೃಷ್ಟಿಕೋನದಿಂದ ಮೊದಲ ನವರಾತ್ರಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಇದು ದೈವಿಕ ಮಾತೆ ದುರ್ಗೆಯ ಜೊತೆಯಲ್ಲಿರಲು ಯೋಗದ ಆರಂಭವಾಗಿದೆ. ಶಕ್ತಿ ಮಂತ್ರಗಳಲ್ಲಿ ಯಾವುದೇ ರೀತಿಯ ದೀಕ್ಷೆಯನ್ನು ಹೊಂದಲು ಬಯಸುವವರು ಅದನ್ನು ಶುಕ್ಲ ಪ್ರತಿಪಾದದ ಮೊದಲನೆಯ ದಿನದಂದು ಹೊಂದಬಹುದು.
ಭಕ್ತನ ಆಕಾಂಕ್ಷೆಯು ಉನ್ನತ ಮತ್ತು ಹೆಚ್ಚಿನ ಎತ್ತರವನ್ನು ತಲುಪುವುದು, ಆಧ್ಯಾತ್ಮಿಕ ವಿಕಾಸಕ್ಕಾಗಿ ಮತ್ತು ಆನಂದಕ್ಕೆ ಸಂಬಂಧಿಸಿದ ಪರಿಪೂರ್ಣತೆಯ ಸಿದ್ಧಿಯನ್ನು ಸಾಧಿಸುವುದು. ನಿಜವಾಗಿ ಶೈಲಪುತ್ರಿಯು ಮೂಲಾಧಾರ ಶಕ್ತಿಯಾಗಿದ್ದು ಯೋಗ-ಧ್ಯಾನದಲ್ಲಿ ಆತ್ಮದಲ್ಲಿ ಅರಿತುಕೊಳ್ಳಬೇಕು ಮತ್ತು ಹೆಚ್ಚಿನ ಆಳವನ್ನು ಹುಡುಕಬೇಕು. ಇದು ಮಾನವ ಅಸ್ತಿತ್ವದೊಳಗೆ ಅಚಲವಾದ ಆತ್ಮ ಶೋಧನೆಯ ಅನುಭವವಾಗಿದೆ. ಶೈಲಪುತ್ರಿಯು ದೈವಿಕ ಮಾತೆ ದುರ್ಗೆಯ ಭೌತಿಕ ಪ್ರಜ್ಞೆಯಾಗಿದೆ. ಶಿವ ಪುರಾಣದಲ್ಲಿ ವಿವರಿಸಿದಂತೆ ಅವಳು ನಿಜವಾಗಿಯೂ ಪಾರ್ವತಿ, ರಾಜ ಹಿಮವಂತನ ಮಗಳು. ಶೈಲಪುತ್ರಿಯು ಈ ಭೂಮಿಯ ಗ್ರಹದ ಅಭಿವ್ಯಕ್ತಿಯಾಗಿದ್ದಾಳೆ.ಹೀಗೆ ಈ ಭೂಮಿಯ ಮೇಲೆ ಮತ್ತು ಭೂಗೋಳದೊಳಗೆ ಗೋಚರಿಸುವುದನ್ನು ಒಳಗೊಂಡಿದೆ. ಶೈಲಪುತ್ರಿಯು ವಾತಾವರಣ ಸೇರಿದಂತೆ ಎಲ್ಲಾ ಬೆಟ್ಟಗಳು, ಕಣಿವೆಗಳು, ಜಲ ಸಂಪನ್ಮೂಲಗಳು, ಸಮುದ್ರಗಳು ಮತ್ತು ಸಾಗರಗಳನ್ನು ಆವರಿಸಿದ್ದಾಳೆ.
ಆದ್ದರಿಂದ ಶೈಲಪುತ್ರಿಯು ಐಹಿಕ ಅಸ್ತಿತ್ವದ ಸಾರವಾಗಿದೆ. ಅವಳ ವಾಸಸ್ಥಾನ ಮೂಲಾಧಾರ ಚಕ್ರದಲ್ಲಿದೆ. ದೈವಿಕ ಶಕ್ತಿಯು ಪ್ರತಿಯೊಬ್ಬ ಮನುಷ್ಯನಲ್ಲೂ ಸುಪ್ತವಾಗಿರುತ್ತದೆ. ಅದನ್ನು ಅರಿತುಕೊಳ್ಳಬೇಕಿದೆ. ಅವಳ ಬಣ್ಣ ಕಡುಗೆಂಪು. ತತ್ತ್ವ (ಅಂಶ) ಭೂಮಿಯಾಗಿದ್ದು, ಗುಣ (ಗುಣ) ಸುಸಂಬದ್ಧತೆಯೊಂದಿಗೆ ಮತ್ತು ಘ್ರಾಣ (ವಾಸನೆ) ಯ ಭೇದ (ವಿಶಿಷ್ಟ) ಗುಣಲಕ್ಷಣಗಳೊಂದಿಗೆ ಬೆರೆತಿದ್ದಾಳೆ.
- ಪೂಜೆ
ನವರಾತ್ರಿ ನವದುರ್ಗಾ ಮಾತೆಯ ಪೂಜೆಯು ಪೂಜೆಯು ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗುತ್ತದೆ. ಇದು ಮಹಿಳಾ ಶಕ್ತಿಯನ್ನು ಸಂಕೇತಿಸುವ ಆಚರಣೆಯಾಗಿದೆ. ಘಟಸ್ಥಾಪನ ಪೂಜೆಯನ್ನು ಪವಿತ್ರ ಮತ್ತು ಸಾಂಕೇತಿಕವೆಂದು ಪರಿಗಣಿಸುವ ಪೂಜಾ ವಸ್ತುಗಳನ್ನು ಬಳಸಿ ಮಾಡಲಾಗುತ್ತದೆ. ಮಣ್ಣಿನಿಂದ ಮಾಡಿದ ಪಾತ್ರೆಯಂತಹ ಆಳವಿಲ್ಲದ ಪಾತ್ರೆ, ಆಧಾರವಾಗಿ ಬಳಸಲಾಗುತ್ತದೆ. ನಂತರ ಮೂರು ಪದರಗಳ ಮಣ್ಣು ಮತ್ತು ಸಪ್ತ ಧಾನ್ಯ/ನವಧಾನ್ಯ ಬೀಜಗಳನ್ನು ಬಾಣಲೆಯಲ್ಲಿ ಹರಡಲಾಗುತ್ತದೆ. ಅದರ ನಂತರ ಸ್ವಲ್ಪ ನೀರು ಚಿಮುಕಿಸುವುದು ಅಗತ್ಯವಾಗಿರುತ್ತದೆ (ಇದರಿಂದ ಬೀಜಗಳು ಸಾಕಷ್ಟು ತೇವಾಂಶವನ್ನು ಪಡೆದುಕೊಂಡು ಮೊಳಕೆಯೊಡೆದು ಸಸಿಯಾಗುತ್ತವೆ ) ನಂತರ ಒಂದು ಕಲಶವನ್ನು ಗಂಗಾಜಲದಿಂದ ತುಂಬಿಸಲಾಗುತ್ತದೆ. ಅಡಿಕೆ, ಕೆಲವು ನಾಣ್ಯಗಳು, ಅಕ್ಷತೆ (ಅರಿಶಿನ ಪುಡಿ ಬೆರೆಸಿದ ಹಸಿ ಅಕ್ಕಿ) ಮತ್ತು ದರ್ಭೆಯನ್ನು ನೀರಿನಲ್ಲಿ ಹಾಕಲಾಗುತ್ತದೆ. ಇದರ ನಂತರ, ಮಾವಿನ ಮರದ ಐದು ಎಲೆಗಳನ್ನು ಕಲಶದ ಕುತ್ತಿಗೆಗೆ ಹಾಕಲಾಗುತ್ತದೆ.ನಂತರ ತೆಂಗಿನಕಾಯಿಯನ್ನು ಇಟ್ಟು ಮುಚ್ಚಲಾಗುತ್ತದೆ.
ನಾಳೆ ಜಗನ್ಮಾತೆಯ ಎರಡನೇಯ ಸ್ವರೂಪವಾದ ಬ್ರಹ್ಮಚಾರಿಣಿಯ ಕುರಿತುತಿಳಿಯೋಣ.
- ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ – ಯಡ್ರಾಮಿ ಜಿಲ್ಲಾ. ಕಲಬುರ್ಗಿ.
