ನಿನ್ನ ಸನಿಹದ ಸುಖಕ್ಕೆ ಇದುವೊಂದು ನೆಪವಾಗಿರಲು ನಿನ್ನ ಚೆಂದದ ಬಣ್ಣನೆಗೆ ಕವಿ ಬೇರೆ ಬೇಕೆ…ನಿವೃತ್ತ ಶಿಕ್ಷಕರು ಮತ್ತು ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನನ್ನರಸಿ ಒಲವರಸಿ
ಚೆಲುವರಸಿ ನೀನಿರಲು
ಬಿಸಿಲೂ ನೆರಳಾಗದೇನು
ಬಾಳಿದುವೆ ಹಾಲು ಜೇನು
ತುಂಬು ಕೂದಲ ಚೆಲುವೆ
ತುರುಬು ಕಟ್ಟುವೆ ನಾನಿನಗೆ
ಮೋಹಿನಿಯೆ ನೀನೆನಗೆ
ಮೋಹದರಸಿ
ನೀಳ ಕುರುಳಿನ ನಿನ್ನ ಶಿರದ
ಏಣಿಯನೇರಿ ಹೂದಂಡೆಯಾಗಿ
ನಾ ಪರಿಮಳಿಸುವೆ
ಕಂಪಿನಾ ಅಲೆಯಲ್ಲಿ ತೂಗಿ ಬಿಡುವೆ
ನಿನ್ನ ಬಟ್ಟಲುಗಣ್ಣ ತುಂಬು ಜೇನನು
ಸವಿದು ಮತ್ತ ಮಧುಕರಿಯೆ ನಾನಾಗುವೆ
ನಿನ್ನ ನಗೆಬೆಳದಿಂಗಳ ಕೊಳದಲ್ಲಿ ಅರಳಿ
ಕೃಷ್ಣ ಮೋಹನನಾಗಿ ಅದರಲ್ಲಿ ನಲಿವೆ
ನಿನ್ನ ಸನಿಹದ ಸುಖಕ್ಕೆ
ಇದುವೊಂದು ನೆಪವಾಗಿರಲು
ನಿನ್ನ ಚೆಂದದ ಬಣ್ಣನೆಗೆ ಕವಿ ಬೇರೆ ಬೇಕೆ
ನಿನ್ನೆದೆಯ ವೀಣೆಗೆ ನಾ ವೈಣಿಕನಾಗಿರಲು
ಸಗ್ಗಕೆ ಬೇರೆ ಹಾದಿ ಹುಡುಕಲೇಕೆ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
