ದೇಶ ರಕ್ಷಣೆಗೂ ಚಹಾಗೂ ಇರುವ ನಂಟನ್ನು “ನೀವು ಬಲ್ಲಿರಾ? ದೇಶವನ್ನು ಗಡಿಗಳಲ್ಲಿ ಕಾಯುತ್ತಿರುವ ಯೋಧರನ್ನು ಸಚೇತನಗೊಳಿಸುವ ಪೇಯ ಯಾವುದು ಗೊತ್ತೆ? ಅದುವೇ ಟೀ.. ಕಾಫಿಗಿಲ್ಲದ ಆಕ್ರಮಣಕಾರಿ ಗುಣ ಚಹಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಕೆ. ರಾಜಕುಮಾರ್ ಅವರು ಬರೆದ ಈ ಚಹಾ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ…
ಚಹಾ ಎಂಬುದು ಪರಂಪರೆ. ಅದರದು ಆಸ್ತಿ, ಅಂತಸ್ತುಗಳನ್ನು ಛಿದ್ರಗೊಳಿಸಿ ಸಮಾನತೆ ಸಾರಿದಂತಹ ಸಮೃದ್ಧ ಪರಂಪರೆ. ಬಡವ, ಬಲ್ಲಿದರ ನಡುವೆ ಭೇದವೆಣಿಸದ ಉಜ್ವಲ ಪರಂಪರೆ.
ಒಂದು ಗುಟುಕು ಚಹ ನಮ್ಮ ದೇಹದ ನರನಾಡಿಗಳಲ್ಲಿನ ಜಡತ್ವ ನೀಗಿ, ಹೊಸ ಚೈತನ್ಯವನ್ನು ಸಂಗೀತ ಕಾರಂಜಿಯಂತೆ ಸಪ್ತವರ್ಣಗಳಲ್ಲಿ ಚಿಮ್ಮಿಸುತ್ತದೆ. ಚಹ ಎಂದರೆ ಒಂದು ಚಿಮ್ಮು, ಒಂದು ಹೊರಳು. ಹೊಸ ಹೊಸ ಚಿಂತನೆಗಳಿಗೆ, ಹೊಸ ಹೊಸ ಬಯಕೆಗಳಿಗೆ ತೆರೆದುಕೊಳ್ಳುವಂತೆ ಮಾಡುವ ಶಕ್ತಿ ಅದಕ್ಕಿದೆ. ಅರ್ಧ ಲೋಟವಿದ್ದರೆ ಸಾಕು. ಒಂದು ಇಡೀ ಕಪ್ ಚಹ ಬೇಕೆಂದಿಲ್ಲ. ರಾಯಭಾರ, ಸಂಧಾನ ಮಾಡಲಾಗದ್ದನ್ನು ಈ ಬೈ-ಟು ಚಹ ಮಾಡಿಬಿಡುತ್ತದೆ. ಅದು ಗೆಳೆಯರ ನಡುವಿನ ವೈಮನಸ್ಸನ್ನು ತೊಡೆಯುತ್ತದೆ. ಪ್ರೇಮಿಗಳ ನಡುವಿನ ಹುಸಿಮುನಿಸನ್ನು ನೀಗಿಸಲು ಎದುರು ಬದುರು ಕುಳಿತು ಒಂದರ್ಧ ಕಪ್ ಚಹಾವನ್ನು ವಿಚಿತ್ರ ರೀತಿ ಸದ್ದು ಮಾಡದೆ ಮೆಲುವಾಗಿ ಹೀರಿದರೆ ಸಾಕು. ಬಗೆಬಗೆಯ ಸದ್ದು ಮಾಡಿ ಕುಡಿದರೆ ನಾರಿ ಮತ್ತಷ್ಟು ಮುನಿದಾಳು.
ದೇಶ ರಕ್ಷಣೆಗೂ ಚಹಾಗೂ ಇರುವ ನಂಟನ್ನು “ನೀವು ಬಲ್ಲಿರಾ? ನೀವು ಬಲ್ಲಿರಾ?” ದೇಶವನ್ನು ಗಡಿಗಳಲ್ಲಿ ಕಾಯುತ್ತಿರುವ ಯೋಧರನ್ನು ಸಚೇತನಗೊಳಿಸುವ ಪೇಯ ಯಾವುದು ಗೊತ್ತೆ? ಅದುವೇ ಟೀ. ಅದುವೇ ಟೀ. ಹೊಗೆಯಾಡುತ್ತಿರುವ ಚಹಾವನ್ನು ಹೀರಿ, ಸಚೇತನಗೊಂಡು ಸಮರ ಸನ್ನದ್ಧರಾಗುವ ಯೋಧರಿಗೆ ದೇಶ ಋಣಿ. ಅವರನ್ನು ಹೀಗೆ ಅಣಿಗೊಳಿಸುವಲ್ಲಿ ಚಹಾದ ಪಾತ್ರವನ್ನು ನಾವು ಕೃತಜ್ಞತೆಯಿಂದ ಸ್ಮರಿಸಲೇಬೇಕು. ಜೈ ಹಿಂದ್ ಎಂಬ ಉದ್ಘೋಷದ ಜೊತೆಗೆ ಜೈ ಚಾಯ್ ಎಂಬ ಮಗದೊಂದು ಉದ್ಘೋಷವನ್ನೂ ಸೇರಿಸಿ ಉಪಕೃತರಾಗೋಣ. ಏನಂತೀರಿ ಚಹಾ ಪ್ರಿಯರೆ? ಅನ್ನೋರೆಲ್ಲ ಅನ್ನಲಿ. ಆಡಿಕೊಳ್ಳುವವ ರೆಲ್ಲ ಆಡಿಕೊಳ್ಳಲಿ. ಚಹಾದ ಜೊತೆ ರಾಗದಿ ನಾವು ಸೇರಿರುವಾಗ, ಅನುರಾಗದಿ ನಾವು ಬೆರೆತಿರುವಾಗ ಲೋಕದ ಪರಿವೆ ನಮಗೇಕೆ ಬೇಕು?

ಫೋಟೋ ಕೃಪೆ : google
ರೈಲಿಗೂ, ಚಹಾಕ್ಕೂ ಬಿಡಿಸಲಾಗದ ನಂಟು. ಚಾಯ್, ಚಾಯಾ, ಚಾ ಚಾ ಎನ್ನುವ ಧ್ವನಿ ಹತ್ತು ಹಲವು ಬಗೆಗಳಲ್ಲಿ ಅನುರಣಿಸುವುದನ್ನು ನಮ್ಮ ರೈಲು ಪ್ರಯಾಣದಲ್ಲಿ ಕೇಳಿ ತಣಿದಿರುತ್ತೇವೆ. ಕಲಕಲ ನಾದದಂತೆ ಕೇಳಿಬರುವ ಚಾಯ್, ಚಾಯ್ ಎಂಬ ನಾದಕ್ಕೆ ಮಣಿದಿರುತ್ತೇವೆ. ಯಾವುದಾದರೂ ನಿಲ್ದಾಣ ಬಂತೆನ್ನಿ; ಈ ಟೀ ವಾಲಾಗಳು ಚಾಯ್, ಚಾಯ್ ಎನ್ನುತ್ತಾ ಕೂಗಿ, ಕರೆದು ನಾವಿರುವ ಕಡೆಗೆ ಧಾವಿಸುತ್ತಾರೆ. ಆಸೇತು ಹಿಮಾಚಲದವರೆಗೂ ಇದು ಏಕರೀತಿಯ ಮೊಳಗು. ನಮ್ಮದು ಒಂದೇ ಭಾರತ ಮಂದಿರ ಎಂಬುದನ್ನು ಮನಗಾಣಿಸುವ ಮಂತ್ರಘೋಷ.
ನಮ್ಮಲ್ಲಿ ಕೆಲವರು ಕಾಫಿ ಪ್ರಿಯರು. ಮತ್ತೆ ಕೆಲವರು ಚಹಾ ಪ್ರಿಯರು. ಕೆಲವರದು ಬೆಳಗ್ಗೆ ಕಾಫಿ, ಸಂಜೆ ಟೀ ಎಂಬ ಸಮತೋಲನ ಮನಸ್ಥಿತಿ. ಕೆಲವರು ಇಂತಹುದೇ ಚಹಾಪುಡಿ, ಇಂತಹುದೇ ಕಾಫಿಪುಡಿ ಬೇಕು ಎಂದು ಬ್ರಾಂಡ್ ನಿಷ್ಠೆ ತೋರುವವರೂ ಇದ್ದಾರೆ. ನಮ್ಮ ಹಲವು ಧಾರ್ಮಿಕ ಆಚರಣೆಗಳನ್ನು ಬರಿಯ ಹೊಟ್ಟೆಯಲ್ಲಿ ನಡೆಸಬೇಕು ಎನ್ನುತ್ತದೆ ನಿಯಮ. ಆದರೆ ಟೀ, ಕಾಫಿ ಕುಡಿಯಬಹುದು ಎಂದು ಇತ್ತೀಚಿನ ದಿನಗಳಲ್ಲಿ ಆ ನಿಯಮಕ್ಕೆ ವಿನಾಯಿತಿ ನೀಡಿರುವುದುಂಟು. ಚಹಾ ಎಂದರೆ ನಿಯಮಗಳೂ ಸಡಿಲವಾಗುತ್ತವೆ. ಸಂಕಟಕ್ಕೂ ಚಹಾ, ಸಂಭ್ರಮಕ್ಕೂ ಚಹಾ. ಅಗಲಿಕೆಗೂ ಚಹಾ, ಮಿಲನದ ಖುಶಿಗೂ ಚಹಾ. ಆದರೆ ಮಿಲನ ಮಹೋತ್ಸವದ ಮೊದಲ ರಾತ್ರಿ ವಧು ಈಗಲೂ ಹಾಲಿನ ಬಟ್ಟಲನ್ನು ಹಿಡಿದೇ ವರನ ಕೊಠಡಿಯನ್ನು ಪ್ರವೇಶಿಸುತ್ತಾಳೆ. ಅದರ ಬದಲು ಬಿಸಿಬಿಸಿ ಚಹಾದ ಬಟ್ಟಲಿನೊಂದಿಗೆ ಬರುವುದು ಸೂಕ್ತವಲ್ಲವೇ? ಅದು ನಿದಿರೆಯನ್ನು ದೂರಮಾಡಿ ಆ ಇರುಳನ್ನು ನಿಜದ ಅರ್ಥದಲ್ಲಿ ಸಾರ್ಥಕಗೊಳಿಸುತ್ತದೆ. ಅಲ್ಲವೆ?
ಬಿಸಿಲ ಹನಿಗಳ ನಾಡಾದ ಕಲ್ಯಾಣ ಕರ್ನಾಟಕದಲ್ಲಿ, ಗಂಡುಮೆಟ್ಟಿದ ಭೂಮಿ ಎಂದು ಕರೆಯಿಸಿಕೊಳ್ಳುವ ಕಿತ್ತೂರು ಕರ್ನಾಟಕದಲ್ಲಿ ಅದರದೇ ಕಾರುಬಾರು. ಬಾರಿಲ್ಲದ, ಬೀರಿಲ್ಲದ ಆರೋಗ್ಯಕರ ದರಬಾರು. ಹಾಗಾಗಿ ಅಲ್ಲೆಲ್ಲ ಟೀ ಎಂಬ ಚಹಾಗೆ ಎಲ್ಲಿಲ್ಲದ ರಾಜಮರ್ಯಾದೆ. ಅದಕ್ಕೆ ಸದಾ ನಡೆಮಡಿ ಹಾಸಿ ಸ್ವಾಗತ ಕೋರಲು ಸಿದ್ಧವಾದ ಜನಸಮೂಹ. ಒಂದು ಬಟ್ಟಲು ಚಹಾಗಾಗಿ ನಡುಬಗ್ಗಿ ಪ್ರೀತಿಯಿಂದ ನಜರೊಪ್ಪಿಸಿ ಕೃತಜ್ಞತೆ ತೋರುವ ಮಂದಿಯನ್ನು ಕಂಡೇ ತೀರಬೇಕು ಅದರ ಮಹತ್ತ್ವವನ್ನು.

ಫೋಟೋ ಕೃಪೆ : google
ಕಾಫಿಗಿಲ್ಲದ ಆಕ್ರಮಣಕಾರಿ ಗುಣ ಚಹಾಗಿದೆ. ಎಷ್ಟಾದರೂ ಚಹಾ ಉತ್ತರ ಜನ್ಯವಲ್ಲವೇ? ಕಾಫಿಯ ಆಯಕಟ್ಟಿನ ತಾಣಗಳಲ್ಲೆಲ್ಲ ಇದೀಗ ಚಹಾದ ಊಂಚಾ, ಊಂಚಾ ಝಂಡ. ಬೆಟ್ಟದಿಂದ ಇಳಿದು, ಬಯಲನ್ನು ಸೇರಿ, ಬಟ್ಟಲಲ್ಲಿ ಲೀನ; ಉದರದಲ್ಲಿ ಐಕ್ಯ. ಇದು ಚಹಾದ ಪತನವಲ್ಲ; ಸದ್ದಿಲ್ಲದ ಗೆಲುವು. ಚಹಾ ಗಂಟಲಲ್ಲಿ ಇಳಿವ ಪರಿ ಆಪಾತ ಮಧುರ! ವಿಸ್ತರಣಾಕಾಂಕ್ಷಿ ಚಹಾ ಸಮರವಿಲ್ಲದೆ, ಸಂಘರ್ಷವಿಲ್ಲದೆ ಹೃದಯ, ಹೃದಯಗಳಲ್ಲೂ ತನ್ನ ಸಾಮ್ರಾಜ್ಯವನ್ನು ನೆಲೆಗೊಳಿಸಿದ ಪರಿ ಅನನ್ಯ. ಕರ್ನಾಟಕದ ದಕ್ಷಿಣ ಒಳನಾಡು ಇನ್ನೂ ತನ್ನ ಕಾಫಿ ನಿಷ್ಠೆಯನ್ನು ಅರೆಬರೆ ಉಳಿಸಿ ಕೊಂಡಿದೆ. ಇಲ್ಲಿ ಚಹಾದ ಮೇಲೆ ಕಾಫಿಯ ಆಂಶಿಕ ದಿಗ್ವಿಜಯ. ಉಳಿದೆಲ್ಲ ಕಡೆ ಚಹಾದ ಏಕಛತ್ರಾ(ಕ್ರಾ ×)ಧಿಪತ್ಯ. ಟೀ ಪಾನದ ಏಕಸ್ವಾಮ್ಯವನ್ನು ಮುರಿಯಲು ಭಾರತ ಕಾಫಿ ಮಂಡಳಿ ಅನೇಕ ರೀತಿಯ ಪ್ರಚಾರದ ತಂತ್ರಗಳನ್ನು ಸತತವಾಗಿ ಹೂಡುತ್ತಲೇ ಇದೆ. ಗೆಲುವು ಅದಕ್ಕೆ ಇನ್ನೂ ಮರೀಚಿಕೆಯಾಗಿಯೇ ಇದೆ. ಆದರೇನು ಮಾಡುವುದು? ಚಹಾಪಾನವೆಂಬುದು ದೇಶವಾಸಿಗಳಿಗೆ ಸ್ವರ್ಗಕ್ಕೆ ಸೋಪಾನ ಎಂಬಂತೆ ಆಗಿಬಿಟ್ಟಿದೆ.
ಟೀ ಸೊಪ್ಪಿಗೆ ಉದರವೆಂಬುದು ಶಿವರುದ್ರಪ್ಪನವರ ಕಾಣದ ಕಡಲು! ಸದಾ ಅಲ್ಲಿಗೆ ಸೇರಬೇಕೆಂಬ ತುಡಿತ ಆ ಎಲೆಗಳಿಗೆ. ಆದರೆ ಚಿಗುರೆಲೆಗಳಿಗಿರುವ ಭಾಗ್ಯ ಹಣ್ಣೆಲೆಗಳಿಗೆ ಇರದು. ಹಣ್ಣೆಲೆ ಗೊಬ್ಬರವೆಂಬ ಹಂಡೆಗೆ. ಚಿಗುರಲೆ ಉದರವೆಂಬ ಜಠರಕ್ಕೆ. ಬಲಿತ ಸೊಪ್ಪು ಮಣ್ಣು ಸೇರುತ್ತದೆ. ಚಿಗುರಿದ ಸೊಪ್ಪು ಒಡಲಲ್ಲಿ ಬೆರೆತು ಸಾರ್ಥಕತೆಯಿಂದ ಬೀಗುತ್ತದೆ.
ಚಹಾ ಹೀರುತ್ತ ಭಿನ್ನ ಭಿನ್ನ ಪಂಥ, ಪಕ್ಷ, ಸಿದ್ಧಾಂತದವ ರೊಡನೆ ಚರ್ಚೆ, ಸಂವಾದ ಸಾಧ್ಯ. ಹತ್ತು ವರ್ಷದ ಹಿಂದೆ ‘ಚಾಯ್ ಪೆ ಚರ್ಚಾ’ ಕುರಿತು ದೇಶವಿಡೀ ಮಾತೋ ಮಾತು! ಚಾಯವಾಲಾ ದೇಶದ ಪ್ರಧಾನಿಯಾದ ಘಟನೆ ಇಲ್ಲಿ ಮಾತ್ರ ಸಂಭವಿಸಿದ್ದು. ಅದು ಬೇರೆಲ್ಲೂ ಕಾಣದ ಚಾರಿತ್ರಿಕ ಪ್ರಸಂಗ. ನಮ್ಮಂತವರ ಪಾಲಿಗೆ ಚಹಾದ ಜೋಡಿ ಚೂಡ. ಬಲ್ಲಿದರ ಪಾಲಿಗೆ ಹೈ-ಟೀ. ಚಹಾ ಎಂದರೆ ಬಡವ-ಬಲ್ಲಿದ ಎಂಬ ಸಂಘರ್ಷಕ್ಕೆ ಪೂರ್ಣ ವಿರಾಮ. ಅಕ್ಕಪಕ್ಕ ಅಥವಾ ಎದುರುಬದುರು ಕುಳಿತು ಚಹಾ ಹೀರಿ ಮುದಗೊಳ್ಳಬಹುದು.
ಚಹಾ ಎಂದರೆ ಆಹಾ. ಹೌದು; ಅದು ವೈವಿಧ್ಯಕ್ಕೆ ಹೇಳಿ ಮಾಡಿಸಿದ ಪೇಯ. ಅದರಲ್ಲಿ ಥರಾವರಿ ಬಗೆಗಳು. ಶುಂಠಿ ಟೀ, ಏಲಕ್ಕಿ ಟೀ, ಮಸಾಲೆ ಟೀ, ತಂದೂರಿ ಟೀ, ಬ್ಲಾಕ್ ಟೀ, ಲೆಮನ್ ಟೀ, ವೈಟ್ ಟೀ, ಮಡಕೆ ಟೀ, ಹಾಲಿನೊಂದಿಗಿನ ಟೀ, ಥಂಡಾ ಥಂಡಾ ಟೀ. ಒಂದೇ ಎರಡೇ? ಕೇರಳದಲ್ಲಿ ಹಾಲಿಲ್ಲದ ಆದರೆ ತುಸು ನಿಂಬೆರಸ ಬೆರೆಸಿದ ಟೀಗೆ ‘ಕಟ್ಟನ್ ಚಾಯ್’ ಎನ್ನುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಶಾಖಾಜಾಲ ಹೊಂದಿರುವ ‘ದೇಸಿ ಟೀ ಮಾಸ್ಟರ್’ ಅಂಗಡಿಗಳಲ್ಲಿ ಅಶ್ವಗಂಧ, ಶತಾವರಿ, ಸುಗಂಧಿ, ತುಳಸಿ, ಗುಲಾಬಿ, ಮಲ್ಲಿಗೆ ಹೀಗೆ ಒಂದಲ್ಲ, ಎರಡಲ್ಲ 25 ಬಗೆಯ ಚಹಾ ಸಿಗುತ್ತಿದೆ. ‘ನಮ್ ಚಹಾ’ ಎಂಬುದು ಕನ್ನಡದ ಹೆಸರನ್ನು ಹೊತ್ತು ಯಶಸ್ವಿಯಾಗಿರುವ ಚಹಾ ಮಳಿಗೆ. ಕಾಫಿಗೆ ಎಲ್ಲುಂಟು ಈ ಬಗೆಯ ವೈವಿಧ್ಯ?

ಫೋಟೋ ಕೃಪೆ : google
ಟೀ ಬಡಜನರ ಸಂಗಾತಿ. ಮಧುಮೇಹಿಗಳಿಗೆ ಅದು ತಿಂಡಿ ಮತ್ತು ಭೋಜನದ ನಡುವಿನ ಬ್ರಂಚು. ಉಪಾಹಾರ ಮತ್ತು ಊಟದ ನಡುವಿನ ಸೇವನೆ. ಕನ್ನಡದಲ್ಲಿ ಉಊ(ಉಪಾಹಾರ +ಊಟದ ನಡುವೆ: in between breakfast and lunch: BR +UNCH= BRUNCH) ಎನ್ನಬಹುದೇ ಇಂಗ್ಲಿಷಿನ ಈ Brunchಗೆ? ಅಥವಾ ತಿಂಭೋ ಎನ್ನೋಣವೆ?
ಚಹಾದಲ್ಲಿ ಟ್ಯಾನಿನ್ ಎಂಬ ಮದ್ದಿದೆ. ಅದು ‘ಕ್ಸ್ಯಾನ್ತಿನ್’ ಎಂಬ ಔಷಧ ಗುಂಪಿನ ಸದಸ್ಯ. ಟ್ಯಾನಿನ್ ಉತ್ತೇಜಕ, ಉದ್ದೀಪಕ ಗುಣವುಳ್ಳದ್ದು. ಆ ದಿವ್ಯ ಔಷಧಿ ನಮ್ಮ ಕೇಂದ್ರ ನರಮಂಡಲವನ್ನು ಪ್ರಚೋದಿಸಿ ಉತ್ಸಾಹ, ಹುಮ್ಮಸ್ಸು ಹಾಗೂ ಲವಲವಿಕೆಯನ್ನು ಬೊಗಸೆ, ಬೊಗಸೆಯಾಗಿ ತುಂಬುತ್ತದೆ. ಬಾಳಿಗೆ ಚೈತ್ರ ಬಂತು ಮರಳಿ ಎಂದು ವೈಶಾಖದ ಅಗ್ನಿನಕ್ಷತ್ರದಲ್ಲೂ ಗುನುಗುವಂತೆ ಮಾಡುತ್ತದೆ. ಅದರದು ನವವಿಧ ವಿನ್ಯಾಸವನ್ನೂ ಮೀರಿದ ಬಹುಮುಖಿತ್ವ. ಅದೆಷ್ಟು ವಿಧ; ಅದೆಷ್ಟು ಬಗೆ. ಚಿಗುರೆಲೆಗಳಿಂದ ಮಾಡಿದ ಟೀ ಆಸ್ವಾದಿಸಿದರೆ ಸುಖವೀವ ಸುರಾಪಾನ ಇದುವೇ ಎಂದು ಅರಿವಾಗುತ್ತದೆ. ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂಬ ಸತ್ಯದ ಸಾಕ್ಷಾತ್ಕಾರ ಆಗುತ್ತದೆ.
ಒಂದು ವಿಶಿಷ್ಟ ಅನುಭೂತಿ ನಿಮ್ಮದಾಗಬೇಕೆ? ಅದು ಚಹಾದ ಜೋಡಿ ಚೂಡಾಗಿಂತ, ಹೈ-ಟೀಗಿಂತ ಭಿನ್ನವಾಗಿರಬೇಕೆ? ಒಂದು ರುಚಿಕಟ್ಟಾದ ಭೋಜನವಾದ ಮೇಲೆ ಒಂದು ಘಮಘಮಿಸುವ ಪಾನ್ ಬೀಡ ಮೆಲ್ಲಿ. ಅದು ರಸ ಒಸರುತ್ತ ಬಾಯಲ್ಲಿ ಇರುವಾಗಲೇ ಗಟ್ಟಿಹಾಲಿನ ಬಿಸಿ ಬಿಸಿ ಚಹಾವನ್ನು ತುಸು ತುಸುವಾಗಿ ಹೀರಿ. ಬೀಡಾದ ರಸದ ಜೊತೆಗೆ ಚಹಾ ಬೆರೆತು ಗಂಟಲಿಗೆ ಇಳಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಅಲ್ಲಿ ಇಲ್ಲಿ ನೋಡಬೇಡಿ. ಸ್ವರ್ಗವೆಂಬುದು ನಿಮ್ಮ ಕಾಲಡಿಯಲ್ಲಿಯೇ ಇರುತ್ತದೆ. ಚಹಾಪಾನ ಎಂಬುದು ಒಂದು ಅರೆಘಳಿಗೆ ಸ್ವರ್ಗವನ್ನು ನಿಮಗೆ ಎಟುಕಿಸಿ ಸಂತಸ ಅರಳಿಸಿ ಚಿಂತೆ ನೀಗುತ್ತದೆ.
ಗೆಳೆಯರೊಬ್ಬರು ಹೇಳಿದ್ದ ಒಂದು ಪ್ರಸಂಗ ನೆನಪಾಗುತ್ತಿದೆ. ಒಬ್ಬ ಖೈದಿಯನ್ನು ನೇಣಿಗೆ ಹಾಕುವ ಮುನ್ನ, ನಿನ್ನ ಅಂತಿಮ ಕೋರಿಕೆ ಏನು ಎಂದು ಬಂದಿಖಾನೆ ಅಧಿಕಾರಿಗಳು ಕೇಳಿದಾಗ ಒಂದು ಬಿಸಿ ಬಿಸಿ ಖಡಕ್ ಚಹಾ ಕೊಡಿ ಎಂದನಂತೆ. ಏನು ಹೇಳೋಣ ಇದಕ್ಕೆ? ಉಸಿರು ಚೆಲ್ಲುವ ಕಡೆಯ ಘಳಿಗೆಯಲ್ಲೂ ಚಹಾ ಹೀರಿ ನೇಣಿಗೆ ಕೊರಳೊಡ್ಡಲು ಅಣಿಯಾದ ಅನುಪಮ ಚಹಾ ಪ್ರೇಮಿ ಅವನು.

ಫೋಟೋ ಕೃಪೆ : google
ನನಗೆ ಟೀ ಬೇಡ. ನಾನು ಟೀ ಕುಡಿಯುವುದಿಲ್ಲ. ಬಿಲ್ ಕುಲ್ ಕುಡಿಯುವುದಿಲ್ಲ. ಬೇರೆಯವರು ನನ್ನ ಬಿಲ್ ಎತ್ತುತ್ತೇನೆಂದರೂ ಟೀಗೆ ನಾ ಒಲ್ಲೆ ಒಲ್ಲೆ. ನಾನು ಶತ ಪ್ರತಿಶತ ಕಾಫಿ ಪ್ರಿಯ. ನಮ್ಮ ಮನೆಯಲ್ಲಿ ಟೀ ಪುಡಿಯನ್ನು ಕುದಿಸಿ ದಶಕವಾಗಿದೆ. ಆದರೆ 14 ವರ್ಷದ ಹಿಂದೆ ಕೇರಳದಲ್ಲಿರುವ ಭೂಲೋಕ ಸ್ವರ್ಗ ಮುನ್ನಾರ್ ಎಂಬ ಮೂನಾರಿಗೆ ಹೋಗಿದ್ದೆ. ಆಗ ಎಲ್ಲರೊಂದಿಗೆ ಅಲ್ಲಿನ ಕಣ್ಣನ್ ದೇವನ್ ಚಹಾ ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿ ಉಚಿತವಾಗಿ ಕೊಟ್ಟ ಒಂದೆರಡು ಗುಟುಕು ಟೀ “ಅಮೃತಕ್ಕು ತಾ ರುಚಿ” ಎಂಬ ದಾಸರ ಪದವನ್ನು ನೆನಪಿಸಿತು. ಈ ಜನ್ಮದಲ್ಲಿ ಮತ್ತೊಮ್ಮೆ ಅಂತಹ ರುಚಿಯುಕ್ತ ಟೀ ಕುಡಿಯಲೇಬೇಕೆನಿಸಿತು. ಬೆಂಗಳೂರಿನ ಗಲ್ಲಿ-ಗಟಾರ, ಸಂದಿ-ಗೊಂದಿ, ಊರು-ಕೇರಿ ಎಲ್ಲಿ ಹುಡುಕಿದರೂ ಸಿಗಲಿಲ್ಲ. ಅದಕ್ಕಾಗಿಯೇ ಇನ್ನೊಮ್ಮೆ ಮೂನಾರ್ ಕಡೆಗೆ ಪಯಣ ಬೆಳೆಸಬೇಕಾ ಯಿತು. ಮತ್ತೆ ಅಮೃತಕ್ಕು ತಾ ರುಚಿ ಹಾಗೂ ಸ್ವರ್ಗ ಕಾಲಿನ ಅಡಿಗೇ ಎಟುಕಿದ ಹಿತಾನುಭವ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ. ಇದು ಕವಿಯ ಮಾತು. ಟೀ ಪುಡಿಯೊಂದು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ. ನಂದಿನಿ ಹಾಲು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ ಎಂಬ ಮಾತನ್ನು ಟೀ ಪ್ರಿಯರು ಹೇಳದಿರರು. ಅವರಿವರದಿರಲಿ; ನೀವೇನಂತೀರಿ? ಬೆಳಗಾಗಿ ನಾನೆದ್ದು ಮೊದಲು ನೆನೆಯುವುದೇ ಟೀ ದೇವನನ್ನು. ಅದರ ಅನಂತರವೇ ಎಳ್ಳು, ಜೀರಿಗೆಯ ಸರದಿ.
ಚಹಾ ಮತ್ತು ಒಲವು ಬೇರೆ ಬೇರೆ ಅಲ್ಲ. ಅವು ಸಮಾನಾರ್ಥಕಗಳು. ಹಾಗಾಗಿ ಚಹಾ ಎಂಬುದು ಜೀವನ ಸಾಕ್ಷಾತ್ಕಾರ! ಅದು ತನ್ನಷ್ಟಕ್ಕೆ ತಾನೇ ಒಂದು ಸಮ್ಯಕ್ ಕೃತಿ; ಸಂಸ್ಕೃತಿ. ಅದೊಂದು ರೂಢಿ. ಅದೊಂದು ಸಂಬಂಧವರ್ಧಕ. ಅಳತೆ ಮೀರಿದರೆ ಆಪತ್ತು. ಚಟಿಗಳಾದೆವೋ ವಿಪತ್ತು. ಅದಕ್ಕೆ ಗಮನವನ್ನು ಏಕತ್ರಗೊಳಿಸುವ ತಾಖತ್ತಿದೆ. ಸಂತೋಷಕ್ಕೂ, ಸಂಭ್ರಮಕ್ಕೂ, ಸಮಸ್ಯೆಗೂ, ಪರಿಹಾರಕ್ಕೂ, ಆತಿಥ್ಯಕ್ಕೂ ಅನುರಾಗಕ್ಕೂ ಒದಗಿಬರುವ ಸುಲಭ ಪೇಯವೆಂದರೆ:
ಒಂದೇ ಒಂದೇ ಒಂದೇ ಅದು ಟೀ ಒಂದೇ.
ಹಿಂದೆ, ಮುಂದೆ, ಎಂದೆ ಅದು ಟೀ ಒಂದೇ.
#ಸ್ಪಷ್ಟೀಕರಣ:
ಕಾಫಿ ಪ್ರಿಯರೇ,
ಬೇಸರ ಮಾಡಿಕೊಳ್ಳದಿರಿ. ನಾನು ತುಟಿಗೆ ಚಹಾ ಕಾ ಪ್ಯಾಲಾ ಯಾನಿ ಬಟ್ಟಲು ಸೋಕಿಸಿ 10 ವರ್ಷವಾಯಿತು. ಮೈ ತೋ ಕಾಫಿ ಕಾ ಆಶಿಕ್. ಕಾಫಿ ತೋ ಸದಾ ಬಹಾರ್. ಕಾಫಿ ಪತಿತರನ್ನೂ ಪಾವನವಾಗಿಸುವ ಪಾನ.
ಮತ್ತೆ ಚಹಾ ಕುರಿತು ಸ್ತುತಿ ಏಕೆ ಎಂದಿರಾ? ಈ ಲೇಖನದಿಂದಾಗಿ ಅದು ನನ್ನ ಸದ್ಯದ ಕಕ್ಷಿಗಾರ. ಹಾಗಾಗಿ ಅದರ ಕುರಿತು ವಾದ ಮಂಡನೆ! ಮೈ ಲಾರ್ಡ್ ನನ್ನ ವಾದ ಕೇಳಿ, ಕೇಳಿ ಕೇಳಿ.
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.
