ಕೃಷ್ಣ ಸಿದ್ದೇಶ್ವರ ಅವರಿಗೆ 2000 ರ ಸಮಯದಲ್ಲಿ ಆರ್ಟಿಫಿಷಿಯಲ್ ರಕ್ತದ ಕುರಿತು ಯು. ಎಸ್. ಪ್ರೆಸಿಡೆನ್ಸಿಯಲ್ ಅವಾರ್ಡ್ ದೊರಕಿದೆ. ಅವರ ‘ನೆನಪಿನ ಸುರಳಿ’ ಕುರಿತು ಪಾರ್ವತಿ ಜಗದೀಶ್ ಅವರು ಓದುಗರೊಂದಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ನೆನಪಿನ ಸುರಳಿ
ಲೇಖಕರು : ಕೃಷ್ಣ ಸಿದ್ದೇಶ್ವರ
ಪ್ರಕಟಣೆಯ ವರ್ಷ : 2016
ಪುಟಗಳು : 369
ಬೆಲೆ : 200 ರೂಪಾಯಿ.
ನಾನು ಇದುವರೆಗೂ ಓದಿದ ಆತ್ಮ ಚರಿತ್ರೆಗಳಲ್ಲೇ ವಿಭಿನ್ನವಾದ ಆತ್ಮ ಚರಿತ್ರೆ ಇದು. ಸಾಮಾನ್ಯವಾಗಿ ಆತ್ಮಚರಿತ್ರೆ ಬರೆಯುವವರು, ಸಾಹಿತ್ಯ ಕ್ಷೇತ್ರದಲ್ಲಿರುವವರು ಅಥವಾ ಸಾಮಾಜಿಕ ವಲಯದಲ್ಲಿ ಇದ್ದವರು ಬರೆದಿದ್ದನ್ನು ಬಹಳಷ್ಟು ಪುಸ್ತಕ ಓದಿರುವೆ ನಾನು. ಆದರೆ ಇದು ಆತ್ಮಚರಿತ್ರೆ ಅಂತ ಹೇಳುವುದಕ್ಕಿಂತ ಲೇಖಕರ ವೃತ್ತಿ ಜೀವನದ ಸಾಧನೆಗಳ ಅಪರೂಪದ ದಾಖಲೆ ಪುಸ್ತಕ ಅಂತ ಹೇಳಬಹುದೇನೋ.
ಇದೊಂದು ಸಂಪರ್ಕ ಮಾಧ್ಯಮದ ಒಂದು ಅಪರೂಪದ ದಾಖಲೆ. ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾದ ಸಂಪರ್ಕ ಸಾಧನೆಗಳ ಬಗ್ಗೆ ಎಲ್ಲಿಯೂ ಬೋರ್ ಆಗದ ಹಾಗೆ ಬರೆಯುವುದು ಅಷ್ಟು ಸುಲಭ ಸಾಧ್ಯವಾದುದಲ್ಲ. ಹಾಗಾಗಿಯೇ ಈ ಪುಸ್ತಕ ಪರೋಕ್ಷವಾಗಿ ಆ ಕ್ಷೇತ್ರದ ಚರಿತ್ರೆಯ ಒಂದು ಭಾಗ ಅಂತಲೂ ಕರೀಬಹುದು.ಇದರಲ್ಲಿ ಅವರು ತಮ್ಮ ವೃತ್ತಿ ಜೀವನದ ಕಾಲಾ0ತರದಲ್ಲಿ ದೂರವಾಣಿ ಮತ್ತು ಸಂಪರ್ಕ ಮಾಧ್ಯಮಗಳಲ್ಲಿ ಆದ ಬದಲಾವಣೆಗಳನ್ನೂ..ಬೆಳವಣಿಗೆಯನ್ನೂ… ಅವರು ದಾಖಲಿಸುತ್ತಾ ಹೋಗಿದ್ದಾರೆ. ಜೊತೆ, ಜೊತೆಗೆ ಅವರು ಹುಟ್ಟಿ ಬೆಳೆದ ಊರಿನ ಚಿತ್ರಣ ಬಾಲ್ಯದ ಹಲವಾರು ಸನ್ನಿವೇಶಗಳು ಅವರ ಪೂರ್ತಿ ಕುಟುಂಬದ ಪರಿಚಯ ತಂದೆ, ತಾಯಿ, ಅಣ್ಣಾ, ಅಕ್ಕಾ, ತಮ್ಮರ ವಿಶೇಷ ಗುಣಗಳು, ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತಾ ಅವರು ಶೈಕ್ಷಣಿಕ ಸಾಧನೆಗಳ ಬಗ್ಗೆಯೂ ಸವಿಸ್ತಾರವಾಗಿ ಬರೆಯುತ್ತಾ ಹೋಗಿದ್ದಾರೆ. ಜೊತೆಗೆ ಅವರ ತಾಯಿಯ ಅಣ್ಣನ ಮಕ್ಕಳ ಸಾಧನೆಗಳನ್ನು ದಾಖಲೆ ಮಾಡಿದ್ದಾರೆ.ರಾಮ ಅನ್ನುವವರು ಲೇಖಕರ ಸೋದರ ಮಾವನ ಮಗ. ಕರ್ನಾಟಕ ಯೂನಿವರ್ಸಿಟಿಯಿಂದ ಎಂ. ಎಸ್ಸಿ ಮಾಡಿ ಯು. ಎಸ್ ನಲ್ಲಿ ರಸಾಯನ ಶಾಸ್ತ್ರದಲ್ಲಿ ಪಿ ಎಚ್ ಡಿ ಮಾಡಿದ ಅವರು ಅರ್ಯಲ್ಯಾಂಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿ ರಿಟೈರ್ಡ್ ಆಗಿದ್ದಾರೆ.

2000 ರ ಸಮಯದಲ್ಲಿ ಆರ್ಟಿಫಿಷಿಯಲ್ ರಕ್ತದ ಕುರಿತು ಯು. ಎಸ್ . ಪ್ರೆಸಿಡೆನ್ಸಿಯಲ್ ಅವಾರ್ಡ್ ದೊರಕಿದೆ ಅವರಿಗೆ.. ಈಗ ಫ್ಲೋರಿಡಾದಲ್ಲಿ ಸೆಟ್ಲ್ ಆಗಿದ್ದು . ಅಲ್ಲಿಯ ಹಿಂದೂ ದೇವಸ್ಥಾನದಲ್ಲಿ ಪ್ರತಿ ರವಿವಾರ ಪ್ರವಚನ ನೀಡುತ್ತಿದ್ದಾರೆ ಬಾಲ್ಯದಲ್ಲಿ ಅಜ್ಜ (ತಾಯಿಯ ತಂದೆ ) ಮೂಲಕ ಚೆನ್ನಾಗಿ ವೇದ ಅಧ್ಯಯನ ಮಾಡಿದ ಅವರು . ಈಗ ಅಲ್ಲಿಯವರ ಮನೆಗಳಲ್ಲಿ ಪೌರೋಹಿತ್ಯ ನೂ ಮಾಡಲು ತುಂಬಾ ಒತ್ತಾಯವಿರುತ್ತದೆಯಂತೆ ಇವರ ತಮ್ಮ ನಾರಾಯಣನೂ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂ. ಎಸ್ಸಿ ( Chemistry ) ಮಾಡಿ Northern Ireland ನ Belfast ದಲ್ಲಿರುವ Queens Univerity ಯಿಂದ Ph. D. ಮಾಡಿ U. S. ನಲ್ಲಿ ಸೆಟ್ಲ್ ಆಗಿದ್ದಾರೆ . ಕ್ಯಾನ್ಸರ್ ಔಷಧಿಯಲ್ಲಿ ರಿಸರ್ಚ್ ಮಾಡಿ ಪ್ರಸಿದ್ಧರಾಗಿದ್ದಾರೆ. ಹಲವಾರು ಅವಾರ್ಡ್ ಗಳು ದೊರಕಿವೆ. Now He is known as Dr chami hosmane all over the world.
ಹಾಗೇ ಅವರ ತಂದೆಯ ಬಗ್ಗೆ ಬರೆಯುತ್ತಾ ಅವರು ನಿತ್ಯ ಆಚರಣೆ ಮಾಡುವ ವೈದಿಕ ವಿಚಾರ ಸಂಸ್ಕೃತಿ ವಿಚಾರ, ದುರ್ಗಾ ಶತ ಸ್ತೋತ್ರ ನಿತ್ಯ ಪಾರಾಯಣ ಮತ್ತು ಅವರ ಕೆಲಸದಲ್ಲಿರುವ ನಿಷ್ಠೆ, ಪ್ರಾಮಾಣಿಕತೆ ಚಾಕಚಕ್ಯತೆ ಮಕ್ಕಳಿಗೆ ಕೊಟ್ಟ ಸಂಸ್ಕಾರ ವಿಧ್ಯೆ ಎಲ್ಲದರ ಬಗ್ಗೆನೂ ಬರೀತಾರೆ. ತಂದೆ, ತಾಯಿಯ ಅಣ್ಣಾ, ತಂಗಿ, ಅಕ್ಕಾ, ತಮ್ಮ ಸಂಬಂಧಿಕರು ಯಾರ ವಿಷಯ ಬರೆದರೂ, ಅದರಲ್ಲಿ ತೋರಿಕೆಯ ಭಾಷಾ ಶೈಲಿ ಬರೆದಿಲ್ಲ ನಿತ್ಯ ಆಡುವ ಅವರದೇ ಪ್ರಾದೇಶಿಕ ಭಾಷೆಯಲ್ಲೇ ದಾಖಲೆ ಮಾಡಿದ್ದಾರೆ. ಉದಾಹರಣೆಗೆ ಅವರು ಇಡೀ ಪುಸ್ತಕದಲ್ಲಿಯೇ ಅಪ್ಪ, ಅಣ್ಣ ಅವರಿಗಿಂತ ದೊಡ್ಡವರು ಅವರ ಸಂಬಂಧಿಗಳನೆಲ್ಲ ಏಕ ವಚನದಲ್ಲೇ ಸಂಬೋಧನೆ ಮಾಡಿದ್ದಾರೆ. ವೃತ್ತಿ ಜೀವನದ ಅಧಿಕಾರಿಗಳನ್ನು ಹೊರತು ಪಡಿಸಿ, ಕೆಲವೊಮ್ಮೆ ಅಪ್ಪನನ್ನು ಅಣ್ಣ ಅಂತ ಹೇಳಿದ್ದಾರೆ ಅಮ್ಮನಿಗೆ ಆಯಿ ಅಂತಾನೆ ಇದೆ ಕೊನೆವರೆಗೂ.ಜೊತೆಗೆ ಅವರಿಗೆ ಕರೆಯುವ ಕೆಲವು ನಿಕ್ ನೇಮ್ ಗಳ ನ್ನೇ ಬಳಕೆ ಮಾಡಿದ್ದಾರೆ. ಉದಾಹರಣೆ ಗೆ ತಂಗಿ ಮಹೇಶ್ವರಿ ಗೆ ಬಾಯಕ್ಕ, ಅಣ್ಣ ಗಣಪತಿ ಗೆ ಗಂಪಣ್ಣ, ಅಕ್ಕಾ ಪಾರ್ವತಿ ಗೆ ಪಾತಿ, ಸರಸ್ವತಿ ಗೆ ಚಚ್ಚಿ ಹೀಗೆ ಸುಮಾರು ಹೆಸರು ಅವವೇ ಹೆಸರಲ್ಲಿಯೇ ಇದಾವೆ.ಮೊದಲ ಒಂದೈದು ಅಧ್ಯಾಯಗಳಲ್ಲಿ ಅವರ ಬಾಲ್ಯ ಜೀವನ ಅವರು ಹುಟ್ಟಿ ಬೆಳೆದ ಊರಾದ ಗೋಕರ್ಣದ ಸಮೀಪ ಇರುವ ಸಿದ್ದೇಶ್ವರದ ಪೂರ್ತಿ ವಿವರಣೆ ಅಲ್ಲಿರುವ ಮನೆ, ಓಣಿಯ ಜನರ ಉದ್ಯೋಗ, ಪರಿಸರದ ಪರಿಚಯ ಮಾಡಿ ಕೊಡುತ್ತಾ ಅಲ್ಲಿ ಆಚರಣೆ ಮಾಡುವ ಪ್ರತಿಯೊಂದು ಹಬ್ಬ, ಜಾತ್ರೆಯ ವಿಶೇಷತೆಗಳನ್ನು ಬರೆಯುತ್ತಾ ಹೋಗಿದ್ದಾರೆ. ಆ ಪರಿಸರದಲ್ಲಿ ಸಿಗುವ ವಿಶೇಷ ಹಣ್ಣು ಮತ್ತು ಆಹಾರ, ವಿಶೇಷ ಕಲೆಗಳಾದ ಯಕ್ಷಗಾನ, ನಾಟಕಗಳ ಬಗ್ಗೆಯೂ ವಿವರಣೆ ಇದೆ. ಬಹುತೇಕ ಕಾಡಿನ ಪರಿಸರದಂತೆ ಇರುವ ಸಿದ್ದೇಶ್ವರದಲ್ಲಿ ಲೇಖಕರು ಎರಡು ಬಾರಿ ವಿಷ ಪೂರಿತ ಹಾವಿನ ಕಡಿತಕ್ಕೊಳಗಾಗಿದ್ದರೂ, ಪವಾಡ ಸದೃಶವೆ0ಬಂತೆ ಬದುಕಿ ಉಳಿದು ಇದೀಗ 87 ರ ಅಸುಪಾಸಿನಲ್ಲಿ ಇರುವ ಅವರು ನಿತ್ಯ 4 ಗಂಟೆ ಗೆ ಎದ್ದು ದಿನಚರಿ ಆರಂಭಿಸುತ್ತಾ ಒಳ್ಳೆ ಆರೋಗ್ಯಕರ ಜೀವನ ನೆಡಸುತ್ತ ಬೆಂಗಳೂರಲ್ಲಿ ವಾಸವಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಅದ್ಬುತ ಸಾಧನೆ ಮಾಡಿದ ಅವರ ಹಿರಿಯ ಮಗ ರವಿಯ ಅಕಾಲಿಕ ಮರಣದ ನಂತರ. ಎರಡನೇ ಮಗ ಸಂತೋಷ ಇಂಜಿನಿಯರ್ ಹಾಗೂ ಅವರ ಸೊಸೆ ಚೈತ್ರ ದಂತ ವೈದ್ಯರು ದೂರದರ್ಶನದಲ್ಲಿ ಹಲವಾರು ನೇರ ಪ್ರಸಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿಯೂ ಸಾರ್ವಜನಿಕ ವೇದಿಕೆಯಲ್ಲಿ ನಿರೂಪಣೆ ಮಾಡುವ ಅವರು ಸಂಗೀತ, ಭರತನಾಟ್ಯದಂತಹ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅಪಾರ ಜನಪ್ರಿಯತೆ ಪಡೆದಿದ್ದಾರೆ. ತಾಯಿಯಂತೆ ಅವರ ಇಬ್ಬರು ಮಕ್ಕಳು ಮಹತಿ ಮತ್ತೂ ಮದುಮಿಥಾ ಕೂಡ ವೈದ್ಯಕಿಯ ಹಾಗೂ ಭರತನಾಟ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಸುಮಾರು 21 ವರ್ಷಕ್ಕೆ ಅರುಂಧತಿ ಅವರೊಂದಿಗೆ ಮದುವೆ ಆದ ಅವರು ನಿವೃತ್ತಿಯ ನಂತರದ ಕೆಲವು ವರ್ಷಗಳ ಕಾಲ ಸುಖ ಸಂಸಾರ ಅವರದಾಗಿತ್ತು. ನಿವೃತ್ತಿ ನಂತರದ 2 ವರ್ಷಕ್ಕೆ ಮಾವ ತೀರಿಕೊಂಡು ಅದಾದ ನಂತರ ಅವರ ಹಿರಿಯ ಮಗ ತೀರಿಕೊಂಡ ವಿಚಾರ ದಾಖಲೆ ಇದೆ. ಇತ್ತೀಚಿಗೆ ಅವರ ಮಡದಿ ತೀರಿಕೊಂಡ ವಿಷಯ ತಿಳಿಯಿತು.

ಸೆಪ್ಟೆಂಬರ್ 28, 1936 ರಲ್ಲಿ ಜನಿಸಿದ ಇವರು ತಮ್ಮ ಜೀವನದಲ್ಲಿ ನೆಡೆದ ಪ್ರತಿಯೊಂದು ಘಟನೆಗಳನ್ನು ಎಲ್ಲಿಯೂ ವಿಜೃಂಭಣೆ ಮಾಡದೇ ಅತಿರೇಖಕ್ಕೆ ಅವಕಾಶಕೊಡದೆ ಸರಳವಾದ ಭಾಷಾ ಶೈಲಿಯಲ್ಲೇ ಇಸ್ವಿ, ತಿಂಗಳು ಸಮೇತ ನೆಡೆದ ಘಟನೆಗಳ ವಿವರ ದಾಖಲಿಸುತ್ತಾ ಹೋಗಿದ್ದಾರೆ ಎಸ್. ಎಸ್. ಎಲ್. ಸಿ ಓದಿನ ನಂತರ ಅವರ ಅಣ್ಣ ಓದು ಮುಂದುವರೆಸದೆ ಯಾರೋ ತಂದು ಕೊಟ್ಟ ಮುಂಬೈ ಅಲ್ಲಿನ ಅಂಚೆ ಇಲಾಖೆಯ ಕ್ಲಾರ್ಕ್ ಹುದ್ದೆಗೆ ಅರ್ಜಿ ಹಾಕಿ ಅದರ ಆದೇಶದನ್ವಯ ಅವರ ಅಣ್ಣನಿಗೆ ಮುಂಬೈ ಅಲ್ಲಿ ಕೆಲಸವಾಗುತ್ತದೆ. ಮುಂದೆ ಅವರ ಸಹಾಯದಿಂದಲೇ ಇವರ ಹೈಸ್ಕೂಲ್ ವಿದ್ಯಾಭ್ಯಾಸ ಕೂಡ ಆಗುತ್ತೆ. ಪ್ರಾಥಮಿಕ ಶಾಲೆಯಿಂದ ಪದವಿ ವರೆಗಿನ ಎಲ್ಲ ಶಿಕ್ಷಕರ ವೃಂದದವರನ್ನು ಹೆಸರು ಸಮೇತ ಸ್ಮರಿಸಿದ್ದಾರೆ. ಪ್ರಥಮ ಪಿ. ಯು. ಸಿ ಗೆ ಖ್ಯಾತ ವಿಮರ್ಶಕರಾದ ಇಂಗ್ಲಿಷ್ ಪ್ರಾಧ್ಯಾಪಕರು ಜಿ. ಎಸ್ ಅಮೂರ್ ಸರ್ ಶಿಷ್ಯ ಕೂಡ ಹೌದು ಲೇಖಕರು. ಪಿ. ಯು. ಸಿ ಪ್ರಥಮ ವರ್ಷ ಮುಗಿಯುತ್ತಿದ್ದಂತೆ ಅಣ್ಣನ ಮೂಲಕ ಅದೇ ಮುಂಬೈ ಅಲ್ಲೇ ಇವರಿಗೂ ಟೆಲಿಫೋನ್ ಡಿಪಾರ್ಟ್ಮೆಂಟ್ ನಲ್ಲೇ ಕೆಲಸ ಆಗುತ್ತೆ. ಅದರ ನಂತರದ ಅವರ ಓದು, ಮದುವೆ, ಮಕ್ಕಳು ಅವರ ವಿದ್ಯಾಬ್ಯಾಸ ಜೊತೆ, ಜೊತೆಗೆ ಇವರ ವೃತ್ತಿಯಲ್ಲಿಯ ಸಾಧನೆಗಳನ್ನು ಎಳೆ, ಎಳೆಯಾಗಿ ಬಿಡಿಸಿಟ್ಟಿದ್ದಾರೆ ಹಲವಾರು ವಿದೇಶಗಳಲ್ಲಿ ತರಬೇತಿ ಗಾಗಿ ಆಯ್ಕೆ ಆಗಿ ಅಲ್ಲಿನ ಪ್ರತಿ ವ್ಯವಸ್ಥೆಯ ಬಗ್ಗೆಯೂ ಬರೆದಿದ್ದಾರೆ ತರಬೇತಿ ಪಡೆದು ಹಲವಾರು ಹುದ್ದೆಗಳಲ್ಲಿ ಬಡ್ತಿ ಪಡೆದು ಬಹಳಷ್ಟು ಕಡೆಗೆ ವಿದೇಶದಲ್ಲೂ ಸಮರ್ಪಕವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ವಿದೇಶದಲ್ಲಿಯೇ ಇವರನ್ನೂ ಪರ್ಮನೆಂಟ್ ಕೆಲಸಕ್ಕೆ ನೇಮಣಿಕೆ ಮಾಡಿಕೊಳ್ಳುವಷ್ಟು. ಹಿರಿಯ ಅಧಿಕಾರಿಗಳಿಂದ ಒತ್ತಡ ತಂದರೂ ಕೂಡ ಇವರು ತಾಯ್ನೆಲದ ಪ್ರೇಮಕ್ಕಾಗಿ, ವ್ಯಾಮೋಹಕ್ಕಾಗಿ ಅಲ್ಲಿಯ ಕೆಲಸ ದಿಕ್ಕರಿಸಿ ಭಾರತದ ನೆಲದಲ್ಲಿಯೇ ಹಲವಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿ ಕೊನೆಗೆ ಬೆಂಗಳೂರಲ್ಲಿ ನಿವೃತ್ತಿ ಪಡೆಯುತ್ತಾರೆ. ಹೊರಗಿನಿಂದ ನೋಡಿ ಬರೆದುದಕ್ಕಿಂತ ಅದರ ಒಳಗೇ ಇದ್ದು ಬರೆದ ಅವರ ಬರಹ ಅತ್ಯಂತ ಅಧಿಕೃತವೂ ಹೌದು.!
ಅದು ಒಂದು ಕಾಲಘಟ್ಟದ ರೂಪಾ0ತರದ ಕಥಾನಕವೆನಿಸುತ್ತದೆ. ಇಲ್ಲಿ ಲೇಖಕ ನೆಪಮಾತ್ರವಾಗಿದ್ದು ಇಡೀ ಪುಸ್ತಕ ತನ್ನಿಂದ ತಾನೇ ಬರೆಸಿಕೊಂಡು ಸಾಗುತ್ತದೆ. ಅಂಬಿಗನೊಬ್ಬ ನಿರಂತರ ಹರಿಯುವ ಹೊಳೆ ಯ ದಡದಲ್ಲಿ ನಿಂತು..ಪ್ರವಾಹದಲ್ಲಿ ಸಾಗಿದ ವಸ್ತುಗಳ ಬಗ್ಗೆ ಬರೆಯುತ್ತಾ ಹೋದ ಹಾಗೆ ಲೇಖಕರುಸುಮಾರು ನಾಲ್ಕು ದಶಮಾನಗಳಲ್ಲಿ ಸಮೂಹ ಮಾಧ್ಯಮಗಳ ತಾಂತ್ರಿಕತೆಯಲ್ಲಿ ಆದ ಬದಲಾವಣೆಗಳನ್ನು ದಾಖಲಿಸುತ್ತಾ ಹೋಗಿದ್ದಾರೆ. ಪ್ರಾಯೋಗಿಕವಾಗಿ ನೆಡೆಸಿದ ಅಧ್ಯಯನಗಳ ವಿವರಣೆ ಜೊತೆಗೆ. ತಾಂತ್ರಿಕವಾಗಿ ವಿವರಿಸುವ ಅವರ ಶಕ್ತಿ “ಈಶ್ವರ “ನ ಶಕ್ತಿ..!
ಪುಸ್ತಕದಲ್ಲಿ ಹಲವಾರು ಟೆಕ್ನಿಕಲ್ ವಿಷಯ ಹಾಗೂ ಹುದ್ದೆ ವೃತ್ತಿಯ ವಿವರಣೆ ಬಹಳ ಇದೆ. ಒಂದೇ ಒಂದು ಅಸಮಾಧಾನವೆಂದರೆ ಆ ಫೀಲ್ಡ್ ನವರನ್ನು ಹೊರತು ಪಡಿಸಿ ಉಳಿದ ಸಾಮಾನ್ಯರಿಗೆ ಆ ಪದ ಪ್ರಯೋಗ ಅಷ್ಟೊಂದು ಅರ್ಥ ಆಗದೆ ಇರುವುದು. ಸ್ವೀಡನನಲ್ಲಿ ತರಬೇತಿ ಪಡೆದು, ದುಬೈ, ಒಮೆನಾ, ಹಲವಾರು ಕಡೆಗೆ ಕಾರ್ಯ ನಿರ್ವಹಿಸಿ ಭಾರತದ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಉನ್ನತ ಹುದ್ದೆಗೆ ಬಡ್ತಿ ಪಡೆದು ಕರ್ನಾಟಕಕ್ಕೆ ಹಿಂದುರಿಗಿದಾಗ ಮುಂಬೈಲಿ ಅವರ ಮೇಲಾಧಿಕಾರಿ ಆಗಿದ್ದವರು ಬೆಂಗಳೂರು ನಗರ ಒಂದನ್ನು ಬಿಟ್ಟು ರಾಜ್ಯದ ಟೆಲಿಕಾಮ್ ಸರ್ವಿಸ್ ಗೆ ಜನರಲ್ ಮ್ಯಾನೇಜರ್ ಆಗಿದ್ದರು. ಅವರು ಇಲ್ಲಿಯ ಚಾರ್ಜ್ ತೆಗೆದುಕೊಂಡ ಮೇಲೆನೆ ಇವರು ಕೇರಳದಿಂದ ಕರ್ನಾಟಕಕ್ಕೆ ಬರಲು ಸಾಧ್ಯವಾಯಿತು. ನಂತರ ಗುಲ್ಬರ್ಗ, ಬೀದರ ಜಿಲ್ಲೆಗಳಲ್ಲಿ ಉತ್ತಮ ಸೇವೆ ಮಾಡಿದರೂ ಕೂಡ ಸೇವೆ ಅಷ್ಟೊಂದು ತೃಪ್ತಿಕರ ಹಾಗೂ ಸಮಾಧಾನಕರವಾಗಿಲ್ಲ ಅನ್ನುವ ಲೇಖಕರು ಮೊದಲು ಸ್ವಲ್ಪ ಸಮಯ ಆ ಭಾಗದ ಚಾರ್ಜ್ ತೆಗೆದುಕೊಳ್ಳಲು ಹೇಳಿದರು ಅಲ್ಲದೆ ಬೆಂಗಳೂರಿಗೆ ಬಂದ ಮೇಲೂ ನನ್ನ ಕ್ಷೇತ್ರವಲ್ಲದಿದ್ದರೂ ರಾಜ್ಯದ ಎಕ್ಸ್ಚೇಂಜ್ ಗಳಿಗೆ S. T. D service ಕೊಡುವದು, ಮತ್ತು Rural area ಗಳ ಸೇವೆ ಸುಧಾರಿಸುವದರ ಜೊತೆಗೆ ಸಂಪೂರ್ಣ ರಾಜ್ಯಕ್ಕೆ Optical Fibre Cable, Microwave Systems , Coaxial Cable Systems ಗಳ jaal ವಿಸ್ತರಿಸಲು Plan ಮಾಡುವ ಜವಾಬ್ದಾರಿ ಅವರಿಗೆ ವಹಿಸಿದರು . ಅವರ ಅತ್ಯುತ್ತಮ ಸೇವೆಗೆ ಆಗಿನ ಮುಖ್ಯ ಮಂತ್ರಿ ವೀರೇಂದ್ರ ಪಾಟೀಲ್ ಅವರಿಂದ ಮೆಚ್ಚುಗೆ, ಸನ್ಮಾನ ಕೂಡ ಪಡೆದಿದ್ದಾರೆ.ರಿಟೈರ್ಡ್ ಆಗುವ ತನಕ ಇದೇ ಕೆಲಸ ಮಾಡುತ್ತಿದ್ದಾರೆ.ನಿವೃತ್ತಿ ಆದ ನಂತರ ಸುಮಾರು ಐದು ವರ್ಷ ಪ್ರೈವೆಟ್ ಕಂಪನಿಗಳಿಗೆ Consultant ಅಂತ ಕೆಲಸ ಮಾಡಿ ಮಕ್ಕಳ ಇಚ್ಛೆಯಂತೆ England ಮತ್ತು U. S ಗೆ ಹೋಗಿಬಂದರು England ದಲ್ಲಿ ಹಿರಿಯ ಮಗನ ಜೊತೆ ನಾಲ್ಕು ತಿಂಗಳು ಕಳೆದು ಹಿಂತಿರುಗಿ ಬಂದ ಎರಡು ತಿಂಗಳು ಗಳಲ್ಲೇ ಮಾವ ತೀರಿಹೋದ ( ಹೆಂಡತಿಯ ಅಪ್ಪ ) ಇನ್ನೆರಡು ತಿಂಗಳಲ್ಲಿಯೇ ಹಿರಿಯ ಮಗ ರವಿ ತೀರಿಹೋಗ್ತಾರೆ . ನಂತರ U. S ದಲ್ಲಿದ್ದ ಎರಡನೇ ಮಗ ಸೊಸೆ ಭಾರತಕ್ಕೆ ಹಿಂತಿರುಗಿ ಬಂದು ಜೊತೆಯಲ್ಲೇ ಇರ್ತಾರೆ.ಮತ್ತೂ ಒಂದು ಅಸಮಾಧಾನದ ಸಂಗತಿ ಅಂದರೆ, ಅವರ ತಂದೆ, ತಾಯಿ ಇಬ್ಬರೂ ತೀರಿಕೊಂಡಾಗ ಮೂರು ಜನ ಗಂಡು ಮಕ್ಕಳು ಇದ್ದರೂ ಆ ಸಮಯದಲ್ಲಿ ಹೊರ ದೇಶದಲ್ಲಿ ಇದ್ದ ಕಾರಣಕ್ಕೆ ಅವರು ಯಾರೂ ಬರಲಾಗಲಿಲ್ಲ ಅಂತ್ಯ ಕ್ರಿಯೆಗೆ ಅನ್ನೋದು ನಂತರದ ಕ್ರಿಯಾ ಕರ್ಮ ಎಲ್ಲ ಅವರೇ ಮಾಡ್ತಾರೆ.
ಒಟ್ಟಾರೆಯಾಗಿ ಮೂರು ತಲೆಮಾರಿನ ಸಮೂಹ ಮಾಧ್ಯಮದ ವೃತ್ತಿ ಜೀವನದ ಜೊತೆ, ಜೊತೆಗೆ ಅವರ ವೈಯಕ್ತಿಕ ಜೀವನವನ್ನೂ ಹರವಿ ಇಟ್ಟ ಕೃತಿ ಇದಾಗಿದೆ. ಮೊದಲ ಕೃತಿಯೇ ಆದರೂ ಎಲ್ಲಿಯೂ ಅಕ್ಷರ ದೋಷ ಕಂಡು ಬಂದಿಲ್ಲ. ತಂತ್ರಜ್ಞಾನ ಪದ ಬಳಕೆಯ ಬಗ್ಗೆ ಸ್ವಲ್ಪ ತೊಂದ್ರೆ ಅನಿಸಿದ್ರು ಕೃತಿ ಓದಿಸಿಕೊಂಡು ಹೋಗುತ್ತದೆ ಹೆಚ್ಚು ಕಾವ್ಯಾತ್ಮಕ, ಅಲಂಕಾರ, ಉಪಮೆ ಇದು ಯಾವುದು ಇಲ್ಲದೇ ಸರಳವಾಗಿ ನೇರವಾಗಿ ಆಡು ಭಾಷೆಯಲ್ಲೇ ಬರೆದ ಕೃತಿ ಇದಾಗಿದೆ. ಅಂತೆಯೇ ಈ ಕೃತಿ ಓದಿದ ಖ್ಯಾತ ಸಾಹಿತಿ ಎಸ್. ಎಲ್ ಭೈರಪ್ಪನವರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ. ಕೆಲವು ಬಿಡಿ ಲೇಖನ ರೂಪದಲ್ಲಿ ಪತ್ರಿಕೆಯಲ್ಲಿ ಪ್ರಕಟಣೆ ಆಗಿವೆ.ಬರವಣಿಗೆಯಲ್ಲಿ ಕಾಲಜ್ಞಾನದ ಹೊಳಪಿದೆ. ಮಗುವಿನ ಮುಗ್ದ ಕುತೂಹಲ ಇದೆ. ತಣ್ಣೀರನ್ನೂ ತಣಿಸಿ ಕುಡಿಯುವ ತಾಳ್ಮೆಯನ್ನು ಬರಹದಲ್ಲಿ ಕಾಣಬಹುದು. ಇಷ್ಟೆಲ್ಲ ಸಾಧನೆ ಮಾಡಿದ ಲೇಖಕರು ಎಲೆ ಮರೆಯ ಕಾಯಿಯಂತೆ ಇದ್ದುದು ವಿಪರ್ಯಾಸ ಅನಿಸುತ್ತೆ.
ಏನೇ ಆಗಲಿ ಭಗವಂತ ಅವರಿಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಹರಸಲಿ ಅನ್ನುವ ಪ್ರಾರ್ಥನೆ ನನ್ನದು.
- ಪಾರ್ವತಿ ಜಗದೀಶ್
