‘ನೆರಳಿಗಂಟಿದ ಭಾವ’ ಕೃತಿ ಪರಿಚಯ

‘ನೆರಳಿ ಗಂಟಿನ ಭಾವ’ ಸವಿತಾ ಮುದ್ಗಲ್ ಅವರ ಚೊಚ್ಚಲ ಕವನ ಸಂಕಲನ. ಕವಯತ್ರಿ ಕಾವ್ಯ ಮಾಧ್ಯಮವನ್ನು ಆರಿಸಿಕೊಂಡು ಬರೆಯ ತೊಡಗಿದವರು. ಕವಿತೆಗಳು ಆಶಯದ ದೃಷ್ಟಿಯಿಂದ ಮೌಲಿಕವಾಗಿವೆ. ಕೃತಿಯ ಕುರಿತು ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ನೆರಳಿಗಂಟಿದ ಭಾವ
ಕವಯತ್ರಿ: ಸವಿತಾ ಮುದ್ಗಲ್
ಪುಟಗಳು 112, ಬೆಲೆ ರೂ 100
ಪ್ರಕಾಶಕರು: ನಿರಂತರ ಪ್ರಕಾಶನ ಗದಗ

ಕವನ ಸಂಕಲನದಲ್ಲಿ ವೈವಿಧ್ಯಮಯವಾದ 84 ಕವನಗಳಿವೆ. ಕನ್ನಡ ನಾಡು, ಭಾಷೆ, ಮನಸ್ಸಿನೊಳಗೆ ಹುಟ್ಟಿಬರುವ ಭಾವನಾತ್ಮಕ ಯೋಚನೆಗಳು, ಸಾಂಸಾರಿಕ ಸಾಂಗತ್ಯದ ಅಂತರಾಳದ ಬೇಡಿಕೆಗಳು, ಪೌರಾಣಿಕ ವಿಷಯಗಳ ಕುರಿತ ಅನಿಸಿಕೆಗಳು, ಜಾನಪದ ಶೈಲಿಯ ಹಾಡುಗಳು, ಅಮ್ಮನ ಒಲವಿನ ಮಹಾಪೂರ, ಹೆಣ್ಣಿನ ಅಂತರಾಳ ಮುಂತಾದವು ಕವನಗಳ ಮುಖ್ಯ ಪ್ರವಾಹದ ಹಾದಿಗಳು.

ಕೆಲವು ಕವನಗಳನ್ನು ವಿವೇಚಿಸಿದರೆ ಕವಯತ್ರಿಯ ಭಾವ ವಿಶೇಷಗಳು ಪರಿಚಯವಾಗುತ್ತವೆ. ಕವಯತ್ರಿಗೆ ಹೆಣ್ಣಾಗಿ ಹುಟ್ಟಿರುವುದಕ್ಕೆ ಬೇಸರವಿಲ್ಲ. ಬದುಕಿನ ಕಷ್ಟಗಳನ್ನು ಎದುರಿಸುವ ಎದೆಗಾರಿಕೆಯನ್ನು ತೋರುವ ಗುಣವನ್ನು ಹೊಂದಿದ್ದಾರೆ.

ಭಾವನೆಯ ಒಡಲಿದು ನಮ್ಮದು
ಹೆಣ್ಣಿನ ಅಂತರಂಗವಿದು ತಿಳಿಯದು
ನಿತ್ಯದ ಬಾಳಿನ ಸಂಘರ್ಷವಿದು
ಮುಗಿಯದ ಸವಾಲಿನ ಹೋರಾಟವಿದು (ಕವನ-ಅಂತರಂಗದ ಸಂಘರ್ಷ)
ಎನ್ನುವಲ್ಲಿ ಹೆಣ್ಣಿನ ಬದುಕಿನ ತಲ್ಲಣಗಳನ್ನು ಆಕೆ ಅನುಭವಿಸುವ ಮಾನಸಿಕ ಸಂಘರ್ಷದ ಬಗೆಗೆ ಪ್ರತಿರೋಧವನ್ನು ಒಡ್ಡುವ ಗುಣವಿದೆ. ಹೆಣ್ಣಿಗೆ ತನ್ನ ಅಸ್ತಿತ್ವದ ಉಳಿವಿಗಾಗಿ ಹೋರಾಟ, ಜೀವನ್ಮರಣ ಹೋರಾಟವೇ ಆಗಿದೆ.

ಕತ್ತಲೆ ಕಳೆದೋಗುವ ಮನದ ದುಗುಡವು
ನೀಡಿಯೂ ಸ್ಪಂದನೆ ಕೊಡದ ಮನಸ್ಸಿನವರು
ನಿಂತ ತಿಳಿ ನೀರಿಗೆ ಕಲ್ಲೆಸೆದು ನಗುವವರು (ಕವನ: ಸ್ಪಂದನೆ)

ಕವಯತ್ರಿಗೆ ಸಮಾಜದ ಧಾರ್ಮಿಕ ಮೌಡ್ಯದ ಮನಸ್ಥಿತಿಯ ಬಗೆಗೆ ಬೇಸರವಿದೆ. ಮುಗ್ಧ ಮನಸ್ಸಿನ ದುಗುಡುಗಳಿಗೆ ಎಲ್ಲಿ ಸ್ಪಂದನೆ ಇಲ್ಲ. ನೀರಿಗೆ ಕಲ್ಲೆಸೆದು ನಗುವವರ ಮಧ್ಯದ ತೋರಿಕೆಯ ಬದುಕನ್ನು ನಿರಾಕರಿಸುತ್ತಾರೆ. ಮೇಲು ಕೇಳಿನ ಭಾವ ಅಂತರಂಗದಲ್ಲಿ ಇಟ್ಟುಕೊಂಡು ತೀರ್ಥ ಕುಡಿದು ಪುಣ್ಯವನ್ನು ಕಾಣುವ ಮೂಢರನ್ನು ಕಟುವಾಗಿ ಟೀಕಿಸುತ್ತಾರೆ.

ಹೆಣ್ಣಿಗೊಂದು ಗಂಡಿನ ಆಸರೆ ಬಾಳಿಗೆ ಬೇಕು
ಮದುವೆ ಬಂಧನ ಮಾಡಿಕೊಡುವುದು ಸಂಸಾರಕು (ಕವನ: ಆಸರೆ )

ಮತ್ತೊಂದೆಡೆ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಳ್ಳುವ ದ್ವಂದ್ವ ಗುಣಗಳನ್ನು ಇವರ ಕವಿತೆಗಳು ಅಭಿವ್ಯಕ್ತಿಸುತ್ತವೆ. ಹೆಣ್ಣಿನ ಸ್ವತಂತ್ರ್ಯತೆಯನ್ನು ಬಯಸುವುದರ ಜೊತೆ ಹೆಣ್ಣಿಗೆ ಗಂಡಿನ ಆಸರೆ ಬಾಳಿಗೆ ಬೇಕು ಎಂಬ ನಿಲುವಿಗೆ ತಲುಪುತ್ತಾರೆ. ಧಾರ್ಮಿಕ ಮೌಲ್ಯವನ್ನು ನಿರಾಕರಿಸುತ್ತಾ ಆಧ್ಯಾತ್ಮಿಕ ಒಲವನ್ನು ಆಶ್ರಯಿಸುತ್ತಾರೆ.

ಕುರುಡು ಕಾಂಚಾಣ ಒಂದು ದಿಟ್ಟ ಕವಿತೆ.

ಕುರುಡು ಕಾಂಚಾಣ ಕುಣಿಯಲು ನಿತ್ಯವು
ಮನ ಮಿಡಿದಿದೆ ಹಿಡಿಯಲು ಅನುದಿನವು
ಕಾಣದ ಕಡಲಿಗೆ ಹಂಬಲಿಸಿದ ಮನವು
ಕತ್ತಲ ಹಾದಿಯಲ್ಲಿ ಬೆಳಕಿನ ಹುಡುಕಾಟವು (ಕವನ: ಕುರುಡು ಕಾಂಚಾಣ )

ಎನ್ನುವಲ್ಲಿ ಕತ್ತಲ ಹಾದಿಯಲ್ಲಿ ಬೆಳಕಿನ ಹುಡುಕಾಟದಲ್ಲಿ ತೊಡಗಿದ ಕವಯತ್ರಿಗೆ ಶ್ರಮವಿಲ್ಲದೆ ಬರುವ ಹಣದ ಬಗೆಗೆ ನಿರಾಕರಣೆ ಇದೆ. ಕಾಂಚಣ ಜಣ ಜಣವೆನ್ನುವ ಮನಸ್ಸು ಮತ್ತೇನನ್ನು ಆಶಿಸುವ ರೀತಿ ಮತ್ತು ಪರಿಣಾಮಗಳ ಅರಿವು ಕವಾಯತ್ರಿಗಿದೆ. ಹಣದ ಮುಂದೆ ಸಂಬಂಧಗಳ ಶಿಥಿಲತೆಯ ನೋವು ಕಾಡಿದೆ.

ಈ ಸಂಕಲನದ ಕವಿತೆಗಳಲ್ಲಿ ಶಿವ, ಧೃತರಾಷ್ಟ್ರ , ಕೃಷ್ಣ ಪಾತ್ರಗಳು ಕವಿತೆಯ ಭಾವದಲ್ಲಿ ಬಂದು ಹೋಗುವುದನ್ನು ಗಮನಿಸಬಹುದು. ಜಡೆ ಕವನ, ಗುಣಿತಾಕ್ಷರ ಕವನ, ಗಾದೆಗಳನ್ನು ಕವನವಾಗಿಸುವ ಪರಿಯನ್ನು ಮಾಡಬಹುದು.

ಕವಯತ್ರಿ ಕವಿತೆಗಳಲ್ಲಿ ವ್ಯಕ್ತವಾದ ಸಾಮಾಜಿಕ ವಿಳಂಬನೆ,ಬದುಕಿನ ಪಾಠಗಳು, ಅನುಭವದ ಹರವು, ಪ್ರೀತಿಯ ಮನಸ್ಸು ಇವರ ಕವಿತೆಗಳ ಮುಖ್ಯ ಸರಕಾಗಿದೆ. ಸಮಾಜದಲ್ಲಿ ಕಾಣುವ ಅಸಮಾನತೆಯ ಬಗ್ಗೆ ಕವಯತ್ರಿಗೆ ತುಡಿತವಿದೆ. ಸಮಾಜಮುಖಿ ಮೌಲ್ಯಗಳ ಮರುಚಿಂತನೆಯ ಬಗ್ಗೆ ಕವಯತ್ರಿಯ ಒಲವು ಕವನಗಳಲ್ಲಿ ಸ್ಪಷ್ಟವಾಗುತ್ತದೆ. ಕವಿತೆಗಳು ಹೆಚ್ಚು ವಾಚ್ಯವಾಗಿ ತೋರುತ್ತವೆ. ಇದು ಚೊಚ್ಚಲ ಸಂಗ್ರಹಗಳ ಸಾಮಾನ್ಯ ಗುಣವೇ ಆಗಿದೆ. ಹೆಚ್ಚು ಸೂಚ್ಯವಾದಷ್ಟು ಕವಿತೆ ಪಕ್ವವಾಗುತ್ತದೆ. ಮುಂದಿನ ದಿನಗಳಲ್ಲಿ ಕವಿತೆಗಳ ಜಾಡು ಆ ದಾರಿಯನ್ನು ತುಳಿಯಲಿ ಎಂಬ ಸೂಚನೆಯೊಂದಿಗೆ ಶುಭಾಕಾಂಕ್ಷೆಗಳು.


  • ಡಾ ಕೊಳ್ಚಪ್ಪೆ ಗೋವಿಂದ ಭಟ್, ಮಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW