ಹೊಸ ಸಂವತ್ಸರದ ಹೊಸ ಹುಟ್ಟು

ಭೌತಿಕ ಶರೀರ ಹೊಂದಿರುವ ಮನುಷ್ಯನಲ್ಲಿ ಉಂಟಾಗುವ ಬದಲಾವಣೆಗಳನ್ನು ಕೆಲವೊಮ್ಮೆ ಗುರುತಿಸಲು ಕಷ್ಟವಾಗ ಬಹುದು‌. ಆದರೆ ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ನಾವು ಸುಲಭವಾಗಿ ಗುರುತಿಸುತ್ತೇವೆ. ಹೀಗೆ ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಯುಗಾದಿ ಎಂದರು. ಪುಷ್ಪಾ ಹಾಲಭಾವಿ ಅವರ ಲೇಖನಿಯಲ್ಲಿ ಯುಗಾದಿ ಹಬ್ಬದ ವಿಶೇಷತೆಯನ್ನು ತಪ್ಪದೆ ಮುಂದೆ ಓದಿ…

ಮಹಾ ಮಾನವತಾವಾದಿ ಬಸವಣ್ಣನವರು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ‌” ಎಂದಿದ್ದಾರೆ. ಇಲ್ಲಿ ಸ್ಥಾವರ ಎಂದರೆ ಚಲನೆ ಇಲ್ಲದ್ದು, ಜಂಗಮವೆಂದರೆ ಚಲನೆಯಲ್ಲಿರುವುದು.ಚಲನೆ ಅಥವಾ ಬದಲಾವಣೆ ಇದು ಜಗತ್ತಿನಲ್ಲಿ ನಿರಂತರವಾಗಿ ನಡೆಯುತ್ತ ಬಂದಿರುವ ಒಂದು ಪ್ರಕ್ರಿಯೆ.ಕೋಟ್ಯಾನು ಕೋಟಿ ವರ್ಷಗಳಿಂದ ಜಗತ್ತು ಚಲನೆಯಲ್ಲಿದ್ದು ಕೊಂಡು ಬದಲಾವಣೆಗೆ ಸಾಕ್ಷಿಯಾಗಿದೆ.ಒಂದು ಕ್ಷಣವೂ ಬದಲಾವಣೆಯ ಕ್ರಿಯೆ ನಿಂತಿಲ್ಲ.ಚಲನೆ ಅಥವಾ ಬದಲಾವಣೆ ನಿಂತರೆ ಅದು ಪ್ರಕೃತಿಯ ಅವಸಾನದ ಕಾಲ.ಆ ಕಾರಣಕ್ಕೆ ಬದಲಾವಣೆ ಜಗದ ನಿಯಮ ಎನ್ನುತ್ತಾರೆ ಹಾಗೂ ಬದಲಾವಣೆಯೊಂದೆ ಶಾಶ್ವತ ಎನ್ನುವ ಮಾತೂ ಇದೆ.

ಮನುಷ್ಯರಲ್ಲೂ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಮನುಷ್ಯರಲ್ಲಿ ಉಂಟಾಗುವ ಭೌತಿಕ, ಭಾವನಾತ್ಮಕ, ಭೌಧಿಕ ಬದಲಾವಣೆಗಳು‌ ಕೆಲವೊಮ್ಮೆ ಕಂಡು ಬಂದರೆ,ಕೆಲವೊಮ್ಮೆ ಕಂಡು ಬರದೇ ಇರಬಹುದು. ಭೌತಿಕ ಶರೀರ ಹೊಂದಿರುವ ಮನುಷ್ಯನಲ್ಲಿ ಉಂಟಾಗುವ ಬದಲಾವಣೆಗಳನ್ನು ಕೆಲವೊಮ್ಮೆ ಗುರುತಿಸಲು ಕಷ್ಟವಾಗ ಬಹುದು‌. ಆದರೆ ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ನಾವು ಸುಲಭವಾಗಿ ಗುರುತಿಸುತ್ತೇವೆ.

ಬದಲಾವಣೆ ಎಂದರೆ ಈಗಿರುವ ಸ್ಥಿತಿಗೆ ಒದಗುವ ಮಾರ್ಪಾಡು. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವ ಸಹಜ ಚಲನೆ.ಬದಲಾವಣೆಯೇ ಆಗದೆ ನಿಂತ ನೀರಾದರೆ
ಯಾವುದೇ ವಸ್ತುವಾದರೂ ಅದು ತನ್ನ ಮೂಲಗುಣವನ್ನು,ಶಕ್ತಿಯನ್ನು ಕಳೆದುಕೊಂಡು ಕೊಳೆಯಬಹುದು.ಕೊಳೆತು ದುರ್ನಾತ ಬೀರಿ ರೋಗಕ್ಕೂ ಕಾರಣವಾಗಬಹುದು
‌‌‌‌‌ಸತತವಾಗಿ ಪ್ರಕೃತಿಯಲ್ಲಿ ಬದಲಾವಣೆ ನಡೆಯುತ್ತಲೇ ಇರುತ್ತದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು, ಸಸಿಯಾಗಿ,‌ ಗಿಡವಾಗಿ, ಮರವಾಗಿ ಹೂಬಿಟ್ಟು, ಹೂವು ಕಾಯಿಯಾಗಿ ಹಣ್ಣಾಗುತ್ತದೆ. ಹಣ್ಷು ಮರದ ಕೊನೆಯಲ್ಲ.ಅದು ಅದರ ಮರು ಹುಟ್ಟಿನ ಮೊದಲ ಹಂತ.ಮುಂದಿನ ಮರದ ಸೂಕ್ಷ್ಮ ರೂಪ. ಶಿಶಿರದಲ್ಲಿ ಎಲೆಗಳು ಉದುರಿ ಬೋಳಾಗಿ‌ ನಿಂತ ಮರದ ಟೊಂಗೆಗಳಲಿ ಮತ್ತೆ ಹೊಸ ಚಿಗುರು ಮೂಡಿ ಹಸಿರಿನಿಂದ ನಳ ನಳಿಸಿ ,ನಗು ಮುಕ್ಕಳಿಸುವ ಪಕೃತಿಯಲಿ ಹೊಸ ಮಾರ್ಪಾಡು. ಪ್ರಕೃತಿಯಲಿ ಸಮೃದ್ಧಿ, ಬದಲಾವಣೆ ಹಾಗೂ ಜೀವಂತಿಕೆಯ ಸಂಕೇತವಾಗಿರುವ ಋತುಗಳ ರಾಜ ವಸಂತನ ಆಗಮನ.ಪ್ರಕೃತಿಗೆ ಹಸಿರು ಸೀರೆಯುಟ್ಟು ಬಣ್ಣ, ಬಣ್ಣದ ಹೂಗಳ ರವಿಕೆ ತೊಟ್ಟು ಕೋಗಿಲೆಯ ಕೂಜನದ ಹಿಮ್ಮೇಳನದಲಿ ನಾಟ್ಯರಾಣಿಯಾಗಿ ರೆಕ್ಕೆ ಬಿಚ್ಚಿ ಕುಣಿಯುವ ಮಯೂರಿಗೆ ಸ್ಪರ್ಧೆಯೊಡ್ಡಿ ನಲಿಯುವ ಸಡಗರ.ಋತು ರಾಜನ ರಾಣಿ ಪ್ರಕೃತಿಗೆ ಆನೆ ನಡೆದದ್ದೇ ದಾರಿ ಎನುವಂತೆ ಯಾರ ಅಂಕೆಶಂಕೆಗಳಿಲ್ಲ.
ಚಿಗುರೆಲೆಗಳ ಗಾಳಿಯನ್ನು, ಹೂವಿನ ಸುಗಂಧವನ್ನು ಭೂಮಿಯ ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯುತ್ತದೆ ಈ ಅವಿನಾಶಿ ಪ್ರಕೃತಿ .ಶರತ್ಕಾಲ ಹಾಗೂ ಹೇಮಂತದ ನಂತರ ಬರುವ ವಸಂತವು ಸ್ವಚ್ಚವೂ, ರಂಗು ರಂಗಿನ ಬಣ್ಣಗಳೊಡನೆ ಮನಕೆ ಮುದ ನೀಡುವಂತಿರುತ್ತದೆ. ಪ್ರಕೃತಿ ಯಾವ ಬೇಧಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತ ಋತುಗಳು ಹೊರಸೂಸುವ ಸುಗಂಧದ ಹೊಸ ಜೀವನೋತ್ಸಾಹವನ್ನು ಎಲ್ಲರೊಳಗೂ ತುಂಬುತ್ತದೆ.

ಸೃಷ್ಟಿಯಲ್ಲಿ ಬದಲಾವಣೆಯ ಮತ್ತೊಂದು ಪರ್ವ. ಋತುಮಾನಗಳಿಗುಣವಾಗಿ‌ ಬದಲಾಗುವ ಪ್ರಕೃತಿ ಮನುಜನ ಬದುಕಿನಲ್ಲೂ ಬದಲಾವಣೆಯ ಹೊಸ ಗಾಳಿ ಬೀಸುವಂತೆ ಮಾಡುತ್ತದೆ. ಬದಲಾವಣೆ ಎಂದರೆ ಹೊಸತು, ಸೌಂದರ್ಯ, ಉಲ್ಲಾಸ. ಉಲ್ಲಾಸ ಎಂದರೆ ಬದುಕು. ಬದುಕೆಂದರೇನೇ ಬದಲಾವಣೆ.ಈ ಬದಲಾವಣೆಯೇ ನಮ್ಮ ಆರೋಗ್ಯ,ಆನಂದಕ್ಕೆ ಮೂಲ ಶಕ್ತಿಯಾಗಿ, ಪ್ರೇರಣೆಯಾಗಿ ಕಾರಣವಾಗುತ್ತದೆ.

ಹೀಗೆ ಪ್ರಕೃತಿಯಲ್ಲಿ ಉಂಟಾಗುವ ಇಂಥ ಸುಂದರವಾದ ಬದಲಾವಣೆಯ ಸಮಯವನ್ನೇ ನಮ್ಮ ಪೂರ್ವಜರು ಸೃಷ್ಟಿಯ ಮೊದಲ ಕ್ಷಣ ಎಂದರು. ನಮ್ಮ ಜೀವನದ ಪ್ರಥಮ ಮುಹೂರ್ತ ಎಂದರು.ಕಾಲಚಕ್ರದ ಆರಂಭದ ಗತಿ ಎಂದರು. ಇದೇ ಯುಗಾದಿ. ಯುಗ+ಆದಿ= ಯುಗಾದಿ.ಯುಗ ಎಂದರೆ ಅವಧಿ. ಆದಿ ಎಂದರೆ ಆರಂಭ. ಹೊಸ ಅವಧಿಯ ಆರಂಭ ಆಥವಾ ಹೊಸ ವರ್ಷದ ಆಗಮನವೇ ಯುಗಾದಿ. ಖ್ಯಾತ ಗಣಿತಜ್ಞ ಭಾಸ್ಕರಾಚಾರ್ಯರ ಪ್ರಕಾರ ಭೂಮಿ, ಸೂರ್ಯನ‌ ಸುತ್ತ ತನ್ನ ಪರಿಭ್ರಮಣವನ್ನು ಒಂದು ಯುಗಾದಿಯದ ಇನ್ನೊಂದು ಯುಗಾದಿಗೆ ಪೂರ್ಣಗೊಳಿಸುವುದಂತೆ.

ಪ್ರಕೃತಿಯಲಿ ಉಂಟಾಗುವ ಪಲ್ಲಟಗಳು‌ ಬದಲಾವಣೆಯ ವಿವಿಧ ಹಂತಗಳಷ್ಟೆ.ಅಂದರೆ ಪ್ರಕೃತಿಯ ಬದಲಾವಣೆಯ ಸಂದೇಶಗಳನ್ನು‌ ಜೀವನದಲ್ಲಿ ನಾವೂ ಅಳವಡಿಸಿಕೊಂಡರೆ ನಮ್ಮ ಜೀವನವೂ ಸುಮಭರಿತವೂ, ಫಲಭರಿತವೂ ಆಗುತ್ತದೆ. ಬದುಕಿನ‌ ಸುಖ, ದುಃಖಗಳ ಆಗಮನ, ನಿರ್ಗಮನ ಬದುಕಿನ ಒಂದು ಪ್ರಕ್ರಿಯೆಯೇ ಹೊರತು‌ ಅದೇ ಶಾಶ್ವತವಲ್ಲ.
‌‌ಬದುಕಿನಲ್ಲಿ ಸುಖ, ದುಃಖವನ್ನು ನಾವು ಯಾವ ರೀತಿ ಸ್ವೀಕರಿಸಬೇಕೆನ್ನುವ ಪಾಠವನ್ನು ಪ್ರಕೃತಿ ಮಾತೆ ನಮಗೆ ನೀಡಿದ್ದಾಳೆ. ಕವಿ ವಾಣಿಯಂತೆ ಮನುಜಗೆ ಒಂದೇ ಹುಟ್ಟು,ಒಂದೇ ಸಾವು.ಪ್ರಕೃತಿಯಂತೆ ಪ್ರತಿ ವರ್ಷ ಹೊಸ ಹೊಸ ಹುಟ್ಟಿಲ್ಲ.ಭಗವಂತ ನೀಡಿರುವ ಈ ಸಮಯವನ್ನು ಸದುಪಯೋಗ ಮಾಡಿಕೊಂಡು ಬದುಕನ್ನು ಸಹನೀಯವಾಗಿ ಮಾಡಿಕೊಳ್ಳುವ ತಯಾರಿಯೇ ಈ ‘ಯುಗಾದಿ’. ಅದರ ಸಂಕೇತವಾಗಿ ನಾವು ‘ಬೇವು ಬೆಲ್ಲ’ಗಳ ಮಿಶ್ರಣವನ್ನು ಸೇವಿಸುತ್ತೇವೆ.ಯುಗದ ಆದಿಯಲ್ಲಿಯೇ ಬದುಕನ್ನು ಧೈರ್ಯವಾಗಿಯೂ,ಸಂತಸ ವಾಗಿಯೂ ಸ್ವೀಕರಿಸುವಂತಹ ವಿವೇಕವೇ ಯುಗಾದಿ ಹಬ್ಬದ ಮೂಲ ತತ್ವ.


  • ಪುಷ್ಪಾ ಹಾಲಭಾವಿ – ಧಾರವಾಡ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW