‘ನಿಗೂಢ’ ಕಾದಂಬರಿ ಕೃತಿ ಪರಿಚಯ

ನಮ್ಮ ನೆಚ್ಚಿನ ಸ್ನೇಹಾ ಬುಕ್ ಹೌಸ್ ನ ಮಾಲೀಕರಾದ ಶ್ರೀ ಪರಶಿವಪ್ಪನವರು ‘ನಿಗೂಢ’ ವಿಶಿಷ್ಟ ವಿನೂತನ 18 ಲೇಖಕರ ಖೋ ಕಾದಂಬರಿಯ ಪ್ರಕಾಶಕರು. ಈ ಕೃತಿಯ ಕುರಿತು ಕವಿ ಬೆಂಶ್ರೀ ರವೀಂದ್ರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ‘ನಿಗೂಢ’ ವಿಶಿಷ್ಟ ವಿನೂತನ 18 ಲೇಖಕರ ಖೋ ಕಾದಂಬರಿ
ಸಂಪಾದಕರು : ಹು ವಾ ಶ್ರೀಪ್ರಕಾಶ್
ಪ್ರಕಾಶಕರು : ಸ್ನೇಹಾ ಬುಕ್ ಹೌಸ್, ಬೆಂಗಳೂರು
ಮೊಬೈಲ್ : 9845031335
ಪುಟಗಳು : 160.
ಬೆಲೆ : ₹200/-

ಕಾದಂಬರಿ ಕ್ಷೇತ್ರದಲ್ಲಿ, ಸಮನ್ವಯ ಸಮಿತಿಯು 2021-22 ರಲ್ಲಿ , ಒಂದು ವಿನೂತನ ವಿಶಿಷ್ಟವಾದ ಪ್ರಯೋಗವನ್ನು ನಡೆಸಿತು.‌ “ಪಲ್ಲಟ” ಎಂಬ ಕಾದಂಬರಿಯ 27 ಅಧ್ಯಾಯಗಳನ್ನು , 27 ಲೇಖಕರು ಬರೆದರು. 05/08/2021 ರಿಂದ ಆರಂಭವಾದ ಪ್ರಯೋಗ 10/02/2022 ರಲ್ಲಿ ಕೊನೆಗೊಂಡು, 12/02/2023 ರಲ್ಲಿ ಬಿಡುಗಡೆಯಾಯಿತು. ನಮ್ಮ ನೆಚ್ಚಿನ ಸ್ನೇಹಾ ಬುಕ್ ಹೌಸ್ ನ ಮಾಲೀಕರಾದ ಶ್ರೀ ಪರಶಿವಪ್ಪನವರು ಈ ಕಾದಂಬರಿಯ ಪ್ರಕಾಶಕರು. ಶ್ರೀ ಕೆಎನ್ ಮಹಾಬಲ ಮತ್ತು ಬೆಂಶ್ರೀ ರವೀಂದ್ರ ಅವರು ಸಂಪಾದಕರಾಗಿದ್ದ “ಪಲ್ಲಟ”, ಕಾದಂಬರಿಯ ಸಂಪಾದಕ ಸಮಿತಿಯಲ್ಲಿ ಸರ್ವಶ್ರೀ ಶೃಂಗೇಶ್ವರ ಶರ್ಮ, ಗುರುರಾಜ ಶಾಸ್ತ್ರಿ, ಹುವಾ ಶ್ರೀಪ್ರಕಾಶ ಮತ್ತು ಶ್ರೀಮತಿ ಶ್ರವಣಕುಮಾರಿ ಅವರುಗಳು ಇದ್ದರು.

ಮೊದಲ ಸಂಚಿಕೆಯನ್ನು ಶ್ರೀ ಗೋನವಾರ ಕಿಶನ್ ರಾವ್ ಬರೆದರು. ನಂತರದ ಅಧ್ಯಾಯಗಳ ಬರವಣಿಗೆಯ ಸಂದರ್ಭದಲ್ಲಿ ಸಂಪಾದಕ ಸಮಿತಿಯು ಆನ್ ಲೈನ್ ಸಭೆ ಸೇರಿ ಕಥೆಯನ್ನು ಚರ್ಚಿಸುತ್ತಿದ್ದೆವು. ಕೆಲವು ಬಾರಿ ಸಂಬಂಧಿಸಿದ ಲೇಖಕರೊಂದಿಗೆ ಮಹಾಬಲ ಸಂವಹಿಸುತ್ತಿದ್ದರು. ಸಾಧ್ಯವಾದಷ್ಟು ತಾರ್ಕಿಕವಾಗಿ ಕಥೆಯನ್ನು ಬೆಳೆಸಲು ಪ್ರಯತ್ನಿದೆವು. ಈ ಹಿನ್ನೆಲೆಯಲ್ಲಿ ಪಲ್ಲಟವು ಒಂದು ಯಶಸ್ವಿ ಪ್ರಯೋಗವೆನ್ನಬಹುದು. ಪುಸ್ತಕವು ಚೆನ್ನಾಗಿ ಮಾರಾಟವಾಗಿದೆ.

ಕವಿಮನದ ಸಂಚಾಲಕರಾಗಿರುವ ಗೆಳೆಯ ಶ್ರೀಪ್ರಕಾಶ ಅವರು ಖೋ ಕಾದಂಬರಿಯ ಪ್ರಯೋಗವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದ್ದಾರೆ. ಶ್ರೀಪ್ರಕಾಶ ಅವರು “ಮಲೆನಾಡ ಬಂಧುಗಳು” ಎಂಬ ೨೦೦ ಕ್ಕೂ ಹೆಚ್ಚು ಸದಸ್ಯರು ಇರುವ ವಾಟ್ಸಪ್ ಗುಂಪಿನಲ್ಲಿ ಇದ್ದಾರೆ. ಈ ಗುಂಪು ಸಸಕಸದಂತೆ ಪೂರ್ಣ ಸಾಹಿತ್ಯಕವಾದ ಗುಂಪಲ್ಲ. ಆದರೂ ಶ್ರೀಪ್ರಕಾಶರು ಧೈರ್ಯಮಾಡಿ ತಮ್ಮ ಗುಂಪಿನಲ್ಲಿ ಖೋ ಕಾದಂಬರಿಯೊಂದನ್ನು ಹಲವಾರು ಸದಸ್ಯರಿಂದ ಬರೆಸಲು ಇಚ್ಛಿಸಿದರು. ತಾವೇ ಸಂಪಾದಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ವ‌ಇಚ್ಛೆಯಿಂದ ಬರೆಯಲು ಸದಸ್ಯರನ್ನು ಉತ್ತೇಜಿಸಿದರು. ಪಲ್ಲಟದ ಪ್ರಯೋಗಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಂಚಿಕೆಯ ಲೇಖಕರಿಗೆ ಕಾದಂಬರಿಯ ಕಥೆಯನ್ನು ಬೆಳೆಸುವ ಸ್ವಾತಂತ್ರ್ಯವನ್ನು ನೀಡಿದರು. ಸಂಪಾದಕರಾಗಿ ಅತ್ಯಂತ ಶ್ರಮವಹಿಸಿ ಕಾದಂಬರಿಯನ್ನು ಸ್ನೇಹಾ ಬುಕ್ ಹೌಸದ ಮೂಲಕ ಪ್ರಕಾಶಿಸುವ ಸಾಧನೆಯನ್ನು ಈಗ ಮಾಡಿದ್ದಾರೆ.

ಕಾದಂಬರಿಯು ಸುಬ್ಬಜ್ಜಿ ಎಂಬ ಪಾತ್ರದ ಸುತ್ತ ತಿರುಗುತ್ತದೆ. ನವ್ಯ, ಜೀವನ್, ಸುಜಾತ ಮತ್ತು ಸುಹಾಸ್ ಎಂಬ ಪಾತ್ರಗಳು ಕಾದಂಬರಿಯ ಕೇಂದ್ರದಲ್ಲಿವೆ. ಸುಮಾ ಎಂಬ ಯುವತಿಯ ಸಾವಿನ ವಿಷಯ ಕೊನೆಗೂ ಬಿಡಿಸಲಾರದ ರಹಸ್ಯವಾಗಿ “ನಿಗೂಢ” ವಾಗಿಯೇ ಉಳಿಯುತ್ತದೆ.

ಕಾದಂಬರಿಯ ಬಗ್ಗೆ ನಾನು ನೇರವಾಗಿ ಏನನ್ನೂ ಹೇಳುವುದಿಲ್ಲ. ಅದರ ಬದಲು ಕಾದಂಬರಿಯ ಕಥೆ ಮತ್ತು ತಂತ್ರಗಳ ಬಗ್ಗೆ ಶ್ರೀ ನವೀನ್ ಸಾಗರ್ ಅವರ ಮುನ್ನುಡಿಯ ಆಯ್ದ ಭಾಗಗಳನ್ನು ಉದಹರಿಸುತ್ತೇನೆ.

ಉದ್ಧರಣ :

ಆರಂಭ : “ಅಚ್ಚರಿ ಏನಂದ್ರೆ ಇಲ್ಲಿ ನನಗೆ ತಿಳಿದಂತೆ ಶ್ರೀ ಪ್ರಕಾಶ್ ಮತ್ತು ದಿವ್ಯಾ ಶ್ರೀಧರ್ ರಾವ್ ಹೊರತುಪಡಿಸಿ ಮಿಕ್ಕವರೆಲ್ಲರೂ ಹವ್ಯಾಸಿ ಬರಹಗಾರರು. ಎಲ್ಲರೂ ಬೇರೆ ಬೇರೆ ಕ್ಷೇತ್ರಗಳ ಸಾಧಕರು, ಪರಿಣತಿ ಪಡೆದವರು, ಕೇವಲ ಆಸಕ್ತಿಯಿಂದ ಹವ್ಯಾಸವೆಂಬಂತೆ ಬರವಣಿಗೆಗೆ ಒಡ್ಡಿಕೊಂಡವರು. ಅವರಿಂದ ಇಷ್ಟು ಚೆಂದದ ಬರವಣಿಗೆ ನಿಜಕ್ಕೂ ನನ್ನಲ್ಲಿ ಅಚ್ಚರಿ ಮೂಡಿಸಿಬಿಟ್ಟಿತು. ಈ ಖೋ ಕಾದಂಬರಿಯಲ್ಲಿ ಬರೆದ ಪ್ರತಿಯೊಬ್ಬರೂ ಒಂದು ಸ್ವತಂತ್ರ ಕಾದಂಬರಿ ರಚಿಸಬಲ್ಲರು, ಒಂದು ಮೆಗಾಸೀರಿಯಲ್ಲಿಗೆ ಬರೆಯಬಲ್ಲರು. ಇದು ಉತ್ಪ್ರೇಕ್ಷೆ ಅಥವಾ ಮುಖಸ್ತುತಿ ಅಲ್ಲ. ಬರಹಗಾರರಿಗೆ ಕಲ್ಪನಾಶಕ್ತಿ ಮತ್ತು ಪಾತ್ರಗಳನ್ನು ಜೀವಿಸುವಿಕೆ ಗೊತ್ತಾಗಿದೆಯಲ್ಲ ಅಷ್ಟೇ ಮುಖ್ಯ.”

“ಈ ಖೋ ಕಾದಂಬರಿ, ಅಧ್ಯಾಯದಿಂದ ಅಧ್ಯಾಯಕ್ಕೆ ಓದುಗನನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ. ಪರಿಸರದ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತದೆ. ಪಾತ್ರಗಳ ನಡುವೆ ಕೂತು ವೀಕ್ಷಕರಾಗ್ತಿವಿ ಓದುಗರು. ಕೆಲವೊಮ್ಮೆ ನಾವೇ ಪಾತ್ರವಾಗಿ ರಿಯಾಕ್ಟ್ ಮಾಡಿಬಿಡುವಷ್ಟು ಗಾಢತೆ ಕೂಡ ಇದೆ ನಿರೂಪಣೆಯಲ್ಲಿ.”

“ಇಲ್ಲಿ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಒಂದೊಂದು ಅಧ್ಯಾಯ ಬರೆದಿದ್ದಾರೆ. ಅವರವರ ಕ್ಷೇತ್ರಕ್ಕೆ ಕನೆಕ್ಟ್ ಆಗುವಂಥ ಅಧ್ಯಾಯಗಳನ್ನೇ ಅವರಿಗೆ ಒದಗಿಸಲಾಗಿದೆ. ಇದು ಸೂತ್ರಧಾರರ ಜಾಣ್ಮೆಗೆ ಸಾಕ್ಷಿ.”

“ವಿಮರ್ಶಾತ್ಮಕವಾಗಿ ಹೇಳೋದಾದ್ರೆ ಖೋ ಕಾದಂಬರಿಯಲ್ಲಿ ಆಗಬಹುದಾದ ಚಿಕ್ಕಪುಟ್ಟ ಕಂಟಿನ್ಯೂಟಿಗಳು ಗೊತ್ತಾಗಿಯೂ ಗೊತ್ತಾಗದಂತೆ ಮಿಸ್ ಹೊಡೆದಿವೆ. ಆದರೆ ಅದ್ಯಾವುದೂ ಕಥೆಯ ಓಘಕ್ಕೆ ಪೆಟ್ಟು ಕೊಡುವುದಿಲ್ಲ. ಎರಡು ಟ್ಯಾಕ್‌ಗಳ ನಿರೂಪಣೆ ತಂತ್ರ, ಫ್ಲಾಶ್ ಬ್ಯಾಕ್, ಇಂಟರ್ ಕಟ್ ತಂತ್ರ ಇವೆಲ್ಲವನ್ನೂ ನೋಡಿದಾಗ ಮನಸ್ಸು ಮಾಡಿದರೆ ಈ ಕಾದಂಬರಿಯನ್ನು ತೆರೆಗೆ ತರೋ ಯೋಚನೆ ಕೂಡ ಮಾಡಬಹುದು ಅನಿಸುತ್ತದೆ.”

“ಶ್ರೀಪ್ರಕಾಶ್ ಅವರ ಈ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಇದರಲ್ಲಿರೋ ಪ್ರತಿ ಬರಹಗಾರರಿಗೂ ಫುಲ್ ಟೈಮ್ ಬರವಣಿಗೆ ಅಪ್ಪಿಕೊಳ್ಳುವ ಸಾಮರ್ಥ್ಯವಿದೆ. ಈ ವೈವಿಧ್ಯಮಯ ವಿಚಾರಗಳನ್ನು ಇಟ್ಟುಕೊಂಡು ಇಂಥ ಇನ್ನಷ್ಟು ಕಥೆಗಳು ಕಾದಂಬರಿಗಳು ಈ ತಂಡದಿಂದ ಸೃಷ್ಟಿಯಾಗಲಿ ಎಂಬುದು ನನ್ನ ಹಾರೈಕೆ.” ; ಮುಕ್ತಾಯ

ಶ್ರೀಪ್ರಕಾಶ ಮತ್ತು ತಂಡದ ಎಲ್ಲಾ ಗೆಳೆಯರಿಗೆ ಶುಭಹಾರೈಕೆಗಳು. ಸಸಕಸದ ಪ್ರಯತ್ನವೊಂದು ಮತ್ತೊಂದೆಡೆ ಚಿಗುರೊಡೆದಿದ್ದು ಸಾರ್ಥಕತೆಯ ಭಾವ ಮೂಡಿಸಿದೆ. ನೀವು “ನಿಗೂಢ”ವನ್ನು ಓದಿ ಅಭಿಪ್ರಾಯ ತಿಳಿಸಿದರೆ, ಪ್ರಕಾಶರ ಪ್ರಯತ್ನ ಮತ್ತಷ್ಟು ಸಾರ್ಥಕವಾಗುತ್ತದೆ.

ಪ್ರತಿಗಳಿಗೆ ಸಂಪರ್ಕಸಿ ;
ಸ್ನೇಹಾ ಬುಕ್ ಹೌಸ್; 9845031335


  •  ಬೆಂಶ್ರೀ ರವೀಂದ್ರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW