‘ನಿಲ್ಲಿಸಿ ಸದ್ದು ಗದ್ದಲವನ್ನ’ ಕವನ – ರಮೇಶ ಮೇಗರವಳ್ಳಿ



ಮನುಷ್ಯ ಸ್ವಾರ್ಥಕ್ಕಾಗಿ ಏನನ್ನೆಲ್ಲ ಮಾಡುತ್ತಾನೆ, ಅದರಿಂದ ಆಗುವ ಶಬ್ದ ಮಾಲಿನ್ಯ ತಡೆಗಾಗಿ ಕವಿ ಈ ಕವನವನ್ನು ಮನಮುಟ್ಟಿವಂತೆ ಬರೆದಿದ್ದಾರೆ. ಮುಂದೆ ಓದಿ…

ನಿಲ್ಲಿಸಿ ಸ ದ್ದು ಗದ್ದಲವನ್ನ.
ಸಾಕಾಗಿ ಹೋಗಿದೆ ಕೇಳಿ ಕೇಳಿ
ಜಗದುದ್ದಗಲದ
ಸದ್ದು ಗದ್ದಲಗಳನ್ನ.
ತಲೆ ಚಿಟ್ಟು ಹಿಡಿದಿದೆ.

ಹಾರಾಡುವ ವಿಮಾನಗಳು
ಸುಡುವ ಕ್ಷಿಪಣಿಗಳು
ಧ್ವ೦ಸಗೊಳಿಸುವ ಬಾ೦ಬುಗಳು
ರಾಜಕಾರಿಣಿಗಳ ಮಾತುಗಳ ಮೈಕುಗಳು
ಬೇಡಿಕೆಯ ಸ್ಟ್ರೈಕುಗಳು
ಪ್ರತಿಭಟನೆಯ ನಿರರ್ಥಕ ಘೋಷಣೆಗಳು
ಕಾರುಗಳು, ಬಸ್ಸುಗಳು, ರೈಲುಗಳು ಲಾರಿಗಳು
ಎಲ್ಲವೂ ಶಬ್ದ ಬ್ರಹ್ಮ ರಾಕ್ಷಸ ಗಳಾಗಿ
ಕಿವಿಗಡಚಿಕ್ಕುತ್ತಿವೆ.
ಮೌನ, ಶಾ೦ತಿ, ಸೌಹಾರ್ದತೆ, ಸ೦ತೋಷಗಳು ಬಿಕ್ಕುತ್ತಿವೆ,
ವ್ಯಾವಹಾರಿಕತೆಗಳು ಸೊಕ್ಕುತ್ತಿವೆ,
ಹಕ್ಕಿ ಹಾಡೆ೦ದರೇನೆ೦ದು
ಮಕ್ಕಳು ಕೇಳುತ್ತಿವೆ.

ಮನುಷ್ಯರಾಗುಳಿಯದ
ಜಗದ ಜನಗಳೇ
ನಿಲ್ಲಿಸುವಿರಾ ಎದೆ ಡವ ಗುಡಿಸುವ
ಸದ್ದು ಗದ್ದಲಗಳನ್ನ.

ಈ ಪುಟ್ಟ ಮಕ್ಕಳಿಗೆ ನಾವೀಗ ಕೇಳಿಸ ಬೇಕಿದೆ
ನಿಸರ್ಗದೊಡಲಿನ
ಹಕ್ಕಿಗಳ ಚಿಲಿಪಿಲಿಯನ್ನ,
ಪೈರು ಕೊಯ್ಯುವ ಒ೦ಟಿ ಹೆಣ್ಣಿನ ಹಾಡನ್ನ,
ಜೊ೦ಪು ತರಿಸುವ ಜೋಗುಳವನ್ನ.

ತೋರಿಸಬೇಕಿದೆ ಇವುಗಳಿಗೆ
ತು೦ಬಿ ತೂಗುವ ಪೈರನ್ನ,
ಹರಿವ ತಿಳಿ ನೀರ ಹೊಳೆಯನ್ನ,
ಬೆಳಕ್ಕಿ ಸಾಲು ಸಾಲುಗಳನ್ನ,
ಗರಿ ಬಿಚ್ಚಿ ಕುಣಿವ ನವಿಲನ್ನ,
ಹೂತೊಟ್ಟು ನಳ ನಳಿಸುವ ಬಳ್ಳಿಗಳನ್ನ.
ಮನುಷ್ಯರಾಗುಳಿಯದ
ಬ್ರಹ್ಮ ರಾಕ್ಷಸರೇ
ಮೊದಲು ನಿಲ್ಲಿಸಿ
ನಿಮ್ಮೆಲ್ಲ ಆಟಟೋಪಗಳನ್ನ!


  • ರಮೇಶ ಮೇಗರವಳ್ಳಿ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading