ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರು ಒಬ್ಬೊಬ್ಬರ ಭಾವನೆ ಒಂದೊಂದು ರೀತಿ, ಅದರಂತೆ ಕವಿತೆಯ ಹುಟ್ಟಿಗೆ ಒಂದೊಂದು ಸ್ಫೂರ್ತಿ ಎನ್ನುತ್ತಾರೆ. ತಪ್ಪದೆ ಮುಂದೆ ಓದಿ…
ನಿಮಗೆ ಕೆಂಪಾಗಿ ಅರಳಿನಿಂತ
ಗುಲ್ಮೋಹರ್ ಕಂಡರೆ
ಮೈ ಮನ ಅರಳುತ್ತೆ
ನನಗೆ ಪಹಾಲ್ಗಮ್ ನಲ್ಲಿ ಹರಿದ
ನೆತ್ತರೋಕುಳಿಯ ನೆನಪಾಗಿ
ಮೈ ಮನ ಕುದಿಯುತ್ತೆ!
ನಿಮಗೆ ಆ ಸುಂದರ
ಪ್ರಕೃತಿ ಕಂಡರೆ
ಮಹಾಕಾವ್ಯವೇ ಹುಟ್ಟುತ್ತೆ
ನನಗೆ ಆ ಕಾನನದೊಳಗಿಂದ
ನುಗ್ಗಿ ಬಂದ ರಕ್ಕಸರ ನೆನಪಾಗಿ
ಎದೆಯಲಿ ವಾಲ್ಕೇನೋ ಉಕ್ಕುತ್ತೆ!
ನಿಮಗೆ ಆ ಸುಂದರ
ಸರೋವರ ಕಂಡರೆ
ಮನ ಪ್ರಪುಲ್ಲ ಗೊಳ್ಳುತ್ತೆ
ನನಗೆ ಆ ಸರೋವರದಲಿ
ರಕ್ತ ಹರಿದಂತೆ ಭಾಸವಾಗಿ
ಮನ ರೊಚ್ಚಿಗೇಳುತ್ತೆ!
ನಿಮಗೆ ಏಸಿ ರೂಮಲಿ
ಕೂತರೆ ಪುಕಾನುಪುಂಕ
ಕವಿತೆ ಹೊಳೆಯುತ್ತೆ
ನನಗೆ ರಣ ಬಿಸಿಲಲಿ ರಸ್ತೆಗೆ
ಥಾರು ಹಾಕುವವರ ಸಂಕಟ
ಮನ ಕಲಕುತ್ತೆ!
ನಿಮಗೆ ಸುಂದರವಾದ
ಹೆಣ್ಣುಗಳನ್ನು ನೋಡಿದರೆ
ಕವಿತೆ ಮೊಳೆಯುತ್ತೆ!
ನನಗೆ ಹರಿದ ಸೀರೆಯ ಆ
ಗುಡಿಸಲ ಹೆಣ್ಣನು ಕಂಡರೆ
ಬಂಡಾಯ ಮೊಳಗುತ್ತೆ!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು.
