ಕವಿಯತ್ರಿ ಅನುಸೂಯ ಯತೀಶ್ ಅವರು ಪತಿಯ ಹುಟ್ಟುಹಬ್ಬಕ್ಕಾಗಿ ಬರೆದ ಒಂದು ಸುಂದರ ಕವಿತೆ ‘ದಿನಕ್ಕೊಂದು ಕವಿತೆ ಗೀಚಿ ಬಣ್ಣಿಸದಿದ್ದರೇನು, ನಿನ್ನ ಸಾಂಗತ್ಯವೆನಗೆ ಕವನ ಸಂಕಲನವಾಗದೇನು..ಮುಂದೆ ಓದಿ ನಲ್ಮೆಯ ಇನಿಯನಿಗಾಗಿ ಬರೆದ ಕವನ…
ಮನದೊಳಗಿನ ಭಾವಗಳಿಗೆ
ಅಕ್ಷರ ರೂಪ ನೀಡದಿದ್ದರೇನು
ಮನದಲಿ ನೀ ಬರೆದ ಪ್ರೇಮ ಪತ್ರ
ನಾ ಓದಲಾರೇನೇನು
ನಿನ್ನ ಎದೆಯೊಳಗಿನ
ಪಿಸುಮಾತುಗಳು
ಪ್ರತಿಧ್ವನಿಸದಿದ್ದರೇನು
ಮನದೊಳಗಣ ನುಡಿಗಳ
ನಾ ಅರಿಯಲಾರೆನೇನು
ಕಣ್ಣೊಳಗೆ ಕಾಡುವ ಕನಸ
ನೀ ಹೇಳದಿದ್ದರೇನು
ಕಣ್ಣಲ್ಲಿಯೇ ನೀ ಬರೆವ ಪ್ರೇಮಗೀತೆಗೆ ನಾ ಸ್ಪೂರ್ತಿಯಾಗಲಾರೆನೇನು
ಪ್ರೇಮ ವೀಣೆ ನುಡಿಸುವಾಗ
ರಾಗ ಭಾವಗಳು ಎಷ್ಟಿದ್ದರೇನು
ಮೀಟಿದ ಪ್ರೀತಿಯ ನಾದಸ್ವರಕೆ
ನಾ ಪ್ರೇಮ ಸ್ವರವಾಗಲಾರೆನೇನು
ದಿನಕ್ಕೊಂದು ಕವಿತೆ ಗೀಚಿ ಬಣ್ಣಿಸದಿದ್ದರೇನು
ನಿನ್ನ ಸಾಂಗತ್ಯವೆನಗೆ ಕವನ ಸಂಕಲನವಾಗದೇನು
ಜೀವನ ಪಯಣದಲಿ
ಸವಾಲುಗಳು ಎಷ್ಟಿದ್ದರೇನು
ಅನುರಾಗದಲೆಗಳು ತೇಲಿಬರಲು
ನಿನ್ನೊಲವನು ಕಾಪಿಡಲಾರೆನೇನು
- ಅನುಸೂಯ ಯತೀಶ್
