‘ನಾನು ಕಳೆದುಕೊಂಡ ಎಲ್ಲವನೂ, ಮೊಗೆಮೊಗೆದು ಕೊಡಬಲ್ಲ… ಸಾವಿರದ ನೋವಿರದ ದೇವತೆ ನೀನು’… ಕವಿ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ಲೇಖನಿಯಲ್ಲಿ ಅರಳಿದ ಕವನ, ತಪ್ಪದೆ ಮುಂದೆ ಓದಿ…
ನೀನೊಂದು ಬರೀ ರಕ್ತಮಾಂಸದ
ಏರುಯೌವನದ ಜೀವಂತ ಹೆಣ್ಣು
ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು!
ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನು
ನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನು
ನನ್ನ ಅನಾಥ ಅಲೆಮಾರಿ ಹಗಲುಗಳ ಹುಡುಕಾಟ ನೀನು
ನಾನು ಕಳೆದುಕೊಂಡ ಎಲ್ಲವನೂ
ಮೊಗೆಮೊಗೆದು ಕೊಡಬಲ್ಲ
ಸಾವಿರದ ನೋವಿರದ ದೇವತೆ ನೀನು.
ನೀನೊಂದು ಭೂಮಿಯ ಹಾಗೆ
ನಾನೋ ನಿನ್ನತ್ತಲೇ ಸರಿಯುವ
ಸುತ್ತುವ ಕ್ಷುದ್ರ ಗ್ರಹ
ನಿರಾಕರಿಸಿದಷ್ಟೂ ನಿ ನನ್ನ
ಮತ್ತೂ ನಿನ್ನೇ
ಕನವರಿಸುವ
ಕಷ್ಟದ ದಿನಗಳಲ್ಲಿಯೂ
ಸತ್ಯವ ನುಡಿದು ಸರಳುಗಳ
ಹಿಂದೆ ನರಳುತಿಹ ಜೀವ ಮಾತ್ರ ನಾನು
ಇಷ್ಟು ಮಾತ್ರ ಹೇಳಬಲ್ಲೆ
ನನ್ನೆಲ್ಲ ತಪ್ಪುಗಳ ಕ್ಷಮಿಸಿ
ನನ್ನ ಈ ಕೆಸರಿನಿಂದೆತ್ತಿ
ಮತ್ತೆ ಜಗದ ಮುಂದೆ
ನನ್ನ ತಲೆಯೆತ್ತಿ ನಿಲ್ಲಿಸಬಹುದಾದವಳು
ನೀನು ಮಾತ್ರ
- ಕು.ಸ.ಮಧುಸೂದನ ರಂಗೇನಹಳ್ಳಿ
