ಅಗಲಿದ ಸಾಲುಮರದ ತಿಮ್ಮಕ್ಕ ಅವರಿಗೆ ಕವಯತ್ರಿ ಶಿವದೇವಿ ಅವನೀಶಚಂದ್ರ ಅವರ ಅಕ್ಷರ ನಮನಗಳು…
ಬಿಕ್ಕುತಿವೆ
ದು:ಖ ತಾಳದೆ
ನಿಮ್ಮ ಹಸಿರು ಕಂದಮ್ಮಗಳು
ನಿಮ್ಮೆದೆಯ ಅಮೃತವ
ಹೀರಿ ಬೆಳೆದ ಸಂಜೀವರು
ದಾರಿಗೆ ನೆರಳಾಗಿ
ನಿಮ್ಮಂತೆ ಪ್ರಾಣಿಪಕ್ಷಿಗಳಿಗೆ
ನೆಲೆಯಾದವರು
ಸಾರ್ಥಕ ಬದುಕಿನ
ದಿವ್ಯ ಕೇತನಗಳಾಗಿ
ಮೆರೆವವರು ಯಾರು
ನೀವು ನಿದರ್ಶನವಾದಿರಿ
ನಿಸ್ವಾರ್ಥ ಸೇವೆಗೆ
ಸಂತಾನವಿಲ್ಲವೆಂಬ
ಎದೆಯ ಕೊರಗನೀಗಿ
ಮೂಢರ ಕಣ್ತೆರೆಸಿ ಪರೋಪಕಾರದ
ಹಳಿಯಮೇಲೆ ಸಾಗಿಸಿದಿರಿ
ನಿಮ್ಮ ಬದುಕಿನ ಬಂಡಿಯ
ಸಾಗುತಿದೆ ನಿಮ್ಮ ನಂತರವೂ
ನೀವು ನೆಟ್ಟು ಪೋಷಿಸಿದ
ಕಾಯಕದ ಸಫಲತೆ
ಮನುಜನಿಗೆ ಬೇಕಾದ ನಿಜ ಅರ್ಹತೆ
ನೀವು ಬಿತ್ತಿದಾದರ್ಶದ
ಬೆಳಕು ವ್ಯಾಪಿಸಿದೆ
ನೆಲದಗಲ ಬಾಳ ಧನ್ಯತೆಯ
ಸಾಕಾರವಾಗಿ
ಅಳಿದರೂ ಉಳಿಯುವುದು ಹೀಗೇ…
ಮೌಲ್ಯಯುತಗೊಳಿಸಿ ಪ್ರತಿ ಘಳಿಗೆ
ಘಳಿಗೆ…
- ಶಿವದೇವಿ ಅವನೀಶಚಂದ್ರ – ಕವಯತ್ರಿ, ಕೊಡಗು
